ಸಾಲದ ಸೆಟ್ಲಮೆಂಟ್ ಆದ 30 ದಿನಗಳೊಳಗೆ ಆಸ್ತಿ ದಾಖಲೆ ಕೊಡಿ ಇಲ್ಲವೇ ಪರಿಹಾರ ನೀಡಿ: ಬ್ಯಾಂಕುಗಳಿಗೆ ಆರ್ ಬಿಐ ಸೂಚನೆ
ಸಾಲದ ಸೆಟ್ಲಮೆಂಟ್ ಗೆ ಸಂಬಂಧಿಸಿ ಆರ್ ಬಿಐ ಬ್ಯಾಂಕ್ ಗಳಿಗೆ ಮಹತ್ವದ ಸೂಚನೆ ನೀಡಿದೆ. ಸಾಲದ ಪೂರ್ಣ ಮರುಪಾವತಿ ಅಥವಾ ಸೆಟ್ಲಮೆಂಟ್ ಮಾಡಿದ 30 ದಿನಗಳೊಳಗೆ ವೈಯಕ್ತಿಕ ಸಾಲ ಪಡೆದವರ ಸ್ಥಿರ ಅಥವಾ ಚರ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬಿಡುಗಡೆಗೊಳಿಸಬೇಕು. ಅದು ಸಾಧ್ಯವಾಗದಿದ್ದರೆ ದಿನಕ್ಕೆ 5,000ರೂ.ನಂತೆ ಸಾಲ ಪಡೆದವರಿಗೆ ಪರಿಹಾರ ನೀಡಬೇಕು ಎಂದು ಆರ್ ಬಿಐ ಸೂಚಿಸಿದೆ.

ಮುಂಬೈ (ಸೆ.13): ಸಾಲದ ಸೆಟ್ಲಮೆಂಟ್ ಗೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕ್ ಗಳು ಹಾಗೂ ಇತರ ಸಂಸ್ಥೆಗಳಿಗೆ ಮಹತ್ವದ ಸೂಚನೆ ನೀಡಿದೆ. ಸಾಲದ ಪೂರ್ಣ ಮರುಪಾವತಿ ಅಥವಾ ಸೆಟ್ಲಮೆಂಟ್ ಮಾಡಿದ 30 ದಿನಗಳೊಳಗೆ ವೈಯಕ್ತಿಕ ಸಾಲ ಪಡೆದವರ ಸ್ಥಿರ ಅಥವಾ ಚರ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬಿಡುಗಡೆಗೊಳಿಸಬೇಕು ಹಾಗೂ ಅವರ ಮೇಲೆ ದಾಖಲಿಸಿರುವ ಎಲ್ಲ ಆರೋಪಗಳಿಂದ ಮುಕ್ತಗೊಳಿಸಬೇಕು ಎಂದು ಬ್ಯಾಂಕ್ ಹಾಗೂ ಸಾಲ ನೀಡುವ ಇತರ ಸಂಸ್ಥೆಗಳಿಗೆ ಆರ್ ಬಿಐ ಸೂಚಿಸಿದೆ. ಅಲ್ಲದೆ, ಮೂಲದಾಖಲೆಗಳನ್ನು ನೀಡಲು ವಿಳಂಬ ಮಾಡಿದರೆ ಪ್ರತಿದಿನ 5,000ರೂ.ನಂತೆ ಸಾಲ ಪಡೆದವರಿಗೆ ಪರಿಹಾರ ನೀಡಬೇಕು ಎಂದು ಆರ್ ಬಿಐ ತಿಳಿಸಿದೆ. ಸಾಲ ನೀಡುವ ಸಂಸ್ಥೆಗಳು ವಿಭಿನ್ನ ಅಭ್ಯಾಸಗಳನ್ನು ಅನುಸರಿಸುತ್ತಿರೋದನ್ನು ಗಮನಿಸಿದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈ ನಿರ್ದೇಶನ ನೀಡಿದೆ. ಸಾಲಗಾರರನ್ನು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಜವಾಬ್ದಾರಿಯುತ ಸಾಲ ನೀಡುವಿಕೆ ಪ್ರಕ್ರಿಯೆಯನ್ನು ಉತ್ತೇಜಿಸಲು ಆರ್ ಬಿಐ ಇಂದು (ಸೆ.13) ಕೆಲವು ನಿರ್ದೇಶನಗಳನ್ನು ಬಿಡುಗಡೆಗೊಳಿಸಿದೆ. ಕೆಲವೊಂದು ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿ ಮಾಡಿದ ಬಳಿಕ ಕೂಡ ದಾಖಲೆಗಳನ್ನು ಹಿಂತಿರುಗಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರ್ ಬಿಐ ಈ ಸೂಚನೆಗಳನ್ನು ನೀಡಿದೆ.
ಇನ್ನು ಸಾಲಗಾರರು ಚರ ಅಥವಾ ಸ್ಥಿರ ಆಸ್ತಿಯ ಮೂಲದಾಖಲೆಗಳನ್ನು ಸಾಲ ಪಡೆದಿರುವ ಬ್ಯಾಂಕ್ ಔಟ್ ಲೆಟ್ ಅಥವಾ ಶಾಖೆಯಿಂದ ಪಡೆಯಬಹುದು. ಇಲ್ಲವೇ ದಾಖಲೆಗಳು ಲಭ್ಯವಿರುವ ಬ್ಯಾಂಕಿನ ಇತರ ಯಾವುದೇ ಕಚೇರಿಯಿಂದ ಕೂಡ ಇವುಗಳನ್ನು ಪಡೆಯಬಹುದು ಎಂದು ಆರ್ ಬಿಐ ತಿಳಿಸಿದೆ. ಇನ್ನು ಒಂಟಿ ಅಥವಾ ಜಂಟಿ ಸಾಲಗಾರರಲ್ಲಿ ಯಾರೇ ಮೃತರಾದ ಸಂದರ್ಭದಲ್ಲಿ ಬ್ಯಾಂಕ್ ಚರ ಹಾಗೂ ಸ್ಥಿರ ಆಸ್ತಿಗಳ ಮೂಲದಾಖಲೆಗಳನ್ನು ಕಾನೂನುಬದ್ಧ ವಾರಸುದಾರರಿಗೆ ನೀಡಲು ಸಮರ್ಪಕವಾದ ಪ್ರಕ್ರಿಯೆಯನ್ನು ಅನುಸರಿಸಬೇಕು.
