ಕ್ರೆಡಿಟ್ ಕಾರ್ಡ್ ಉಜ್ಜಿದ್ರೆ ಆಗ್ಲಿಲ್ಲ ಅದ್ರ ಸಾಲ ತೀರಿಸ್ಬೇಕು. ಆದ್ರೆ ಭಾರತೀಯರು ಯಾಕೋ ಸಾಲ ತೀರಿಸೋ ವಿಷ್ಯದಲ್ಲಿ ಹಿಂದೇಟು ಹಾಕ್ತಿದ್ದಾರೆ. ಇದು ಬ್ಯಾಂಕ್ ಗಳ ತಲೆಬಿಸಿ ಹೆಚ್ಚಿಸುವ ಸಾಧ್ಯತೆಯಿದೆ.  

ದೇಶದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಾಗ್ತಿದೆ. ಜನರು ಸಣ್ಣಪುಟ್ಟ ವಸ್ತುಗಳ ಖರೀದಿಗೂ ಕ್ರೆಡಿಟ್ ಕಾರ್ಡ್ ಬಳಕೆ ಮಾಡ್ತಿದ್ದಾರೆ. ದೇಶದ ಶೇಕಡಾ ಐದಕ್ಕಿಂತ ಕಡಿಮೆ ಜನರ ಬಳಿ ಕ್ರೆಡಿಟ್ ಕಾರ್ಡ್ ಇದ್ರೂ ಕ್ರೆಡಿಟ್ ಕಾರ್ಡ್ ಮೋಸ ಮಿತಿ ಮೀರಿದೆ. ಒಬ್ಬರ ಬಳಿಯೇ ಮೂರ್ನಾಲ್ಕು ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇದ್ದು, ಅನೇಕರು ಕ್ರೆಡಿಟ್ ಕಾರ್ಡ್ ಮೊತ್ತ ಪಾವತಿ ಮಾಡದೆ ಬ್ಯಾಂಕ್ ಗೆ ಮೋಸ ಮಾಡ್ತಿದ್ದಾರೆ. ದೇಶದಲ್ಲಿ ಕ್ರೆಡಿಟ್ ಕಾರ್ಡ್ ಬಾಕಿ ಮೊತ್ತ ಮೊದಲ ಬಾರಿಗೆ 2 ಲಕ್ಷ ಕೋಟಿ ದಾಟಿದೆ. ಈ ಬಗ್ಗೆ ಆರ್‌ಬಿಐ ಕೂಡ ಆತಂಕ ವ್ಯಕ್ತಪಡಿಸಿದೆ.

