PVC Aadhar Cards : ಉಪಯೋಗಕ್ಕೆ ಬಾರದ ಪ್ರೂಫ್ ಇನ್ನು
ಆಧಾರ್ ಕಾರ್ಡ್ ನಿಮ್ಮ ಬಳಿಯೂ ಇದ್ಯಾ? ಪಕ್ಕದ ಅಂಗಡಿಯಲ್ಲಿ ಪಿವಿಸಿ ಆಧಾರ್ ಕಾರ್ಡ್ ಮಾಡಿಸ್ಕೊಂಡು ಪರ್ಸ್ ನಲ್ಲಿಟ್ಟಿದ್ದೀರಾ? ಉತ್ತರ ಹೌದು ಅಂತಾಗಿದ್ರೆ ಈಗ್ಲೇ ಅದನ್ನು ಎಸೆಯಿರಿ. ಈ ಪಿವಿಸಿ ಆಧಾರ್ ಕಾರ್ಡ್ ಬಗ್ಗೆ UIDAI ಮಹತ್ವದ ಹೇಳಿಕೆ ನೀಡಿದೆ.
ಆಧಾರ್ ಕಾರ್ಡ್ (Aadhaar card )ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರಿ (Government) ಕೆಲಸ ಸೇರಿದಂತೆ ಖಾಸಗಿ ಕೆಲಸಗಳಲ್ಲಿ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಆಧಾರ್ ಕಾರ್ಡ್ ಸುರಕ್ಷಿತವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಪರ್ಸ್ ನಲ್ಲಿ ಆಧಾರ್ ಕ್ಯಾರಿ ಮಾಡಿದಾಗ ಅದು ಹರಿದು ಹೋಗುವ ಅಪಾಯವಿದೆ. ಅದನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಜನರು ಪಿವಿಸಿ ಕಾರ್ಡ್ ಮೊರೆ ಹೋಗ್ತಿದ್ದಾರೆ. ಆದ್ರೆ ಯುಐಡಿಎಐ (UIDAI)ನ ಅಧಿಕೃತ ವೆಬ್ಸೈಟ್ ಬದಲು ಮಾರುಕಟ್ಟೆಯಲ್ಲಿ ಅವರು ಪಿವಿಸಿ ಕಾರ್ಡ್ ಪಡೆಯುತ್ತಿದ್ದಾರೆ. ಈ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮಹತ್ವದ ಸೂಚನೆ ನೀಡಿದೆ. ಮಾರುಕಟ್ಟೆಯಿಂದ ತಯಾರಿಸುತ್ತಿರುವ ಪಿವಿಸಿ ಕಾರ್ಡ್‌ಗಳು ಮಾನ್ಯವಾಗಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India) ಹೇಳಿದೆ.
ಪಾಲಿವಿನೈಲ್ ಕ್ಲೋರೈಡ್ ಕಾರ್ಡ್‌ಗಳನ್ನು ಪಿವಿಸಿ ಕಾರ್ಡ್‌ಗಳು ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯ ಪ್ಲಾಸ್ಟಿಕ್ ಕಾರ್ಡ್ ಆಗಿದೆ. ಅದರ ಮೇಲೆ ಆಧಾರ್ ಕಾರ್ಡ್‌ನ ವಿವರಗಳನ್ನು ಮುದ್ರಿಸಲಾಗುತ್ತದೆ. ಈ ಕಾರ್ಡ್ ಮಾಡಲು 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಪ್ರಕಾರ, ಈ ಕಾರ್ಡ್ ಸುರಕ್ಷಿತ ಕ್ಯೂಆರ್ ಕೋಡ್, ಹೊಲೊಗ್ರಾಮ್, ಮೈಕ್ರೋ ಟೆಕ್ಸ್ಟ್, ವಿತರಣೆಯ ದಿನಾಂಕ ಮತ್ತು ಕಾರ್ಡ್‌ನ ಮುದ್ರಣ ಮತ್ತು ಇತರ ಮಾಹಿತಿಯನ್ನು ಒಳಗೊಂಡಿರುತ್ತದೆ. ನೀವು ಹತ್ತಿರದ ಅಂಗಡಿಯಲ್ಲಿ ಪಿವಿಸಿ ಆಧಾರ್ ಕಾರ್ಡ್ ಪಡೆದಿದ್ದರೆ, ಅದನ್ನು ಶೀಘ್ರವೇ ಬದಲಾಯಿಸಿ. ಯುಐಡಿಎಐ ವೆಬ್ಸೈಟ್ ಮೂಲಕ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಎಂದು ಯುಐಡಿಎಐ ಹೇಳಿದೆ.
