ಟೆಕ್ ದೈತ್ಯ ಆಪಲ್, 'ಆಪಲ್ ಪೇ' ಸೇವೆಯನ್ನು 2026ರ ವೇಳೆಗೆ ಭಾರತದಲ್ಲಿ ಆರಂಭಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಪ್ರಮುಖ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಕಾರ್ಡ್ ಪಾವತಿಗಳ ಜೊತೆಗೆ ಯುಪಿಐ ಬೆಂಬಲವನ್ನೂ ನೀಡಲಿದೆ. 

ಬೆಂಗಳೂರು(ಫೆ.27): ಭಾರತದ ಅತ್ಯಂತ ಜನನಿಬಿಡ ಡಿಜಿಟಲ್ ಪಾವತಿ ಮಾರುಕಟ್ಟೆಗೆ ಪ್ರವೇಶಿಸಲು ಟೆಕ್ ದೈತ್ಯ ಆಪಲ್ (Apple) ಗಂಭೀರ ಸಿದ್ಧತೆ ನಡೆಸುತ್ತಿದೆ. ವರದಿಗಳ ಪ್ರಕಾರ, 2026ರ ಮಧ್ಯಭಾಗದ ವೇಳೆಗೆ 'ಆಪಲ್ ಪೇ' (Apple Pay) ಭಾರತದಲ್ಲಿ ಅಧಿಕೃತವಾಗಿ ಚಾಲನೆಗೆ ಬರುವ ಸಾಧ್ಯತೆಯಿದೆ. ಆಪಲ್ ಪೇ ಸೇವೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕಂಪನಿಯು ಭಾರತದ ಪ್ರಮುಖ ಬ್ಯಾಂಕ್‌ಗಳಾದ ICICI ಬ್ಯಾಂಕ್, HDFC ಬ್ಯಾಂಕ್ ಮತ್ತು ಆಕ್ಸಿಸ್ (Axis) ಬ್ಯಾಂಕ್ ಜೊತೆಗೆ ಚರ್ಚೆ ನಡೆಸುತ್ತಿದೆ. ಇದರೊಂದಿಗೆ ಜಾಗತಿಕ ಪಾವತಿ ಜಾಲಗಳಾದ ವೀಸಾ (Visa) ಮತ್ತು ಮಾಸ್ಟರ್ ಕಾರ್ಡ್ (Mastercard) ಜೊತೆಗೂ ಮಾತುಕತೆಗಳು ನಡೆಯುತ್ತಿವೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಯುಪಿಐ (UPI) ಬೆಂಬಲವೂ ಇರಲಿದೆ!

ಭಾರತದಲ್ಲಿ ಇಂದು ಯುಪಿಐ (UPI) ವ್ಯವಸ್ಥೆಯು ಡಿಜಿಟಲ್ ಪಾವತಿಯ ಬೆನ್ನೆಲುಬಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಆಪಲ್ ಪೇ ಕೇವಲ ಕಾರ್ಡ್ ಪಾವತಿಗಳಿಗಷ್ಟೇ ಸೀಮಿತವಾಗದೆ, UPI ಪಾವತಿಗಳನ್ನೂ ಬೆಂಬಲಿಸಲಿದೆ. ಇದರಿಂದ ಐಫೋನ್ ಬಳಕೆದಾರರು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಮತ್ತು ಬಿಲ್ ಪಾವತಿಗಳನ್ನು ಮಾಡಲು ಸಾಧ್ಯವಾಗಲಿದೆ.

ಆಪಲ್ ಪೇ ವಿಶೇಷತೆಗಳೇನು?

ಬಯೋಮೆಟ್ರಿಕ್ ಸುರಕ್ಷತೆ: ಒಟಿಪಿ (OTP) ಗಳ ಅವಶ್ಯಕತೆ ಇಲ್ಲದೆ Face ID ಅಥವಾ Touch ID ಮೂಲಕ ಕ್ಷಣಾರ್ಧದಲ್ಲಿ ಪಾವತಿಗಳನ್ನು ಅನುಮೋದಿಸಬಹುದು. ಆಪಲ್ ವಾಚ್, ಐಪ್ಯಾಡ್ ಮತ್ತು ಮ್ಯಾಕ್ ಸಾಧನಗಳ ಮೂಲಕವೂ ಸುಲಭವಾಗಿ ಹಣ ಪಾವತಿಸುವ ವ್ಯವಸ್ಥೆ ಮಾಡಲಿದೆ. ಆಪಲ್ ತನ್ನ ಭದ್ರತೆ ಮತ್ತು ಡೇಟಾ ಗೌಪ್ಯತೆಗೆ ಹೆಸರಾಗಿದ್ದು, ಇದು ಬಳಕೆದಾರರಿಗೆ ಹೆಚ್ಚಿನ ವಿಶ್ವಾಸ ನೀಡಲಿದೆ.

ಭಾರತದ ಮಾರುಕಟ್ಟೆಯಲ್ಲಿ ಸವಾಲುಗಳು

ಭಾರತದಲ್ಲಿ ಈಗಾಗಲೇ Google Pay, PhonePe, Amazon Pay ಮತ್ತು Paytm ನಂತಹ ಅಪ್ಲಿಕೇಶನ್‌ಗಳು ಭದ್ರವಾಗಿ ನೆಲೆಯೂರಿವೆ. ಇವುಗಳ ನಡುವೆ ಆಪಲ್ ಪೇ ತನ್ನ ಸ್ಥಾನ ಕಂಡುಕೊಳ್ಳಬೇಕಿದೆ. ಭಾರತದಲ್ಲಿ ಆಪಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆ ಪಾಲು ಶೇ. 10 ರಷ್ಟಿದ್ದರೂ, ಕಂಪನಿಯು ದೇಶದಾದ್ಯಂತ ತನ್ನ ರೀಟೇಲ್ ಸ್ಟೋರ್‌ಗಳನ್ನು ಹೆಚ್ಚಿಸುತ್ತಿದೆ ಮತ್ತು ಸ್ಥಳೀಯ ಉತ್ಪಾದನೆಗೆ ಒತ್ತು ನೀಡುತ್ತಿದೆ.

ಭಾರತವೇ ಆಪಲ್‌ನ ಮುಂದಿನ ಗುರಿ

ಆಪಲ್ ಸಿಇಒ ಟಿಮ್ ಕುಕ್ ಅವರು ಭಾರತವನ್ನು ಕಂಪನಿಯ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ ಎಂದು ಹಲವು ಬಾರಿ ಬಣ್ಣಿಸಿದ್ದಾರೆ. ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಆಪಲ್ ಬಳಸಿಕೊಳ್ಳುತ್ತಿದೆ. ಈಗ 'ಆಪಲ್ ಪೇ' ತರುವ ಮೂಲಕ ಭಾರತೀಯ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುವುದು ಕಂಪನಿಯ ತಂತ್ರವಾಗಿದೆ.