ಎರಡು ವರ್ಷಗಳ ಕಾಲ ನಡೆದ ಈ ವಂಚನೆ ಗ್ರಾಹಕರೊಬ್ಬರು ತಮ್ಮ ಠೇವಣಿ ಬಗ್ಗೆ ವಿಚಾರಿಸಲು ಬ್ಯಾಂಕ್‌ಗೆ ಬಂದಾಗ ಬೆಳಕಿಗೆ ಬಂದಿದೆ.

ಕೋಟಾ: ಷೇರು ಮಾರುಕಟ್ಟೆಗೆ ಹೋಲಿಸಿದರೆ ಬ್ಯಾಂಕಿನಲ್ಲಿ ನಮ್ಮ ಹಣ ಸುರಕ್ಷಿತ ಹೆಚ್ಚು ಬಡ್ಡಿ ಬಾರದೇ ಹೋದರೂ ಕನಿಷ್ಠ ಇರುವ ಹಣವಾದರೂ ಹಾಗೆಯೇ ಸುರಕ್ಷಿತವಾಗಿ ಉಳಿಯುತ್ತದೆ ಎಂಬುದು ಬಹುತೇಕ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡುವ ಭಾರತೀಯರ ನಂಬಿಕೆ. ಹೀಗಾಗಿ ಷೇರು ಮಾರುಕಟ್ಟೆಗಳು ಬಹಳಷ್ಟು ಬಡ್ಡಿಯ ಆಮಿಷ ತೋರಿಸಿದರು ಹಳೆ ತಲೆಮಾರಿನ ಜನ ಇಂದಿಗೂ ಷೇರು ಮಾರುಕಟ್ಟೆಯ ಬದಲು ಬ್ಯಾಂಕ್‌ಗಳಲ್ಲೇ ಹೂಡಿಕೆ ಮಾಡುತ್ತಾರೆ. ಆದರೆ ಈಗ ಇಲ್ಲೊಂದು ಕಡೆ ನಡೆದ ಘಟನೆ ಕೇಳಿದರೆ ಬ್ಯಾಂಕ್‌ನಲ್ಲೂ ಕೂಡ ನಮ್ಮ ಹಣ ಸುರಕ್ಷಿತ ಅಲ್ಲ ಎಂಬ ಆತಂಕ ಕಾಡುತ್ತಿದೆ.

ಹೌದು ಇದು ಕಾವಲು ಕಾಯಬೇಕಾದವರೇ ಕೊಳ್ಳೆ ಹೊಡೆದ ಕತೆ. ರಾಜಸ್ತಾನದ ಕೋಟಾದ ಐಸಿಐಸಿ ಬ್ಯಾಂಕ್‌ನಲ್ಲಿ ಬಹುಕೋಟಿ ಹಗರಣ ನಡೆದಿದ್ದು, ಬ್ಯಾಂಕ್‌ನ ರಿಲೇಷನ್‌ ಶಿಪ್‌ ಮ್ಯಾನೇಜರೇ ಈ ಹಗರಣದ ರೂವಾರಿ. ಘಟನೆಗೆ ಸಂಬಂಧಿಸಿದಂತೆ ಐಸಿಐಸಿ ಬ್ಯಾಂಕ್ ರಿಲೇಷನ್‌ ಶಿಪ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸಾಕ್ಷಿ ಗುಪ್ತಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಹಾಗಿದ್ರೆ ಈಕೆ ಮಾಡಿದ್ದೇನು ನೋಡಿ?