ಅಂಗಡಿಯಲ್ಲಿ ಮಾಡಿದ ಪಿವಿಸಿ ಅಮಾನ್ಯವಾಗಿದ್ದೇಕೆ ? :
ಕೆಲವು ದಿನಗಳ ಹಿಂದೆ ಯುಐಡಿಎಐ ಸ್ವತಃ ಆಧಾರ್ ಪಿವಿಸಿ ಕಾರ್ಡ್ ನೀಡಲು ಶುರು ಮಾಡಿದೆ. ಎಟಿಎಂ, ಆಫೀಸ್ ಐಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಗಾತ್ರದಲ್ಲಿದ್ದ ಕಾರಣ ಇದನ್ನು ಸುಲಭವಾಗಿ ಕ್ಯಾರಿ ಮಾಡಬಹುದು. ಇದು ಅನೇಕ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ.ಪಿವಿಸಿ ಆಧಾರ್‌ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ, ನಿಮ್ಮ ಗುರುತನ್ನು ತಕ್ಷಣವೇ ಪರಿಶೀಲಿಸಬಹುದು. ಆದರೆ, ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಯುಐಡಿಎಐನಿಂದ ಪಿವಿಸಿ ಆಧಾರ್ ಕಾರ್ಡ್ ಪಡೆಯುವ ಬದಲು ತಮ್ಮ ಹತ್ತಿರದ ಅಂಗಡಿಗಳಿಂದಲೇ ಇದನ್ನು ಪಡೆಯಲು ಶುರು ಮಾಡಿದ್ದರು. ಆದ್ರೆ ಈ ಆಧಾರ್ ಕಾರ್ಡ್‌ಗಳು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿಲ್ಲ ಮತ್ತು ಅಸುರಕ್ಷಿತವಾಗಿವೆ. ಅದಕ್ಕಾಗಿಯೇ ಯುಐಡಿಎಐ, ಮಾರುಕಟ್ಟೆಯಲ್ಲಿ ತಯಾರಿಸಿದ ಪಿವಿಸಿ ಆಧಾರ್ ಪ್ರತಿಯನ್ನು ಬಳಸದಂತೆ ಸಲಹೆ ನೀಡಿದೆ. ಯುಐಡಿಎಐ ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಯಾವುದೇ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರದ ಕಾರಣ ಮಾರುಕಟ್ಟೆಯಿಂದ ಪಿವಿಸಿ ಆಧಾರ್‌ನ ನಕಲನ್ನು ಬಳಸುವುದನ್ನು ನಾವು ಬೆಂಬಲಿಸುವುದಿಲ್ಲ. ನೀವು 50 ರೂಪಾಯಿ ಪಾವತಿಸುವ ಮೂಲಕ ಆಧಾರ್ ಪಿವಿಸಿ ಕಾರ್ಡ್ ಅನ್ನು ಆರ್ಡರ್ ಮಾಡಬಹುದು. ಯುಐಡಿಎಐ ಅಧಿಕೃತ ವೆಬ್ಸೈಟ್ ಮೂಲಕ ಪಡೆದ ಪಿವಿಸಿ ಕಾರ್ಡ್ ಮಾತ್ರ ಮಾನ್ಯವಾಗುತ್ತದೆ ಎಂದು ಟ್ವೀಟ್ ಮಾಡಿದೆ. uidai.gov.inನಿಂದ ಡೌನ್ಲೋಡ್ ಮಾಡಿಕೊಂಡ ಆಧಾರ್,ಎಂ ಆಧಾರ್ (M-Aadhaar) ನಿಂದ ಪಡೆದ ಆಧಾರ್ ಅಥವಾ ಯುಐಡಿಎಐನಿಂದ ಪಡೆದ ಪಿವಿಸಿ ಕಾರ್ಡ್ ಮಾತ್ರ ಬಳಕೆಗೆ ಯೋಗ್ಯವಾಗಿದೆ.
