ಬೆಂಗಳೂರು (ಅ. 04): ದೇಶದ ಅರ್ಥವ್ಯವಸ್ಥೆ ಹಳಿ ತಪ್ಪಿದಾಗ ಅದನ್ನು ಹಳಿಗೆ ಏರಿಸುವ ಜವಾಬ್ದಾರಿಯನ್ನು ಬ್ಯಾಂಕುಗಳಿಗೆ ವಹಿಸುವುದಕ್ಕೆ ಮತ್ತು ರಾಜಕೀಯ ಪಕ್ಷಗಳು ತಮ್ಮ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು ಬ್ಯಾಂಕ್‌ನ ಸಾಲ ವ್ಯವಸ್ಥೆಯನ್ನು ಬಳಸಿಕೊಳ್ಳುವುದಕ್ಕೆ ಈ ದೇಶದಲ್ಲಿ ಇತಿಹಾಸ ಇದೆ.

ಜನಾರ್ದನ ಪೂಜಾರಿಯವರ ಐಡಿಯಾ

37 ವರ್ಷಗಳ ಹಿಂದೆ ಜನಾರ್ದನ ಪೂಜಾರಿಯವರು ಕೇಂದ್ರದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವರಾಗಿದ್ದಾಗ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ವರ್ಚಸ್ಸು, ಜನಪ್ರಿಯತೆಯನ್ನು ಹೆಚ್ಚಿಸಲು ಮತ್ತು ತಮ್ಮ ಪಕ್ಷದ ಮತಬ್ಯಾಂಕನ್ನು ವೃದ್ಧಿಗೊಳಿಸಲು ಸಾರ್ವಜನಿಕ ರಂಗದ ಬ್ಯಾಂಕ್‌ಗಳನ್ನು ಯಥೇಚ್ಛವಾಗಿ ಬಳಸಿಕೊಂಡಿದ್ದರು. ‘ಬ್ಯಾಂಕುಗಳು ಕೇವಲ ಉಳ್ಳವರಿಗಲ್ಲ, ಅವು ಇಲ್ಲದವರಿಗೂ ಸಹಾಯ ಮಾಡಬೇಕು’ ಎನ್ನುವ ಥೀಮ… ಅಡಿಯಲ್ಲಿ , ಬ್ಯಾಂಕಿಂಗ್‌ ರೆಗ್ಯುಲೇಷನ್‌ ಆಕ್ಟ್ನ ನಿಯಮಾವಳಿಗಳನ್ನು ಬದಿಗೆ ಸರಿಸಿ, ಮೈದಾನಗಳಲ್ಲಿ ಸಭೆ ನಡೆಸಿ, ರೇಷನ್‌ ಕಾರ್ಡ್‌ ಆಧಾರದ ಮೇಲೆ ಸಾಲ ನೀಡಲಾಗಿತ್ತು.

9 ವರ್ಷಗಳಲ್ಲೇ ವಿಶಿಷ್ಟ ನಿರ್ಧಾರ; ನಿಮ್ಮ ಜೇಬು ಉಳಿತಾಯಕ್ಕೆ ಆರ್ ಬಿಐ ಆಧಾರ!

