ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ತನ್ನ ಅಂಗಸಂಸ್ಥೆಯಾದ 'ರಿಲಯನ್ಸ್ ಪ್ರಾಜೆಕ್ಟ್ಸ್ ಅಂಡ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಸರ್ವಿಸಸ್ ಲಿಮಿಟೆಡ್' ಅನ್ನು ₹274 ಕೋಟಿಗೆ ಮಾರಾಟ ಮಾಡಿದೆ. 

ಮುಂಬೈ (ಏ.14): ಜಾಗತಿಕ ರಾಜಕೀಯ ಮತ್ತು ಯುದ್ಧದ ಭೀತಿಯ ನಡುವೆ ಷೇರು ಮಾರುಕಟ್ಟೆ ನಲುಗುತ್ತಿದ್ದರೆ, ಇತ್ತ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಅಂಗಸಂಸ್ಥೆಯ ಮಾರಾಟಕ್ಕೆ ಮುಂದಾಗಿದೆ. ರಿಲಯನ್ಸ್ ರೀಟೇಲ್ ತನ್ನ ಪೂರ್ಣ ಸ್ವಾಮ್ಯದ 'ರಿಲಯನ್ಸ್ ಪ್ರಾಜೆಕ್ಟ್ಸ್ ಅಂಡ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಸರ್ವಿಸಸ್ ಲಿಮಿಟೆಡ್' (RPPMSL) ಕಂಪನಿಯನ್ನು 274 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದೆ.

Add Asianetnews Kannada as a Preferred SourcegooglePreferred

ಸೋಮವಾರ (ಏಪ್ರಿಲ್ 13) ನಡೆದ ಈ ಮಹತ್ವದ ಬೆಳವಣಿಗೆಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಬಹಿರಂಗಪಡಿಸಿದೆ. ತನ್ನ ಪ್ರಮುಖ ಅಂಗಸಂಸ್ಥೆಯಾದ ರಿಲಯನ್ಸ್ ರೀಟೇಲ್ ಭಾಗವಾಗಿರುವ RPPMSL ನ ಶೇ. 100ರಷ್ಟು ಪಾಲನ್ನು 'ಜೈಪುರ್ ಎನ್‌ಕ್ಲೇವ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಗೆ ಮಾರಾಟ ಮಾಡಿದೆ. ಈ ವಹಿವಾಟಿನ ನಂತರ RPPMSL ಕಂಪನಿಯು ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಸಂಪೂರ್ಣವಾಗಿ ಹೊರಬಂದಿದೆ. ವಿಶೇಷವೆಂದರೆ, ಈ ಕಂಪನಿಯನ್ನು ಖರೀದಿಸಿದ ಸಂಸ್ಥೆಯು ರಿಲಯನ್ಸ್‌ನ ಪ್ರವರ್ತಕರು ಅಥವಾ ಗ್ರೂಪ್ ಕಂಪನಿಗಳಿಗೆ ಸೇರಿದ್ದಲ್ಲ.

RPPMSL ಸಾಧನೆ ಹೀಗಿತ್ತು

2025ರ ಹಣಕಾಸು ವರ್ಷದ ಅಂತ್ಯಕ್ಕೆ ಈ ಕಂಪನಿಯು 6,412.60 ಕೋಟಿ ರೂಪಾಯಿ ವಹಿವಾಟು ನಡೆಸಿತ್ತು. ಇದು ರಿಲಯನ್ಸ್‌ನ ಒಟ್ಟು ವಹಿವಾಟಿನ ಶೇ. 0.06 ರಷ್ಟಾಗಿತ್ತು. ಇದರ ನಿವ್ವಳ ಮೌಲ್ಯ (Net Worth) 342.45 ಕೋಟಿ ರೂಪಾಯಿಗಳಷ್ಟಿತ್ತು ಎನ್ನಲಾಗಿದೆ.

ಷೇರು ಮಾರುಕಟ್ಟೆಯಲ್ಲಿ ಕುಸಿತ

ಯುದ್ಧ ಭೀತಿ ಮತ್ತು ಜಾಗತಿಕ ಮಾರುಕಟ್ಟೆಯ ಏರಿಳಿತಗಳ ಪರಿಣಾಮ ರಿಲಯನ್ಸ್ ಷೇರುಗಳ ಮೇಲೂ ಕಂಡುಬಂದಿದೆ. ಬಿಎಸ್‌ಇ (BSE) ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಸೋಮವಾರ ಶೇ. 2.64 ರಷ್ಟು (35.60 ರೂ.) ಕುಸಿತ ಕಂಡು 1,314.55 ರೂಪಾಯಿಗಳಲ್ಲಿ ದಿನದ ವಹಿವಾಟು ಮುಗಿಸಿವೆ.

ಗ್ರೀನ್ ಅಮೋನಿಯಾಕ್ಕಾಗಿ ಸ್ಯಾಮ್‌ಸಂಗ್ ಜೊತೆ ಬಿಗ್ ಡೀಲ್

ಒಂದೆಡೆ ಅಂಗಸಂಸ್ಥೆ ಮಾರಾಟ ಮಾಡಿದ್ದರೂ, ಮತ್ತೊಂದೆಡೆ ಅಂಬಾನಿ 'ಹೊಸ ಇಂಧನ' (New Energy) ಕ್ಷೇತ್ರದಲ್ಲಿ ದೈತ್ಯ ಹೆಜ್ಜೆ ಇಟ್ಟಿದ್ದಾರೆ. ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಗ್ರೂಪ್‌ನ ಅಂಗಸಂಸ್ಥೆಯಾದ 'ಸ್ಯಾಮ್‌ಸಂಗ್ ಸಿ ಅಂಡ್ ಟಿ' (Samsung C&T) ಜೊತೆಗೆ 15 ವರ್ಷಗಳ ಕಾಲ ಗ್ರೀನ್ ಅಮೋನಿಯಾ ಪೂರೈಕೆ ಮಾಡಲು ರಿಲಯನ್ಸ್ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಮೌಲ್ಯ ಸುಮಾರು 3 ಬಿಲಿಯನ್ ಡಾಲರ್‌ಗಳಿಗೂ ಹೆಚ್ಚು (ಅಂದಾಜು 25,000 ಕೋಟಿ ರೂ.ಗೂ ಹೆಚ್ಚು) ಎನ್ನಲಾಗಿದೆ. 2029ರ ಹಣಕಾಸು ವರ್ಷದ ದ್ವಿತೀಯಾರ್ಧದಿಂದ ಪೂರೈಕೆ ಆರಂಭವಾಗಲಿದೆ.

ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳು ಪರಿಸರ ಮಾಲಿನ್ಯ ಕಡಿಮೆ ಮಾಡಲು ಹೈಡ್ರೋಜನ್ ಮತ್ತು ಅಮೋನಿಯಾದಂತಹ ಇಂಧನಗಳ ಮೊರೆ ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಅಂಬಾನಿ ಸೌರ ಮಾಡ್ಯೂಲ್‌ಗಳು, ಬ್ಯಾಟರಿ ಎನರ್ಜಿ ಸ್ಟೋರೇಜ್ ಮತ್ತು ಎಲೆಕ್ಟ್ರೋಲೈಸರ್‌ಗಳ ತಯಾರಿಕಾ ಘಟಕಗಳನ್ನು ನಿರ್ಮಿಸುವ ಮೂಲಕ ಬೃಹತ್ ಕ್ಲೀನ್-ಎನರ್ಜಿ ವ್ಯವಸ್ಥೆಯನ್ನು ಸಿದ್ಧಪಡಿಸುತ್ತಿದ್ದಾರೆ.