Asianet Suvarna News Asianet Suvarna News

ಆಹಾರ ಪದಾರ್ಥಗಳ ಬೆಲೆ ಹೆಚ್ಚಳ, ಮತ್ತೆ ಜಿಗಿದ ಹಣದುಬ್ಬರ; ಆಗಸ್ಟ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ

*ಕಳೆದ ಮೂರು ತಿಂಗಳಲ್ಲಿ ಇಳಿಕೆಯ ಹಾದಿಯಲ್ಲಿದ್ದ ಚಿಲ್ಲರೆ ಹಣದುಬ್ಬರ
*ಫಲ ನೀಡದ ಆರ್ ಬಿಐ ನಿಯಂತ್ರಣ ಕ್ರಮಗಳು
*ಮುಂದಿನ ತಿಂಗಳು ಮತ್ತೆ ರೆಪೋ ದರ ಏರಿಕೆ ನಿರೀಕ್ಷೆ 

Retail Inflation in India Soars to 7percent in August on Rising Food Prices
Author
First Published Sep 13, 2022, 10:03 AM IST

ನವದೆಹಲಿ (ಸೆ.13): ಸತತ ಮೂರು ತಿಂಗಳಿಂದ ಇಳಿಕೆಯ ಹಾದಿಯಲ್ಲಿದ್ದ ಭಾರತದ ಚಿಲ್ಲರೆ ಹಣದುಬ್ಬರ, ಆಗಸ್ಟ್ ತಿಂಗಳಲ್ಲಿ ಶೇ.7ಕ್ಕೆ ಏರಿಕೆಯಾಗಿದೆ. ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.71ರಷ್ಟಿತ್ತು. ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಪರಿಣಾಮ ಆಗಸ್ಟ್ ನಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ಮೇನಿಂದ ಭಾರತೀಯ ರಿಸರ್ವ್ ಬ್ಯಾಂಕಿನ ಹಲವು ನಿಯಂತ್ರಣ ಕ್ರಮಗಳ ಪರಿಣಾಮವಾಗಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿ ಶೇ.6.71ಕ್ಕೆ ತಲುಪಿತ್ತು. ಈ ಮೂಲಕ ಜನಸಾಮಾನ್ಯರಿಗೆ ಸ್ವಲ್ಪ ನೆಮ್ಮದಿ ನೀಡಿತ್ತು. ಗ್ರಾಹಕರ ಬೆಲೆ ಸೂಚ್ಯಂಕ ಅಥವಾ ಸಿಪಿಐ ಹಣದುಬ್ಬರ ಆರ್ ಬಿಐ ನಿಗದಿಪಡಿಸಿರುವ ಗರಿಷ್ಠ ಸಹನಾ ಮಟ್ಟ ಶೇ.6ರನ್ನು ಮೀರುತ್ತಿರೋದು ಇದು ಸತತ  ಎಂಟನೇ ಬಾರಿಯಾಗಿದೆ. ಆಗಸ್ಟ್ ನಲ್ಲಿ ಆಹಾರ ಹಣದುಬ್ಬರ ಕೂಡ ಏರಿಕೆಯಾಗಿದ್ದು, ಶೇ.7.62 ತಲುಪಿದೆ. ಜುಲೈನಲ್ಲಿ ಆಹಾರ ಹಣದುಬ್ಬರ ಕೂಡ ಶೇ.6.75ರಷ್ಟಿತ್ತು. ಜುಲೈಗೆ ಹೋಲಿಸಿದರೆ ಆಗಸ್ಟ್ ನಲ್ಲಿ ಧಾನ್ಯಗಳು, ಬೇಳೆಕಾಳುಗಳು, ತರಕಾರಿಗಳು, ಹಾಲು, ಧಾನ್ಯಗಳು ಹಾಗೂ ಇತರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಿದೆ. ಸಿಪಿಐ ಹಣದುಬ್ಬರದಲ್ಲಿ ಆಹಾರ ಹಣದುಬ್ಬರದ ಪಾಲು ಅರ್ಧದಷ್ಟಿರುವ ಕಾರಣ ಆಹಾರ ಪದಾರ್ಥಗಳ ಬೆಲೆಯೇರಿಕೆ ಗಮನಾರ್ಹ ಪರಿಣಾಮ ಬೀರುತ್ತದೆ. ಗೋಧಿ ಹಾಗೂ ಅಕ್ಕಿ ರಫ್ತಿನ ಮೇಲೆ ನಿಷೇಧ  ಸೇರಿದಂತೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಹೊರತಾಗಿಯೂ ದೇಶದಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿಲ್ಲ. ಹೀಗಾಗಿ ಮುಂದಿನ ತಿಂಗಳು ಆರ್ ಬಿಐ ಮತ್ತೊಮ್ಮೆ ರೆಪೋ ದರ ಏರಿಕೆ ಮಾಡುವ ನಿರೀಕ್ಷೆಯಿದೆ. 

ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆ ಸೆ.30ರಂದು ಪ್ರಾರಂಭವಾಗಲಿದ್ದು, ಹಣದುಬ್ಬರಕ್ಕೆ ಸಂಬಂಧಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಮೇನಿಂದ ಈ ತನಕ ಆರ್ ಬಿಐ ರೆಪೋ ದರವನ್ನು 140 ಮೂಲಾಂಕಗಳಷ್ಟು ಏರಿಕೆ ಮಾಡಿದ್ದು, ಪ್ರಸ್ತುತ ಶೇ.5.4ಕ್ಕೆ ತಲುಪಿದೆ. ರೆಪೋ ದರ ಏರಿಕೆಯಿಂದ ಗೃಹ ಸಾಲ ಹಾಗೂ ವಾಹನ ಸಾಲ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಇನ್ನೊಮ್ಮೆ ಹೆಚ್ಚಳವಾಗಲಿದೆ. ಈಗಾಗಲೇ ಬಡ್ಡಿದರ ಹೆಚ್ಚಳದಿಂದ ಶಾಕ್ ಆಗಿರುವ ಜನಸಾಮಾನ್ಯರಿಗೆ ಅದರ ಬಿಸಿ ಇನ್ನಷ್ಟು ತಟ್ಟಲಿದೆ.

ಅದೃಷ್ಟ ಅಂದ್ರೆ ಇದಪ್ಪಾ! ಷೇರು ಖರೀದಿಸಿ ಒಂದೇ ತಿಂಗಳಲ್ಲಿ 600 ಕೋಟಿ ರೂ.ಲಾಭ ಗಳಿಸಿದ 21 ವರ್ಷದ ವಿದ್ಯಾರ್ಥಿ

ಇನ್ನು ಜುಲೈನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಕೂಡ ಭಾರೀ ಇಳಿಕೆ ದಾಖಲಿಸಿದೆ. ಜೂನ್ ನಲ್ಲಿ ಶೇ.12.3ಕ್ಕೆ ಏರಿಕೆಯಾಗಿದ್ದ ಕೈಗಾರಿಕಾ ಉತ್ಪಾದನೆ ಜುಲೈನಲ್ಲಿ ಶೇ. 2.4ಕ್ಕೆ ಇಳಿಕೆಯಾಗಿದೆ. ಮಳೆ ಹಾಗೂ ಬೆಳೆ ಹಾನಿಯ ಕಾರಣಗಳಿಂದ ತರಕಾರಿ ಬೆಲೆ ಏರಿಕೆಯಾದ ಪರಿಣಾಮ ತರಕಾರಿ ಹಣದುಬ್ಬರವು ಆಗಸ್ಟ್‌ನಲ್ಲಿ ಶೇ 13.23ಕ್ಕೆ ಮುಟ್ಟಿದೆ. ಆಗಸ್ಟ್‌ನಲ್ಲಿ ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಭಾಗಗಳಲ್ಲಿ ಹಣದುಬ್ಬರವು ತೀವ್ರ ಏರಿಕೆ ಕಂಡಿದೆ. ಗ್ರಾಮೀಣ ಭಾಗದ ಹಣದುಬ್ಬರವು ಶೇ.6.8ರಿಂದ ಶೇ.7.15ಕ್ಕೆ ಹೆಚ್ಚಳವಾಗಿದೆ. ನಗರದ ಹಣದುಬ್ಬರವು ಶೇ.6.72ರಷ್ಟಿದೆ.

