ರಿಸರ್ವ್ ಬ್ಯಾಂಕ್, ರೆಪೋ ದರದಲ್ಲಿ ಇಳಿಕೆ ಮಾಡಿದೆ. ಇದ್ರಿಂದ ಮನೆ ಖರೀದಿದಾರರು ಖುಷಿಯಾಗಿದ್ದಾರೆ. ತಿಂಗಳ ಸಂಬಳದಲ್ಲಿ ಒಂದಿಷ್ಟು ಹಣ ಉಳಿಯಲಿದೆ. ಇಎಂಐ ಹೊರೆ ಕಡಿಮೆ ಆಗಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಮನೆ ಕೊಳ್ಳೋರಿಗೆ ಖುಷಿ ಸುದ್ದಿಯನ್ನು ನೀಡಿದೆ. ಈಗಾಗಲೇ ಗೃಹ ಸಾಲ (Home loan)ವನ್ನು ಮೈಮೇಲೆ ಹೊತ್ತುಕೊಂಡು, ತಿಂಗಳು ತಿಂಗಳು ಇಎಂಐ ಕಟ್ಟುತ್ತಿರುವ ಜನರ ಹೊರೆ ದೊಡ್ಡ ಮಟ್ಟಿಗೆ ಕಮ್ಮಿ ಆಗಲಿದೆ. ತಿಂಗಳ ಸಂಬಳದಲ್ಲಿ ಸ್ವಲ್ಪ ಹಣ ಇನ್ಮುಂದೆ ಉಳಿಯಲಿದೆ. ಆರ್ ಬಿಐ ಇಂದು ತನ್ನ ಹಣಕಾಸು ನೀತಿಯನ್ನು ಘೋಷಣೆ ಮಾಡಿದ್ದು, ರೆಪೊ ದರದಲ್ಲಿ 50 ಬೇಸಿಸ್ ಪಾಯಿಂಟ್ಗಳಷ್ಟು ಅಂದರೆ ಶೇಕಡಾ 0.50 ರಷ್ಟು ಕಡಿತ ಮಾಡಿದ್ದೇ ಇದಕ್ಕೆ ಕಾರಣ. ಈ ವರ್ಷ ಸತತ ಮೂರನೇ ಬಾರಿ ಆರ್ ಬಿಐ ರೆಪೊ ದರವನ್ನು ಕಡಿಮೆ ಮಾಡಿದೆ. ಈಗ ರೆಪೊ ದರ 5.50 ಕ್ಕೆ ಇಳಿದಿದೆ. ಇದಕ್ಕೂ ಮೊದಲು, ಫೆಬ್ರವರಿ ಮತ್ತು ಏಪ್ರಿಲ್ನಲ್ಲಿ 25-25 ಬೇಸಿಸ್ ಪಾಯಿಂಟ್ಗಳನ್ನು ಕಡಿತಗೊಳಿಸಲಾಗಿತ್ತು. ಒಟ್ಟಾರೆಯಾಗಿ 2025 ರ ಮೊದಲಾರ್ಧದಲ್ಲಿ 100 ಬೇಸಿಸ್ ಪಾಯಿಂಟ್ ಕಡಿತಗೊಂಡಿದೆ.

ಸಿಆರ್ ಆರ್ ಅಂದ್ರೆ ನಗದು ಮೀಸಲು ಅನುಪಾತವನ್ನು ಸಹ ಆರ್ ಬಿಐ ಶೇಕಡಾ 1 ರಿಂದ 3 ಕ್ಕೆ ಇಳಿಸಿದೆ. ಸಿಆರ್ ಆರ್ ಇಳಿದ್ರೆ ಬ್ಯಾಂಕ್ ಗಳಗೆ ಹೆಚ್ಚಿನ ಹಣ ಲಭ್ಯವಾಗುತ್ತೆ. ಗೃಹ ಸಾಲದಂತ ಸೇವೆಗಳ ಮೇಲಿನ ಬಡ್ಡಿದರಗಳನ್ನು ಬ್ಯಾಂಕ್ ಮತ್ತಷ್ಟು ಕಡಿಮೆ ಮಾಡುತ್ತೆ.

