ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ 8 ಸೇವಾ ಶುಲ್ಕಗಳ ಬಗ್ಗೆ ತಿಳಿದಿರಲಿ
ಉಳಿತಾಯ ಎಂದ ತಕ್ಷಣ ಮೊದಲು ನೆನಪಾಗೋದೆ ಅಂಚೆ ಕಚೇರಿ ಉಳಿತಾಯ ಯೋಜನೆಗಳು. ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ರಿಟರ್ನ್ಸ್ ಕೂಡ ಸಿಗುತ್ತದೆ. ಆದರೆ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರೋರು ಈ 8 ಶುಲ್ಕಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ.
Business Desk:ಉಳಿತಾಯದ ವಿಷಯ ಬಂದಾಗ ಭಾರತದ ಮಧ್ಯಮ ವರ್ಗದ ಜನರಿಗೆ ಇಂದಿಗೂ ಅಂಚೆ ಕಚೇರಿ ಅಚ್ಚುಮೆಚ್ಚು. ಉಳಿತಾಯ ಅಥವಾ ಹೂಡಿಕೆ ವಿಚಾರ ಬಂದಾಗ ಸಾಮಾನ್ಯವಾಗಿ ಎಲ್ಲರೂ ಮೊದಲಿಗೆ ಗಮನಿಸೋದು ಸುರಕ್ಷತೆ. ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ರಿಟರ್ನ್ ಸಿಗುವ ಜೊತೆಗೆ ಹಣವೂ ಸುರಕ್ಷಿತವಾಗಿರುತ್ತದೆ. ಇದೇ ಕಾರಣಕ್ಕೆ ಅದೆಷ್ಟೇ ಹೂಡಿಕೆ ಅಥವಾ ಉಳಿತಾಯದ ಯೋಜನೆಗಳು ಬಂದಿದ್ದರೂ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಜನಪ್ರಿಯತೆ ಕಳೆದುಕೊಂಡಿಲ್ಲ. ಇನ್ನು ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಆ ಹಣವನ್ನು ತ್ವರಿತವಾಗಿ ಪೂರ್ಣ ಅಥವಾ ಭಾಗಶಃ ವಿತ್ ಡ್ರಾ ಮಾಡಬಹುದು. ಇನ್ನು ದೊಡ್ಡ ಮೊತ್ತದ ಹೂಡಿಕೆ ಮಾಡಬೇಕಾದ ಅಗತ್ಯವೂ ಇಲ್ಲ. ಖಾತೆಯಲ್ಲಿಡಬೇಕಾದ ಕನಿಷ್ಠ ಬ್ಯಾಲೆನ್ಸ್ ಕೂಡ 100ರೂ. ಅಥವಾ 500 ರೂ. ಆಗಿರುತ್ತದೆ. ಹೀಗಾಗಿ ಗ್ರಾಮೀಣ ಭಾಗದ ಜನರು ಕೂಡ ಸುಲಭವಾಗಿ ಅಂಚೆ ಕಚೇರಿ ಉಳಿತಾಯ ಖಾತೆಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಅಲ್ಲದೆ, ಅನೇಕ ವಿಧದದಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆಗಳು ಸಾಂಪ್ರದಾಯಿಕ ಉಳಿತಾಯ ಯೋಜನೆಗಳನ್ನು ಹೋಲುತ್ತವೆ.
ಅಂಚೆ ಕಚೇರಿ ಉಳಿತಾಯ ಯೋಜನೆಗಳು ಹಿರಿಯ ನಾಗರಿಕರಿಗೆ ಅತ್ಯಂತ ಸೂಕ್ತವಾಗಿವೆ ಕೂಡ. ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಬಯಸದೆ ನಿಯಮಿತ ಆದಾಯ ಗಳಿಸಲು ಬಯಸೋರಿಗೆ ಅಂಚೆ ಕಚೇರಿ ಯೋಜನೆಗಳು ಅತ್ಯಂತ ಸಮರ್ಪಕವಾಗಿವೆ. 2023-24ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಂಚೆ ಕಚೇರಿಯ ಕೆಲವು ಜನಪ್ರಿಯ ಯೋಜನೆಗಳಲ್ಲಿ ಬದಲಾವಣೆ ಮಾಡಿದ್ದಾರೆ. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನು ರೆಪೋ ದರ ಏರಿಕೆ ಬೆನ್ನಲ್ಲೇ 2023ನೇ ಸಾಲಿನ ಜನವರಿ-ಮಾರ್ಚ್ ಅವಧಿಗೆ ಅಂಚೆ ಕಚೇರಿಯ ಕೆಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಈ ಮೂಲಕ ಉಳಿತಾಯ ಹೆಚ್ಚಿಸಲು ನಾಗರಿಕರಿಗೆ ಉತ್ತೇಜನ ನೀಡಿದೆ. ಅಂಚೆ ಇಲಾಖೆ ಟರ್ಮ್ ಡೆಫಾಸಿಟ್, ನ್ಯಾಷನಲ್ ಉಳಿತಾಯ ಪ್ರಮಾಣ ಪತ್ರ (ಎನ್ ಎಸ್ ಸಿ), ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ.
