ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಎರಡು ವಿಶೇಷ ಎಫ್ ಡಿ ಯೋಜನೆಗಳ ಅಂತಿಮ ಗಡುವನ್ನು ವಿಸ್ತರಿಸಿದೆ. ಅಮೃತ್ ಕಲಶ್ಎಫ್ ಡಿ ಹಾಗೂ ಹಿರಿಯ ನಾಗರಿಕರ ವಿಶೇಷ ಎಫ್ ಡಿ ಎಸ್ ಬಿಐ ವಿ ಕೇರ್ ಯೋಜನೆಗಳ ಅಂತಿಮ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದ್ದು, ಈ ಬಗ್ಗೆ ಎಸ್ ಬಿಐ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ.
ನವದೆಹಲಿ (ಜೂ.22): ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಅಮೃತ್ ಕಲಶ್ಎಫ್ ಡಿ ಹಾಗೂ ಹಿರಿಯ ನಾಗರಿಕರ ವಿಶೇಷ ಎಫ್ ಡಿ ಎಸ್ ಬಿಐ ವಿ ಕೇರ್ ಯೋಜನೆಗಳ ಅಂತಿಮ ಗಡುವನ್ನು ಮತ್ತೊಮ್ಮೆ ವಿಸ್ತರಿಸಿದೆ. ಈ ಬಗ್ಗೆ ಎಸ್ ಬಿಐ ತನ್ನ ವೆಬ್ ಸೈಟ್ ನಲ್ಲಿ ಅಧಿಕೃತ ಮಾಹಿತಿ ನೀಡಿದೆ. ಅಮೃತ್ ಕಲಶ್ ಎಫ್ ಡಿ ಯೋಜನೆಯ ಅಂತಿಮ ಗಡುವನ್ನು 2023ರ ಆಗಸ್ಟ್ 15ರ ತನಕ ವಿಸ್ತರಿಸಲಾಗಿದೆ. ಈ ಯೋಜನೆಯನ್ನು 2023ರ ಏಪ್ರಿಲ್ ನಲ್ಲಿ ಮರುಪರಿಚಯಿಸಿದ ಬಳಿಕ ಜೂನ್ 30ರ ತನಕ ಅಂತಿಮ ಗಡುವು ನೀಡಲಾಗಿತ್ತು. ಇನ್ನು ಹಿರಿಯ ನಾಗರಿಕರ ವಿಶೇಷ ಎಫ್ ಡಿ ಯೋಜನೆ ಎಸ್ ಬಿಐ ವಿ ಕೇರ್ ಅಂತಿಮ ಗಡುವನ್ನು 2023ರ ಸೆಪ್ಟೆಂಬರ್ 30ರ ತನಕ ವಿಸ್ತರಿಸಲಾಗಿದೆ. ಇದು ಹೊಸದಾಗಿ ಠೇವಣಿ ಇಡಲು ಹಾಗೂ ಮೆಚ್ಯುರ್ ಆಗಿರುವ ಠೇವಣಿಗಳ ನವೀಕರಣಕ್ಕೆ ಕೂಡ ಅನ್ವಯಿಸುತ್ತದೆ.
ಎಸ್ ಬಿಐ ಅಮೃತ್ ಕಲಶ್ ಎಫ್ ಡಿ
ಇದು ನಿಗದಿತ ಅವಧಿಯ ಸ್ಥಿರ ಠೇವಣಿ ಯೋಜನೆಯಾಗಿದ್ದು, 400 ದಿನಗಳ ಅವಧಿಯನ್ನು ಹೊಂದಿದೆ. ಈ ಯೋಜನೆಯನ್ನುಈ ಹಿಂದೆಯೇ ಬ್ಯಾಂಕ್ ಪರಿಚಯಿಸಿದ್ದು, ಅದರ ಅವಧಿ 2023ರ ಫೆಬ್ರವರಿ 15 ಹಾಗೂ 2023ರ ಮಾರ್ಚ್ 31ರ ನಡುವೆ ಇತ್ತು. ಈ ಯೋಜನೆ ಸಾಮಾನ್ಯ ನಾಗರಿಕರಿಗೆ ಶೇ.7.10 ಬಡ್ಡಿದರ ಒದಗಿಸುತ್ತಿದೆ. ಇನ್ನು ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ.0.50ರಷ್ಟು ಬಡ್ಡಿದರ ನೀಡುತ್ತಿದೆ. ಇದರಿಂದ ಹಿರಿಯ ನಾಗರಿಕರಿಗೆ ಶೇ.7.60ರಷ್ಟು ರಿಟರ್ನ್ ಸಿಗಲಿದೆ. ಬ್ಯಾಂಕಿನ ಉದ್ಯೋಗಿಗಳು ಹಾಗೂ ಪಿಂಚಣಿದಾರರು ಹೆಚ್ಚುವರಿ ಶೇ.1ರಷ್ಟು ಬಡ್ಡಿದರ ಪಡೆಯಲು ಅರ್ಹತೆ ಹೊಂದಿದ್ದಾರೆ. ಅಮೃತ್ ಕಲಶ್ ಯೋಜನೆಯನ್ನು ಎಸ್ ಬಿಐ ಏಪ್ರಿಲ್ 12ರಂದು ಮರುಪರಿಚಯಿಸಿದ್ದು, ಜೂನ್ 30, 2023ರ ತನಕ ಜಾರಿಯಲ್ಲಿರಲಿದೆ ಎಂದು ತಿಳಿಸಿತ್ತು. ಆದರೆ, ಈಗ ಮತ್ತೊಮ್ಮೆ ಗಡುವನ್ನು ವಿಸ್ತರಿಸಿದ್ದು, 2023ರ ಆಗಸ್ಟ್ 15ರ ತನಕ ಲಭ್ಯವಿರಲಿದೆ.
