IRCTC ವೆಬ್‌ಸೈಟ್ ಡೌನ್: ರೈಲ್ವೆ ಟಿಕೆಟ್ ಬುಕ್ ಮಾಡಲು ಜನಸಾಮಾನ್ಯರ ಪರದಾಟ; ನೆಟ್ಟಿಗರ ಆಕ್ರೋಶ
IRCTC ವೆಬ್‌ಸೈಟ್ ಮುಂಜಾನೆ 3.30 ಕ್ಕೆ ಸ್ಥಗಿತಗೊಂಡಿದ್ದು, ಹಲವು ಗಂಟೆಯಾದ್ರೂ ಇನ್ನೂ ತಾಂತ್ರಿಕ ದೋಷವನ್ನು ಎದುರಿಸುತ್ತಿದೆ. ಮತ್ತು ಅದನ್ನು ಸರಿಪಡಿಸಲು ತಂಡವು ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದೆ.
ನವದೆಹಲಿ (ಜುಲೈ 25, 2023): ಭಾರತೀಯ ರೈಲ್ವೆಗೆ ಟಿಕೆಟಿಂಗ್ ಸೇವೆಗಳನ್ನು ಒದಗಿಸುವ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (IRCTC) ವೆಬ್‌ಸೈಟ್ ನಸುಕಿನ ಜಾವದಿಂದ ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿದೆ. ಇದರಿಂದ ಶ್ರಾವಣ ಮಾಸದ ಹಬ್ಬಗಳಿಗೆ ತಮ್ಮ ಊರುಗಳಿಗೆ ತೆರಳಲು ಮುಂಚಿತವಾಗಿ ಸೀಟು ಕಾಯ್ದಿರಿಸಲು ಹೋದ ಜನ ಹಾಗೂ ಇತರೆ ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡಲು ಹೋದವರಿಗೆ ತೊಂದರೆಯಾಗಿದೆ. ಇದರಿಂದ ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
IRCTC ವೆಬ್‌ಸೈಟ್ ಮುಂಜಾನೆ 3.30 ಕ್ಕೆ ಸ್ಥಗಿತಗೊಂಡಿದ್ದು, 9 ಗಂಟೆಯಾದ್ರೂ ಇನ್ನೂ ತಾಂತ್ರಿಕ ದೋಷವನ್ನು ಎದುರಿಸುತ್ತಿದೆ. ಮತ್ತು ಅದನ್ನು ಸರಿಪಡಿಸಲು ತಂಡವು ಕಾರ್ಯನಿರ್ವಹಿಸುತ್ತಿದೆ ಎಂದು ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ನಲ್ಲಿ (ಈಗ ಎಕ್ಸ್ ಎಂದು ಮರುನಾಮಕರಣ ಮಾಡಲಾಗಿದೆ) ಸಾರ್ವಜನಿಕ ವಲಯದ ಉದ್ಯಮವು (ಪಿಎಸ್‌ಯು) ಸಹ ಮಾಹಿತಿ ನೀಡಿದೆ.
ಇದನ್ನು ಓದಿ: ಸಾವನ್ ಮಾಸದಲ್ಲಿ ಹಲಾಲ್ ಚಹಾ ಕೊಡ್ತೀರಾ: ರೈಲ್ವೆ ಸಿಬ್ಬಂದಿ ಮೇಲೆ ಪ್ರಯಾಣಿಕರ ಆಕ್ರೋಶ! ಏನಿದು ‘ಹಲಾಲ್ ಟೀ’’ ವಿವಾದ?
ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ದೂರಲು ಪ್ರಾರಂಭಿಸಿದ ನಂತರ, ಐಆರ್‌ಸಿಟಿಸಿ X ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ: "ತಾಂತ್ರಿಕ ಕಾರಣಗಳಿಂದಾಗಿ, ಐಆರ್‌ಸಿಟಿಸಿ ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಟಿಕೆಟ್ ಸೇವೆ ಲಭ್ಯವಿಲ್ಲ. CRISನ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸುತ್ತಿದೆ." ಎಂದು ಮಾಹಿತಿ ನೀಡಿದೆ. ಟಿಕೆಟ್ ಬುಕ್ ಮಾಡಲು ಬಯಸುವ ಜನರು PRS ಕೌಂಟರ್‌ಗೆ ಭೇಟಿ ನೀಡಬಹುದು ಅಥವಾ ಮೇಕ್ ಮೈ ಟ್ರಿಪ್, ಅಮೆಜಾನ್ ಮುಂತಾದ ವೆಬ್ ಸೇವಾ ಏಜೆಂಟ್‌ಗಳನ್ನು ಸಂಪರ್ಕಿಸಬಹುದು ಎಂದೂ ಐಆರ್‌ಸಿಟಿಸಿ ಸಲಹೆ ನೀಡಿದೆ.