Aadhaar Card : ಮಕ್ಕಳ ಆಧಾರ್ ಕಾರ್ಡ್ ಗೆ ಪರದಾಡ್ಬೇಕಿಲ್ಲ! ಮಗು ಹುಟ್ಟುತ್ತಲೇ ಆಸ್ಪತ್ರೆಯಲ್ಲಿ ಸಿಗಲಿದೆ ನಂಬರ್
ಪಿವಿಸಿ ಆಧಾರ್ ಪಡೆಯುವುದು ಹೇಗೆ? :
ಇದಕ್ಕಾಗಿ ನೀವು ಯುಐಡಿಎಐ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಈ ವೆಬ್‌ಸೈಟ್‌ನಲ್ಲಿ, 'ನನ್ನ ಆಧಾರ್' ವಿಭಾಗಕ್ಕೆ ಹೋಗಿ 'ಆರ್ಡರ್ ಆಧಾರ್ ಪಿವಿಸಿ ಕಾರ್ಡ್' ಕ್ಲಿಕ್ ಮಾಡಿ.
ಇದರ ನಂತರ, ನೀವು ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆ ಅಥವಾ 16 ಅಂಕಿಗಳ ವರ್ಚುವಲ್ ಐಡಿ ಅಥವಾ 28 ಅಂಕಿಗಳ ಆಧಾರ್ ನೋಂದಣಿ ಐಡಿ ನಮೂದಿಸಬೇಕಾಗುತ್ತದೆ.
ಇದರ ನಂತರ ನೀವು ಭದ್ರತಾ ಕೋಡ್ ಅಥವಾ ಕ್ಯಾಪ್ಚಾವನ್ನು ಭರ್ತಿ ಮಾಡಬೇಕು. ಒಟಿಪಿಗಾಗಿ ಸೆಂಡ್ ಒಟಿಪಿ ಕ್ಲಿಕ್ ಮಾಡಿ.
Baal Aadhaar Card : ನಿಮ್ಮ ಮಗುವಿಗಿನ್ನೂ ಐದು ವರ್ಷ ತುಂಬಿಲ್ವಾ? ಆಧಾರ್ ಕಾರ್ಡ್ ಮಾಡಿಸೋದು ಹೇಗೆ? ಇಲ್ಲಿದೆ ಮಾಹಿತಿ
ಇದರ ನಂತರ, ನೋಂದಾಯಿತ ಮೊಬೈಲ್‌ಗೆ ಬಂದ ಒಟಿಪಿಯನ್ನು ನಿರ್ದಿಷ್ಟ ಜಾಗದಲ್ಲಿ ಭರ್ತಿ ಮಾಡಿ ಮತ್ತು ಸಲ್ಲಿಸಿ. ಸಲ್ಲಿಸಿದ ನಂತರ, ನಿಮ್ಮ ಮುಂದೆ ಆಧಾರ್ ಪಿವಿಸಿ ಕಾರ್ಡ್‌ನ ಪೂರ್ವವೀಕ್ಷಣೆ ಕಾಣುತ್ತದೆ. ಅದರ ನಂತರ ನೀವು ಕೆಳಗೆ ನೀಡಲಾದ ಪಾವತಿ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಪಾವತಿ ಪುಟ ತೆರೆದ ನಂತರ 50 ರೂಪಾಯಿ ಶುಲ್ಕ ಪಾವತಿಸಬೇಕು.
ಪಾವತಿಯನ್ನು ಪೂರ್ಣಗೊಳಿಸಿದ ನಂತರ, ಆಧಾರ್ ಪಿವಿಸಿ ಕಾರ್ಡ್‌ಗಾಗಿ ಆರ್ಡರ್ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡ ನಂತರ, ಯುಐಡಿಎಐ ಅಂಚೆ ಮೂಲಕ ನಿಮ್ಮ ವಿಳಾಸಕ್ಕೆ ಕಳುಹಿಸುತ್ತದೆ.