Personal Finance: ಖಾತೆಯೊಂದು, ಮೂರು ಲಾಭ ನೀಡುವ SBI ಈ ಖಾತೆ ವಿಶೇಷವೇನು?
ಗ್ರಾಹಕರು ಎಸ್ ಬಿಐ ಅಮೃತ್ ಕಲಶ್ ಖಾತೆಯನ್ನು ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಅಲ್ಲಿ ತೆರೆಯಬಹುದು ಅಥವಾ ಎಸ್ ಬಿಐ ಯೋನೋ ಆಪ್ ಮೂಲಕ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅಮೃತ್ ಕಲಶ್ ( Amrit Kalash) ಠೇವಣಿ ಮೇಲಿನ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಹಾಗೂ ಅರ್ಧವಾರ್ಷಿಕ ಅವಧಿಯಲ್ಲಿ ಪಾವತಿಸಲಾಗುತ್ತದೆ. ಅಮೃತ್ ಕಲಶ್ ಠೇವಣಿ ಯೋಜನೆ ಮೂಲಕ ಸಾಲಕ್ಕೆ (Loan) ಕೂಡ ಅರ್ಜಿ ಸಲ್ಲಿಸಬಹುದು. ಇನ್ನು ಅವಧಿಗೆ ಮುನ್ನ ವಿತ್ ಡ್ರಾ (Withdraw) ಮಾಡಲು ಕೂಡ ಗ್ರಾಹಕರಿಗೆ ಈ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ. ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಈ ಠೇವಣಿಗೆ ಟಿಡಿಎಸ್ ಕೂಡ ಅನ್ವಯಿಸುತ್ತದೆ. ಇನ್ನು 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎನ್ ಆರ್ ಐ (NRI) ಟರ್ಮ್ ಡೆಪಾಸಿಟ್ ಗೆ ಕೂಡ ಈ ಯೋಜನೆ ಅನ್ವಯಿಸುತ್ತದೆ.
ಎಸ್ ಬಿಐ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ; ಮೇ 1ರಿಂದಲೇ ಜಾರಿಗೆ
ವಿ ಕೇರ್ ಠೇವಣಿ ಯೋಜನೆ
ಎಸ್ ಬಿಐ ವಿ ಕೇರ್ ಠೇವಣಿ ಯೋಜನೆಯಡಿಯಲ್ಲಿ ಐದು ವರ್ಷಗಳು ಅಥವಾ ಅದಕ್ಕಿಂತ ದೀರ್ಘ ಅವಧಿಯ ಸ್ಥಿರ ಠೇವಣಿಗಳನ್ನು (ಎಫ್ ಡಿ) ಹೊಂದಿರೋರಿಗೆ ಇತರ ಸಾಮಾನ್ಯ ಎಫ್ ಡಿಗಿಂತ 50 ಬೇಸಿಸ್ ಪಾಯಿಂಟ್ಸ್ ಅಥವಾ ಶೇ.0.5ರಷ್ಟು ಅಧಿಕ ಬಡ್ಡಿ ನೀಡಲಾಗುತ್ತಿದೆ. ಹೀಗಾಗಿ ಎಸ್ ಬಿಐ ಹಿರಿಯ ನಾಗರಿಕರ ಎಫ್ ಡಿಗಳ ಮೇಲೆ ಶೇ.7.50 ಬಡ್ಡಿ ನೀಡಲಾಗುತ್ತಿದೆ. ಎಸ್ ಬಿಐಯ ಈ ವಿಶೇಷ ಎಫ್ ಡಿ ಯೋಜನೆ ಅಂತಿಮ ಗಡುವನ್ನು 2023ರ ಸೆಪ್ಟೆಂಬರ್ 30ರ ತನಕ ವಿಸ್ತರಿಸಲಾಗಿದೆ.
