ಜಾಗತಿಕ ಡೆನಿಮ್ ಬ್ರ್ಯಾಂಡ್ ಪೆಪೆ ಜೀನ್ಸ್ ಲಂಡನ್, ಬೆಂಗಳೂರಿನಲ್ಲಿ ಏಕಕಾಲಕ್ಕೆ ಮೂರು ನೂತನ ಮಳಿಗೆಗಳನ್ನು ಆರಂಭಿಸಿದೆ. ವೈಟ್‌ಫೀಲ್ಡ್, ಇಂದಿರಾನಗರ ಮತ್ತು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಈ ಮಳಿಗೆಗಳು ಕಾರ್ಯಾರಂಭ ಮಾಡಿವೆ. ಮುಂದಿನ 18 ತಿಂಗಳಲ್ಲಿ ದೇಶಾದ್ಯಂತ 100 ಹೊಸ ಮಳಿಗೆಗಳನ್ನು ತೆರೆಯುವ ಗುರಿಯನ್ನು ಸಂಸ್ಥೆ ಹೊಂದಿದೆ.
ಜಾಗತಿಕ ಮಟ್ಟದ ಪ್ರಸಿದ್ಧ ಡೆನಿಮ್ ಮತ್ತು ಲೈಫ್‌ಸ್ಟೈಲ್ ಬ್ರ್ಯಾಂಡ್ 'ಪೆಪೆ ಜೀನ್ಸ್ ಲಂಡನ್' ಭಾರತದಲ್ಲಿ ತನ್ನ ಚಿಲ್ಲರೆ ವ್ಯಾಪಾರ ಜಾಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಸೆಪ್ಟೆಂಬರ್ 25 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಾದ್ಯಂತ ಏಕಕಾಲದಲ್ಲಿ ಮೂರು ಅತ್ಯಾಧುನಿಕ ಹಾಗೂ ನವೀಕೃತ 'ನ್ಯೂ ಎಕ್ಸ್‌ಪೀರಿಯೆನ್ಸ್' ಮಳಿಗೆಗಳನ್ನು ತೆರೆಯುವ ಮೂಲಕ ಬ್ರ್ಯಾಂಡ್ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಮೂರು ಪ್ರಮುಖ ಸ್ಥಳಗಳಲ್ಲಿ ನೂತನ ಮಳಿಗೆಗಳು
ನಗರದ ಫ್ಯಾಷನ್ ಪ್ರಿಯರನ್ನು ಸೆಳೆಯಲು ಹಾಗೂ ಗ್ರಾಹಕರಿಗೆ ಸುಲಭವಾಗಿ ತಲುಪುವ ಉದ್ದೇಶದಿಂದ ಮೂರು ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಈ ಹೊಸ ಮಳಿಗೆಗಳನ್ನು ತೆರೆಯಲಾಗಿದೆ, ವೈಟ್‌ಫೀಲ್ಡ್‌ನ ಫೀನಿಕ್ಸ್ ಮಾರ್ಕೆಟ್‌ಸಿಟಿ, ಇಂದಿರಾನಗರದ 100 ಅಡಿ ರಸ್ತೆ ಮತ್ತು ಎಚ್‌ಎಸ್‌ಆರ್ ಲೇಔಟ್. ಈ ಮೂರೂ ಮಳಿಗೆಗಳು ಒಂದೇ ದಿನ ಶುಭಾರಂಭಗೊಂಡಿದ್ದು, ನಗರದ ಪ್ರಮುಖ ನೆರೆಹೊರೆಯ ಗ್ರಾಹಕರಿಗೆ ಬ್ರ್ಯಾಂಡ್‌ನ ಅತ್ಯಾಧುನಿಕ ಸಂಗ್ರಹಗಳು ಮತ್ತು ಪ್ರೀಮಿಯಂ ಡೆನಿಮ್ ಉತ್ಪನ್ನಗಳನ್ನು ಒದಗಿಸಲಿವೆ.
ಉತ್ಪನ್ನ ಶ್ರೇಣಿ ಮತ್ತು ತಾಂತ್ರಿಕ ನಾವೀನ್ಯತೆ
ಈ ಹೊಸ ಮಳಿಗೆಗಳಲ್ಲಿ ಪುರುಷರು, ಮಹಿಳೆಯರು ಮತ್ತು ಹುಡುಗರ ಉಡುಪುಗಳ ಬೃಹತ್ ಸಂಗ್ರಹವಿದೆ. ಪೆಪೆ ಜೀನ್ಸ್ ತನ್ನ ಸಾಂಪ್ರದಾಯಿಕ ಡೆನಿಮ್ ಶೈಲಿಯನ್ನು ಆಧುನಿಕ ದೈನಂದಿನ ಉಡುಪುಗಳೊಂದಿಗೆ ಸಮ್ಮಿಲನಗೊಳಿಸಿದೆ. ಮಳಿಗೆಗಳಲ್ಲಿ ಸಿಗ್ನೇಚರ್ ಡೆನಿಮ್, ಶರ್ಟ್‌ಗಳು, ಟಿ-ಶರ್ಟ್‌ಗಳು ಹಾಗೂ ಡೆನಿಮ್ ತಂತ್ರಜ್ಞಾನದ ನಾವೀನ್ಯತೆಗಳಾದ 'ಶಿರುಕು' (Shiruku) ಮತ್ತು 'ಪವರ್‌ಪ್ಲೆಕ್ಸ್' (Powerflex) ಶ್ರೇಣಿಯ ವೈವಿಧ್ಯಮಯ ಕ್ಯಾಶುಯಲ್‌ವೇರ್‌ಗಳು ಲಭ್ಯವಿವೆ.
