Asianet Suvarna News Asianet Suvarna News

ಅಂದು ಮೋದಿ ಹೇಳಿದ್ರು ಸೊಂಟ ಮುರಿಯುತ್ತಿದೆ ತೈಲ ಬೆಲೆ, ಇಂದು ಜನ ಹೇಳ್ತಿದ್ದಾರೆ..!

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಜನಸಾಮಾನ್ಯರ ಜೇಬಿಗೆ ಹೊರೆಯಾಗುತ್ತಿದೆ. ಒಂದು ಕಡೆ ಕೊರೊನಾದಿಂದ ಆರ್ಥಿಕ ಸಂಕಷ್ಟ, ಇನ್ನೊಂದು ಕಡೆ ಬೆಲೆ ಏರಿಕೆ. ಬದುಕೋದು ಹೇಗೆ ಸ್ವಾಮಿ.? ಎಂದು ಜನ ಕೇಳುತ್ತಿದ್ದಾರೆ. 

Public Anger over fuel Price Hike hls
Author
Bengaluru, First Published Feb 26, 2021, 12:41 PM IST

ನವದೆಹಲಿ (ಫೆ. 26): 2013 ರಲ್ಲಿ ನರೇಂದ್ರ ಮೋದಿ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾದ ಮೇಲೆ ದಿಲ್ಲಿಯ ರೋಹಿಣಿಯಲ್ಲಿರುವ ಜಪಾನೀಸ್‌ ಪಾರ್ಕ್ನಲ್ಲಿ ಒಂದು ಗಂಟೆ ಭಾಷಣ ಮಾಡಿದ್ದರು. ಆಗ ಅವರು ಹೇಳಿದ್ದು - ಭಯ್ಯಾ ಮೆಹೆಂಗಾಯಿ ಕಮರ್‌ ತೋಡ್‌ ರಹಿ ಹೈ. ಅಂದರೆ ಬೆಲೆ ಏರಿಕೆ ಸೊಂಟ ಮುರಿಯುತ್ತಿದೆ ಎಂದು.

ವಿಪರ್ಯಾಸವೆಂದರೆ ಆ ಭಾಷಣದ 8 ವರ್ಷಗಳ ನಂತರ ಬೆಲೆ ಏರಿಕೆ ಎಲ್ಲ ರೆಕಾರ್ಡ್‌ ಮುರಿದು ಮುಂದೆ ನುಗ್ಗುತ್ತಿದೆ. ಜಾಗತೀಕರಣದ ಯುಗದಲ್ಲಿ ಅಭಿವೃದ್ಧಿ ದರ ಮತ್ತು ಬೆಲೆ ಏರಿಕೆ ಒಂದಕ್ಕೊಂದು ಪೂರಕ ಹೌದು. ಜನರ ಬಳಿ ಹಣ ಬಂದು ಖರ್ಚು ಜಾಸ್ತಿಯಾಗಿ ಆದಾಯ ದ್ವಿಗುಣಗೊಂಡು ವಸ್ತುಗಳ ಬೆಲೆ ಹಂತ ಹಂತವಾಗಿ ಏರುವುದು ಒಂದು. ಆದರೆ ಈಗ ಆಗುತ್ತಿರುವುದು ಸರ್ಕಾರಿ ಪ್ರಾಯೋಜಿತ ಹಣದುಬ್ಬರ ಎಂದು ವಿರೋಧಿಗಳು ಆರೋಪಿಸುತ್ತಿದ್ದಾರೆ. ಜನರ ಬಳಿ ಖರ್ಚು ಮಾಡಲು ಹಣವಿಲ್ಲ. ಉಪಭೋಗ ಕಡಿಮೆಯಾಗಿದೆ. ಆದರೆ ಬೆಲೆ ನಿರಂತರ ಜಾಸ್ತಿ ಆಗುತ್ತಿದೆ.