ರೆಪೊ ದರ ಇಳಿಕೆಯಿಂದ ಎಷ್ಟು ಕಡಿಮೆಯಾಗಲಿದೆ ಇಎಂಐ ? : ರೆಪೊ ದರ ಇಳಿಕೆ ನಿಮ್ಮ ಗೃಹ ಸಾಲದ ಮೇಲೆ ನೇರ ಪರಿಣಾಮ ಬೀರಲಿದೆ. ನೀವು 50 ಲಕ್ಷ ರೂಪಾಯಿ ಗೃಹ ಸಾಲವನ್ನು 20 ವರ್ಷಗಳ ಅವಧಿಗೆ ಶೇಕಡಾ 8.5 ರ ಬಡ್ಡಿಗೆ ಪಡೆದಿದ್ದೀರಿ ಅಂದ್ಕೊಳ್ಳೋಣ. ನೀವು ಈಗ ಪ್ರತಿ ತಿಂಗಳು 43,391 ರೂಪಾಯಿ ಇಎಂಐ ಪಾವತಿ ಮಾಡ್ತಿದ್ದರೆ, ರೆಪೊ ದರ ಇಳಿಕೆ ನಂತ್ರ ಬಡ್ಡಿ ಇಳಿಯಲಿದೆ. ಬಡ್ಡಿ ಶೇಕಡಾ 7.5 ರಷ್ಟಾಗಲಿದ್ದು, ತಿಂಗಳ ಇಎಂಐ ಮೊತ್ತ ಸುಮಾರ 3,111 ರೂಪಾಯಿಗಳಷ್ಟು ಕಡಿಮೆ ಆಗಲಿದೆ. ಅಂದ್ರೆ ಇನ್ಮುಂದೆ ನೀವು 40,280 ರೂಪಾಯಿ ಪಾವತಿ ಮಾಡಿದ್ರೆ ಸಾಕು. ಇಎಂಐಗೆ ಹೋಗ್ತಿದ್ದ ಸುಮಾರು 37,000 ರೂಪಾಯಿಯನ್ನು ನೀವು ವಾರ್ಷಿಕವಾಗಿ ಉಳಿಸ್ಬಹುದು.

ಇಎಂಐ ಕಡಿಮೆ ಆಗೋದು ಬೇಡ, ಪ್ರತಿ ತಿಂಗಳಿ 43, 391 ರೂಪಾಯಿ ಪಾವತಿ ಮಾಡ್ತೇನೆ ಅಂದ್ರೆ ಬ್ಯಾಂಕ್ ಇಲ್ಲ ಅನ್ನೋದಿಲ್ಲ. ಇದ್ರಲ್ಲೂ ನಿಮಗೆ ಲಾಭವಿದೆ. ಇದ್ರಲ್ಲಿ ಗೃಹ ಸಾಲದ ಅವಧಿ ಕಡಿಮೆ ಆಗುತ್ತೆ. ಗೃಹ ಸಾಲದ ಅವಧಿ 3 ವರ್ಷಗಳಷ್ಟು ಕಡಿಮೆ ಆಗ್ಬಹುದು. ಇಷ್ಟೆ ಅಲ್ಲ ಬಡ್ಡಿಯಲ್ಲಿ 15.44 ಲಕ್ಷ ರೂಪಾಯಿ ಉಳಿಸ್ಬಹುದು.

ಗೃಹ ಸಾಲ ಪಡೆಯುವವರು ಏನು ಮಾಡಬೇಕು? : ಹೆಚ್ಚಿನ ಬ್ಯಾಂಕುಗಳಲ್ಲಿ ಗೃಹ ಸಾಲ ರೆಪೊ ದರವಾದ ಇಬಿಎಲ್ಆರ್ ಗೆ ಲಿಂಕ್ ಆಗಿರುತ್ತೆ, ಹಾಗಿದ್ದಲ್ಲಿ ನಿಮ್ಮ ಇಎಂಐ ಹಾಗೂ ಬಡ್ಡಿದರ ಕಡಿಮೆಯಾಗುತ್ತೆ. ಬ್ಯಾಂಕುಗಳು ನಿಮಗೆ ಇಎಂಐ ಕಡಿಮೆ ಮಾಡುವ ಅಥವಾ ಅವಧಿಯನ್ನು ಕಡಿಮೆ ಮಾಡುವ ಆಯ್ಕೆ ನೀಡುತ್ವೆ. ನೀವು ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಅದೇ ನಿಮ್ಮ ಸಾಲ ಇನ್ನೂ ಎಂಸಿಎಲ್ಆರ್ ಅಥವಾ ಮೂಲ ದರಕ್ಕೆ ಲಿಂಕ್ ಆಗಿದ್ದರೆ, ಬಡ್ಡಿದರ ಕಡಿತದ ಪ್ರಯೋಜನ ತ್ವರಿತವಾಗಿ ಸಿಗೋದಿಲ್ಲ. ಸಾಲವನ್ನು ನೀವು ಇಬಿಎಲ್ಆರ್ಗೆ ಬದಲಾಯಿಸಿದ್ರೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ತಿಂಗಳ ಇಎಂಐ ಕಡಿಮೆ ಮಾಡೋದಕ್ಕಿಂತ ಅವಧಿ ಕಡಿಮೆ ಮಾಡಿದ್ರೆ ಬೆಸ್ಟ್ ಎನ್ನುತ್ತಾರೆ ತಜ್ಞರು.