ಬ್ಯಾಂಕುಗಳ ನಡುವೆ ಶೀಘ್ರದಲ್ಲೇ ಡಿಜಿಟಲ್ ಕರೆನ್ಸಿ ವಹಿವಾಟು ಶುರು
ಬ್ಯಾಂಕ್ ಗಳು ಸಾಲಕ್ಕೆ ಸಂಬಂಧಿಸಿ ಚರ ಅಥವಾ ಸ್ಥಿರ ಆಸ್ತಿಗಳ ಮೂಲದಾಖಲೆಗಳನ್ನು ಸಾಲಗಾರರಿಗೆ ಹಿಂತಿರುಗಿಸುವ ಸಂಬಂಧ ಅನುಸರಿಸುವ ಪ್ರಕ್ರಿಯೆಗಳನ್ನು ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು. ಹಾಗೆಯೇ ಇತರ ನೀತಿಗಳು ಹಾಗೂ ಪ್ರಕ್ರಿಯೆಗಳ ಬಗ್ಗೆ ಕೂಡ ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂದು ಆರ್ ಬಿಐ ತಿಳಿಸಿದೆ. ಇನ್ನು ಇಂಥ ದಾಖಲೆಗಳನ್ನು ಬಿಡುಗಡೆಗೊಳಿಸುವಲ್ಲಿ ವಿಳಂಬವಾದರೆ ಸಾಲಗಾರರಿಗೆ ಬ್ಯಾಂಕ್ ಗಳು ಪರಿಹಾರವನ್ನು ಕೂಡ ನೀಡಬೇಕು ಎಂದು ಆರ್ ಬಿಐ ತಿಳಿಸಿದೆ. ವಿಳಂಬವಾದ ಸಂದರ್ಭದಲ್ಲಿ ಪ್ರತಿದಿನಕ್ಕೆ 5,000ರೂ.ನಂತೆ ಪರಿಹಾರ ನೀಡುವಂತೆ ಆರ್ ಬಿಐ ಸೂಚಿಸಿದೆ.
ಒಂದು ವೇಳೆ ಮೂಲ ಚರ ಅಥವಾ ಸ್ಥಿರ ಆಸ್ತಿ ದಾಖಲೆಗಳು ಕಳೆದು ಹೋಗಿದ್ದರೆ ಅಥವಾ ಅವುಗಳಿಗೆ ಹಾನಿಯಾಗಿದ್ದರೆ ನಿಯಂತ್ರಣ ಪ್ರಾಧಿಕಾರಗಳು (REs) ನಕಲಿ ಅಥವಾ ದೃಢೀಕೃತ ದಾಖಲೆಗಳನ್ನು ಪಡೆಯಲು ನೆರವು ನೀಡಬೇಕು ಎಂದು ಆರ್ ಬಿಐ ತಿಳಿಸಿದೆ. ಇನ್ನು ದಾಖಲೆಗಳು ಕಳೆದು ಹೋಗಿರುವ ಸಂದರ್ಭದಲ್ಲಿ ಆರ್ ಇಗಳಿಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚುವರಿ 30 ದಿನಗಳ ಕಾಲಾವಕಾಶ ಸಿಗಲಿದೆ ಎಂದು ಆರ್ ಬಿಐ ತಿಳಿಸಿದೆ.
ಇಂಟರ್‌ನೆಟ್ ಇಲ್ಲದೆಯೂ ಸಲೀಸಾಗಿ ಯುಪಿಐ ಬಳಕೆ ಮಾಡಿ: ಆರ್‌ಬಿಐ ಪರಿಚಯಿಸಿದ ಈ ಹೊಸ ವೈಶಿಷ್ಟ್ಯ ಹೀಗಿದೆ ನೋಡಿ..
ಸಾಲ ಖಾತೆಗಳ ಮೇಲೆ ಬ್ಯಾಂಕ್ ಗಳು ದಂಡ ವಿಧಿಸುವ ಪ್ರಕ್ರಿಯೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಆಗಸ್ಟ್ 18ರಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಸಾಲಗಾರರು ಸಾಲ ಪಡೆಯುವ ಸಂದರ್ಭದಲ್ಲಿನ ಷರತ್ತುಗಳನ್ನು ಪಾಲಿಸದ ಸಂದರ್ಭದಲ್ಲಿ ಹಲವು ಬ್ಯಾಂಕ್ ಗಳು ನಿಗದಿತ ಬಡ್ಡಿದರದ ಮೇಲೆ ದಂಡದ ರೂಪದಲ್ಲಿ ಹೆಚ್ಚಿನ ಬಡ್ಡಿ (ಪೆನಲ್ ರೇಟ್ ಆಫ್ ಇಂಟರೆಸ್ಟ್) ವಿಧಿಸೋದನ್ನು ಗಮನಿಸಿರುವ ಆರ್ ಬಿಐ, ಇದರ ತಡೆಗೆ ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾರ್ಗಸೂಚಿಗಳು 2024ರ ಜನವರಿ 1ರಿಂದ ಜಾರಿಗೆ ಬರಲಿವೆ.