ಕ್ರೆಡಿಟ್ ಕಾರ್ಡ್ (Credit Card) ನಿಂದಾಗ್ತಿದೆ ಮೋಸ : ಜನರಿಗೆ ತಕ್ಷಣ ಹಣ (Money) ಒದಗಿಸುವ ವ್ಯವಸ್ಥೆ ಕ್ರೆಡಿಟ್ ಕಾರ್ಡ್. ಬ್ಯಾಂಕ್ ನಲ್ಲಿ ಹಣವಿಲ್ಲದೆ ಹೋದ್ರೂ ಜನರು ತಮ್ಮ ಅವಶ್ಯಕತೆಯನ್ನು ಕ್ರೆಡಿಟ್ ಕಾರ್ಡ್ ಮೂಲಕ ಪೂರೈಸಿಕೊಳ್ಳಬಹುದು. ಆದ್ರೆ ಈ ಕ್ರೆಡಿಟ್ ಕಾರ್ಡ್, ದೇಶದ ಅರ್ಥ ವ್ಯವಸ್ಥೆಯ ಮೇಲೆ ಹೊಸ ರೀತಿಯ ಬೆದರಿಕೆ ಶುರು ಮಾಡಿದೆ. 2023 ರ ಆರ್ಥಿಕ ವರ್ಷದ ವೇಳೆಗೆ ದೇಶದಲ್ಲಿ ಕ್ರೆಡಿಟ್ ಕಾರ್ಡ್‌ಗಳ ಸಂಖ್ಯೆ 8.53 ಕೋಟಿಗೆ ತಲುಪಿದೆ. ಒಂದು ವರ್ಷದ ಹಿಂದೆ 7.36 ಕೋಟಿ ಕ್ರೆಡಿಟ್ ಕಾರ್ಡ್ ಇತ್ತು. ಕ್ರೆಡಿಟ್ ಕಾರ್ಡ್‌ನ ಚಲಾವಣೆ ಹೆಚ್ಚಳದ ಜೊತೆಗೆ ಅದರ ಎನ್‌ಪಿಎ ಕೂಡ ದೇಶದಲ್ಲಿ ಹೆಚ್ಚಾಗಿದೆ. ಕಳೆದ ವರ್ಷ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳ ಎನ್‌ಪಿಎಗಳು ಅಂದರೆ ಸ್ಟಕ್ ಲೋನ್‌ಗಳು 24.5 ರಷ್ಟು ಜಿಗಿದಿದ್ದವು. ಎಫ್ ವೈ 2022 ರ ಮೊದಲ ಒಂಬತ್ತು ತಿಂಗಳುಗಳಲ್ಲಿ ಇದು 765 ಕೋಟಿ ರೂಪಾಯಿಗಳಷ್ಟು ಹೆಚ್ಚಿ 3,887 ಕೋಟಿ ರೂಪಾಯಿಗಳಿಗೆ ತಲುಪಿದೆ. ಇದು ಚಿಕ್ಕ ಮೊತ್ತವೆನ್ನಿಸಿದ್ರೂ, ಏರಿಕೆ ಕಾಣ್ತಿರುವುದು ಗಂಭೀರ ಸ್ಥಿತಿಗೆ ಮುನ್ಸೂಚನೆಯಾಗಿದೆ.

Personal Finance: ಖಾತೆಯೊಂದು, ಮೂರು ಲಾಭ ನೀಡುವ SBI ಈ ಖಾತೆ ವಿಶೇಷವೇನು?

ಕ್ರೆಡಿಟ್ ಕಾರ್ಡ್‌ ಮತ್ತು ವೈಯಕ್ತಿಕ ಸಾಲಗಳಂತಹ ಅಸುರಕ್ಷಿತ ಸಾಲಗಳ ಕುರಿತು ಜಾಗರೂಕರಾಗಿರುವಂತೆ ಕೇಂದ್ರ ಬ್ಯಾಂಕ್, ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡಿದೆ. ಈ ಸಾಲಗಳಿಗೆ ಯಾವುದೇ ಮುಖ್ಯ ದಾಖಲೆ ಅಗತ್ಯವಿರೋದಿಲ್ಲ. ಹಾಗಾಗಿ ಬ್ಯಾಂಕ್ ಗಳು ಮುಳುಗುವ ಅಪಾಯವಿರುತ್ತದೆ.

ಎನ್ ಪಿಎ ಅಂದ್ರೇನು? : ನೀವು ಕ್ರೆಡಿಟ್ ಕಾರ್ಡ್ ಬಳಸಿ ವಸ್ತುಗಳನ್ನು ಖರೀದಿ ಮಾಡಿರ್ತೀರಿ. ಬ್ಯಾಂಕ್ ನಿಮಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಎರಡು ಅವಕಾಶ ನೀಡುತ್ತದೆ. ಅಂತಿಮ ದಿನದೊಳಗೆ ನೀವು ಪೂರ್ಣ ಹಣವನ್ನು ಪಾವತಿ ಮಾಡಬೇಕು. ಇಲ್ಲವೆ ಅಂತಿಮ ದಿನದವರೆಗೆ ಕನಿಷ್ಠ ಮೊತ್ತವನ್ನು ಪಾವತಿ ಮಾಡಬೇಕು. ಉಳಿದ ಹಣವನ್ನು ಮುಂದಿನ ತಿಂಗಳು ಪಾವತಿ ಮಾಡಬೇಕು. ಆದ್ರೆ ನೀವು 90 ದಿನಗಳವರೆಗೆ ಕನಿಷ್ಠ ಮೊತ್ತವನ್ನೂ ಪಾವತಿ ಮಾಡಿಲ್ಲ ಎಂದಾದ್ರೆ ಅದನ್ನು ಎನ್ ಪಿಎ ಎಂದು ಕರೆಯಲಾಗುತ್ತದೆ. 

