ದೇಶದ ಪ್ರಮುಖ ಚಿನ್ನ ರಫ್ತು ಸಂಸ್ಥೆ 'ರಾಜೇಶ್ ಎಕ್ಸ್‌ಪೋರ್ಟ್ಸ್' ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ. ಷೇರು ಮಾರುಕಟ್ಟೆ ಅಕ್ರಮ, ವಿದೇಶಿ ವಹಿವಾಟಿನ ದಾಖಲೆಗಳ ನಾಪತ್ತೆ, ಮತ್ತು ಆಡಳಿತ ಮಂಡಳಿಯ ವಿಚಿತ್ರ ಸಂಬಳ ಪದ್ಧತಿ ಸೇರಿದಂತೆ ಹಲವು ಆರೋಪಗಳ ಮೇಲೆ ಈ ತನಿಖೆ ನಡೆಯುತ್ತಿದೆ.
ಬೆಂಗಳೂರು (ಜೂ.24): ದೇಶದ ಪ್ರಮುಖ ಚಿನ್ನ ಮತ್ತು ಆಭರಣ ರಫ್ತು ಸಂಸ್ಥೆಯಾದ 'ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್' (REL) ಮತ್ತು ಅದಕ್ಕೆ ಸಂಬಂಧಿಸಿದ ಸಹವರ್ತಿ ಸಂಸ್ಥೆಗಳ ಒಟ್ಟು 9 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ED) ಭಾರಿ ಶೋಧ ಹಾಗೂ ಜಪ್ತಿ ಕಾರ್ಯಾಚರಣೆ ನಡೆಸಿದೆ. ಷೇರು ಮಾರುಕಟ್ಟೆಯಲ್ಲಿ ಅಕ್ರಮ, ವಿದೇಶಿ ವಹಿವಾಟಿನ ದಾಖಲೆಗಳ ನಾಪತ್ತೆ ಮತ್ತು ಆಡಳಿತ ಮಂಡಳಿಯ ವಿಚಿತ್ರ ಸಂಬಳದ ಪದ್ಧತಿ ಸೇರಿದಂತೆ ಹತ್ತಾರು ಅಕ್ರಮಗಳು ನಡೆದಿರುವ ಆರೋಪದ ಮೇಲೆ ಈ ದಾಳಿ ನಡೆದಿದೆ ಎಂದು ಇಡಿ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ಕಂಪನಿ ಮತ್ತು ಅದರ ಪ್ರವರ್ತಕರು (Promoters) ಹಣಕಾಸು ವರದಿಗಳಲ್ಲಿ ಭಾರಿ ಪ್ರಮಾಣದ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಭಾರತೀಯ ಷೇರು ಮತ್ತು ವಿನಿಮಯ ಮಂಡಳಿ (SEBI) ಮಧ್ಯಂತರ ಆದೇಶ ಹೊರಡಿಸಿದ ಕೆಲವೇ ತಿಂಗಳುಗಳ ಬಳಿಕ ಇಡಿ ಈ ಮಹತ್ವದ ಕ್ರಮ ಕೈಗೊಂಡಿದೆ.
ಎಂಡಿ ಮತ್ತು ಸಿಎಫ್‌ಒ ಸಂಬಳ ತೀರಾ ಕಮ್ಮಿ: ಇಡಿ ಸಂಶಯ
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಕೈಗೊಂಡಿರುವ ಈ ಇತ್ತೀಚಿನ ಕ್ರಮದಲ್ಲಿ ಇಡಿ ಮಹತ್ವದ ವಿಷಯವೊಂದನ್ನು ಪತ್ತೆಹಚ್ಚಿದೆ. ರಾಜೇಶ್ ಎಕ್ಸ್‌ಪೋರ್ಟ್ಸ್ ಸಂಸ್ಥೆಯು ಬರೋಬ್ಬರಿ 7.7 ಲಕ್ಷ ಕೋಟಿ ರೂಪಾಯಿಗಳ ಸಂಯೋಜಿತ ಆದಾಯವನ್ನು (Consolidated Revenues) ವರದಿ ಮಾಡಿದೆ. ಆದರೆ, ಇಷ್ಟೊಂದು ದೊಡ್ಡ ಕಂಪನಿಯ ಚೀಫ್ ಫೈನಾನ್ಷಿಯಲ್ ಆಫೀಸರ್ (CFO) 2020 ರಿಂದ ಯಾವುದೇ ಸಂಬಳವನ್ನು ಪಡೆದಿಲ್ಲ. ಇನ್ನು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ (MD) ಗೆ ತಿಂಗಳಿಗೆ ಕೇವಲ 17,000 ರೂಪಾಯಿ ಸಂಬಳ ನೀಡಲಾಗುತ್ತಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಈ ಸಂಬಳದ ರಚನೆಯು ಸಾಮಾನ್ಯ ವಾಣಿಜ್ಯ ವ್ಯವಹಾರದ ಪದ್ಧತಿಗಿಂತ ಸಂಪೂರ್ಣ ಭಿನ್ನವಾಗಿದ್ದು, ಕಂಪನಿಯು ವರದಿ ಮಾಡಿರುವ ವ್ಯವಹಾರಗಳ ನೈಜತೆಯ ಬಗ್ಗೆ ತೀವ್ರ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಬ್ಲಾಕ್ ಡೀಲ್‌ಗಳ ಮೇಲೆ ಇಡಿ ನಿಗಾ; ₹600 ಕೋಟಿ ಅಕ್ರಮ ವರ್ಗಾವಣೆ
