ಒಂದೂವರೆ ವರ್ಷದ ಹುಡುಕಾಟದ ಬಳಿಕ Tata Sons ಚೇರ್ಮನ್ ಆಗಿದ್ದ ಸೈರಸ್ ಮಿಸ್ತ್ರಿ, ವಜಾಗೊಂಡಿದ್ದು ಹೇಗೆ?
2012ರ ಡಿಸೆಂಬರ್‌ನಲ್ಲಿ ರತನ್ ಟಾಟಾ ಅವರು ಟಾಟಾ ಸನ್ಸ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಈ ಅವಧಿಯಲ್ಲಿ ಒಂದೂವರೆ ವರ್ಷಗಳ ಕಾಲ ಹುಡುಕಾಟ ನಡೆಸಿ ಆಯ್ಕೆ ಮಾಡಿದ್ದ ಸೈರಸ್ ಮಿಸ್ತ್ರಿಯವರನ್ನು ಕಂಪನಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ನಾಲ್ಕು ವರ್ಷಗಳ ಬಳಿಕ 2016ರಲ್ಲಿ ಹಠಾತ್‌ಆಗಿ ಇವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿತ್ತು. ಈ ಪ್ರಕರಣದಿಂದ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ಸೈರಸ್ ಮಿಸ್ತ್ರಿ, ಅತೀದೊಡ್ಡ ಕಾರ್ಪೋರೇಟ್ ಕಾನೂನು ಹೋರಾಟವನ್ನು ನಡೆಸಿದ್ದರು. ಆದರೆ, ಅದರಲ್ಲಿ ಗೆಲುವು ಕಂಡಿರಲಿಲ್ಲ.
ಮುಂಬೈ (ಸೆ. 4): ಟಾಟಾ ಸನ್ಸ್ ಅಥವಾ ಟಾಟಾ ಗ್ರೂಪ್‌ನ ಮಾಜಿ ಚೇರ್ಮನ್ ಆಗಿದ್ದ ಸೈರಸ್ ಮಿಸ್ತ್ರಿ ತಮ್ಮ 54ನೇ ವರ್ಷದಲ್ಲಿ ಸಾವು ಕಂಡಿದ್ದಾರೆ. ಮುಂಬೈನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಶಾಪೂರ್ಜಿ ಪಲ್ಲೋಂಜಿ ಸಮೂಹದ ಕುಡಿ ನಂದಿಹೋಗಿದೆ. ತಮ್ಮ ಮರ್ಸಿಡೀಸ್ ಕಾರ್‌ನಲ್ಲಿ ಅಹಮದಾಬಾದ್‌ನಿಂದ ಮುಂಬೈಗೆ ಬರುವ ಮಾರ್ಗದಲ್ಲಿ ಅಪಘಾತ ಸಂಭವಿಸಿದೆ. ಅಫಘಾತಗೊಂಡ ರಭಸಕ್ಕೆ ಅವರ ದೇಹ ಕಾರಿನಿಂದ ಹೊರಬಿದ್ದಿತ್ತು. ಟಾಟಾ ಗ್ರೂಪ್‌ನಲ್ಲಿ ಅತೀದೊಡ್ಡ ಷೇರುದಾರರಾಗಿರುವ 157 ವರ್ಷಗಳ ಇತಿಹಾಸ ಹೊಂದಿರುವ ಶಾಪೂರ್ಜಿ ಪಲ್ಲೋಂಜಿ ಸಮೂಹದ ಅಧ್ಯಕ್ಷರಾಗಿದ್ದ ಪಲ್ಲೋಂಜಿ ಮಿಸ್ತ್ರಿ ಅವರ ನಾಲ್ವರು ಮಕ್ಕಳಲ್ಲಿ ಸೈರಸ್ ಮಿಸ್ತ್ರಿ ಕೂಡ ಒಬ್ಬರು. ಪಲ್ಲೋಂಜಿ ಮಿಸ್ತ್ರಿ ಇದೇ ವರ್ಷದ ಜುಲೈ 28 ರಂದು ತಮ್ಮ 93ನೇ ವಯಸ್ಸಿನಲ್ಲಿ ನಿಧನರಾಗಿದ್ದರು. 