ಆ ಕಾಲದಲ್ಲಿ ಇದನ್ನು ಲೋನ್‌ ಮೇಳ ಲೋನ್‌, ರೇಷನ್‌ ಕಾರ್ಡ್‌ ಲೋನ್‌ ಆಥವಾ ಪೂಜಾರಿ ಲೋನ್‌ ಎಂದು ಕರೆಯಲಾಗುತ್ತಿತ್ತು. ಇಲ್ಲದವರ ಬಗೆಗೆ ಪೂಜಾರಿಯವರ ಕಾಳಜಿ ಜನಮೆಚ್ಚುಗೆ ಪಡೆದಿತ್ತು. ಈ ಸಾಲದ ಮೂಲಕ ಹಲವರು ಬದುಕು ಪಡೆದ, ಆರ್ಥಿಕವಾಗಿ ಸಬಲರಾದ ಉದಾಹರಣೆಗಳು ಇವೆ. ಆದರೆ, ಮಧ್ಯವರ್ತಿಗಳು, ಅನರ್ಹರು, ರಾಜಕೀಯ ಒತ್ತಡ, ಸಾಲ ನೀಡುವಲ್ಲಿನ ಟಾರ್ಗೆಟ್‌, ಕೆಲವರ ದಬ್ಬಾಳಿಕೆ, ಅತ್ಯುತ್ಸಾಹದಲ್ಲಿ ಪೂಜಾರಿಯವರು ಬ್ಯಾಂಕ್‌ನವರನ್ನು ನಡೆಸಿಕೊಂಡ ರೀತಿಯಿಂದಾಗಿ ಈ ಯೋಜನೆ ನಿರೀಕ್ಷೆಯ ಸಾಫಲ್ಯ ಕಾಣಲಿಲ್ಲ. ಹಾಗೆಯೇ ಈವರೆಗೂ ಈ ಯೋಜನೆಯಡಿಯಲ್ಲಿ ನೀಡಿದ ಸಾಲದ ಮೊತ್ತ, ವಸೂಲಾದ ಮತ್ತು ಮನ್ನಾ ಆದ ಸಾಲದ ಬಗೆಗೆ ನಿಖರವಾದ ಮಾಹಿತಿ ಇಲ್ಲ.

ಸಾಲಮೇಳದ ಮತ್ತೊಂದು ರೂಪ

ಬ್ಯಾಂಕ್‌ನವರ ಸ್ಮೃತಿಪಟಲದಿಂದ ಹೇಳೆಯ ಲೋನ್‌ ಮೇಳದ ಕಹಿ ನೆನಪುಗಳು, ಒತ್ತಡ, ದಬ್ಬಾಳಿಕೆ ಮತ್ತು ಕೆಲವು ಬಾರಿ ಅವಮಾನಗಳು ಮರೆಯಾಗುತ್ತಿರುವಂತೆ, (ಇದನ್ನು ಸಹಿಸಿದ ಬಹುತೇಕರು ಇಂದು ನಿವೃತ್ತಿಯಾಗಿದ್ದಾರೆ) ಈ ಲೋನ್‌ ಮೇಳಗಳು ಶಾಮಿಯಾನ ಸಾಲ ಮೇಳಗಳ ರೂಪದಲ್ಲಿ ಮರುಭೇಟಿ ನೀಡಿವೆ. ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್‌ ಈ ಯೋಜನೆಯ ರೂವಾರಿಯಾಗಿದ್ದು, ಆರ್ಥಿಕ ಹಿಂಜರಿಕೆಯನ್ನು ಹಿಮ್ಮೆಟ್ಟಿಸಲು ಸುದೀರ್ಘ ಚಿಂತನೆ ಮತ್ತು ದೂರದೃಷ್ಟಿಯಿಂದ ಇದನ್ನು ರೂಪಿಸಿದ್ದಾರೆ.

ಈ ಯೋಜನೆ ಅನ್ವಯ ಬ್ಯಾಂಕುಗಳು 400 ಜಿಲ್ಲೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶಾಮಿಯಾನ ಹಾಕಿ, ಸಭೆಗಳನ್ನು ಏರ್ಪಡಿಸಿ ಸಾಲ ವಿತರಣೆ ಮಾಡಬೇಕು. ಮೊದಲ 200 ಜಿಲ್ಲೆಗಳಲ್ಲಿ ಅಕ್ಟೋಬರ್‌ 3ರಿಂದ 7ರ ಒಳಗೆ ಮತ್ತು ಬಾಕಿ ಉಳಿದ 200 ಜಿಲ್ಲೆಗಳಲ್ಲಿ ಅಕ್ಟೋಬರ್‌ 11-15ರ ಒಳಗೆ ಸಾಲ ವಿತರಣೆಯಾಗಬೇಕು. ಪ್ರತಿಯೊಂದು ಬ್ಯಾಂಕ್‌ ತನ್ನ ಪ್ರತಿಯೊಬ್ಬ ಸಾಲ ಗ್ರಾಹಕನಿಗೆ ಪ್ರತಿಯಾಗಿ ಐದು ಜನ ಹೊಸ ಗ್ರಾಹಕರಿಗೆ ಸಾಲ ನೀಡಬೇಕೆಂದು ನಿರ್ದೇಶಿಸಲಾಗಿದೆ. ಮುಂದಿನ ಹಬ್ಬದ ದಿನಗಳೊಳಗೆ ಈ ಕಾರ್ಯ ನಡೆಯುವಂತೆ ಕೋರಲಾಗಿದ್ದು, ಆದಷ್ಟುಹೊಸ ಸಾಲದ ಗ್ರಾಹಕರನ್ನು ಗುರುತಿಸುವಂತೆ ಹೇಳಲಾಗಿದೆ. ಚಿಕ್ಕ ರೈತರು, ಮನೆ ಖರೀದಿಸುವವರಿಗೆ, ಸಣ್ಣ ಉದ್ಯಮಿಗಳಿಗೆ ಮೈಛಳಿ ಬಿಟ್ಟು  (Aggresively) ಸಾಲ ನೀಡುವಂತೆ ತಿಳಿಸಲಾಗಿದೆ.

RBI ಗೆ ಪುಣ್ಯ ಬರಲಿ: ಚಿನ್ನ ಬೆಳ್ಳಿ ದರ ಇಳಿದಿದ್ದು ನಿಮಗೆ ಗೊತ್ತಿರಲಿ!

ಆರ್ಥಿಕ ಚೇತರಿಕೆ ಹೇಗೆ ಸಾಧ್ಯ?

ಆರ್ಥಿಕ ಹಿಂಜರಿಕೆಯನ್ನು ತಡೆಯಲು ಬೇಕಾಗಿರುವುದು ಹೆಚ್ಚಿನ ಉತ್ಪಾದನೆ ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿ. ಆದರೆ, ಸಾಲ ಮೇಳದ ಯೋಜನೆಯಿಂದ ಬ್ಯಾಂಕುಗಳ ಸಾಲದ ಪೋರ್ಟ್‌ಫೋಲಿಯೋ ನಿರೀಕ್ಷೆ ಮೀರಿ ಬೆಳೆಯುವುದರಲ್ಲಿ ಸಂಶಯವಿಲ್ಲ. ಮಾರುಕಟ್ಟೆಯಲ್ಲಿ ಹಣದ ಹರಿವೂ ಹೆಚ್ಚಬಹುದು. ಆದರೆ, ಆರ್ಥಿಕ ಹಿನ್ನ್ನಡೆಗೆ ಕಾರಣವಾದ ಅಂಶಗಳನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆ ಎನ್ನುವುದು ಸ್ವಷ್ಟವಾಗಿರದೇ ಗೊಂದಲಮಯವಾಗಿದೆ. ಹಬ್ಬಗಳ ದಿನಗಳಲ್ಲಿ ಈ ಸಾಲವು ವಿತರಣೆಯಾಗುತ್ತಿರುವುದರಿಂದ ನೀಡಿದ ಸಾಲದ ಬಹುಭಾಗವು ಹಬ್ಬದ ಖರೀದಿಗೆ ಹೋಗುತ್ತದೆಯೇ ವಿನಃ ಸಾಲದ ಉದ್ದೇಶಕ್ಕೆ ನೆರವಾಗುವುದಿಲ್ಲ. ಬದಲಾಗಿ ಜನಸಾಮಾನ್ಯರಲ್ಲಿ ಕೊಳ್ಳುಬಾಕ ಸಂಸ್ಕೃತಿ ಅಳತೆ ಮೀರಿ ಬೆಳೆಯುವಂತೆ ಪ್ರೇರೇಪಿಸುವುದು.

