ಸಿಇಒ ಟ್ವೀಟ್ ಜಟಾಪಟಿ, ಗ್ರಾಹಕರ ಅಸಮಾಧಾನ; ಮಾರುಕಟ್ಟೆಯಲ್ಲಿ ಕುಸಿತ ಕಂಡ ಓಲಾ ಷೇರು!
ಓಲಾ ಸ್ಕೂಟರ್ ವಿರುದ್ದ ಗ್ರಾಹಕರು ಹಲವು ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಓಲಾ ಸಿಇಒ ಕಾಮಿಡಿಯನ್ ಜೊತೆ ನಡೆಸಿದ ಟ್ವಿಟರ್ ಯುದ್ಧ ಎಲ್ಲವೂ ಓಲಾಗೆ ಮತ್ತಷ್ಟು ಹೊಡೆತ ನೀಡಿದೆ. ಇದೀಗ ಓಲಾ ಷೇರುಗಳು ಭಾರಿ ಕುಸಿತ ಕಂಡಿದೆ.
ಬೆಂಗಳೂರು(ಅ.08) ಓಲಾ ಎಲೆಕ್ಟ್ರಿಕ್ ಸ್ಕೂಟರ್ ಒಂದರ ಮೇಲೊಂದರಂತೆ ಹಿನ್ನಡೆ ಅನುಭವಿಸುತ್ತಿದೆ. ಗುಣಮಟ್ಟ, ಸರ್ವೀಸ್ ಸೇರಿದಂತೆ ಹಲವು ಕಾರಣಗಳಿಂದ ಗ್ರಾಹಕರು ಅಸಮಾಧಾನಗೊಂಡಿದ್ದಾರೆ. ಓಲಾ ವಿರುದ್ಧ ಭಾರಿ ಪ್ರತಿಭಟನೆ, ಶೂಂನಲ್ಲಿ ದಾಂಧಲೆ, ಸ್ಕೂಟರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆಗಳು ನಡೆಯುತ್ತಿದೆ. ಇದರ ನಡುವೆ ಓಲಾ ಸಿಇಒ ಭವಿಷ್ ಅಗರ್ವಾಲ್, ಕಾಮಿಡಿಯನ್ ಕುನಾಲ್ ಕಾಮ್ರಾ ಜೊತೆಗಿನ ಟ್ವಿಟರ್ ಯುದ್ಧವೂ ಓಲಾಗೆ ಹೊಡೆತ ನೀಡಿದೆ. ಇದರ ಪರಿಣಾಮ ಓಲಾ ಷೇರುಗಳು ಕುಸಿತ ಕಂಡಿದೆ. ಇಂದು ಶೇಕಡಾ 8 ರಷ್ಟು ಕುಸಿತ ಕಂಡಿದೆ.
2024ರ ಆಗಸ್ಟ್ ತಿಂಗಳಲ್ಲಿ ಓಲಾ ಎಲೆಕ್ಟ್ರಿಕ್ ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆಗಿತ್ತು. 76 ರೂಪಾಯಿಗಳಿಂದ ಓಲಾ ಷೇರು ಮಾರುಕಟ್ಟೆಯಲ್ಲಿ ಆರಂಭ ಪಡೆದಿತ್ತು. ಜನಪ್ರಿಯತೆ, ಓಲಾ ಮಾರಾಟಗಳಿಂದ ಈ ಷೇರು 157.4 ರೂಪಾಯಿಗೆ ಏರಿಕೆಯಾಗಿತ್ತು. ಭರ್ಜರಿ ಯಶಸ್ಸು ದಾಖಲಿಸಿದ್ದ ಷೇರುಗಳು ಇದೀಗ ಕುಸಿತ ಕಾಣುತ್ತಲೇ ಇದೆ. ಒಟ್ಟಾರೆಯಾಗಿ ಶೇಕಡಾ 43ರಷ್ಟು ಓಲಾ ಎಲೆಕ್ಟ್ರಿಕ್ ಷೇರು ಕುಸಿತ ಕಂಡಿದೆ.
ಓಲಾ ಸ್ಕೂಟರ್‌ಗೆ ಭರ್ಜರಿ ಆಫರ್, ಕೇವಲ 49,999 ರೂಪಾಯಿಗೆ S1 ಇವಿ!
ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಓಲಾ ದಿನದಿಂದ ದಿನಕ್ಕೆ ಕುಸಿತ ಕಂಡರೆ, ಈ ಸ್ಥಾನವನ್ನು ಬಜಾಜ್ ಹಾಗೂ ಟಿವಿಎಸ್ ಎಲೆಕ್ಟ್ರಿಕ್ ಆಕ್ರಮಿಸಿಕೊಳ್ಳುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಭವಿಷ್ ಅಗರ್ವಾಲ್ ನಡೆಸಿದ ಯುದ್ಧ ಇದೀಗ ಷೇರು ಮಾರುಕಟ್ಟೆ ಮೇಲೂ ಹೊಡೆತ ನೀಡಿದೆ.
ಇತ್ತೀಚೆಗೆ ಕಾಮಿಡಿಯನ್ ಕುನಾಲ್ ಕಾಮ್ರಾ ಟ್ವೀಟ್ ಮೂಲಕ ಓಲಾ ವಿರುದ್ದ ಆಕ್ರೋಶ ಹೊರಹಾಕಿದ್ದರು. ಓಲಾ ಸೆಂಟರ್ ಬಳಿ ಧೂಳು ಹಿಡಿದು, ಮುರಿದು ಬಿದ್ದಿರುವ ಓಲಾ ಸ್ಕೂಟರ್ ಫೋಟೋ ಪೋಸ್ಟ್ ಮಾಡಿದ, ಕುನಾಲ್ ಕಮ್ರಾ, ಜನರು ಕಷ್ಟಪಟ್ಟು ಖರೀದಿಸಿದ ಸ್ಕೂಟರ್ ಈ ರೀತಿ ದೂಳು ಹಿಡಿಯುತ್ತಿದೆ. ಜನರ ಜೀವನಾಡಿಯಾಗಿರುವ ಸ್ಕೂಟರ್ ಹೀಗಾದರೆ ಹೇಗೆ? ಗ್ರಾಹಕರ ಪರವಾಗಿ ಕುನಾಲ್ ಕಾಮ್ರಾ ಧ್ವನಿ ಎತ್ತಿದ್ದರು. ಇಷ್ಟೇ ಅಲ್ಲ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಗ್ರಾಹಕರ ವೇದಿಕೆಯ ಗಮನಸೆಳೆಯುವ ಪ್ರಯತ್ನ ಮಾಡಿದ್ದರು.
ಈ ಟ್ವೀಟ್ ಓಲಾ ಎಲೆಕ್ಟ್ರಿಕ್ ಸಿಇಒ ಭವಿಷ್ ಅಗರ್ವಾಲ್ ಕೆರಳಿಸಿತ್ತು. ಇದಕ್ಕೆ ತಿರುಗೇಟು ನೀಡಿದ ಅಗರ್ವಾಲ್, ಓಲಾ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದೀರಿ, ಬಂದು ನಮಗೆ ಸಹಾಯ ಮಾಡಿ. ನೀವು ಈ ಟ್ವೀಟ್ ಮಾಡಲು ಪಡೆದಿರುವ ಹಣಕ್ಕಿಂತ ಅಥವಾ ನಿಮ್ಮ ಫ್ಲಾಪ್ ಕಾಮಿಡಿ ಶೋಗಿಂತ ಹೆಚ್ಚಿನ ಹಣ ಪಾವತಿಸುತ್ತೇನೆ. ಆಗಲ್ಲ ಅಂದರೆ ಸುಮ್ಮನೆ ಇದ್ದುಬಿಡಿ, ನಾವು ನಿಜವಾದ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಸರ್ವೀಸ್ ನೆಟ್‌ವರ್ಕ್ ವಿಸ್ತರಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದರು.
ನಿಮ್ಮ ಫ್ಲಾಪ್ ಶೋಗಿಂತ ಹೆಚ್ಚು ಪಾವತಿಸುತ್ತೇನೆ, ಕಾಮಿಡಿಯನ್ ಕುನಾಲ್‌ಗೆ ತಿವಿದ ಓಲಾ ಸಿಇಒ!
ಈ ಟ್ವೀಟ್ ಯುದ್ಧ ಪರ ವಿರೋಧಕ್ಕೆ ಕಾರಣವಾಗಿತ್ತು. ಕುನಾಲ್ ಕಾಮ್ರಾ ಗ್ರಾಹಕರ ಪರವಾಗಿ ಟ್ವೀಟ್ ಮಾಡಿದ್ದಾರೆ ಎಂದು ಹಲವರು ಬೆಂಬಲಿಸಿದ್ದರು. ಮತ್ತೆ ಕೆಲವರು ಕುನಾಲ್ ಕಾಮ್ರಾ ಜನಪ್ರಿಯತೆಗೆ, ಪ್ರಚಾರಕ್ಕಾಗಿ ಈ ರೀತಿ ಟ್ವೀಟ್ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು.