ನಿಮ್ಮ ಫ್ಲಾಪ್ ಶೋಗಿಂತ ಹೆಚ್ಚು ಪಾವತಿಸುತ್ತೇನೆ, ಕಾಮಿಡಿಯನ್ ಕುನಾಲ್‌ಗೆ ತಿವಿದ ಓಲಾ ಸಿಇಒ!
ಹಣ ಪಡೆದು ಟ್ವೀಟ್ ಮಾಡುವುದಕ್ಕಿಂತ, ನಿಮ್ಮ ಫ್ಲಾಪ್ ಕಾಮಿಡಿ ಶೋಗಿಂತ ನಾನು ಹೆಚ್ಚು ಪಾವತಿಸುತ್ತೇನೆ, ಬಂದು ಸಹಾಯ ಮಾಡಿ. ಇದು ಒಲಾ ಸಿಇಒ ಭವಿಷ್ ಅಗರ್ವಾಲ್ ತಿರುಗೇಟು ನೀಡಿದ ಪರಿ, ಕಾಮಿಡಿಯನ್ ಕುನಾಲ್ ಕಾಮ್ರಾಗೆ ಒಲಾ ಸಿಇಒ ಹಿಗ್ಗಾಮುಗ್ಗಾ ಜಾಡಿಸಲು ಕಾರಣವೇನು?
ಬೆಂಗಳೂರು(ಅ.06) ಓಲಾ ವಿರುದ್ದ ಗ್ರಾಹಕರು ಟ್ವೀಟ್ ಮೂಲಕ, ನೇರವಾಗಿ ಶೋ ರೂಂ ಬಳಿ ತೆರಳಿ ಆಕ್ರೋಶ ಹೊರಹಾಕಿರುವುದು ವರದಿಯಾಗಿದೆ. ಇದೀಗ ಕಾಮಿಡಿಯನ್ ಕುನಾಲ್ ಕಾಮ್ರಾ ಮಾಡಿದ ಟ್ವೀಟ್, ಓಲಾ ಸಿಇಒ ಭವಿಷ್ ಅಗರ್ವಾಲ್ ಆಕ್ರೋಶಕ್ಕೆ ಕಾರಣವಾಗಿದೆ. ಕುನಾಲ್‌ಗೆ ನೀಡಿದ ಪ್ರತ್ಯುತ್ತರ ಇದೀಗ ಭಾರಿ ಚರ್ಚೆಯಾಗುತ್ತಿದೆ. ನಮಗೆ ಬಂದು ಸಹಾಯ ಮಾಡಿ, ಹಣ ಪಡೆದು ಟ್ವೀಟ್ ಮಾಡಿದ್ದಕ್ಕಿಂತ ಅಥವಾ ನಿಮ್ಮ ಫ್ಲಾಪ್ ಕಾಮಿಡಿ ಶೋಗಳಲ್ಲಿ ಗಳಿಸುವುದಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸುತ್ತೇನೆ. ಇಲ್ಲದಿದ್ದರೆ ಬಾಯಿ ಮುಚ್ಚಿಕೊಂಡು ಇರಿ ಎಂದು ಭವಿಷ್ ಅಗರ್ವಾಲ್ ಟ್ವೀಟ್ ಮೂಲಕ ಕುನಾಲ್ ಕಾಮ್ರಾಗೆ ತಿರುಗೇಟು ನೀಡಿದ್ದಾರೆ.
ಕುನಾಲ್ ಕಾಮ್ರಾ ಟ್ವೀಟ್ ಮೂಲಕ ಓಲಾ ಸರ್ವೀಸ್ ಪ್ರಶ್ನಿಸಿದ್ದಾರೆ. ಸರ್ವೀಸ್ ಸೆಂಟರ್ ಮುಂದೆ ಧೂಳು ಹಿಡಿದು ಬಿದ್ದಿರುವ ಓಲಾ ಸ್ಕೂಟರ್ ಫೋಟೋ ಒಂದನ್ನು ಕುನಾಲ್ ಪೋಸ್ಟ್ ಮಾಡಿದ್ದಾರೆ. ಬಳಿಕ ಗ್ರಾಹಕರ ಧ್ವನಿ ಅಡಗಿದೆಯಾ? ಹಲವರ ಜೀವನಾಡಿಯಾಗಿರುವ ಈ ಸ್ಕೂಟರ್ ಈ ರೀತಿ ಧೂಳು ಹಿಡಿದು ಬಿದ್ದಿದೆ. ಇದಕ್ಕೆ ಗ್ರಾಹಕರು ಅರ್ಹರೆ ಎಂದು ಕುನಾಲ್ ಪ್ರಶ್ನಿಸಿದ್ದಾರೆ. ಇದನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಗ್ರಾಹಕರ ವೇದಿಕೆಗೆ ಟ್ಯಾಗ್ ಮಾಡಿದ್ದಾರೆ.
