80ರ ಹರೆಯದ ಅಜ್ಜಿಯ ಐಸ್‌ಕ್ರೀಂ ಉದ್ಯಮ ಇದೀಗ ಭಾರಿ ಸದ್ದು ಮಾಡುತ್ತಿದೆ. ಹೋಮ್‌ಮೇಡ್ ಐಸ್‌ಕ್ರೀಂ ಇದೀಗ ಮಳಿಗೆ ರೂಪದಲ್ಲಿ ವಿಸ್ತರಣೆಗೊಂಡಿದೆ. ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ವಯಸ್ಸು ಲೆಕ್ಕಕ್ಕಿಲ್ಲ ಅನ್ನೋದು ಸಾಬೀತಾಗಿದೆ.

ಅಹಮ್ಮದಾಬಾದ್ (ಮೇ.24) ಬದಲಾಗುತ್ತಿರುವ ವ್ಯವಸ್ಥೆ, ಎಐ ಆತಂಕ,ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ಹಲವರು ಸ್ವಂತ ಉದ್ಯಮದತ್ತ ಚಿತ್ತ ಹರಿಸುತ್ತಿದ್ದಾರೆ. ಇದರ ನಡುವೆ ಹಲವರು ವಯಸ್ಸು ಮೀರಿದೆ, ಬಂಡವಾಳದ ಕೊರತೆ ಸೇರಿದಂತೆ ಹಲವು ಕಾರಣ ನೀಡಿ ಹಿಂದೇಟು ಹಾಕುತ್ತಾರೆ. ಆದರೆ ಇಲ್ಲೊಬ್ಬ ಅಜ್ಜಿ 80 ಹರೆಯದಲ್ಲಿ ಐಸ್‌ಕ್ರೀಂ ಉದ್ಯಮದ ಮೂಲಕ ಭರ್ಜರಿ ಯಶಸ್ಸು ಕಂಡಿದ್ದಾರೆ. ಹೋಮ್‌ಮೇಡ್, ನೈಸರ್ಗಿಕ ಐಸ್‌ಕ್ರೀಮ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಉದ್ಯಮ ಭರ್ಜರಿ ಯಶಸ್ಸು ಕಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳದ ನಾಲ್ಕು ದಶಕಗಳ ಪರಿಶ್ರಮ

ಅಹಮ್ಮದಬಾದ್ ಮೂಲದ 80 ಹರೆಯದ ನೀರುಬೆನ್ (ನಿರಂಜನ ದೇಸಾಯಿ) ಭಾರಿ ಜನಪ್ರಿಯರಾಗಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ನೈಸರ್ಗಿಕ, ಯಾವುದೇ ರಾಸಾಯನಿಕ, ಬಣ್ಣಗಳನ್ನು ಬಳಸದೆ, ಹಣ್ಣು, ಡ್ರೈಫ್ರೂಟ್ಸ್ , ಹಾಲು ಸೇರಿದಂತೆ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಐಸ್‌ಕ್ರೀಂ ಉದ್ಯಮ ನಿಧಾನವಾಗಿ ಹೆಜ್ಜೆ ಹಾಕುತ್ತಾ ಸಾಗಿ ಬಂದಿದೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಎಲ್ಲರೂ ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಅಜ್ಜಿಯ ಹೋಮ್‌ಮೇಡ್ ಐಸ್‌ಕ್ರೀಂ ಭಾರಿ ಬೇಡಿಕೆ ಪಡೆದುಕೊಂಡಿದೆ.

ಅತ್ಯಂತ ಸ್ವಾದ ಹಾಗೂ ರುಚಿಕರ ಐಸ್‌ಕ್ರೀಂ

ಅಜ್ಜಿ ತನಗೆ ಯಾವುದೇ ಲಾಭ ಇಟ್ಟುಕೊಳ್ಳದೆ ಮಾರುಕಟ್ಟೆಯ ಪೈಪೋಟಿ ದರಕ್ಕೆ ಐಸ್‌ಕ್ರೀಂ ಮಾರಾಟ ಮಾಡುತ್ತಿದ್ದರು. ಮನೆಯಲ್ಲಿ ತಯಾರಿಸಿ ಐಸ್‌ಕ್ರೀಂ ಮಾರಾಟ ಆರಂಭಿಸಿದ್ದರು. ಮಾರುಕಟ್ಟೆಯಲ್ಲಿ ಅತೀ ಕಡಿಮೆ ದರಕ್ಕೆ ಐಸ್‌ಕ್ರೀಂ ಲಭ್ಯವಾಗಾಗುತ್ತಿದ್ದ ಸಂದರ್ಭದಲ್ಲೇ ನಿರುಬೆನ್ ಅದೇ ಪೈಪೋಟಿ ದರಕ್ಕೆ ಅತ್ಯುತ್ತಮ ಐಸ್‌ಕ್ರೀಂ ಮಾರಾಟ ಮಾಡುತ್ತಾ ಬಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ ನಿರುಬೆನ್ ಐಸ್‌ಕ್ರೀಂಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇದೀಗ ಮಳಿಗೆಯೂ ತೆರೆದಿದ್ದು, ಹಲವು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

ವಿಶೇಷ ಅಂದರೆ ಪ್ರತಿ ದಿನ ನಿರುಬೆನ್ ತಾವೇ ಕೈಯಾರೆ ಐಸ್‌ಕ್ರೀಂ ತಯಾರಿಸುತ್ತಾರೆ. ಐಸ್‌ಕ್ರೀಂ ತಯಾರಿಕೆ ಜವಾಬ್ದಾರಿ ಬೇರೆ ಯಾರಿಗೂ ನೀಡಿಲ್ಲ. ಕಾರಣ ಅದೇ ಸ್ವಾದ, ಅದೇ ರುಚಿಕರ ಐಸ್‌ಕ್ರೀಂ ತಯಾರಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಗ್ರಾಹಕರು ದೂರಸರಿಯುತ್ತಾರೆ ಅನ್ನೋ ಕಾರಣಕ್ಕೆ ನಿರುಬೆನ್ ಸ್ವತಃ ತಾವೆ ಐಸ್‌ಕ್ರೀಂ ತಯಾರಿಸುತ್ತಾರೆ.

80ನೇ ವಯಸ್ಸಿನ ನಿರುಬೆನ್ ಸದ್ಯ ಅಹಮ್ಮದಾಬಾದ್‌ನ ಯಶಸ್ವಿ ಉದ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಣ್ಣ ಐಸ್‌ಕ್ರೀಂ ಉದ್ಯಮ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ.