ಸೋಮವಾರ ಸ್ಟಾಕ್ ಮಾರ್ಕೆಟ್ ಆರಂಭಗೊಂಡ ಬೆನ್ನಲ್ಲೇ ದಿಢೀರ್ ಕುಸಿತ ಕಂಡಿದೆ. ಪರಿಣಾಮ ಕೇವಲ 1 ಗಂಟೆಯಲ್ಲಿ ಬರೋಬ್ಬರಿ 5 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಲಿದೆ. ಹೂಡಿಕೆದಾರರು ಕಂಗಾಲಾಗಿದ್ದಾರೆ.

ಮುಂಬೈ (ಸೆ.28) ಭಾರತೀಯ ಷೇರುಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಕುಸಿತದಿಂದ ಕೇವಲ ಒಂದು ಗಂಟೆಯಲ್ಲಿ ಹೂಡಿಕೆದಾರರು ಬರೋಬ್ಬರಿ 5 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಸೋಮಾವರ ಷೇರುಮಾರುಕಟ್ಟೆ ವ್ಯವಹಾರ ಆರಂಭಗೊಳ್ಳುತ್ತಿದ್ದಂತೆ ಕುಸಿತ ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್ 1000 ಪಾಯಿಂಟ್ ಕುಸಿತ ಕಂಡರೆ ನಿಫ್ಟಿ 23,000ಕ್ಕಿಂತ ಕೆಳಕ್ಕೆ ಇಳಿದಿದೆ. ಪರಿಣಾಮ ಹೂಡಿಕೆದಾರರು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

ಭಾರತದ ಷೇರುಮಾರುಕಟ್ಟೆ ಆರಂಭಗೊಳ್ಳುತ್ತಿದ್ದಂತೆ ವ್ಯವಹಾರಗಳು ಆರಂಭಗೊಂಡಿದೆ. 10 ಗಂಟೆಗೆ ಬಿಎಸ್ಇನಲ್ಲಿನ ಮಾರುಕಟ್ಟೆ ಮೌಲ್ಯ4.82 ಲಕ್ಷ ಕೋಟಿ ರೂಪಾಯಿಯಿಂದ ಏಕಾಏಕಿ 4.77 ಲಕ್ಷ ಕೋಟಿ ರೂಪಾಯಿಗೆ ಕುಸಿತ ಕಂಡಿದೆ. ಬೆಳಗ್ಗೆ 10.15ರ ವೇಳೆಗೆ 4.9 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ.

ಮಾರುಕಟ್ಟೆ ಕುಸಿತಕ್ಕೆ ಕಾರಣೇನು

ಷೇರು ಮಾರುಕಟ್ಟೆ ಕುಸಿತ ಹಾಗೂ ಭಾರಿ ನಷ್ಟಕ್ಕೆ ಕೆಲ ಕಾರಣಗಳಿವೆ. ಒಂದೆಡೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಳಿತಗಳು ಪ್ರಮುಖ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆಗೆ ಕಚ್ಚಾ ತೈಲ ಬೆಲೆ ಏರಿಕೆ, ಅಮೆರಿಕ ಬಾಂಡ್ ಇಳುವರಿ ಹೆಚ್ಚಳ, ವಿದೇಶಿ ಹೂಡಿಕೆದಾರರಿಂದ ಭಾರತೀಯ ಷೇರುಗಳು ಮಾರಾಟ, ತೈಲ ಬೆಲೆ ಏರಿಕೆಯಿಂದ ಸೃಷ್ಟಿಯಾಗಿರುವ ಹಣದುಬ್ಬರ ಆತಂಕಗಳು ಭಾರತದ ಷೇರುಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲ ಮಾಡಿದೆ.

ಇರಾನ್ ಹಾಗೂ ಅಮೆರಿಕ ನಡುವಿನ ವಿಫಲ ಮಾತುಕತೆ, ಒಪ್ಪಂದ ನಿರಾಕರಣೆ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ. ಕಚ್ಚಾ ತೈಲ ಬೆಲೆ, ಬ್ರೆಂಟ್ ಕ್ರೂಡ್ ಸೇರಿದಂತೆ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಿಂದ ಹಣದುಬ್ಬರ ಆತಂಕ ತೀವ್ರಗೊಂಡಿದೆ.ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಭಾರತದ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ.

ಕೆಲ ದಿನಗಳಲ್ಲಿ ನಷ್ಟದ ಮೌಲ್ಯ 9 ಲಕ್ಷ ಕೋಟಿ ರೂ

ಸೆಪ್ಟೆಂಬರ್ ತಿಂಗಳಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿಯಲ್ಲಿ ಕುಸಿತ, ನಷ್ಟಗಳೇ ಹೆಚ್ಚಾಗಿದೆ. ಈ ತಿಂಗಳಲ್ಲಿ ಸೆನ್ಸೆಕ್ಸ್ 2900 ಪಾಯಿಂಟ್‌ನಷ್ಟು ಕುಸಿತ ಕಾಣುವ ಮೂಲಕ ಶೇಕಡಾ 3.84ರಷ್ಟು ನಷ್ಟಕ್ಕೆ ಗುರಿಯಾಗಿದೆ. ಇನ್ನು ನಿಫ್ಟಿ 279.50ರಷ್ಟು ಕುಸಿತ ಕಂಡಿದೆ. ಕೆಲದಿನಗಳಲ್ಲಿ ಮಾರುಕಟ್ಟೆ ನಷ್ಟದ ಮೌಲ್ಯ ಬರೋಬ್ಬರಿ 9 ಲಕ್ಷ ಕೋಟಿ ರೂಪಾಯಿ.

ಅಲ್ಪಾವದಿ ಮಾರುಕಟ್ಟೆಯಲ್ಲಿ ಏರಿಳಿತ ಸಹಜ, ಆದರೆ ದೀರ್ಘಾವದಿ ಮಾರುಕಟ್ಟೆಯಲ್ಲಿ ಚೇತರಿಕೆ ಕಾಣುವ ಸಾಧ್ಯತೆಗಳಿವೆ. ಹೀಗಾಗಿ ಹೂಡಿಕೆದಾರರು ದೀರ್ಘಾವದಿ ಹೂಡಿಕೆಯಲ್ಲೂ ಗಮನಸಹರಿಸುವಂತೆ ತಜ್ಞರು ಸೂಚಿಸಿದ್ದಾರೆ.