ಮೇ 1 ರಿಂದ ದೇಶದಲ್ಲಿ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬಂದಿವೆ. ಒಂದೇ ಮನೆಯಲ್ಲಿ ಎಲ್‌ಪಿಜಿ ಮತ್ತು ಪಿಎನ್‌ಜಿ ಸಂಪರ್ಕ ನಿಷೇಧ, ಸಿಲಿಂಡರ್ ಬುಕ್ಕಿಂಗ್‌ಗೆ ಕಠಿಣ ನಿಯಮಗಳು, ಮತ್ತು ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಂತಹ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. 

ನವದೆಹಲಿ (ಮೇ.1): ದೇಶದ ಅಡುಗೆ ಅನಿಲ ಚೌಕಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ದೊಡ್ಡ ಬದಲಾವಣೆಗಳನ್ನು ಮಾಡಲಾಗಿದ್ದು, ಮೇ 1ರಿಂದ ಹೊಸ ನಿಯಮಗಳು ಜಾರಿಗೆ ಬಂದಿವೆ. ಸಬ್ಸಿಡಿ ದುರುಪಯೋಗ ತಡೆಗಟ್ಟುವುದು ಮತ್ತು ಪೂರೈಕೆಯನ್ನು ಸುಸ್ಥಿತಿಯಲ್ಲಿಡುವುದು ಈ ನಿಯಮಗಳ ಮುಖ್ಯ ಉದ್ದೇಶವಾಗಿದೆ.

ಒಂದೇ ಮನೆಯಲ್ಲಿ ಎಲ್‌ಪಿಜಿ ಮತ್ತು ಪಿಎನ್‌ಜಿ ಇರುವಂತಿಲ್ಲ!

ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರವು ಒಂದೇ ಮನೆಯಲ್ಲಿ ಎಲ್‌ಪಿಜಿ (ಸಿಲಿಂಡರ್) ಮತ್ತು ಪಿಎನ್‌ಜಿ (ಪೈಪ್ಡ್ ಗ್ಯಾಸ್) ಎರಡೂ ಸಂಪರ್ಕಗಳನ್ನು ಹೊಂದುವುದನ್ನು ನಿಷೇಧಿಸಿದೆ. ಮಾರ್ಚ್ 14ರಂದು ಎಲ್‌ಪಿಜಿ ನಿಯಂತ್ರಣ ಆದೇಶಕ್ಕೆ ತಿದ್ದುಪಡಿ ತಂದಿದ್ದು, ಪಿಎನ್‌ಜಿ ಸಂಪರ್ಕ ಹೊಂದಿರುವ ಕುಟುಂಬಗಳು ತಮ್ಮ ದೇಶೀಯ ಎಲ್‌ಪಿಜಿ ಸಂಪರ್ಕವನ್ನು ಕಡ್ಡಾಯವಾಗಿ ಹಿಂದಿರುಗಿಸಬೇಕು. ಅಂತಹ ಗ್ರಾಹಕರಿಗೆ ಇನ್ನು ಮುಂದೆ ರೀಫಿಲ್ ಅಥವಾ ಹೊಸ ಸಂಪರ್ಕಗಳನ್ನು ನೀಡದಂತೆ ತೈಲ ಕಂಪನಿಗಳಿಗೆ ಸೂಚಿಸಲಾಗಿದೆ. ಈಗಾಗಲೇ 43,000ಕ್ಕೂ ಹೆಚ್ಚು ಮಂದಿ ತಮ್ಮ ಎಲ್‌ಪಿಜಿ ಸಂಪರ್ಕವನ್ನು ಹಿಂದಿರುಗಿಸಿದ್ದಾರೆ.

ಬುಕ್ಕಿಂಗ್ ಮತ್ತು ವಿತರಣೆಗೆ ಕಠಿಣ ನಿಯಮ

ಇಂಡೇನ್, ಭಾರತ್ ಗ್ಯಾಸ್ ಮತ್ತು ಹೆಚ್‌ಪಿ ಗ್ಯಾಸ್ ಗ್ರಾಹಕರು ಇಂದಿನಿಂದ ಹೊಸ ಬುಕ್ಕಿಂಗ್ ನಿಯಮಗಳನ್ನು ಪಾಲಿಸಬೇಕಿದೆ. ನಗರ ಪ್ರದೇಶಗಳಲ್ಲಿ ಒಂದು ಸಿಲಿಂಡರ್ ಬುಕ್ ಮಾಡಿದ 25 ದಿನಗಳ ನಂತರವಷ್ಟೇ ಮುಂದಿನ ಸಿಲಿಂಡರ್ ಬುಕ್ ಮಾಡಲು ಅವಕಾಶವಿದೆ (ಹಿಂದೆ ಇದು 21 ದಿನಗಳಾಗಿತ್ತು). ಗ್ರಾಮೀಣ ಭಾಗದಲ್ಲಿ ಈ ಅಂತರ 45 ದಿನಗಳವರೆಗೆ ಇರಲಿದೆ.