ಅನೇಕ ಬಳಕೆದಾರರು ತಮ್ಮ ಹಣವನ್ನು ಕಡಿತಗೊಳಿಸಲಾಗಿದೆ. ಆದರೆ ಟಿಕೆಟ್ ಬುಕ್ ಆಗಿಲ್ಲ ಎಂದು ಹೇಳಿಕೊಂಡು ಐಆರ್‌ಸಿಟಿಸಿಗೆ ದೂರು ನೀಡಲು ಪ್ರಾರಂಭಿಸಿದರು ಮತ್ತು ಅವರು ಅದನ್ನು ಯಾವಾಗ ವಾಪಸ್ ನೀಡುತ್ತಾರೆ ಎಂದು ತಿಳಿಯಲು ಪ್ರಯತ್ನಿಸಿದರು. ಅಲ್ಲದೆ, ಪಾಲುದಾರ ಸೇವೆಗಳ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದೂ ಅನೇಕರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: IRCTCಯನ್ನೂ ಅದಾನಿ ಸ್ವಾಧೀನಪಡಿಸಿಕೊಳ್ತಾರೆ ಎಂದ ಕಾಂಗ್ರೆಸ್: ರೈಲ್ವೆ ಬುಕಿಂಗ್ ಪ್ಲಾಟ್‌ಫಾರ್ಮ್ ತಿರುಗೇಟು
ಸ್ಟೇಷನ್‌ಗಳು, ರೈಲುಗಳು ಮತ್ತು ಇತರ ಸ್ಥಳಗಳಲ್ಲಿ ಅಡುಗೆ ಮತ್ತು ಆತಿಥ್ಯ ಸೇವೆಗಳನ್ನು ಅಪ್‌ಗ್ರೇಡ್ ಮಾಡಲು, ವೃತ್ತಿಪರಗೊಳಿಸಲು ಮತ್ತು ನಿರ್ವಹಿಸಲು ಹಾಗೂ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು PSU ಅನ್ನು ಭಾರತೀಯ ರೈಲ್ವೆಯ ವಿಸ್ತೃತ ಅಂಗವಾಗಿ ಸಂಯೋಜಿಸಲಾಗಿದೆ ಎಂದು ಐಆರ್‌ಸಿಟಿಸಿ ವೆಬ್‌ಸೈಟ್ ಮಾಹಿತಿ ನೀಡಿದೆ. IRCTC ಅನ್ನು 1999 ರಲ್ಲಿ ರೈಲ್ವೆ ಸಚಿವಾಲಯ ಸ್ಥಾಪಿಸಿದೆ.
ಇನ್ನು, ಐಆರ್‌ಸಿಟಿಸಿ ಪಿಎಸ್‌ಯು ನವ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಮತ್ತು ಸಿಕಂದರಾಬಾದ್‌ನಲ್ಲಿ ಐದು ವಲಯ ಕಚೇರಿಗಳನ್ನು ಹೊಂದಿದೆ. ಅಲ್ಲದೆ, ಲಕ್ನೋ, ಚಂಡೀಗಢ, ಜೈಪುರ, ಭೋಪಾಲ್, ಅಹಮದಾಬಾದ್, ಗುವಾಹಟಿ, ಭುವನೇಶ್ವರ, ಪಾಟ್ನಾ, ಎರ್ನಾಕುಲಂ ಮತ್ತು ಬೆಂಗಳೂರಿನಲ್ಲಿ 10 ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಐಆರ್‌ಸಿಟಿಸಿ ತನ್ನ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಪ್ರಯಾಣಿಕರಿಗೆ ಬಜೆಟ್ ಹೋಟೆಲ್‌ಗಳು, ವಿಶೇಷ ಪ್ರವಾಸ ಪ್ಯಾಕೇಜ್‌ಗಳು ಮತ್ತು ಮಾಹಿತಿಯನ್ನು ಸಹ ನೀಡುತ್ತದೆ.
ಇದನ್ನೂ ಓದಿ: ರೈಲ್ವೆ ಪ್ರಯಾಣಿಕರಿಗೆ ಕೇವಲ 35 ಪೈಸೆಗೆ ಸಿಗುತ್ತೆ 10 ಲಕ್ಷ ರೂ. ವಿಮೆ, ಖರೀದಿ ಹೇಗೆ? ಇಲ್ಲಿದೆ ಮಾಹಿತಿ