43 ವರ್ಷಗಳ ಹಿಂದಾದ ಆ ಘಟನೆ ಸುಧಾಮೂರ್ತಿ, ನಾರಾಯಣ ಮೂರ್ತಿ ಬದುಕನ್ನೇ ಬದಲಿಸಿತು!

ಕೊರೊನಾ ಸಮಯದಲ್ಲಿ ಹೆಚ್ಚಾಗಿತ್ತು ಕ್ರೆಡಿಟ್ ಕಾರ್ಡ್ ಪಾವತಿ : ಕೊರೊನಾ ಸಮಯದಲ್ಲಿ ಆದಾಯ ಕುಸಿತ ಹಾಗೂ ಬಡ್ಡಿ ದರ ಇಳಿಕೆ ಕಾರಣದಿಂದಾಗಿ ಜನರು ಕ್ರೆಡಿಟ್ ಕಾರ್ಡ್ ಬಳಸಿ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಅನೇಕರು ಐಷಾರಾಮಿ ವಸ್ತುಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದ್ದಾರೆ.

ಬ್ಯಾಂಕ್ ಸಾಲಕ್ಕಿಂತ ಇದು ಹೆಚ್ಚು : ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಕ್ರೆಡಿಟ್ ಕಾರ್ಡ್ ಬಾಕಿ ಶೇಕಡಾ 30ರಷ್ಟು ಹೆಚ್ಚಾಗಿದೆ. ಒಟ್ಟಾರೆ ಬ್ಯಾಂಕ್ ಸಾಲಕ್ಕೆ ಹೋಲಿಸಿದರೆ ಇದು ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ಕ್ರೆಡಿಟ್ ಕಾರ್ಡ್ ಬಾಕಿ ಏಪ್ರಿಲ್‌ನಲ್ಲಿ 2 ಲಕ್ಷ ಕೋಟಿ ರೂಪಾಯಿಯಾಗಿದೆ. ಬ್ಯಾಂಕ್ ಗಳು ಇದ್ರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದಿದ್ರೆ ಆರ್ ಬಿಐ ಚಿಂತೆ ವ್ಯಕ್ತಪಡಿಸಿದೆ. 

ವಿಶ್ವದ ದೊಡ್ಡಣ್ಣ ಅಮೆರಿಕ ಇತ್ತೀಚೆಗೆ ಗಂಭೀರ ಬ್ಯಾಂಕಿಂಗ್ ಬಿಕ್ಕಟ್ಟನ್ನು ಎದುರಿಸಿದೆ. ಅಲ್ಲಿ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಟ್ರಿಲಿಯನ್ ಡಾಲರ್ ತಲುಪಿದೆ. ಭಾರತದಲ್ಲಿ ಪ್ರಸ್ತುತ ಶೇಕಡಾ ಐದಕ್ಕಿಂತ ಕಡಿಮೆ ಜನರು ಕ್ರೆಡಿಟ್ ಕಾರ್ಡ್ ಹೊಂದಿದ್ದರೂ ಸಾಲ ಹೆಚ್ಚಾಗ್ತಿದ್ದು, ಭವಿಷ್ಯದಲ್ಲಿ ಎನ್ಪಿಎ ಹೆಚ್ಚಳವಾಗುವ ಅಪಾಯವಿದೆ. ಇದು ಬ್ಯಾಂಕ್‌ಗಳ ಆಸ್ತಿ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.