ಓಲಾ ಸ್ಕೂಟರ್‌ಗೆ ಭರ್ಜರಿ ಆಫರ್, ಕೇವಲ 49,999 ರೂಪಾಯಿಗೆ S1 ಇವಿ!
ಈ ಟ್ವೀಟ್‌ಗೆ ಓಲಾ ಸಿಇಒ ಭವಿಷ್ ಅಗರ್ವಾಲ್ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಕುನಾಲ್ ಕಾಮ್ರಾಗೆ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ತುಂಬಾ ಕಾಳಜಿವಹಿಸಿರುವ ಕುನಾಲ್ ಕಾಮ್ರಾ, ನೀವು ಬಂದು ನಮಗೆ ಸಹಾಯ ಮಾಡಿ.ಹಣಕ್ಕಾಗಿ ಟ್ವೀಟ್ ಮಾಡಿದ ಅಥವಾ ನಿಮ್ಮ ವಿಫಲ ಕಾಮಿಡಿ ಶೋಗಿಂತ ಹೆಚ್ಚು ನಾನು ಪಾವತಿಸುತ್ತೇನೆ. ಇಲ್ಲವಾದರೆ ಸುಮ್ಮನಿರಿ. ನಿಜವಾದ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ನಾವು ಶ್ರಮಿಸುತ್ತಿದ್ದೇವೆ. ನಮ್ಮ ನೆಟ್‌ವರ್ಕ್ ವೇಗವಾಗಿ ವಿಸ್ತರಿಸುತ್ತಿದ್ದೇವೆ. ಎಲ್ಲಾ ದೂರು, ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುತ್ತದೆ ಎಂದು ಅರ್ವಾಲ್ ಟ್ವೀಟ್ ಮಾಡಿದ್ದಾರೆ.
ಇವರಿಬ್ಬರ ಟ್ವೀಟ್ ವಾರ್ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕುನಾಲ್ ಕಾಮ್ರಾ ಸುಖಾಸುಮ್ಮನೆ ಮಧ್ಯಪ್ರವೇಶಿಸಿ ಹೊಡೆತ ತಿನ್ನುತ್ತಾರೆ. ಇಲ್ಲಿ ಕುನಾಲ್ ಕಾಮ್ರಾ ಓಲಾ ಗ್ರಾಹಕರಲ್ಲ, ಯಾವುದೋ ಒಂದು ಫೋಟೋ ಪೋಸ್ಟ್ ಮಾಡಿ ಪ್ರಶ್ನಿಸುತ್ತಿದ್ದಾರೆ. ಇದನ್ನು ಓಲಾ ಗ್ರಾಹಕರು ಪ್ರಶ್ನಿಸಬೇಕು. ಇದರ ಮಧ್ಯೆ ಕುನಾಲ್ ಪ್ರಚಾರ ಬಯಿಸಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಮತ್ತೆ ಕೆಲ ನೆಟ್ಟಿಗರು, ಓಲಾ ಸಮಸ್ಯೆ ನಿಜಕ್ಕೂ ಗ್ರಾಹಕರ ಸಂಕಷ್ಟಕ್ಕೆ ಕಾರಣವಾಗಿದೆ. ಸಮಸ್ಯೆ ಪರಿಹರಿಸದಿದ್ದರೆ ಓಲಾ ಬಾಗಿಲು ಮುಚ್ಚಬೇಕಾದಿತು ಎಂದು ಎಚ್ಚರಿಸಿದ್ದಾರೆ.
ಮೊಬೈಲ್ ಬೆಲೆಯಲ್ಲಿ 250 ಕಿ.ಮಿ ಮೈಲೇಜ್ ರೇಂಜ್ ಓಲಾ ಸ್ಕೂಟರ್ ಲಭ್ಯ!