OTP ನೀಡುವುದು ಕಡ್ಡಾಯ

ಸಿಲಿಂಡರ್ ವಿತರಣೆಯ ಸಮಯದಲ್ಲಿ ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ನೀಡುವುದು ಕಡ್ಡಾಯವಾಗಿದೆ. ಜೊತೆಗೆ ಕಡ್ಡಾಯವಾಗಿ ಕೆವೈಸಿ (KYC) ಅಪ್‌ಡೇಟ್ ಮಾಡಿರಬೇಕು.

ವಾಣಿಜ್ಯ ಸಿಲಿಂಡರ್ ಬೆಲೆ ಭಾರಿ ಏರಿಕೆ

ಮಾರ್ಚ್ 2026ರಿಂದ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ (19 ಕೆಜಿ) ಬೆಲೆಯನ್ನು ನಾಲ್ಕನೇ ಬಾರಿಗೆ ಹೆಚ್ಚಿಸಿವೆ. ಮಾರ್ಚ್ ಆರಂಭದಲ್ಲಿ 28-31 ರೂ., ಮಾರ್ಚ್ 7 ರಂದು 114.5 ರೂ., ಮತ್ತು ಏಪ್ರಿಲ್‌ನಲ್ಲಿ 196-218 ರೂ. ಹೆಚ್ಚಳವಾಗಿತ್ತು. ಇಂದಿನ (ಮೇ 1) ಪರಿಷ್ಕರಣೆಯ ನಂತರ, ಒಟ್ಟು ಬೆಲೆ ಏರಿಕೆಯು ಬರೊಬ್ಬರಿ 993 ರೂಪಾಯಿಗಳನ್ನು ಮುಟ್ಟಿದೆ.

ಗೃಹಬಳಕೆ ಅನಿಲ ಮತ್ತು ಪೆಟ್ರೋಲ್ ದರ ಸ್ಥಿರ

ಸಾಮಾನ್ಯ ಜನರಿಗೆ ಸಮಾಧಾನಕರ ಸುದ್ದಿಯೆಂದರೆ, ಗೃಹಬಳಕೆಯ ಎಲ್‌ಪಿಜಿ (14.2 ಕೆಜಿ) ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದೆಹಲಿಯಲ್ಲಿ ಇದರ ಬೆಲೆ 913 ರೂ. ನಲ್ಲೇ ಮುಂದುವರಿದಿದೆ. ಪೆಟ್ರೋಲ್ (94.77 ರೂ.) ಮತ್ತು ಡೀಸೆಲ್ (87.67 ರೂ.) ದರಗಳನ್ನು ಕೂಡ ಯಥಾಸ್ಥಿತಿಯಲ್ಲಿಡಲಾಗಿದೆ. ಪ್ರಸ್ತುತ ತೈಲ ಕಂಪನಿಗಳು ಪ್ರತಿ ಸಿಲಿಂಡರ್ ಮೇಲೆ 380 ರೂ. ನಷ್ಟ ಅನುಭವಿಸುತ್ತಿದ್ದು, ಮೇ ಅಂತ್ಯಕ್ಕೆ ಒಟ್ಟು ನಷ್ಟ 40,484 ಕೋಟಿ ರೂ. ತಲುಪುವ ಅಂದಾಜಿದೆ.

ಬಿಕ್ಕಟ್ಟಿಗೆ ಕಾರಣವೇನು?

ಪಶ್ಚಿಮ ಏಷ್ಯಾದಲ್ಲಿ (West Asia) ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷಗಳು ಇಂಧನ ಮಾರ್ಗಗಳನ್ನು ಬಂದ್ ಮಾಡಿದ್ದು, ಜಾಗತಿಕವಾಗಿ ಕಚ್ಚಾ ತೈಲ ಮತ್ತು ಗ್ಯಾಸ್ ಬೆಲೆ ಏರಿಕೆಗೆ ಕಾರಣವಾಗಿದೆ. ಆದಾಗ್ಯೂ, ದೇಶೀಯ ಎಲ್‌ಪಿಜಿ ಮತ್ತು ವಾಹನಗಳ ಸಿಎನ್‌ಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ 100% ಪೂರೈಕೆಯನ್ನು ಖಚಿತಪಡಿಸುವುದಾಗಿ ಸರ್ಕಾರ ಭರವಸೆ ನೀಡಿದೆ.