ಟೊಯೋಟಾ ಕಿರ್ಲೋಸ್ಕರ್ ಮೋಟಾರ್, ಕರ್ನಾಟಕ ಸರ್ಕಾರದ 'ಕ್ವಿನ್ ಸಿಟಿ' ಯೋಜನೆಯಲ್ಲಿ ₹1,200 ಕೋಟಿ ಹೂಡಿಕೆ ಮಾಡಿ 'ಬಿಜ್‌ಇಂಟೆಲ್ ಹಬ್' ಸ್ಥಾಪಿಸಲಿದೆ. ಈ ಒಪ್ಪಂದದ ಅಡಿಯಲ್ಲಿ, ಮುಂದಿನ ಐದು ವರ್ಷಗಳಲ್ಲಿ ಸುಮಾರು 200 ಉದ್ಯೋಗಗಳು ಸೃಷ್ಟಿಯಾಗಲಿದ್ದು, ಯೋಜನೆಗೆ 300 ಎಕರೆ ಜಮೀನು ಹಂಚಿಕೆ ಮಾಡಲಾಗಿದೆ.

ಬೆಂಗಳೂರು (ಮೇ.25): ಪ್ರಮುಖ ಆಟೋಮೊಬೈಲ್ ದೈತ್ಯ ಸಂಸ್ಥೆಯಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM), ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಸಮಗ್ರ ಟೌನ್‌ಶಿಪ್ ಯೋಜನೆಯಾದ ‘ಕ್ವಿನ್ ಸಿಟಿ’ಯಲ್ಲಿ (KWIN City) ಜಾಗತಿಕ ಗುಣಮಟ್ಟದ ‘ಬಿಜ್‌ಇಂಟೆಲ್ ಹಬ್’ (BizIntel Hub) ಅನ್ನು ಸ್ಥಾಪಿಸುವುದಾಗಿ ಪ್ರಕಟಿಸಿದೆ. ಈ ಬೃಹತ್ ಯೋಜನೆಗಾಗಿ ಕಂಪನಿಯು ₹1,200 ಕೋಟಿ ಹೂಡಿಕೆ ಮಾಡಲಿದ್ದು, ಮುಂದಿನ ಐದು ವರ್ಷಗಳಲ್ಲಿ ಸುಮಾರು 200 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

Add Asianetnews Kannada as a Preferred SourcegooglePreferred

ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸುತ್ತಿರುವ ‘ಕ್ವಿನ್ ಸಿಟಿ’ಯಲ್ಲಿ ಈ ಅತ್ಯಾಧುನಿಕ ಕೇಂದ್ರ ತಲೆಯೆತ್ತಲಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಸಮ್ಮುಖದಲ್ಲಿ ಅಧಿಕೃತ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಲಾಯಿತು. ರಾಜ್ಯ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಮತ್ತು ಟೊಯೋಟಾ ಸಂಸ್ಥೆಯ ಸಿಒಒ ಹಾಗೂ ವಿಶೇಷ ಯೋಜನೆಗಳ ನಿರ್ದೇಶಕ ಸುದೀಪ್ ದಾಲ್ವಿ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಟೊಯೋಟಾ ಸಂಸ್ಥೆಯ ಈ ಬೃಹತ್ ಹೂಡಿಕೆಗೆ ರಾಜ್ಯ ಸರ್ಕಾರದ ವತಿಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಪ್ರಸ್ತಾವಿತ ಈ ಜಾಗತಿಕ ಕೇಂದ್ರವು ಇಡೀ ವಿಶ್ವದಲ್ಲೇ ತನ್ನದೇ ಆದ ಮಾದರಿಯಲ್ಲಿ ಮೊದಲನೆಯದಾಗಿರಲಿದೆ ಎಂದು ತಿಳಿಯಲು ಅತ್ಯಂತ ಸಂತೋಷವಾಗುತ್ತಿದೆ ಎಂದರು.