2006ರಲ್ಲಿ ಟಾಟಾ ಸನ್ಸ್‌ನ ನಿರ್ದೇಶಕರ ಮಂಡಳಿಯ ಸದಸ್ಯರಾಗಿ ಕೂಡಿಕೊಂಡಿದ್ದ ಸೈರಸ್ ಮಿಸ್ತ್ರಿ, 2012ರ ವೇಳೆಗೆ ರತನ್ ಟಾಟಾ ಅವರ ಬದಲಿಗೆ ಟಾಟಾ ಸನ್ಸ್ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದರು. ವಯೋಸಹಜ ಕಾರಣಗಳಿಂದಾಗಿ ಹಾಗೂ ಮುಂದಿನ ಪೀಳಿಗೆಗೆ ನಾಯಕತ್ವವನ್ನು ಹಸ್ತಾಂತರ ಮಾಡುವ ನಿಟ್ಟಿನಲ್ಲಿ ರತನ್ ಟಾಟಾ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ಘೋಷಣೆ ಮಾಡಿದ ಬಳಿಕ ಅಂದಾಜು ಒಂದೂವರೆ ವರ್ಷ ಟಾಟಾ ಸನ್ಸ್ ಸೂಕ್ತ ಅಧ್ಯಕ್ಷನಿಗಾಗಿ ಹುಡುಕಾಟ ನಡೆಸಿತ್ತು. ಅದರ ಫಲವಾಗಿ ಸಿಕ್ಕಿದ್ದು, ಕಂಪನಿಯ ಅತೀದೊಡ್ಡ ಷೇರುದಾರ ಕಂಪನಿಯಾಗಿದ್ದ ಶಾಪೂರ್ಜಿ ಪಲ್ಲೋಂಜಿ ಕಂಪನಿಯ ಕುಡಿ ಸೈರಸ್ ಮಿಸ್ತ್ರಿ.
ಆದರೆ, ಅಧ್ಯಕ್ಷ ಸ್ಥಾನದಲ್ಲಿ ಬರೀ ನಾಲ್ಕು ವರ್ಷಗಳ ಕಾಲ ಮಾತ್ರವೇ ಇದ್ದ ಸೈರಸ್, 2016ರಲ್ಲಿ ಹಠಾತ್ ಆಗಿ ಅವರನ್ನು ಈ ಸ್ಥಾನದಿಂದ ತೆಗೆದುಹಾಕಲಾಯಿತು. ಅದಾದ ಬಳಿಕ ಟಾಟಾ ಗ್ರೂಪ್ ಜೊತೆಗಿನ ಕಾನೂನು ವಿವಾದದ ಮೂಲಕವೇ ಸೈರಸ್ ಮಿಸ್ತ್ರಿ ಸುದ್ದಿಯಲ್ಲಿದ್ದರು. 2012ರಲ್ಲಿ ಟಾಟಾ ಸನ್ಸ್‌ನ 6ನೇ ಕಿರಿಯ ಅಧ್ಯಕ್ಷರಾಗಿದ್ದ ಸೈರಸ್ ಮಿಸ್ತ್ರಿ ಅವರ ಕುಟುಂಬ, ಟಾಟಾ ಗ್ರೂಪ್‌ನಲ್ಲಿ 18.4ರಷ್ಟು ಪಾಲನ್ನು ಹೊಂದಿದೆ. 2016 ರಲ್ಲಿ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ ನಂತರ, ರತನ್ ಟಾಟಾ ಮತ್ತೆ ಗುಂಪಿನ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಶಾಪೂರ್ಜಿ ಪಲ್ಲೋಂಜಿ ಕುಟುಂಬಕ್ಕೆ ವರ್ಷದಲ್ಲಿ ಸಾಕಷ್ಟು ಹಿನ್ನಡೆ: ಮಿಸ್ತ್ರಿ ಕುಟುಂಬ ಈ ವರ್ಷ ಎರಡು ಪ್ರಮುಖ ಹಿನ್ನಡೆಗಳನ್ನು ಎದುರಿಸಿದೆ. ಈ ವರ್ಷ 28 ಜೂನ್ ರಂದು, ಸೈರಸ್ ಮಿಸ್ತ್ರಿ ಅವರ ತಂದೆ ಮತ್ತು ಉದ್ಯಮಿ ಪಲ್ಲೊಂಜಿ ಮಿಸ್ತ್ರಿ ಅವರು 93 ನೇ ವಯಸ್ಸಿನಲ್ಲಿ ನಿಧನರಾದರು. ಈಗ ಸೈರಸ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಕುಟುಂಬವು ಈ ಎರಡನೇ ದೊಡ್ಡ ಆಘಾತವನ್ನು ಅನುಭವಿಸಿದೆ. ಸೈರಸ್ ಮತ್ತು ಅವರ ತಂದೆಯ ಮರಣದ ನಂತರ, ಕುಟುಂಬವು ಈಗ ಅವರ ತಾಯಿ ಪ್ಯಾಟ್ಸಿ ಪೆರಿನ್ ದುಬಾಸ್, ಸಹೋದರ ಶಪೂರ್ ಮಿಸ್ತ್ರಿ, ಜೊತೆಗೆ ಇಬ್ಬರು ಸಹೋದರಿಯರಾದ ಲೈಲಾ ಮಿಸ್ತ್ರಿ ಮತ್ತು ಅಲು ಮಿಸ್ತ್ರಿ ಅವರನ್ನು ಒಳಗೊಂಡಿದೆ. 69 ದಿನಗಳ ಅಂತರದಲ್ಲಿ ಶಾಪೂರ್ಜಿ ಪಲ್ಲೋಂಜಿ ಗ್ರೂಪ್ ತನ್ನ ಕಂಪನಿಯ ಎರಡು ಪ್ರಮುಖ ವ್ಯಕ್ತಿಗಳನ್ನು ಕಳೆದುಕೊಂಡಿದೆ.
ನನ್ನನ್ನು ಕೆಲಸದಿಂದ ತೆಗೆದುಹಾಕ್ತಿದ್ದಾರೆ ಎಂದು ಸಂದೇಶ ಕಳಿಸಿದ್ದ ಸೈರಸ್: 2016ರಲ್ಲಿ ಟಾಟಾ ಸಮೂಹ ಕಂಪನಿಗಳ ಮುಖ್ಯಸ್ಥ ಹುದ್ದೆಯಿಂದ ತಮ್ಮನ್ನು ವಜಾಗೊಳಿಸುವ ಸಭೆ ಆಯೋಜನೆಗೊಂಡ ವಿಷಯ ತಿಳಿಯುತ್ತಿದ್ದಂತೆ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಅವರು ತಮ್ಮ ಪತ್ನಿ ರೋಹಿಖಾ ಅವರಿಗೆ ‘ನನ್ನನ್ನು ಕೆಲಸದಿಂದ ತೆಗೆಯಲಾಗುತ್ತಿದೆ’ ಎಂಬ ಸಂದೇಶ ಕಳುಹಿಸಿದ್ದರು. ಹೀಗೆಂದು, ಮಿಸ್ತ್ರಿ ಅವರು ಟಾಟಾ ಸಮೂಹವನ್ನು ಮುನ್ನಡೆಸುತ್ತಿದ್ದಾಗ ಅವರ ಮುಖ್ಯ ಗುಂಪಿನಲ್ಲಿ ಒಬ್ಬರಾಗಿದ್ದ ನಿರ್ಮಾಲ್ಯ ಕುಮಾರ್ ಅವರು ಬ್ಲಾಗ್ ಬರೆದುಕೊಂಡಿದ್ದರು. ಮಿಸ್ತ್ರಿ ಅವರನ್ನು ಟಾಟಾ ಕಂಪನಿಯಿಂದ ಹೊರದಬ್ಬಿದ್ದಕ್ಕೆ ಸಂಬಂಧಿಸಿದ ಕುತೂಹಲಕಾರಿ ಮಾಹಿತಿಗಳು ‘ಸೈರಸ್ ಮಿಸ್ತ್ರಿ ಅವರನ್ನು ಹೇಗೆ ವಜಾಗೊಳಿಸಲಾಯಿತು’ ಎಂಬ ಈ ಲೇಖನದಲ್ಲಿ ಬರೆದುಕೊಂಡಿದ್ದಾರೆ.
