ನವದೆಹಲಿ(ಫೆ.24): ಡೀಸೆಲ್‌ ಬೆಲೆ ಲೀ.ಗೆ 100 ರು.ಸಮೀಪಕ್ಕೆ ಬಂದಿರುವುದು ಸರಕು ಸಾಗಣೆ ಉದ್ಯಮಕ್ಕೆ ಭಾರೀ ಶಾಕ್‌ ನೀಡಿದ್ದು, ದೇಶಾದ್ಯಂತ ಕನಿಷ್ಠ 50000 ಸಣ್ಣ ಟ್ರಕ್‌ಗಳು ಉದ್ಯಮದಿಂದಲೇ ಹೊರಬೀಳುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ.

ಈಗಾಗಲೇ ಬೇಡಿಕೆಗಿಂತಲೂ ಹೆಚ್ಚಿನ ಸರಕು ಸಾಗಣೆ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದು, ತೈಲ ದರ ಏರಿಕೆಯಿಂದಾಗಿ ಸಾರಿಗೆ ಸಂಸ್ಥೆಗಳ ಮಾಲೀಕರು ತಮ್ಮ ಬಳಿ ಇರುವ ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲು ಮುಂದಾಗಿವೆ. ಸಾಮಾನ್ಯವಾಗಿ ಸಾರಿಗೆ ಸಂಸ್ಥೆಗಳು ತಮ್ಮ ಜಾಲವನ್ನು ವಿಸ್ತರಿಸುವ ಸಲುವಾಗಿ ಸಣ್ಣ ಟ್ರಕ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳುತ್ತವೆ. ತೈಲ ದರ ಏರಿಕೆಯಿಂದಾಗಿ ಸಣ್ಣ ಟ್ರಕ್‌ಗಳ ಸಾಗಣೆ ವೆಚ್ಚ ಅಧಿಕವಾಗಿದೆ. ಒಟ್ಟು ವೆಚ್ಚದಲ್ಲಿ ಶೇ.50ರಷ್ಟುಹಣ ಇಂಧನಕ್ಕೆ ವೆಚ್ಚವಾಗುತ್ತಿದೆ.

ಹೀಗಾಗಿ ದೊಡ್ಡ ವಾಹನಗಳನ್ನು ಉಳಿಸಿಕೊಂಡು ಸಣ್ಣ ಟ್ರಕ್‌ ಸೇವೆಯನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ ಎಂದು ಬಿಎಲ್‌ಆರ್‌ ಲಾಜಿಸ್ಟಿಕ್‌ನ ನಿರ್ದೇಶಕ ಅಶೋಕ್‌ ಗೋಯಲ್‌ ಹೇಳಿದ್ದಾರೆ. ಇತರೆ ಹಲವು ಒಡ್ಡ ಲಾಜಿಸ್ಟಿಕ್‌ ಸಂಸ್ಥೆಗಳ ಮಾಲೀಕರು ಕೂಡಾ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶಾದ್ಯಂತ 8 ಲಕ್ಷಕ್ಕೂ ಹೆಚ್ಚು ಸರಕು ಸಾಗಣೆ ವಾಹನಗಳು ಚಾಲ್ತಿಯಲ್ಲಿವೆ.