ಈ ಆರ್ಥಿಕ ವರ್ಷದ ಮೊದಲ ಮೂರು ತಿಂಗಳು ಚಿಲ್ಲರೆ ಹಣದುಬ್ಬರ ಶೇ.7ಕ್ಕಿಂತ ಹೆಚ್ಚಿತ್ತು. ಆರ್ಥಿಕ ವರ್ಷ 2023 ಕ್ಕೆ ಆರ್‌ಬಿಐ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 6.7 ರಷ್ಟು ಹಾಗೂ  ನೈಜ GDP ಬೆಳವಣಿಗೆಯನ್ನು 7.2 ರಷ್ಟು ಅಂದಾಜು ಮಾಡಿದೆ. 

ಬಾಂಗ್ಲಾದೇಶ ಅಕ್ಕಿ ಮೇಲಿನ ಆಮದು ಸುಂಕ ಕಡಿತಗೊಳಿಸಿದ ಬೆನ್ನಲ್ಲೇ ಭಾರತದಲ್ಲಿಒಂದೇ ವಾರದಲ್ಲಿ ಅಕ್ಕಿ ಬೆಲೆಯಲ್ಲಿ ಶೇ.5ರಷ್ಟು ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವಾರ  ಕೇಂದ್ರ ಸರ್ಕಾರ ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲೆ ಶೇ.20ರಷ್ಟು ಸುಂಕ ವಿಧಿಸುವ ಜೊತೆಗೆ, ನುಚ್ಚಕ್ಕಿಯ ರಫ್ತನ್ನು ನಿಷೇಧಿಸಿತ್ತು. ಒಂದೆಡೆ ವಿದೇಶಗಳಿಗೆ ಅಕ್ಕಿ ರಫ್ತು ಹೆಚ್ಚುವ ಭಯವಾದ್ರೆ. ಇನ್ನೊಂದೆಡೆ ಮಳೆ ಅಭಾವದಿಂದ ಈ ಭಾರೀ ಅಕ್ಕಿ ಉತ್ಪಾದನೆ ತಗ್ಗಿದೆ. 

1.6 ಲಕ್ಷ ಕೋಟಿ Semiconductor ಹೂಡಿಕೆ ಗುಜರಾತ್‌ ಪಾಲು; ರೇಸ್‌ನಲ್ಲಿದ್ದ ಕರ್ನಾಟಕಕ್ಕೆ ಸೋಲು

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇಂಧನ ಬೆಲೆ ತಗ್ಗಿಸದ ರಾಜ್ಯಗಳಲ್ಲಿ ಹಣದುಬ್ಬರ ರಾಷ್ಟ್ರೀಯ ಮಟ್ಟಕ್ಕಿಂತ ಹೆಚ್ಚಿದೆ ಎಂದು ಹೇಳಿದ್ದರು. ಅಲ್ಲದೆ, ಹಣದುಬ್ಬರ ತಗ್ಗಿಸೋದು ಬರೀ ಕೇಂದ್ರ ಸರ್ಕಾರದ ಜವಾಬ್ದಾರಿಯಲ್ಲ,ಇದರಲ್ಲಿ ರಾಜ್ಯಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. 
 

Follow Us:
Download App:
  • android
  • ios