ಅವರು ಬರೆದಿದ್ದ ಬ್ಲಾಗ್ ಲೇಖನದ ವಿವರ:
-2016ರ ಅ.24ರಂದು ಟಾಟಾ ಸನ್ಸ್ ಕಂಪನಿಯ ನಿರ್ದೇಶಕ ಮಂಡಳಿ ಸಭೆ ಇತ್ತು. ಅದಕ್ಕೆ ಕೆಲವು ನಿಮಿಷ ಮುನ್ನ ರತನ್ ಟಾಟಾ ಹಾಗೂ ನಿರ್ದೇಶಕ ಮಂಡಳಿ ಸದಸ್ಯ ನಿತಿನ್ ನೋಹ್ರಿಯಾ ಅವರು ಸೈರಸ್ ಅವರನ್ನು ಭೇಟಿ ಮಾಡಿದರು. ‘ಸೈರಸ್ ಅವರೇ ನಿಮ್ಮ ಹಾಗೂ ರತನ್ ಸಂಬಂಧ ಚೆನ್ನಾಗಿ ಕೆಲಸ ಮಾಡುತ್ತಿಲ್ಲ’ ಎಂದು ನೋಹ್ರಿಯಾ ಮಾತು ಆರಂಭಿಸಿದರು. ಬಳಿಕ ‘ನಿಮ್ಮನ್ನು ಟಾಟಾ ಸನ್ಸ್ ಮುಖ್ಯಸ್ಥ ಹುದ್ದೆಯಿಂದ ವಜಾಗೊಳಿಸಲು ಟಾಟಾ ಟ್ರಸ್ಟ್ ನಿರ್ಧರಿಸಿದ್ದರು, ಈ ಸಂಬಂಧ ನಿರ್ದೇಶಕ ಮಂಡಳಿಯಲ್ಲಿ ನಿರ್ಣಯ ಮಂಡಿಸಲಾಗುತ್ತದೆ. ಹೀಗಾಗಿ ನೀವು ರಾಜೀನಾಮೆ ಕೊಟ್ಟುಬಿಡಿ ಅಥವಾ ನಿರ್ದೇಶಕ ಮಂಡಳಿಯಲ್ಲಿ ನಿರ್ಣಯ ಎದುರಿಸಿ’ ಎಂದು ಹೇಳಿದ್ದರು.
-ಇದೇ ವೇಳೆ, ರತನ್ ಟಾಟಾ ಅವರು ಮಾತನಾಡಿ, ಪರಿಸ್ಥಿತಿ ಈ ಹಂತಕ್ಕೆ ಮುಟ್ಟಿದ್ದಕ್ಕೆ ಬೇಸರವಾಗುತ್ತಿದೆ ಎಂದರು. ಇದಕ್ಕೆ ಅತ್ಯಂತ ತಾಳ್ಮೆ ಯಿಂದಲೇ ಉತ್ತರ ನೀಡಿದ ಸೈರಸ್, ನಿರ್ದೇಶಕ ಮಂಡಳಿಯಲ್ಲಿ ವಿಷಯ ಪ್ರಸ್ತಾಪಿಸಲು ನೀವು ಮುಕ್ತವಾಗಿದ್ದೀರಿ. ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದರು. ತಕ್ಷಣವೇ ತಮ್ಮ ಪತ್ನಿ ರೋಹಿಖಾ ಅವರಿಗೆ ‘ನನ್ನನ್ನು ಕೆಲಸದಿಂದ ತೆಗೆಯಲಾಗುತ್ತಿದೆ’ ಎಂದು ಸಂದೇಶ ಕಳಿಸಿದವರೇ ಜಾಕೆಟ್ ಹಾಕಿಕೊಂಡು ನಿರ್ದೇಶಕ ಮಂಡಳಿ ಸಭೆಗೆ ತೆರಳಿದರು.
