ಅಂಚೆ ಕಚೇರಿ ಉಳಿತಾಯ ಖಾತೆಗೆ ಸಂಬಂಧಿಸಿದ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಜಂಟಿ ಖಾತೆದಾರರ ಸಂಖ್ಯೆ ಹೆಚ್ಚಳ
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಗೆ ಸಂಬಂಧಿಸಿದ ಮೂರು ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಜಂಟಿ ಖಾತೆದಾರರ ಸಂಖ್ಯೆ, ವಿತ್ ಡ್ರಾ ಪ್ರಕ್ರಿಯೆ ಹಾಗೂ ಬಡ್ಡಿ ಲೆಕ್ಕಾಚಾರಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ.
ನವದೆಹಲಿ (ಆ.23): ಉಳಿತಾಯ ಮಾಡಬೇಕು ಎಂಬ ಯೋಚನೆ ಬಂದ ತಕ್ಷಣ ಮೊದಲು ನೆನಪಾಗುವುದೇ ಅಂಚೆ ಕಚೇರಿ. ಇಂದಿಗೂ ಭಾರತದಲ್ಲಿ ಬಹುತೇಕರು ಉಳಿತಾಯಕ್ಕೆ ಅಂಚೆ ಇಲಾಖೆ ಯೋಜನೆಗಳನ್ನೇ ನೆಚ್ಚಿಕೊಂಡಿದ್ದಾರೆ. ಹೀಗಿರುವಾಗ ಇತ್ತೀಚೆಗೆ ಆರ್ಥಿಕ ವ್ಯವಹಾರಗಳ ಇಲಾಖೆ, ಹಣಕಾಸು ಸಚಿವಾಲಯ ಅಂಚೆ ಕಚೇರಿ ಉಳಿತಾಯ ಖಾತೆಗೆ ಮೂರು ಬದಲಾವಣೆಗಳನ್ನು ಪರಿಚಯಿಸಿದೆ. ಈ ಮೂರು ಬದಲಾವಣೆಗಳು ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರೋರಿಗೆ ಮುಖ್ಯವಾಗಿವೆ. ಈ ಬದಲಾವಣೆಗಳನ್ನು ಒಟ್ಟಾಗಿ ಅಂಚೆ ಕಚೇರಿ ಉಳಿತಾಯ ಖಾತೆ (ತಿದ್ದುಪಡಿ) ಯೋಜನೆ 2023 ಎಂದು ಕರೆಯಲಾಗುತ್ತದೆ. ಈ ಬಗ್ಗೆ 2023ರ ಜುಲೈ 3ರಂದು ಇ-ಗಜೆಟ್ ಅಧಿಸೂಚನೆ ಮೂಲಕ ಅಧಿಕೃತವಾಗಿ ಮಾಹಿತಿ ನೀಡಲಾಗಿದೆ. ಜಂಟಿ ಖಾತೆ ಹೊಂದಿರೋರ ಸಂಖ್ಯೆ ಮಿತಿ, ವಿತ್ ಡ್ರಾ ಪ್ರಕ್ರಿಯೆಯಲ್ಲಿ ಬದಲಾವಣೆ, ಬಡ್ಡಿ ಲೆಕ್ಕಾಚಾರ ಹಾಗೂ ಕ್ರೆಡಿಟಿಂಗ್ ನಲ್ಲಿ ಪರಿಷ್ಕರಣೆ ಮಾಡಲಾಗಿದೆ. ಹಾಗಾದ್ರೆ ಈ ಮೂರು ನಿಯಮಗಳಲ್ಲಿ ಏನು ಬದಲಾವಣೆ ಮಾಡಲಾಗಿದೆ? ಇಲ್ಲಿದೆ ಮಾಹಿತಿ.
1.ಜಂಟಿ ಖಾತೆದಾರರ ಸಂಖ್ಯೆ ಹೆಚ್ಚಳ: ಜಂಟಿ ಖಾತೆದಾರರ ಸಂಖ್ಯೆಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಅಂಚೆ ಕಚೇರಿ ಜಂಟಿ ಖಾತೆಯನ್ನು ಗರಿಷ್ಠ ಇಬ್ಬರು ವ್ಯಕ್ತಿಗಳ ಹೆಸರಿನಲ್ಲಷ್ಟೇ ತೆರೆಯಬಹುದಾಗಿತ್ತು. ಅಂದರೆ ಇಬ್ಬರು ಜೊತೆಯಾಗಿ ಜಂಟಿ ಖಾತೆದಾರರಾಗಬಹುದಿತ್ತು. ಆದರೆ, ಈಗ ಮೂವರಿಗೆ ಜಂಟಿ ಖಾತೆದಾರರಾಗಲು ಅವಕಾಶ ನೀಡಲಾಗಿದೆ. ಅಂಚೆ ಕಚೇರಿ ಉಳಿತಾಯ ಖಾತೆ ಯೋಜನೆ 2019ರಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.