ಡೀಸೆಲ್ ದರ ಏರಿಕೆ ಬಳಿಕ 50000 ಸಣ್ಣ ಟ್ರಕ್‌ಗಳು ಉದ್ಯಮದಿಂದ ಹೊರಕ್ಕೆ!

ಪೆಟ್ರೋಲ್, ಡಿಸೇಲ್  ಬೆಲೆ 100 ರು. ತಲುಪಿದೆ. ಸ್ಟೀಲ್, ತಾಮ್ರದ ಬೆಲೆಗಳು 35 ಪ್ರತಿಶತ ಏರಿಕೆ ಆಗಿವೆ. ಖಾದ್ಯ ಪದಾರ್ಥದಿಂದ ಹಿಡಿದು ಮೊಬೈಲ್ ಬೆಲೆಗಳವರೆಗೆ ಎಲ್ಲವೂ ಏರುತ್ತಿವೆ. ಆಶ್ಚರ್ಯ ಎಂದರೆ ಇದಕ್ಕೆ ಕಾರಣ ವಸ್ತುಗಳ ಕೊರತೆ, ಪ್ರಾಕೃತಿಕ ವಿಕೋಪ ಯಾವುದೂ ಅಲ್ಲ, ಬದಲಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ನೀತಿ ಅಷ್ಟೆ. ಕಷ್ಟಕಾಲದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರಗಳು ಇನ್ನಷ್ಟು ಕಿತ್ತುಕೊಳ್ಳುತ್ತಿವೆ ಎಂದು ಸಾರ್ವತ್ರಿಕವಾಗಿ ಕೂಗೆದ್ದಿದೆ.

ಸರ್ಕಾರಿ ‘ತೆರಿಗೆ’ ಆತಂಕ

8 ವರ್ಷಗಳ ಕೆಳಗೆ ಪೆಟ್ರೋಲ್, ಡೀಸೆಲ್ ಬೆಲೆ 70 ರು. ದಾಟಿದಾಗ ಭಾರತ್‌ ಬಂದ್‌ಗೆ ಕರೆ ನೀಡಿದ್ದ ಬಿಜೆಪಿ ಇವತ್ತು ಉದ್ಯೋಗ ಬೇಕೆಂದರೆ, ಅಭಿವೃದ್ಧಿ ಬೇಕೆಂದರೆ ಬೆಲೆ ಏರಿಕೆ ಅನಿವಾರ್ಯ ಎಂದು ಹೇಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ನಮ್ಮ ತೈಲ ಕಂಪನಿಗಳು ತೈಲ ಖರೀದಿಸಿ, ಸಂಸ್ಕರಿಸಿದ ನಂತರ ಪ್ರತಿ ಲೀಟರ್‌ನ ಬೆಲೆ ಅಂದಾಜು ಕೇವಲ 35ರಿಂದ 40 ರು. ಮಾತ್ರ. ಆದರೆ ಇದಕ್ಕೆ ಬೀಳುವ ಕೇಂದ್ರದ ತೆರಿಗೆ ಹೆಚ್ಚು ಕಡಿಮೆ 32 ರುಪಾಯಿ, ಜೊತೆಗೆ ರಾಜ್ಯಗಳು ವಿಧಿಸುವ ವ್ಯಾಟ್‌ ಅಥವಾ ಮಾರಾಟ ತೆರಿಗೆ ಬರೋಬ್ಬರಿ 23 ರುಪಾಯಿ. ಅಂದರೆ ಪ್ರತಿ ಲೀಟರ್‌ ತೈಲಕ್ಕೆ ಅಂದಾಜು 54ರಿಂದ 55 ರು.ಗಳನ್ನು ಸರ್ಕಾರಕ್ಕೆ ತೆರಿಗೆಯ ರೂಪದಲ್ಲಿ ಕೊಡಬೇಕು. ಇಲ್ಲಿ ಬರೀ ತೈಲ ಬೆಲೆ ಮಾತ್ರ ಏರಿಕೆ ಆಗೋದಿಲ್ಲ. ಸಾಗಾಣಿಕೆ ದರ ಏರಿಕೆ ಆಗಿ ಸಿಮೆಂಟ್‌ನಿಂದ ಹಿಡಿದು ಸಮೋಸಾವರೆಗೆ ಎಲ್ಲವೂ ಏರುತ್ತಿದೆ.