ಗೃಹಸಾಲದಂತೆ ಕ್ರೆಡಿಟ್ ಕಾರ್ಡ್ ಸಾಲದ ವರ್ಗಾವಣೆ ಸಾಧ್ಯನಾ? ಇಲ್ಲಿದೆ ಮಾಹಿತಿ
ಸೇವಾ ಶುಲ್ಕಗಳು
ಅಂಚೆ ಕಚೇರಿ ಖಾತೆಗಳಿಗೆ ಅನೇಕ ಸೇವಾ ಶುಲ್ಕಗಳು ಕೂಡ ಇವೆ. ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರೋರು ಅಥವಾ ತೆರೆಯಲು ಬಯಸೋರು ಈ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಅಂಚೆ ಕಚೇರಿಯ ವಿವಿಧ ಸೇವಾ ಶುಲ್ಕಗಳು ಹೀಗಿವೆ:
1.ಡುಪ್ಲಿಕೇಟ್ ಚೆಕ್ ಬುಕ್ : 50 ರೂ.
2.ಠೇವಣಿ ಸ್ವೀಕೃತಿ ನೀಡಿಕೆ: ಪ್ರತಿ ಸ್ವೀಕೃತಿ ಮೇಲೆ 20 ರೂ.
3. ಖಾತೆ ಸ್ಟೇಟ್ಮೆಂಟ್ ನೀಡಿಕೆ: ಪ್ರತಿ ಸ್ಟೇಟ್ ಮೆಂಟ್ ಮೇಲೆ 20 ರೂ.
4.ನಾಮಿನಿ ರದ್ದತಿ ಅಥವಾ ಬದಲಾವಣೆ: 50ರೂ.
5.ಕಳೆದು ಹೋದ ಅಥವಾ ಪ್ರಮಾಣಪತ್ರ ಡ್ಯಾಮೇಜ್ ಆಗಿದ್ದರೆ ಪ್ರತಿ ನೋಂದಣಿ ಮೇಲೆ 10ರೂ.ನಂತೆ ಒಂದು ಪಾಸ್ ಪುಸ್ತಕ ನೀಡಲಾಗುತ್ತದೆ.
6.ಉಳಿತಾಯ ಖಾತೆಗೆ ಚೆಕ್ ಬುಕ್ ವಿತರಿಸುವಾಗ ಪ್ರತಿ ಹಣಕಾಸು ಸಾಲಿನಲ್ಲಿ 10 ಚೆಕ್ ಲೀಫ್ ಗಳ ತನಕ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ, ಆ ಬಳಿಕ ಪ್ರತಿ ಚೆಕ್ ಲೀಫ್ ಮೇಲೆ 2 ರೂ. ಶುಲ್ಕ ವಿಧಿಸಲಾಗುತ್ತದೆ.
7.ಖಾತೆ ವರ್ಗಾವಣೆ ಹಾಗೂ ಅಕೌಂಟ್ ಪ್ಲೆಜಸ್ ಗೆ (account pledges) 100ರೂ. ವಿಧಿಸಲಾಗುತ್ತದೆ.
8. ಚೆಕ್ ಅಮಾನ್ಯಕ್ಕೆ 100 ರೂ. ಶುಲ್ಕ ವಿಧಿಸಲಾಗುತ್ತದೆ.
ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರೇ ಗಮನಿಸಿ; ಮಾ.17ರಿಂದ ಶುಲ್ಕಗಳಲ್ಲಿ ಬದಲಾವಣೆ
ಅಂಚೆ ಕಚೇರಿ ಉಳಿತಾಯ ಖಾತೆ ತೆರೆಯೋದು ಹೇಗೆ?
* ಅಂಚೆ ಕಚೇರಿಯ ಅಧಿಕೃತ ವೆಬ್ ಸೈಟ್ ಮೂಲಕ ಅಥವಾ ಸಮೀಪದ ಅಂಚೆ ಭೇಟಿ ನೀಡಿ ಉಳಿತಾಯ ಖಾತೆ ತೆರೆಯಬಹುದು.
*ಅರ್ಜಿಯಲ್ಲಿ ಅಗತ್ಯವಾದ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
*ಅಗತ್ಯವಾದ ದಾಖಲೆಗಳು ಹಾಗೂ ಪಾಸ್ ಪೋರ್ಟ್ ಗಾತ್ರದ ಫೋಟೋ ನೀಡಿ.
*ಠೇವಣಿ ಹಣ ಪಾವತಿಸಬೇಕು. ಇದು 20ರೂ.ಗಿಂತ ಕಡಿಮೆ ಇರಬಾರದು.
*ಚೆಕ್ ಬುಕ್ ಇಲ್ಲದೆ ಅಂಚೆ ಕಚೇರಿ ಉಳಿತಾಯ ಖಾತೆ ತೆರೆಯಲು ಕನಿಷ್ಠ 50 ರೂ. ಠೇವಣಿ ಇಡಬೇಕು.