ಇಂಟರ್ನ್ಯಾಷನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ (ICIJ) ಬಿಡುಗಡೆ ಮಾಡಿದ ಡೇಟಾ ಲೀಕ್ಸ್ ನಲ್ಲಿ ಹೆಸರು ಹೊಂದಿರುವ ಕೆಲವು ವ್ಯಕ್ತಿಗಳು, ರಾಜೇಶ್ ಎಕ್ಸ್‌ಪೋರ್ಟ್ಸ್‌ನ ಷೇರುಗಳಲ್ಲಿ ಅನುಮಾನಾಸ್ಪದ 'ಬ್ಲಾಕ್ ಟ್ರೇಡ್ಸ್' (Block Trades) ನಡೆಸಿರುವುದನ್ನು ಇಡಿ ಪತ್ತೆಹಚ್ಚಿದೆ. ಆರಂಭಿಕ ತನಿಖೆಯ ಪ್ರಕಾರ, ವಿದೇಶಗಳಲ್ಲಿ ಬಹಿರಂಗಪಡಿಸದ ಹೂಡಿಕೆಯ ಲಿಂಕ್‌ಗಳು ಇರುವುದು ಕಂಡುಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅನಿವಾಸಿ ಭಾರತೀಯರ (NRI) ಹೆಸರಿನಲ್ಲಿ ಬೆನಾಮಿ ಖಾತೆಗಳನ್ನು ಸೃಷ್ಟಿಸಿ, ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗಿ ಭಾರತದಿಂದ ಬರೋಬ್ಬರಿ 600 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಿದೇಶಕ್ಕೆ ಸಾಗಿಸಲಾಗಿದೆ ಎಂದು ಸಂಸ್ಥೆ ಆರೋಪಿಸಿದೆ.
ಕಂಪನಿ ಮತ್ತು ಅದಕ್ಕೆ ಕನೆಕ್ಟ್ ಆಗಿರುವ ಇತರ ಘಟಕಗಳ ವಿರುದ್ಧ ನಡೆಯುತ್ತಿರುವ ಫೆಮಾ (FEMA) ತನಿಖೆಯ ಭಾಗವಾಗಿ ಜೂನ್ 23 ರಂದು ಬೆಂಗಳೂರು ಮತ್ತು ಮುಂಬೈನ ಕಚೇರಿ ಹಾಗೂ ನಿವಾಸಗಳ ಮೇಲೆ ಈ ದಾಳಿ ನಡೆಸಲಾಗಿದೆ.
ವಿದೇಶಿ ವಹಿವಾಟಿನ ಸರಿಯಾದ ದಾಖಲೆಗಳೇ ಇಲ್ಲ!
ಆಮದು, ರಫ್ತು, ವಿದೇಶಿ ಹೂಡಿಕೆಗಳು ಮತ್ತು ವಿದೇಶಿ ವ್ಯಾಪಾರದ ಪಾವತಿಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ದಾಖಲೆಗಳನ್ನು ಹಾಜರುಪಡಿಸಲು ರಾಜೇಶ್ ಎಕ್ಸ್‌ಪೋರ್ಟ್ಸ್ ವಿಫಲವಾಗಿದೆ ಎಂದು ಇಡಿ ತಿಳಿಸಿದೆ. ವಿಶೇಷವಾಗಿ, ಆಫ್ರಿಕನ್ ಮೈನ್ಸ್‌ನಲ್ಲಿ (African Mines) 1,035 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿತ್ತು. ಆದರೆ ಈ ಹೂಡಿಕೆಗೆ ಪೂರಕವಾದ ಯಾವುದೇ ದಾಖಲೆಗಳು ತನಿಖೆಯ ಸಮಯದಲ್ಲಿ ಪತ್ತೆಯಾಗಿಲ್ಲ ಮತ್ತು ಕಂಪನಿಯೂ ಅದನ್ನು ಒದಗಿಸಿಲ್ಲ. ಸೆಬಿ (SEBI) ಕೂಡ ಜೂನ್ 3 ರ ತನ್ನ ಆದೇಶದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿತ್ತು.
