ಸಾವನ್ ಮಾಸದಲ್ಲಿ ಹಲಾಲ್ ಚಹಾ ಕೊಡ್ತೀರಾ: ರೈಲ್ವೆ ಸಿಬ್ಬಂದಿ ಮೇಲೆ ಪ್ರಯಾಣಿಕರ ಆಕ್ರೋಶ! ಏನಿದು ‘ಹಲಾಲ್ ಟೀ’’ ವಿವಾದ?
ಸಾವನ್ ಮಾಸ ನಡೀತಿದೆ. ನೀವು ನಮಗೆ ಹಲಾಲ್ ಪ್ರಮಾಣೀಕೃತ ಚಹಾವನ್ನು ನೀಡುತ್ತಿದ್ದೀರಾ ಎಂದು ಪ್ರಯಾಣಿಕರು ರೈಲ್ವೆ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಜುಲೈ 23, 2023): ಹಲಾಲ್ ಪ್ರಮಾಣೀಕೃತ ಚಹಾವನ್ನು ನೀಡಿದ ನಂತರ ಭಾರತೀಯ ರೈಲ್ವೇಯ ಅಧಿಕಾರಿಯೊಬ್ಬರು ಮತ್ತು ಕೋಪಗೊಂಡ ಪ್ರಯಾಣಿಕರ ನಡುವಿನ ಬಿಸಿಯಾದ ಮಾತಿನ ವಿಡಿಯೋ ವೈರಲ್ ಆಗಿದೆ. ಹಲಾಲ್ ಪ್ರಮಾಣೀಕೃತ ಚಹಾ ಅಂದ್ರೇನು ಮತ್ತು ಸಾವನ್ (ಉತ್ತರ ಭಾರತದ ಶ್ರಾವಣ) ಮಾಸದಲ್ಲಿ ಅದನ್ನು ಏಕೆ ನೀಡಲಾಗುತ್ತಿದೆ ಎಂದು ವಿಡಿಯೋದಲ್ಲಿರುವ ಪ್ರಯಾಣಿಕರು ರೈಲ್ವೆ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ವಿಡಿಯೋದಲ್ಲಿ ನೋಡುವಂತೆ ಸಿಬ್ಬಂದಿ, ಕೋಪಗೊಂಡ ಪ್ರಯಾಣಿಕರಿಗೆ ಚಹಾ ಯಾವುದೇ ರೀತಿಯಲ್ಲಾದರೂ ಸಸ್ಯಾಹಾರಿಯೇ ಎಂದು ವಿವರಿಸಿದ್ದಾರೆ.
‘’ಸಾವನ್ ಮಾಸ ನಡೀತಿದೆ. ಮತ್ತು ನೀವು ನಮಗೆ ಹಲಾಲ್ ಪ್ರಮಾಣೀಕೃತ ಚಹಾವನ್ನು ನೀಡುತ್ತಿದ್ದೀರಾ?" ಎಂದು ಪ್ರಯಾಣಿಕರು ರೈಲ್ವೇ ಅಧಿಕಾರಿಯನ್ನು ಕೇಳಿದ್ದಾರೆ. ಸ್ಯಾಚೆಟ್ ಅನ್ನು ಪರೀಕ್ಷಿಸಿದ ಅಧಿಕಾರಿ, "ಅದು ಏನು?" ಎಂದು ಕೇಳಿದರು. "ನಿಮಗೆ ಗೊತ್ತಾ, ಹಲಾಲ್-ಪ್ರಮಾಣೀಕೃತ ಏನು ಎಂದು ನೀವು ವಿವರಿಸುತ್ತೀರ. ನಾವು ಅದನ್ನು ತಿಳಿದಿರಬೇಕು. ನಮಗೆ ಐಎಸ್ಐ ಪ್ರಮಾಣಪತ್ರ ತಿಳಿದಿದೆ, ಹಲಾಲ್ ಪ್ರಮಾಣಪತ್ರ ಎಂದರೇನು ಎಂದು ವಿವರಿಸಿ" ಎಂದು ಪ್ರಯಾಣಿಕರು ಕೇಳಿದ್ದಾರೆ.
ಇದನ್ನು ಓದಿ: Manipur: ಪೊಲೀಸರಿಂದ ಬಿಡಿಸಿ ಎಳೆದೊಯ್ದು ನಗ್ನ ಪರೇಡ್ ಮಾಡಿ ರೇಪ್; ಈ ವಿಕೃತ ಘಟನೆಗೆ ಇಲ್ಲಿದೆ ಅಸಲಿ ಕಾರಣ..
"ಇದು ಮಸಾಲಾ ಟೀ ಪ್ರಿಮಿಕ್ಸ್. ನಾನು ವಿವರಿಸುತ್ತೇನೆ ಕೇಳಿ. ಇದು 100% ಸಸ್ಯಾಹಾರಿ" ಎಂದು ರೈಲ್ವೆ ಸಿಬ್ಬಂದಿ ಹೇಳಿದರು. "ಆದರೆ ಹಲಾಲ್ ಸರ್ಟಿಫೈಡ್ ಅಂದರೆ ಏನು? ಈ ಪ್ರಯಾಣದ ನಂತರ ನಾನು ಪೂಜೆ ಮಾಡಬೇಕಾಗಿದೆ" ಎಂದು ಪ್ರಯಾಣಿಕ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರೈಲ್ವೆ ಸಿಬ್ಬಂದಿ, ‘’ನೀವು ವಿಡಿಯೋ ಮಾಡುತ್ತಿದ್ದೀರಾ? ಇದು 100% ಸಸ್ಯಾಹಾರಿ. ಟೀ ಸಸ್ಯಾಹಾರಿಯೇ ಆಗಿರುತ್ತದೆ, ಸರ್’’ ಎಂದು ಹೇಳಿದ್ದಾರೆ.
ಬಳಿಕ, "ನನಗೆ ಯಾವುದೇ ಧಾರ್ಮಿಕ ಪ್ರಮಾಣೀಕರಣ ಬೇಡ. ದಯವಿಟ್ಟು ಈ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಸ್ವಸ್ತಿಕ್ ಪ್ರಮಾಣಪತ್ರವನ್ನು ಹಾಕಿ" ಎಂದೂ ಪ್ರಯಾಣಿಕ ಹೇಳಿದ್ದಾರೆ. "ಸರಿ, ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ" ಎಂದು ಸಿಬ್ಬಂದಿ ಹೇಳಿದರು.
ಇದನ್ನೂ ಓದಿ: ಮಣಿಪುರ ಸ್ತ್ರೀಯರ ನಗ್ನ ಪರೇಡ್: ದೇಶಾದ್ಯಂತ ದಿಗ್ಭ್ರಮೆ, ಆಕ್ರೋಶ;ಮಣಿಪುರದಲ್ಲಿ ಭುಗಿಲೆದ್ದ ಪ್ರತಿಭಟನೆ
ಇದೇ ರೀತಿ, ಟೀ ಪ್ರಿಮಿಕ್ಸ್‌ಗೆ ಹಲಾಲ್ ಪ್ರಮಾಣೀಕರಣ ಏಕೆ ಬೇಕು ಎಂದು ಹಲವಾರು ಬಳಕೆದಾರರು ಪ್ರಶ್ನೆಗಳನ್ನು ಎತ್ತುವ ಮೂಲಕ ವಿಡಿಯೋ ವೈರಲ್ ಆಗಿದೆ. ಕೆಲವು ಬಳಕೆದಾರರು ತಮ್ಮ ಶಾಂತತೆಯನ್ನು ಕಳೆದುಕೊಳ್ಳದೆ ಚಹಾ ಸಸ್ಯಾಹಾರಿ ಎಂದು ಪ್ರಯಾಣಿಕರಿಗೆ ವಿವರಿಸಿದ ರೈಲ್ವೆ ಅಧಿಕಾರಿಯ ತಾಳ್ಮೆಯನ್ನು ಶ್ಲಾಘಿಸಿದರು. 'ಸ್ವಸ್ತಿಕ್-ಪ್ರಮಾಣೀಕೃತ' ಚಹಾಕ್ಕಾಗಿ ಆ ಪ್ರಯಾಣಿಕರನ್ನು ಕೆಲವರು ಟೀಕಿಸಿದ್ದಾರೆ.