ಸೈರಸ್ ಮಿಸ್ತ್ರಿ ಕಂಪನಿಯ ಹಿತಾಸಕ್ತಿಗೆ ಧಕ್ಕೆ ತಂದಿದ್ದರೆ?
-ಇಂತಹ ನಿರ್ಣಯ ಕೈಗೊಳ್ಳಲು 15 ದಿನ ಮುನ್ನ ನೋಟಿಸ್ ನೀಡಬೇಕಿತ್ತು ಎಂದು ಸಭೆಯಲ್ಲಿ ಮಿಸ್ತ್ರಿ ವಾದಿಸಿದರು. ಅದು ಅವಶ್ಯವಿಲ್ಲ ಎಂದು ಕಾನೂನು ಅಭಿಪ್ರಾಯ ಬಂದಿದೆ ಎಂದು ನಿರ್ದೇಶಕ ಅಮಿತ್ ಚಂದ್ರಾ ತಿಳಿಸಿದರು. 8 ಸದಸ್ಯರ ನಿರ್ದೇಶಕ ಮಂಡಳಿಯಲ್ಲಿ ಆರು ಮಂದಿ ಮಿಸ್ತ್ರಿ ವಿರುದ್ಧ ಮತ ಹಾಕಿದರು. ಇಬ್ಬರು ಮಾತ್ರ ತಟಸ್ಥವಾಗಿ ಉಳಿದರು. ಕೆಲವೇ ನಿಮಿಷಗಳಲ್ಲಿ ಇದೆಲ್ಲಾ ಮುಗಿಯಿತು. ಮಿಸ್ತ್ರಿ ಅವರಿಗೆ ಯಾವುದೇ ವಿವರಣೆ ಹಾಗೂ ಉತ್ತರ ನೀಡಲು ಅವಕಾಶವನ್ನೂ ಕೊಡಲಾಗಲಿಲ್ಲ.
ಟಾಟಾಗೆ ಹಿನ್ನೆಡೆ: ಕಂಪನಿ ಜವಾಬ್ದಾರಿ ಸೈರಸ್ ಮಿಸ್ತ್ರಿ ಹೆಗಲಿಗೆ!
- ಮಧ್ಯಾಹ್ನ 3ಕ್ಕೆ ತಮ್ಮ ಕೊಠಡಿಗೆ ಬಂದ ಮಿಸ್ತ್ರಿ ತಮಗೆ ಸೇರಿದ ವಸ್ತುಗಳನ್ನು ಪ್ಯಾಕ್ ಮಾಡಲು ಆರಂಭಿಸಿದರು. ಈ ವೇಳೆ ನಾನು ನಾಳೆ ಬರಬೇಕಾ ಎಂದು ಕೇಳಿದಾಗ ಮುಖ್ಯ ಕಾರ್ಯ ಅಧಿಕಾರಿ ಎಫ್.ಎನ್. ಸುಬೇದಾರ್ ಅವರು ಅಗತ್ಯವಿಲ್ಲ ಎಂದು ಉತ್ತರಿಸಿದರು.
- 2017ರ ಮಾ.31ಕ್ಕೆ ಮಿಸ್ತ್ರಿ ಅವರ ಗುತ್ತಿಗೆ ಅವಧಿಯೇ ಮುಗಿಯುತ್ತಿತ್ತು. ದಿಢೀರನೇ ಅವರನ್ನು ವಜಾಗೊಳಿಸುವ ಬದಲು ಐದು ತಿಂಗಳ ಕಾಲ ಕಾಯಬಹುದಿತ್ತು. ತನ್ಮೂಲಕ ಸಾರ್ವಜನಿಕ ಅಪಮಾನಗಳನ್ನು ತಪ್ಪಿಸಬಹುದಿತ್ತು.