ಇಂದಿನ ಆರ್ಥಿಕ ಹಿಂಜರಿತಕ್ಕೆ ಗ್ರಾಹಕ ವಸ್ತುಗಳ (್ಚಟ್ಞs್ಠಞಛ್ಟಿಜಟಟds) ಖರೀದಿಯಲ್ಲಿನ ಕುಂಠಿತ ಒಂದೇ ಕಾರಣ ಎಂದು ದೃಢವಾಗಿ ಹೇಳುವುದಿದ್ದರೆ, ವಿತ್ತ ಮಂತ್ರಿಗಳ ಈ ಯೋಜನೆಯಲ್ಲಿ ಅರ್ಥವಿದೆ. ಹಲವು ಆರ್ಥಿಕ ತಜ್ಞರ ಪ್ರಕಾರ ದೇಶದಲ್ಲಿ ಹಿಂಜರಿತ ಆರಂಭವಾಗಿದ್ದು ನೋಟುಗಳ ಅಮಾನ್ಯೀಕರಣ ಮತ್ತು ಒಂದು ದೇಶ -ಒಂದು ತೆರಿಗೆ ಹೆಸರಿನಲ್ಲಿ ಜಾರಿಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ನಂತರ. ಯಾರು ಎಷ್ಟೇ ಸಮರ್ಥಿಸಿಕೊಂಡರೂ ಅದು ಕ್ರಮೇಣವಾಗಿ ದೇಶದ ಆರ್ಥಿಕತೆಯನ್ನು ವ್ಯಾಪಿಸಿದೆ ಎನ್ನುವ ಅಭಿಪ್ರಾಯ ದೇಶದ ಜನತೆಯಲ್ಲಿ ಇದೆ.

ಹಾಗೆಯೇ ಸಂಕೀರ್ಣ ತೆರಿಗೆ ವ್ಯವಸ್ಥೆಯೂ ಈ ನಿಟ್ಟಿನಲ್ಲಿ ಸಾಕಷ್ಟುಕೊಡುಗೆ ನೀಡಿದೆ. ಕಾರ್ಪೋರೇಟ್‌ ಟ್ಯಾಕ್ಸ್‌ ಇಳಿಸುವುದರಿಂದ ಸರಕು ಮತ್ತು ಸೇವೆಗಳ ಬೆಲೆ ಇಳಿಯುತ್ತಿದೆ ಎನ್ನುವುದು ಒಂದು ಭ್ರಮೆ. ಇಳಿದರೂ ಇದು ಕಾಟಾಚಾರಕ್ಕೆ. ಈ ನಿಟ್ಟಿನಲ್ಲಿ ರೆಪೋ ದರ 1.15% ಇಳಿದರೂ ಸಾಲಗ್ರಾಹಕರಿಗೆ ದೊರಕಿದ ಲಾಭ ಕೇವಲ 0.4% ಮಾತ್ರ ಎನ್ನುವುದು ಗಮನಾರ್ಹ.