ಉದ್ಯೋಗ ಸೃಷ್ಟಿ ಮತ್ತು 300 ಎಕರೆ ಜಮೀನು ಹಂಚಿಕೆ

ಬಳಿಕ ಮಾತನಾಡಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, "ಕ್ವಿನ್ ಸಿಟಿಯಲ್ಲಿ ಸಾಕಾರಗೊಳ್ಳುತ್ತಿರುವ ಮೊದಲ ಪ್ರಮುಖ ಬೃಹತ್ ಹೂಡಿಕೆ ಇದಾಗಿದೆ. ಟೊಯೋಟಾ ಕಂಪನಿಯು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಆರಂಭಿಕ ಬಂಡವಾಳ ವೆಚ್ಚವಾಗಿ ₹1,200 ಕೋಟಿ ಹೂಡಿಕೆ ಮಾಡಲಿದ್ದು, ಸುಮಾರು 200 ನೇರ ಉದ್ಯೋಗಗಳನ್ನು ಸೃಷ್ಟಿಸಲಿದೆ. ಈ ಮಹತ್ವದ ಯೋಜನೆಗಾಗಿ ಒಟ್ಟು 300 ಎಕರೆ ಜಮೀನನ್ನು ಹಂಚಿಕೆ ಮಾಡಲಾಗುವುದು," ಎಂದು ವಿವರ ನೀಡಿದರು.

ಈ ಅತ್ಯಾಧುನಿಕ ಸೌಲಭ್ಯದ ಕೇಂದ್ರದಲ್ಲಿ ಪ್ರಮುಖವಾಗಿ ವಾಹನಗಳ ತಯಾರಿಕೆ, ಸುಧಾರಿತ ಟೆಸ್ಟಿಂಗ್ (ಪರೀಕ್ಷಾರ್ಥ) ಚಟುವಟಿಕೆಗಳು ಹಾಗೂ ಅತ್ಯಾಧುನಿಕ ಆಟೋಮೊಬೈಲ್ ಉತ್ಪಾದನಾ ಕೇಂದ್ರದ ಸ್ಥಾಪನೆಯನ್ನು ಕೈಗೊಳ್ಳಲಾಗುವುದು. ಈ ಯೋಜನೆಯು ರಾಜ್ಯದ ಯುವಜನತೆಗೆ ಉದ್ಯೋಗ ಮತ್ತು ತಾಂತ್ರಿಕ ರಂಗದಲ್ಲಿ ದೂಡ್ಡ ಮಟ್ಟದ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಕ್ವಿನ್ ಸಿಟಿಗೆ ಸಿಗಲಿದೆ ₹48,000 ಕೋಟಿ ಹೂಡಿಕೆಯ ಬಲ

ಸಚಿವ ಎಂ.ಬಿ. ಪಾಟೀಲ್ ಅವರ ಪ್ರಕಾರ, ಕ್ವಿನ್ ಸಿಟಿಯಲ್ಲಿ ನಾವೀನ್ಯತೆ (ಇನೋವೇಶನ್), ಆರೋಗ್ಯ ರಕ್ಷಣೆ (ಹೆಲ್ತ್‌ಕೇರ್) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ವಲಯಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಈಗಾಗಲೇ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ 7 ರಿಂದ 8 ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಪ್ರಮುಖ ಆರೋಗ್ಯ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳು ಇಲ್ಲಿ ಹೂಡಿಕೆ ಮಾಡಲು ತೀವ್ರ ಆಸಕ್ತಿ ತೋರಿಸಿದ್ದು, ಅವುಗಳೊಂದಿಗಿನ ಒಪ್ಪಂದಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಈ ಅತ್ಯಾಧುನಿಕ ಅಲ್ಟ್ರಾ-ಮಾಡರ್ನ್ ಸಿಟಿಯನ್ನು ಒಟ್ಟು 5,800 ಎಕರೆ ಪ್ರದೇಶದಲ್ಲಿ ವಿವಿಧ ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರಸ್ತುತ ಮೊದಲ ಹಂತದ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಈ ಸಮಗ್ರ ಯೋಜನೆಯ ಮೂಲಕ ಒಟ್ಟಾರೆಯಾಗಿ ರಾಜ್ಯಕ್ಕೆ ₹48,000 ಕೋಟಿ ಹೂಡಿಕೆಯನ್ನು ಆಕರ್ಷಿಸುವ ಹಾಗೂ ಸುಮಾರು 1 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಕರ್ನಾಟಕ ಸರ್ಕಾರ ಹೊಂದಿದೆ.