ಈ ಡಿಜಿಟಲ್ ಯುಗದಲ್ಲಿ ವಂಚನೆ ಯಾವಾಗ, ಹೇಗೆ ಆಗುತ್ತದೆ ಎಂದು ಊಹಿಸೋದು ತುಸು ಕಷ್ಟ. ಎಸ್ ಬಿಐ ಗ್ರಾಹಕರಿಗೆ ಆಗಾಗ ಇದರ ಅನುಭವ ಆಗಿರುತ್ತದೆ.ಇತ್ತೀಚೆಗೆ ಖಾತೆಗೆ 6,000 ರೂ. ಹಣ ವರ್ಗಾಯಿಸೋದಾಗಿ ನಕಲಿ ಸಂದೇಶ ಕಳುಹಿಸಿ ಕೆಲವರ ಖಾತೆಗೆ ಈಗಾಗಲೇ ವಂಚಕರು ಕನ್ನ ಹಾಕಿದ್ದಾರೆ. ನಿಮಗೂ ಇಂಥ ಸಂದೇಶ ಬಂದಿದ್ರೆ ಎಚ್ಚರ, ಯಾವುದೇ ಕಾರಣಕ್ಕೂ ಪ್ರತಿಕ್ರಿಯಿಸುವ ಗೋಜಿಗೆ ಹೋಗಬೇಡಿ. 

ನವದೆಹಲಿ (ಸೆ.5): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಆಗಿದ್ದು, 67ನೇ ವಾರ್ಷಿಕೋತ್ಸದ ಸಂಭ್ರಮದಲ್ಲಿದೆ. ಇಂಥ ಸಂದರ್ಭದಲ್ಲಿ ಎಸ್ ಬಿಐ 67ನೇ ಸಂಭ್ರಮಾಚರಣೆಯ ಅಂಗವಾಗಿ ಗ್ರಾಹಕರಿಗೆ 6,000ರೂ. ನೀಡಲಾಗುತ್ತಿದೆ ಎಂಬ ಸಂದೇಶ ನಿಮಗೆ ಬಂದಿದೆಯಾ? ಒಂದು ವೇಳೆ ನಿಮಗೆ ಇಂಥ ಸಂದೇಶ ಬಂದಿದ್ರೆ ಕೂಡಲೇ ಎಚ್ಚೆತ್ತುಕೊಳ್ಳಿ.ಯಾವುದೇ ಕಾರಣಕ್ಕೂ ಆ ಸಂದೇಶಕ್ಕೆ ಪ್ರತಿಕ್ರಿಯಿಸಬೇಡಿ. ಇದು ನಕಲಿ ಸಂದೇಶವಾಗಿದೆ. ಇಂಥ ಸಂದೇಶವನ್ನು ಎಸ್ ಬಿಐಯ ಕೋಟ್ಯಂತರ ಗ್ರಾಹಕರಿಗೆ ಕಳುಹಿಸಲಾಗಿದ್ದು, ಅನೇಕರು ವಂಚನೆಗೆ ಕೂಡ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಇಂಥ ಸಂದೇಶದ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಎಸ್ ಬಿಐ ಟ್ವೀಟ್ ಮುಖಾಂತರ ಮನವಿ ಮಾಡಿದೆ. ವಾಟ್ಸಾಪ್, ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡಲಾಗುತ್ತಿದೆ. ಎಸ್ ಬಿಐ 67ನೇ ವಾರ್ಷಿಕೋತ್ಸವದ ಅಂಗವಾಗಿ ಜನರ ಖಾತೆಗಳಿಗೆ 6,000ರೂ. ವರ್ಗಾವಣೆ ಮಾಡಲಿದೆ. ಅದಕ್ಕಾಗಿ ನೀವು ಈ ಕೆಳಗಿನ ಪ್ರಶ್ನೆಗಳಿಗೆ ಉತ್ರಿಸಬೇಕು ಎಂದು 3-4 ಪ್ರಶ್ನೆಗಳನ್ನು ಗ್ರಾಹಕರಿಗೆ ಕೇಳಲಾಗುತ್ತಿದೆ. ಇದಾದ ಬಳಿಕ ಹೆಸರು, ವಿಳಾಸ, ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಮಾಹಿತಿಗಳಾದ ಖಾತೆ ಸಂಖ್ಯೆ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇತ್ಯಾದಿ ಮಾಹಿತಿ ಪಡೆದು ಅವರ ಖಾತೆಯಿಂದ ಹಣ ವಿತ್ ಡ್ರಾ ಮಾಡಲಾಗುತ್ತಿದೆ. ಇಂಥ ಅನೇಕ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ.