ಶಾಮಿಯಾನ ಸಾಲದ ಭವಿಷ್ಯ

ಇಂದು ಬ್ಯಾಂಕುಗಳಲ್ಲಿ 9.5 ಲಕ್ಷ ಕೋಟಿ ಸುಸ್ತಿ ಸಾಲ ಇದೆ. ಒಂದು ಕೋಟಿ ವಸೂಲಾಗುವ ಹೊತ್ತಿಗೆ 2 ಲಕ್ಷ ಸುಸ್ತಿಗೆ ಸೇರಿಕೊಳ್ಳುತ್ತದೆ. ಈ ಹಿಂದೆ ಇದೇ ರೀತಿ ಯುದ್ಧೋಪಾದಿಯಲ್ಲಿ ನೀಡಿದ 80ರ ದಶಕದ ಲೋನ್‌ ಮೇಳದ ಸಾಲ ಮತ್ತು ನರೆಂದ್ರ ಮೋದಿಯವರ ಕನಸಿನ ಮುದ್ರಾ ಸಾಲದಲ್ಲಿನ ಮರುಪಾವತಿ ಪ್ರಮಾಣ ನೋಡಿದರೆ, ಪ್ರಸ್ತಾವಿತ ಶಾಮಿಯಾನ ಸಾಲದ ಭವಿಷ್ಯವನ್ನು ಊಹಿಸಬಹುದು. ಎಲ್ಲಾ ರೀತಿಯ ದಾಖಲೆಗಳನ್ನು ಪಡೆದುಕೊಂಡು, ಎಲ್ಲಾ ರೀತಿಯಲ್ಲಿ ಪರಿಶೀಲಿಸಿ ನೀಡಿದ ಸಾಲಗಳೇ ಬ್ಯಾಂಕುಗಳನ್ನು ಕೊರೆಯುತ್ತಿರುವಾಗ, ಟಾರ್ಗೆಟ್‌ ತಲುಪಲು ನೀಡುವ ಸಾಲಗಳ ಭವಿಷ್ಯ ಬ್ಯಾಂಕರುಗಳ ಚಿಂತನೆಗೆ ಆಹಾರವಾಗಿದೆ.

ಈ ಶಾಮಿಯಾನ ಸಾಲಗಳು ಒಂದು ರೀತಿಯಲ್ಲಿ ಸಂತೆಗೆ ಮುಂಚೆ ಮೂರು ಮೊಳ ಎನ್ನುವಂತಿದ್ದು, ಬ್ಯಾಂಕರುಗಳು ಸಾಲ ನೀಡುವಿಕೆಯಲ್ಲಿನ ನೀತಿ ನಿಯಮಾವಳಿಯನ್ನು ಪಾಲಿಸುವುದರಲ್ಲಿ ಪರಿಪೂರ್ಣತೆ ಸಾಧಿಸಬಹುದೇ ಎನ್ನುವುದು ಮೂಲಭೂತ ಪ್ರಶ್ನೆ. ಹಾಗೆಯೇ ಇಂಥ ಸಂದರ್ಭಗಳಲ್ಲಿ ತೀರಾ ಮಾಮೂಲಾದ ವಿವಿಧ ರೀತಿಯ ಒತ್ತಡಗಳನ್ನು ಬ್ಯಾಂಕುಗಳು ಹೇಗೆ ನಿಭಾಯಿಸಬಹುದು ಎನ್ನುವುದೂ ಒಂದು ಸವಾಲು.

ಲೋನ್‌ಮೇಳದ ನಿರೀಕ್ಷಿತ ಉದ್ದೇಶ ಸಾಲ ವಿತರಣೆಯಲ್ಲಿ ಈಡೇರಬಹುದು. ಆದರೆ, ಇದರ ದೂರಗಾಮಿ ಉದ್ದೇಶ ಸಾಫಲ್ಯ ಕಾಣಬಹುದೇ ಎನ್ನುವುದರ ಬಗೆಗೆ ಏಕಾಭಿಪ್ರಾಯವಿಲ್ಲ. ಕೆಲವು ಬ್ಯಾಂಕರುಗಳು ತಮ್ಮ ಹಿಂದಿನ ಅನುಭವದ ಮೂಸೆಯಲ್ಲಿ ಸುಸ್ತಿ ಸಾಲ ಏರಬಹುದು ಎನ್ನುವ ಭಯದಲ್ಲಿದ್ದಾರೆ.

-  ರಮಾನಂದ ಶರ್ಮಾ 

ನಿವೃತ್ತ ಬ್ಯಾಂಕರ್‌, ಬೆಂಗಳೂರು