ವ್ಯಾಪಾರ ಬಾಕಿಗಳ ನಿಗೂಢ ಹೊಂದಾಣಿಕೆ
ಇಡಿ ಪತ್ತೆಹಚ್ಚಿದ ಮತ್ತೊಂದು ಪ್ರಮುಖ ಅಂಶವೆಂದರೆ, ವಿದೇಶಿ ವ್ಯಾಪಾರದ ಪಾವತಿ ಮತ್ತು ಬಾಕಿಗಳಿಗೆ ಸಂಬಂಧಿಸಿದ ಸುಮಾರು 3,000 ಕೋಟಿ ರೂಪಾಯಿಗಳ ವ್ಯವಹಾರವನ್ನು ಅತ್ಯಂತ ಅಪಾರದರ್ಶಕವಾಗಿ 'ನೆಟ್ಟಿಂಗ್' ಅಥವಾ 'ಸೆಟ್-ಆಫ್' (Opaque Netting/Set-off) ವ್ಯವಸ್ಥೆಯ ಮೂಲಕ ಹೊಂದಾಣಿಕೆ ಮಾಡಲಾಗಿದೆ. ಈ ವಹಿವಾಟುಗಳಲ್ಲಿ ಯುಎಇ (UAE) ಮತ್ತು ಇತರ ದೇಶಗಳಲ್ಲಿರುವ ಅನುಮಾನಾಸ್ಪದ ವಿದೇಶಿ ಪಾಲುದಾರ ಸಂಸ್ಥೆಗಳು ಭಾಗಿಯಾಗಿವೆ ಎಂದು ಇಡಿ ಆರೋಪಿಸಿದೆ.
ಚಿನ್ನದ ಸ್ಟಾಕ್‌ನಲ್ಲಿ ಶೇ. 40 ರಷ್ಟು ಭಾರಿ ವ್ಯತ್ಯಾಸ!
ಇಡಿ ನಡೆಸಿದ ಭೌತಿಕ ಪರಿಶೀಲನೆಯಲ್ಲಿ ಮತ್ತೊಂದು ಭಾರಿ ಅಕ್ರಮ ಪತ್ತೆಯಾಗಿದೆ. ಫ್ಯಾಕ್ಟರಿ ರಿಜಿಸ್ಟರ್‌ಗಳಲ್ಲಿ ದಾಖಲಾಗಿರುವ ಚಿನ್ನದ ದಾಸ್ತಾನು (Inventory) ಮತ್ತು ಕಚೇರಿ/ಫ್ಯಾಕ್ಟರಿ ಆವರಣದಲ್ಲಿ ವಾಸ್ತವವಾಗಿ ಪತ್ತೆಯಾದ ಚಿನ್ನದ ದಾಸ್ತಾನಿನ ನಡುವೆ ಬರೋಬ್ಬರಿ ಶೇಕಡಾ 40 ರಷ್ಟು ವ್ಯತ್ಯಾಸವಿರುವುದು ಪತ್ತೆಯಾಗಿದೆ.
ಮೊದಲು ಬ್ರೇಕ್ ಹಾಕಿದ್ದ ಸೆಬಿ (SEBI)
ಇಡಿಯ ಈ ಇತ್ತೀಚಿನ ಕ್ರಮಕ್ಕೆ ಸೆಬಿ ನೀಡಿದ್ದ ಆದೇಶವೇ ಮೂಲ ಕಾರಣವಾಗಿದೆ. ಈ ತಿಂಗಳ ಆರಂಭದಲ್ಲಿ ಸೆಬಿ ಹೊರಡಿಸಿದ ಮಧ್ಯಂತರ ಆದೇಶದಲ್ಲಿ, ರಾಜೇಶ್ ಎಕ್ಸ್‌ಪೋರ್ಟ್ಸ್ ಸಂಸ್ಥೆಯು ಹಣಕಾಸು ವರ್ಷ 2021 ರಿಂದ 2025 ರ ಅವಧಿಯಲ್ಲಿ ಸುಮಾರು 15.15 ಲಕ್ಷ ಕೋಟಿ ರೂಪಾಯಿಗಳ ಸಂಯೋಜಿತ ಆದಾಯವನ್ನು ಸುಳ್ಳಾಗಿ ಬಿಂಬಿಸಿದೆ ಎಂದು ಆರೋಪಿಸಿತ್ತು. ಇದು ಆ ಅವಧಿಯಲ್ಲಿ ಕಂಪನಿ ವರದಿ ಮಾಡಿದ ಒಟ್ಟು ಆದಾಯದ ಶೇಕಡಾ 99.8 ರಷ್ಟಾಗಿದೆ!
ಕಂಪನಿಯು ತೋರಿಸಿದ ವ್ಯಾಪಾರದ ಬಾಕಿಗಳು, ಪಾವತಿಗಳು ಮತ್ತು ಇನ್ವೆಂಟರಿ ವಿವರಗಳ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದ ಸೆಬಿ, ಮುಂದಿನ ತನಿಖೆ ಮುಗಿಯುವವರೆಗೆ ಪ್ರಮುಖ ಪ್ರವರ್ತಕರು ಷೇರು ಮಾರುಕಟ್ಟೆ ಪ್ರವೇಶಿಸದಂತೆ ನಿಷೇಧ ಹೇರಿತ್ತು. ಪ್ರಸ್ತುತ ದಾಳಿಯ ಸಮಯದಲ್ಲಿ ಭಾರಿ ಪ್ರಮಾಣದ ಆಕ್ಷೇಪಾರ್ಹ ದಾಖಲೆಗಳು ಮತ್ತು ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇಡಿ ತನಿಖೆ ಮುಂದುವರಿದಿದೆ.