ಇನ್ನು, ಈ ವಿಡಿಯೋಗೆ ಐಆರ್‌ಸಿಟಿಸಿ ಸಹ ರೀಟ್ವೀಟ್ ಮಾಡಿದ್ದು, ವಿವಾದದ ಕೇಂದ್ರದಲ್ಲಿರುವ ಪ್ರೀಮಿಕ್ಸ್ ಕಡ್ಡಾಯ FSSAI ಪ್ರಮಾಣೀಕರಣವನ್ನು ಹೊಂದಿದೆ ಎಂದು IRCTC ಹೇಳಿಕೆ ನೀಡಿದೆ. ಇದು ಹಸಿರು ಚುಕ್ಕೆಯೊಂದಿಗೆ 100% ಸಸ್ಯಾಹಾರಿ ಉತ್ಪನ್ನವಾಗಿದೆ. "ಉತ್ಪನ್ನವನ್ನು ಇತರ ದೇಶಗಳಿಗೆ ರಫ್ತು ಮಾಡಲಾಗುತ್ತದೆ, ಅಂತಹ ಉತ್ಪನ್ನಗಳಿಗೆ "ಹಲಾಲ್ ಪ್ರಮಾಣೀಕರಣ" ಕಡ್ಡಾಯವಾಗಿದೆ," ಎಂದು IRCTC ವೈರಲ್ ವಿಡಿಯೋಗೆ ಪ್ರತ್ಯುತ್ತರವಾಗಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ರಾಜಸ್ಥಾನದ ಕೋಟಾದ ರಸ್ತೆಗಳಲ್ಲಿ ಬೃಹತ್ ಮೊಸಳೆಗಳ ತಿರುಗಾಟ: ವಿಡಿಯೋ ವೈರಲ್
ವಿವಾದದಲ್ಲಿರೋ ಈ ಚಹಾ ಪ್ರೀಮಿಕ್ಸ್ ಕಂಪನಿ ಚೈಜಪ್ ಕೂಡ ಹಲಾಲ್ ಪ್ರಮಾಣಪತ್ರವು ಉತ್ಪನ್ನವನ್ನು ವಿಶ್ವಾದ್ಯಂತ ರಫ್ತು ಮಾಡುವುದರಿಂದ ಎಂದು ಸ್ಪಷ್ಟಪಡಿಸಿದೆ. "ನಮ್ಮ ಎಲ್ಲಾ ಉತ್ಪನ್ನಗಳ ಲ್ಯಾಬ್ ವರದಿಗಳು ಲಭ್ಯವಿವೆ ಮತ್ತು ನಮ್ಮ ಉತ್ಪನ್ನಗಳು 100% ಸಸ್ಯಾಹಾರಿಗಳಾಗಿವೆ. ಎಲ್ಲಾ ಪದಾರ್ಥಗಳು ನೈಸರ್ಗಿಕವಾಗಿವೆ. ನಮ್ಮ ಚಹಾ ಹಾಗೂ ಕಾಫಿ ಪ್ರೀಮಿಕ್ಸ್‌ಗಳನ್ನು ತಯಾರಿಸಲು ನಾವು ಹಾಲಿನ ಪುಡಿ ಮತ್ತು 100% ಸಸ್ಯ ಆಧಾರಿತ ಪದಾರ್ಥಗಳನ್ನು ಬಳಸುತ್ತೇವೆ" ಎಂದು ಚೈಜಪ್‌ನ ಸಿಇಒ ಗುಂಜನ್ ಪೊದ್ದಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರೈಲ್ವೇ ಸಚಿವಾಲಯವು ಸಹ ರೈಲಿನಲ್ಲಿ ನೀಡಲಾಗುವ ಚಹಾವು ಸಂಪೂರ್ಣವಾಗಿ ಸಸ್ಯಾಹಾರಿ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದೆ ಎಂದು ಪ್ರಯಾಣಿಕರಿಗೆ ಭರವಸೆ ನೀಡಿದೆ.
ಇದನ್ನೂ ಓದಿ: ಮಹಿಳೆಯರ ಒಳಗೆ ಸೇರಿದ ‘ಗುಂಡು’; ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ವಿಡಿಯೋ ವೈರಲ್