ರಾಜ್ಯಗಳ ಅನಿವಾರ್ಯತೆ ಏನು?

5 ವರ್ಷದ ಹಿಂದೆ ಕೇಂದ್ರ ಸರ್ಕಾರ ಕ್ರಾಂತಿಕಾರಿ ಎಂದು ಕರೆಯುತ್ತಿದ್ದ ಜಿಎಸ್‌ಟಿ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರದ ತೆರಿಗೆ ಹಾಕುವ ಅಧಿಕಾರ ಸಾಂವಿಧಾನಿಕವಾಗಿಯೇ ಮೊಟಕುಗೊಂಡಿತ್ತು. ಹೀಗಾಗಿ ರಾಜ್ಯ ಸರ್ಕಾರದ ಬಳಿ ಉಳಿದುಕೊಂಡ ಆಯ್ಕೆ ಒಂದೋ ಅಬಕಾರಿಗೆ ತೆರಿಗೆ ಹಾಕಬೇಕು, ಇಲ್ಲವೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಬೇಕು. ಕೊರೋನಾ ಅಪ್ಪಳಿಸಿದ ನಂತರ ಒಂದು ಕಡೆ ಕೇಂದ್ರ ಸರ್ಕಾರ ವಿತ್ತೀಯ ಕೊರತೆ ಸರಿತೂಗಿಸಲು ರಾಜ್ಯ ಸರ್ಕಾರದ ಮೇಲೆ ಜಾಸ್ತಿ ಸಾಲ ತೆಗೆದುಕೊಳ್ಳದಂತೆ ಒತ್ತಡ ಹಾಕುತ್ತಿದ್ದರೆ, ಇನ್ನೊಂದು ಕಡೆ ಕೇಂದ್ರದಿಂದ ಕೊಡುವ ತೆರಿಗೆ ಪಾಲು ಕೂಡ ಪೂರ್ತಿ ಕೊಡುತ್ತಿಲ್ಲ.

ಕೇಂದ್ರ ಸರ್ಕಾರಕ್ಕೆ ಆರ್‌ಬಿಐನಿಂದ ನೇರ ಸಾಲ ತೆಗೆದುಕೊಳ್ಳುವ ಅಧಿಕಾರ ಇದೆ, ಆದರೆ ಅದು ರಾಜ್ಯ ಸರ್ಕಾರಕ್ಕೆ ಇಲ್ಲ. ಹೀಗಾಗಿ ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮೇಲೆ ಮನಬಂದಂತೆ ತೆರಿಗೆ ಹೇರುತ್ತಿವೆ. ಕೇಂದ್ರ ಸರ್ಕಾರ ತನ್ನ ತೆರಿಗೆ ಕಡಿಮೆ ಮಾಡುತ್ತಿಲ್ಲ. ಇದರಲ್ಲಿ ಅಪ್ಪಚ್ಚಿ ಆಗುತ್ತಿರುವುದು ಮಾತ್ರ ಬಡ, ಮಧ್ಯಮ ವರ್ಗದ ಗ್ರಾಹಕ. ಕೊಲ್ಲಿ ರಾಷ್ಟ್ರಗಳು ತೈಲ ಬೆಲೆಯನ್ನು ಬ್ಯಾರೆಲ್ ಒಂದಕ್ಕೆ 90 ಡಾಲರ್‌ನಿಂದ 40ಕ್ಕೆ ಇಳಿಸಿದರೂ ಗ್ರಾಹಕನಿಗೆ ಯಾವುದೇ ಲಾಭ ಇಲ್ಲ. ಆದರೆ 40ರಿಂದ 60ಕ್ಕೆ ಏರಿಸಿದ ನೆವ ಸಾಕು ಕೂಡಲೇ ಪೆಟ್ರೋಲ್ ಡೀಸೆಲ್ ಬೆಲೆ 100ಕ್ಕೆ ಬಂದು ತಲುಪಿದೆ.