ತಮ್ಮ ಬ್ಯಾಂಕ್‌ನಲ್ಲಿ ಫಿಕ್ಸೆಡ್ ಡೆಪಾಸಿಟ್‌ ಇಟ್ಟಿದ್ದ 41ಕ್ಕೂ ಹೆಚ್ಚು ಗ್ರಾಹಕರ ಹಣವನ್ನು ಡ್ರಾ ಮಾಡಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾಳೆ. ಈಕೆ ಗುಳುಂ ಮಾಡಿದ ಹಣದ ಒಟ್ಟು ಮೊತ್ತ ಸುಮಾರು 4 ಕೋಟಿ ರೂಪಾಯಿಗಳು. ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭವನ್ನು ಗಳಿಸುವ ಅತೀಯಾಸೆಗೆ ಒಳಗಾದ ಸಾಕ್ಷಿಗುಪ್ತಾ ಇದಕ್ಕಾಗಿ ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದ ಜನರ ಹಣವನ್ನು ಡ್ರಾ ಮಾಡಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾಳೆ. ದುರಾದೃಷ್ಟವಶಾತ್ ಆಕೆ ಷೇರು ಮಾರುಕಟ್ಟೆಯಲ್ಲಿ ಇನ್‌ವೆಸ್ಟ್ ಮಾಡಿದ ಹಣವೆಲ್ಲವೂ ನೀರಿನ ಮೇಲಿನ ಹೋಮದಂತೆ ಕರಗಿ ಹೋಗಿದೆ. ಬರೋಬ್ಬರಿ 2 ವರ್ಷಗಳ ಕಾಲ ಈಕೆ ಈ ತನ್ನ ವಂಚನೆಯನ್ನು ಮುಂದುವರೆಸಿದ್ದು, ಯಾವುದೇ ಬ್ಯಾಂಕ್ ಸಿಬ್ಬಂದಿಗೆ ಈ ಬಗ್ಗೆ ಅನುಮಾನ ಬಂದಿರಲಿಲ್ಲ.

2020 ಮತ್ತು 2023 ರ ನಡುವೆ ಈ ವಂಚನೆ ಪ್ರಕರಣ ನಡೆದಿದೆ. ಸಾಕ್ಷಿ ಗುಪ್ತಾ, 'ಯೂಸರ್ ಎಫ್‌ಡಿ (ಸ್ಥಿರ ಠೇವಣಿ)' ಲಿಂಕ್ ಅನ್ನು ದುರುಪಯೋಗಪಡಿಸಿಕೊಂಡು 41 ಗ್ರಾಹಕರ 110 ಖಾತೆಗಳಿಂದ ಅಕ್ರಮವಾಗಿ 4.58 ಕೋಟಿ ರೂ.ಗಳನ್ನು ಹಿಂಪಡೆದಿದ್ದಾರೆ. ತನಿಖೆಯ ವೇಳೆ ತಿಳಿದು ಬಂದಂತೆ ಸಾಕ್ಷಿ ಗುಪ್ತಾ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ಆದಾಗ್ಯೂ, ಮಾರುಕಟ್ಟೆಯಲ್ಲಿ ಭಾರಿ ನಷ್ಟವನ್ನು ಅನುಭವಿಸಿದ ನಂತರ ಅವರು ಹಣವನ್ನು ಜನರ ಖಾತೆಗಳಿಗೆ ಮರಳಿ ಜಮಾ ಮಾಡಲು ವಿಫಲರಾಗಿದ್ದಾರೆ. ಹೀಗಾಗಿ ಈಗ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ನಿನ್ನೆ ತಡರಾತ್ರಿ ಅವರ ಸಹೋದರಿಯ ಮದುವೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಬ್ಯಾಂಕಿನ ಗ್ರಾಹಕರೊಬ್ಬರು ತಮ್ಮ ಎಫ್‌ಡಿ ಬಗ್ಗೆ ವಿಚಾರಿಸಲು ಬ್ಯಾಂಕಿಗೆ ಬಂದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಬ್ಯಾಂಕ್ ಫೆಬ್ರವರಿ 18 ರಂದು ಪೊಲೀಸರಿಗೆ ದೂರು ನೀಡಿದೆ.

ಬಹುಕೋಟಿ ವಂಚನೆ ಮಾಡಿದ್ದು ಹೇಗೆ?