ಎಸ್ ಬಿಐ ತನ್ನ ಗ್ರಾಹಕರಿಗೆ ಆಗಾಗ ವಿವಿಧ ಆಫರ್ ಗಳನ್ನು ಘೋಷಿಸುತ್ತಲೇ ಇರುತ್ತದೆ. ಆದರೆ, ಗ್ರಾಹಕರಿಗೆ 6,000ರೂ. ನೀಡುವ ಯಾವುದೇ ಯೋಜನೆಯನ್ನು ಎಸ್ ಬಿಐ ಪ್ರಾರಂಭಿಸಿಲ್ಲ. ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ಎಸ್ ಬಿಐ ಸ್ಪಷ್ಟಪಡಿಸಿದೆ. ಇಂಥ ವಂಚನೆ ಪ್ರಕರಣಗಳ ಬಗ್ಗೆ ಎಸ್ ಬಿಐ ಅನೇಕ ಬಾರಿ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ. ಖಾತೆಗೆ ಹಣ ವರ್ಗಾವಣೆ, ಸಬ್ಸಿಡಿ, ಉಚಿತ ಕೊಡುಗೆಗಳು, ಉಚಿತ ಆಫರ್ ಗಳು ಇತ್ಯಾದಿ ಹೆಸರಿನಲ್ಲಿ ಗ್ರಾಹಕರ ಬ್ಯಾಂಕ್ ಖಾತೆ ಮಾಹಿತಿ, ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕಿ ಗ್ರಾಹಕರಿಗೆ ಸೈಬರ್ ವಂಚಕರು ಅನೇಕ ಬಾರಿ ವಂಚಿಸಿದ್ದಾರೆ ಎಂಬ ಮಾಹಿತಿಯನ್ನು ಕೂಡ ಎಸ್ ಬಿಐ ಟ್ವೀಟ್ ನಲ್ಲಿ ಹಂಚಿಕೊಂಡಿದೆ. 

ತಿಂಗಳಿಗೆ 1ಲಕ್ಷ ರೂ. ಪಿಂಚಣಿ ಪಡೆಯಬೇಕೇ? ಮ್ಯೂಚ್ಯುವಲ್ ಫಂಡ್ ಎಸ್ ಐಪಿಯಲ್ಲಿ ಎಷ್ಟು ಹೂಡಿಕೆ ಮಾಡಬೇಕು?

ಪ್ಯಾನ್ ಸಂಖ್ಯೆ ಕೋರಿ ಸಂದೇಶ
ಕೆಲವು ದಿನಗಳ ಹಿಂದಷ್ಟೇ ಅನೇಕ ಎಸ್ ಬಿಐ ಗ್ರಾಹಕರಿಗೆ ಯೋನೋ ಖಾತೆಯನ್ನು ಬ್ಲಾಕ್ ಮಾಡಲಾಗಿದ್ದು, ಸಕ್ರಿಯಗೊಳಿಸಲು ಪ್ಯಾನ್ ಸಂಖ್ಯೆ ನವೀಕರಿಸುವಂತೆ ಕೋರಿ ಸಂದೇಶಗಳು ಬಂದಿದ್ದವು. ಈ ಸಂದೇಶ ನಕಲಿಯಾಗಿದ್ದು, ಗ್ರಾಹಕರು ಇದಕ್ಕೆ ಪ್ರತಿಕ್ರಿಯಿಸದಂತೆ ಅಥವಾ ಯಾವುದೇ ವೈಯಕ್ತಿಕ ಅಥವಾ ಬ್ಯಾಂಕಿಂಗ್ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಕೇಂದ್ರ ಸರ್ಕಾರದ ಫ್ಯಾಕ್ಟ್ ಚೆಕ್ಕಿಂಗ್ ದಳ ಪಿಐಬಿ ಫ್ಯಾಕ್ಟ್ ಚೆಕ್ ಎಚ್ಚರಿಸಿತ್ತು. 

179 ಕೋಟಿ ರೂ. ವಂಚನೆ 
ಆರ್ ಬಿಐ ಅಧಿಕೃತ ಅಂಕಿಅಂಶಗಳ ಪ್ರಕಾರ 2021-22ನೇ ಸಾಲಿನಲ್ಲಿ ಎಟಿಎಂ/ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ವಂಚನೆಯಿಂದ 179 ಕೋಟಿ ರೂ. ಮೊತ್ತವನ್ನು ಜನರು ಕಳೆದುಕೊಂಡಿದ್ದಾರೆ. ಅದಕ್ಕೂ ಹಿಂದಿನ ಹಣಕಾಸು ವರ್ಷದಲ್ಲಿ ಇಂಥ ವಂಚನೆಗಳಿಂದ 216 ಕೋಟಿ ರೂ. ಕಳೆದುಕೊಂಡಿದ್ದರು. 

ಒಂದೂವರೆ ವರ್ಷದ ಹುಡುಕಾಟದ ಬಳಿಕ Tata Sons ಚೇರ್ಮನ್‌ ಆಗಿದ್ದ ಸೈರಸ್‌ ಮಿಸ್ತ್ರಿ, ವಜಾಗೊಂಡಿದ್ದು ಹೇಗೆ?

ಎಲ್ಲಿ ದೂರು ನೀಡಬೇಕು?
ಇಂಥ ಸಂದೇಶಗಳು ಬಂದರೆ ಗ್ರಾಹಕರು report.phishing@sbi.co.in ಈ ಮೇಲ್ ಐಡಿಗೆ ಇ-ಮೇಲ್ ಕಳುಹಿಸುವ ಮೂಲಕ ಅಥವಾ 1930 ಸಂಖ್ಯೆಗೆ ಕರೆ ಮಾಡುವ ಮೂಲಕ ದೂರು ನೀಡಬಹುದು.