ರಾಜಧರ್ಮ ಪಾಲಿಸಿ, ಇಂಧನ ಬೆಲೆ ಇಳಿಸಿ: ಕೇಂದ್ರಕ್ಕೆ ಸೋನಿಯಾ ಪತ್ರ!

ಪರ್ಯಾಯ ಇಂಧನ ಎಲ್ಲಿದೆ?

ಎಷ್ಟೋ ಸಾವಿರ ವರ್ಷಗಳ ಮೊದಲು ಭೂಮಿಯಲ್ಲಿ ಹುದುಗಿಹೋದ ಅರಣ್ಯ ಮತ್ತು ಜೀವ ಜಂತುಗಳಿಂದ ತೈಲ ನಿಕ್ಷೇಪಗಳು ತಯಾರಾಗುತ್ತವೆ. ತೈಲ ತೆಗೆದು ಸಂಸ್ಕರಿಸಿ ಎಂಜಿನ್‌ ಓಡಿಸಬಹುದು ಎಂದು ಸಂಶೋಧಿಸಿದ ನಂತರವೇ ಔದ್ಯೋಗಿಕ ಕ್ರಾಂತಿ ಉಂಟಾಗಿ, ಬಂಡವಾಳಶಾಹಿ ವ್ಯವಸ್ಥೆ ರೂಪುಗೊಂಡು, ಇವತ್ತಿನ ಜಾಗತೀಕರಣ ವ್ಯವಸ್ಥೆ ಚಾಲ್ತಿಗೆ ಬಂದಿದೆ. ಈಗ ಆಧುನಿಕ ರಾಷ್ಟ್ರಗಳು ಪರ್ಯಾಯ ಇಂಧನದತ್ತ ಮುಖಮಾಡುತ್ತಿವೆ. ಆದರೆ ಭಾರತ ಮಾತ್ರ ತೈಲ ಬಳಕೆಯಲ್ಲಿ ಇನ್ನು 5 ವರ್ಷದಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲನೇ ಸ್ಥಾನ ಪಡೆಯಲಿದೆ. ತೈಲ ಬೆಲೆ ನಿಗದೀಕರಣಕ್ಕೆ ಮತ್ತು ಸರ್ಕಾರದ ತೆರಿಗೆ ವಿಧಿಸಲಿಕ್ಕೆ ಹೊಸ ವ್ಯವಸ್ಥೆ ರೂಪಿತವಾಗದೇ ಇದ್ದರೆ ಬೆಲೆ ನಿಯಂತ್ರಣ ಕಷ್ಟ. ದೊಡ್ಡ ದೊಡ್ಡ ಕಂಪನಿಗಳಿಗೆ ತೆರಿಗೆ ವಿನಾಯ್ತಿ, ಶ್ರೀಮಂತರಿಗೆ ತೆರಿಗೆ ಕಡಿತ, ಕಾರ್ಪೊರೇಟ್‌ ಟ್ಯಾಕ್ಸ್‌ ಕಡಿತ ಮಾಡುವ ಸರ್ಕಾರಗಳು ತೈಲಕ್ಕೆ 150 ಪ್ರತಿಶತ ಟ್ಯಾಕ್ಸ್‌ ಹಾಕುವುದು ಅಕ್ಷಮ್ಯವೇ ಬಿಡಿ. ಭಾರತದಲ್ಲಿ ಪರ್ಯಾಯ ಇಂಧನ ಬರೀ ಮಾತಿನಲ್ಲಿ ಉಳಿದಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

Follow Us:
Download App:
  • android
  • ios