ಕಿಲಾಡಿ ಸಾಕ್ಷಿ ಮೊದಲಿಗೆ ಖಾತೆಗಳೊಂದಿಗೆ ಲಿಂಕ್ ಮಾಡಲಾದ ಗ್ರಾಹಕರ ಮೊಬೈಲ್ ಸಂಖ್ಯೆಗಳನ್ನು ಬದಲಾಯಿಸಿದ್ದಾಳೆ, ಇದರಿಂದ ಅವರ ಮೊಬೈಲ್ ಸಂಖ್ಯೆ ಬ್ಯಾಂಕ್ ವಹಿವಾಟಿನ ಸಂದೇಶಗಳು ಹೋಗದಂತೆ ಮಾಡಿದ್ದಾಳೆ. ನಂತರ ಆಕೆ ಅಲ್ಲಿ ತನ್ನ ಕುಟುಂಬ ಸದಸ್ಯರ ಫೋನ್ ಸಂಖ್ಯೆಗಳನ್ನು ಹಾಕಿ ಅಪ್‌ಡೇಟ್ ಮಾಡಿದ್ದಾಳೆ. ಹೀಗೆ ಆಕೆ 4 ಕೋಟಿ ರೂ.ಗೂ ಹೆಚ್ಚು ಹಣವನ್ನು ಡ್ರಾ ಮಾಡಿದ್ದಾಳೆ. ಹಣ ಹೊಂದಿರುವ ಖಾತೆದಾರರಿಗೆ ವಂಚನೆಯ ಸುಳಿವು ಸಿಗದಂತೆ ಒಟಿಪಿಗಳನ್ನು ಪಡೆಯಲು ಅವಳು ಇದಕ್ಕಾಗಿ ಬ್ಯಾಂಕ್‌ ಬಳಸುವ ವ್ಯವಸ್ಥೆಯನ್ನೇ ಬಳಸಿಕೊಂಡಿದ್ದಾಳೆ ಎಂದು ತನಿಖಾ ಅಧಿಕಾರಿ ಇಬ್ರಾಹಿಂ ಖಾನ್ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ ಈ ಬಗ್ಗೆ ಹೇಳಿಕೆ ನೀಡಿಲ್ಲ. ಆದಾರೂ ಬ್ಯಾಂಕಿನ ಮೂಲಗಳ ಪ್ರಕಾರ ಈ ವಂಚನೆಯಿಂದ ಹಣ ಕಳೆದುಕೊಂಡ ಗ್ರಾಹಕರಿಗೆ ಉಂಟಾದ ನಷ್ಟವನ್ನು ಸರಿದೂಗಿಸುವುದಾಗಿ ತಿಳಿಸಿವೆ. ಇತ್ತ ಗುಪ್ತಾ ಬಂಧನದ ಬಗ್ಗೆ ತಿಳಿದ ನಂತರ ತನ್ನ ಹಣ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಲು ಬ್ಯಾಂಕಿಗೆ ಬಂದ ಗ್ರಾಹಕರೊಬ್ಬರು, ಸಾಕ್ಷಿ ಗುಪ್ತಾ ಜನರಿಗೆ 4 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ನಾನು ಕೇಳಿದೆ. ನನ್ನ ಹಣ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

ನಾವು ಇನ್ನು ನಮ್ಮ ಹಣವನ್ನು ಎಲ್ಲಿ ಇಡಬೇಕು? ನಾವು ಅದನ್ನು ಮನೆಯಲ್ಲಿ ಇಡಲು ಸಾಧ್ಯವಿಲ್ಲ, ಈಗ ನಾವು ಅದನ್ನು ಬ್ಯಾಂಕಿನಲ್ಲಿ ಇಡಲು ಸಾಧ್ಯವಿಲ್ಲ. ನಾವು ಈಗ ಏನು ಮಾಡಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.

ಉದ್ಯೋಗಿ ಅಮಾನತು, ಐಸಿಐಸಿ ಸ್ಪಷ್ಟನೆ

ಗ್ರಾಹಕರ ಹಿತಾಸಕ್ತಿ ಐಸಿಐಸಿ ಬ್ಯಾಂಕ್‌ಗೆ ಅತ್ಯಂತ ಮಹತ್ವದ್ದಾಗಿದೆ. ಈ ವಂಚನೆ ಪ್ರಕರಣ ಬೆಳಕಿಗೆ ಬಂದ ತಕ್ಷಣ, ಪೊಲೀಸರಿಗೆ ಮಾಹಿತಿ ನೀಡಿದ್ದೆ, ಎಐಆರ್ ದಾಖಲಿಸಿದ್ದೇವೆ. ಯಾವುದೇ ವಂಚನೆಯನ್ನು ಐಸಿಐಸಿಐ ಬ್ಯಾಂಕ್ ಸಹಿಸುವುದಿಲ್ಲ. ವಂಚನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಹೊಂದಿದೆ. ಹೀಗಾಗಿ ತಕ್ಷಣವೇ ಉದ್ಯೋಗಿಯನ್ನು ಅಮಾನತು ಮಾಡಲಾಗಿದೆ. ಇದೇ ವೇಳೆ ಗ್ರಾಹಕರಿಗೆ ಆಗಿರುವ ತೊಂದರೆಯನ್ನು ತಕ್ಷಣದಲ್ಲೇ ಸರಿಪಡಿಸಲಾಗಿದೆ.