ಬೆಂಗಳೂರು ನಮಗೆ ಅತ್ಯಂತ ಪ್ರಮುಖ ಮಾರುಕಟ್ಟೆ
ಬೆಂಗಳೂರಿನ ಬೃಹತ್ ವಿಸ್ತರಣೆಯ ಕುರಿತು ಮಾತನಾಡಿದ ಪೆಪೆ ಜೀನ್ಸ್ ಲಂಡನ್ ಸಂಸ್ಥೆಯ ಭಾರತದ ಸಿಇಒ ರಾಕೇಶ್ ಜಲ್ಲಿಪಲ್ಲಿ, "ಬೆಂಗಳೂರು ನಮಗೆ ಯಾವಾಗಲೂ ಪ್ರಮುಖ ಮಾರುಕಟ್ಟೆಯಾಗಿದೆ. ನಗರದಲ್ಲಿ ಒಂದೇ ದಿನ ಮೂರು ನೂತನ ಮಳಿಗೆಗಳನ್ನು ತೆರೆಯುವುದರಿಂದ ವೈಯಕ್ತಿಕ ಅಂಗಡಿಗಳ ಪ್ರಾರಂಭಕ್ಕಿಂತಲೂ ದೊಡ್ಡ ಮಟ್ಟದ ಸಂಚಲನ ಮೂಡಿಸಲು ನಮಗೆ ಸಾಧ್ಯವಾಗಿದೆ. ಗ್ರಾಹಕರು ನಗರದಾದ್ಯಂತ ಪೆಪೆ ಜೀನ್ಸ್‌ನ ಉತ್ಸಾಹವನ್ನು ಅನುಭವಿಸಬೇಕೆಂಬುದು ನಮ್ಮ ಆಶಯವಾಗಿತ್ತು. ಈ ಹೊಸ ನವೀಕೃತ ಮಳಿಗೆಗಳು ಗ್ರಾಹಕರ ಶಾಪಿಂಗ್ ಅನುಭವವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳಿದರು.
ಅವರು ಮುಂದುವರಿದು, ಈ ಮಳಿಗೆಗಳು ನಮ್ಮ ಚಿಲ್ಲರೆ ವ್ಯಾಪಾರದ ಉಪಸ್ಥಿತಿಯನ್ನು ಹೆಚ್ಚಿಸಲಿದ್ದು, ಗ್ರಾಹಕರಿಗೆ ನಮ್ಮ ಡೆನಿಮ್ ಹಾಗೂ ಕ್ಯಾಶುಯಲ್‌ವೇರ್ ಶೈಲಿಗಳನ್ನು ಸುಲಭವಾಗಿ ತಲುಪಿಸಲಿವೆ. ನಾವು ಭಾರತದಾದ್ಯಂತ ನಮ್ಮ ಜಾಲವನ್ನು ವಿಸ್ತರಿಸುತ್ತಿರುವಾಗ ಬೆಂಗಳೂರು ಆ ಪಯಣದ ಅತ್ಯಂತ ಪ್ರಮುಖ ಭಾಗವಾಗಿರಲಿದೆ ಎಂದು ತಿಳಿಸಿದರು.
ಮುಂದಿನ 18 ತಿಂಗಳಲ್ಲಿ 100 ಹೊಸ ಮಳಿಗೆಗಳ ಗುರಿ
ಪೆಪೆ ಜೀನ್ಸ್ ಲಂಡನ್ ದೇಶಾದ್ಯಂತ ತನ್ನ ಚಿಲ್ಲರೆ ವಿಸ್ತರಣೆಯನ್ನು ತೀವ್ರಗೊಳಿಸುತ್ತಿರುವ ಬೆನ್ನಲ್ಲೇ ಈ ಮೂರು ಮಳಿಗೆಗಳ ಉದ್ಘಾಟನೆ ನಡೆದಿದೆ. ಪ್ರಸ್ತುತ ಸಂಸ್ಥೆಯು ಭಾರತದಾದ್ಯಂತ 200ಕ್ಕೂ ಹೆಚ್ಚು ಪ್ರತ್ಯೇಕ ಮಳಿಗೆಗಳನ್ನು ಹೊಂದಿದ್ದು, ಮುಂದಿನ 18 ತಿಂಗಳಲ್ಲಿ ಇನ್ನೂ 100 ನೂತನ ಮಳಿಗೆಗಳನ್ನು ಸೇರ್ಪಡೆಗೊಳಿಸಲು ಯೋಜಿಸಿದೆ. ಈ ಮೂಲಕ ಭಾರತದ ಪ್ರಮುಖ ನಗರಗಳು ಹಾಗೂ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ತನ್ನ ಜಾಗತಿಕ ಡೆನಿಮ್ ಪರಂಪರೆಯನ್ನು ತಲುಪಿಸಲು ಪೆಪೆ ಜೀನ್ಸ್ ಮುಂದಾಗಿದೆ.