ದೇಶದ ಮೊದಲ 3ಡಿ ಪ್ರಿಂಟೆಂಡ್ ಅಂಚೆ ಕಚೇರಿ ಬೆಂಗ್ಳೂರಲ್ಲಿ ಇಂದು ಉದ್ಘಾಟನೆ
2.ವಿತ್ ಡ್ರಾ ಪ್ರಕ್ರಿಯೆಯಲ್ಲಿ ಬದಲಾವಣೆ: ವಿತ್ ಡ್ರಾ ಪ್ರಕ್ರಿಯೆಯಲ್ಲಿ ಕೂಡ ಬದಲಾವಣೆ ಮಾಡಲಾಗಿದೆ. ಅರ್ಜಿ ನಮೂನೆ 2ರ ಬದಲು ಅರ್ಜಿ ನಮೂನೆ 3 ಬಳಸಲಾಗಿದೆ. ಇನ್ನು 50ರೂ.ಗಿಂತ ಅಧಿಕ ಮೊತ್ತದ ಹಣ ವಿತ್ ಡ್ರಾ ಮಾಡೋದಿದ್ರೆ ಸರ್ಕಾರಿ ಉಳಿತಾಯ ಉತ್ತೇಜನ ಸಾಮಾನ್ಯ ನಿಯಮಗಳು 2018ರ ಅಡಿಯಲ್ಲಿ ಅರ್ಜಿ ನಮೂನೆ -3 ಭರ್ತಿ ಮಾಡಿ ಸಹಿ ಮಾಡಬೇಕು. ಇನ್ನು ಚೆಕ್ ಗಳು ಹಾಗೂ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಕೂಡ ವಿತ್ ಡ್ರಾ ಮಾಡಬಹುದು. ಇದು ಈ ಹಿಂದಿನ ಪ್ರಕ್ರಿಯೆಗಳಿಗೆ ವಿರುದ್ಧವಾಗಿದೆ. ಅಲ್ಲಿ ಪಾಸ್ ಪುಸ್ತಕ ಹಾಗೂ ಅರ್ಜಿ ನಮೂನೆ -2 ಬಳಸಿ ವಿತ್ ಡ್ರಾ ಮಾಡಲಾಗುತ್ತದೆ.
3.ಪರಿಷ್ಕೃತ ಬಡ್ಡಿ ಲೆಕ್ಕಾಚಾರ ಹಾಗೂ ಕ್ರೆಡಿಟಿಂಗ್ : ಇನ್ನು ಠೇವಣಿ ಬಡ್ಡಿ ಲೆಕ್ಕಾಚಾರ ಹಾಗೂ ಜಮೆಗೆ ಸಂಬಂಧಿಸಿದ ನಿಯಮಗಳಲ್ಲಿ ಕೂಡ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಖಾತೆಯಲ್ಲಿ ತಿಂಗಳಿನ 10ನೇ ದಿನ ಹಾಗೂ ಕೊನೆಯ ದಿನ ಕನಿಷ್ಠ ಎಷ್ಟು ಮೊತ್ತವಿರುತ್ತದೋ ಅದರ ಆಧಾರದಲ್ಲಿ ವಾರ್ಷಿಕ ಶೇ.4ರಷ್ಟು ದರದಲ್ಲಿ ಬಡ್ಡಿ ಲೆಕ್ಕಾಚಾರ ಮಾಡಲಾಗುತ್ತದೆ. ಇನ್ನು ಪ್ರತಿ ವರ್ಷದ ಕೊನೆಯಲ್ಲಿ ಈ ಬಡ್ಡಿ ಮೊತ್ತವನ್ನು ಖಾತೆಗೆ ಜಮೆ ಮಾಡಲಾಗುತ್ತದೆ. ಇನ್ನು ಖಾತೆದಾರ ಆಕಸ್ಮಿಕವಾಗಿ ಮರಣ ಹೊಂದಿದ್ರೆ ಖಾತೆ ಕ್ಲೋಸ್ ಮಾಡುವ ತಿಂಗಳಿನಲ್ಲಿ ಬಡ್ಡಿ ನೀಡಲಾಗುತ್ತದೆ.
ಅಂಚೆ ಕಚೇರಿ ಈ ಯೋಜನೆಯಲ್ಲಿ ತಿಂಗಳಿಗೆ 10 ಸಾವಿರ ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 7ಲಕ್ಷ ರೂ. ರಿಟರ್ನ್!
ತೆರಿಗೆ ಪ್ರಯೋಜನ: ಅಂಚೆ ಕಚೇರಿಯ ಹೂಡಿಕೆ ಯೋಜನೆಗಳು ತೆರಿಗೆ ಪ್ರಯೋಜನವನ್ನು ಒಳಗೊಂಡಿರುವ ಕಾರಣ ಬಹುತೇಕರು ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಾರೆ. ಅಂಚೆ ಕಚೇರಿಯ ಕೆಲವು ಯೋಜನೆಗಳು ತೆರಿಗೆ ಕಡಿತಕ್ಕೊಳಪಟ್ಟರೆ, ಇನ್ನೂ ಕೆಲವು ತೆರಿಗೆ ವಿನಾಯ್ತಿ ಒದಗಿಸುತ್ತವೆ. ಆದರೆ, ಕೆಲವು ಯೋಜನೆಗಳು ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ತೆರಿಗೆ ವಿನಾಯ್ತಿಗೆ ಆರ್ಹತೆ ಹೊಂದಿಲ್ಲ. ಅಲ್ಲದೆ, ವಹಿವಾಟು ನಿಗದಿತ ಮಿತಿಯನ್ನು ದಾಟಿದರೆ ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ) ಕೂಡ ಅನ್ವಯಿಸುತ್ತದೆ.