ಮೇ ತಿಂಗಳ ಆರಂಭದಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹993 ರಷ್ಟು ಹೆಚ್ಚಿಸಲಾಗಿದೆ, ಇದರಿಂದ ದೆಹಲಿಯಲ್ಲಿ ಅದರ ಬೆಲೆ ₹3,071.50 ಕ್ಕೆ ತಲುಪಿದೆ. ಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ನವದೆಹಲಿ (ಮೇ.1): ಮೇ ತಿಂಗಳ ಆರಂಭದಲ್ಲೇ ಹೋಟೆಲ್ ಮಾಲೀಕರಿಗೆ ಮತ್ತು ವ್ಯಾಪಾರಸ್ಥರಿಗೆ ದೊಡ್ಡ ಶಾಕ್ ಎದುರಾಗಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ (Commercial LPG) ಸಿಲಿಂಡರ್ ಬೆಲೆಯನ್ನು ಏಕಕಾಲಕ್ಕೆ ಬರೊಬ್ಬರಿ 993 ರೂಪಾಯಿ ಹೆಚ್ಚಿಸಲಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಸಿಲಿಂಡರ್ ಬೆಲೆ 3,071.50 ರೂಪಾಯಿಗೆ ತಲುಪಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಗಗನಕ್ಕೇರಿದ್ದರೂ, ಸಾಮಾನ್ಯ ಜನರಿಗೆ ಮತ್ತು ಗೃಹಿಣಿಯರಿಗೆ ಸರ್ಕಾರ ಸಮಾಧಾನಕರ ಸುದ್ದಿ ನೀಡಿದೆ. ಗೃಹಬಳಕೆಯ ಎಲ್‌ಪಿಜಿ (14.2 ಕೆಜಿ) ಇದರ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದೇಶದ ಸುಮಾರು 33 ಕೋಟಿ ಗ್ರಾಹಕರಿಗೆ ಇದರಿಂದ ನೆಮ್ಮದಿ ಸಿಕ್ಕಿದೆ. ಆದರೆ, 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ (ಎಫ್‌ಟಿಎಲ್) ಸಿಲಿಂಡರ್‌ಗಳ ಬೆಲೆಯನ್ನು ಕೂಡ ಇಂದಿನಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್‌ಗೆ 261 ರೂ. ಹೆಚ್ಚಿಸಲಾಗಿದೆ.

ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸಹ ಸ್ಥಿರವಾಗಿಡಲಾಗಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತದಿಂದ ಸಾಮಾನ್ಯ ಜನರನ್ನು ರಕ್ಷಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಅಡಿ ನೀಡಲಾಗುವ ಸೀಮೆಎಣ್ಣೆ ದರದಲ್ಲೂ ಯಾವುದೇ ಏರಿಕೆ ಇಲ್ಲ.
ವಿಮಾನಯಾನ ಇಂಧನ (ATF) ದರ ಹೇಗಿದೆ?
ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗುವ ಇಂಧನದ (ATF) ದರವನ್ನು ಇಂದಿನಿಂದ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲಿಡಲಾಗಿದೆ. ಆದರೆ, ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ನೀಡುವ ಇಂಧನ ದರದಲ್ಲಿ ಏರಿಕೆ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ತಿಳಿಸಿದೆ.
ಬೆಲೆ ಏರಿಕೆಯ ಹಿಂದಿನ ಲೆಕ್ಕಾಚಾರ
ಇಂಡಿಯನ್ ಆಯಿಲ್ ಕಾರ್ಪೊರೇಷನ್ ನೀಡಿರುವ ಮಾಹಿತಿಯ ಪ್ರಕಾರ ದೇಶದ ಒಟ್ಟು ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ಶೇ. 80ರಷ್ಟು ಉತ್ಪನ್ನಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕೇವಲ ಶೇ. 16ರಷ್ಟು ಉತ್ಪನ್ನಗಳ (ಹೆಚ್ಚಾಗಿ ಕೈಗಾರಿಕಾ ಇಂಧನಗಳು) ಬೆಲೆ ಹೆಚ್ಚಳವಾಗಿದೆ. ಕೇವಲ ಶೇ. 4ರಷ್ಟು ಉತ್ಪನ್ನಗಳ ಬೆಲೆ ಇಳಿಕೆಯಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯು ಹೋಟೆಲ್, ರೆಸ್ಟೋರೆಂಟ್ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಮಾತ್ರ ಅನ್ವಯಿಸಲಿದೆ.
ಕಳೆದ ತಿಂಗಳೂ ಸಹ ವಾಣಿಜ್ಯ ಸಿಲಿಂಡರ್ ಮತ್ತು 5 ಕೆಜಿಯ ಮಿನಿ ಸಿಲಿಂಡರ್‌ಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಈಗ ಎರಡನೇ ಬಾರಿಗೆ ಅತಿ ದೊಡ್ಡ ಮೊತ್ತದ ಏರಿಕೆ ಮಾಡಲಾಗಿದೆ. ಕಚ್ಚಾ ತೈಲದ ಅಂತರಾಷ್ಟ್ರೀಯ ಬೆಲೆಗಳ ಏರಿಕೆಯನ್ನು ಸರಿದೂಗಿಸಲು ತೈಲ ಕಂಪನಿಗಳು ಈ ಕ್ರಮ ಕೈಗೊಂಡಿವೆ.


