ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೊಮ್ಮೆ ಏರಿಕೆಯಾಗಿವೆ. ಮೇ 23 ರಂದು ಪೆಟ್ರೋಲ್ ಬೆಲೆ 87 ಪೈಸೆ ಮತ್ತು ಡೀಸೆಲ್ ಬೆಲೆ 91 ಪೈಸೆ ಹೆಚ್ಚಳವಾಗಿದ್ದು, ಕಳೆದ 10 ದಿನಗಳಲ್ಲಿ ಒಟ್ಟು ₹5 ರಷ್ಟು ಏರಿಕೆ ಕಂಡಿದೆ.

ನವದೆಹಲಿ (ಮೇ.23): ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆ ನಿರಂತರವಾಗಿ ಏರುತ್ತಿರುವುದು ಮತ್ತು ಪಶ್ಚಿಮ ಏಷ್ಯಾದಲ್ಲಿ (Middle East) ಭುಗಿಲೆದ್ದಿರುವ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂಧನ ದರಗಳು ಮತ್ತೆ ಗಗನಕ್ಕೇರಿವೆ. ಶನಿವಾರದಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆಸರಾಸರಿ 87 ಪೈಸೆ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 91 ಪೈಸೆ ಹೆಚ್ಚಿಸಿವೆ. ಪ್ರಸಕ್ತ ತಿಂಗಳಿನಲ್ಲಿ ತೈಲ ದರ ಪರಿಷ್ಕರಣೆಯಾಗಿರುವುದು ಇದು ಮೂರನೇ ಬಾರಿಯಾಗಿದ್ದು, ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 87 ಪೈಸೆ ಏರಿಕೆಯಾಗುವುದರೊಂದಿಗೆ ₹98.64 ರಿಂದ ₹99.51 ಕ್ಕೆ ತಲುಪಿದೆ. ಇನ್ನು ಡೀಸೆಲ್ ಬೆಲೆ 91 ಪೈಸೆ ಹೆಚ್ಚಳವಾಗಿ ₹91.58 ರಿಂದ ₹92.49 ಕ್ಕೆ ಏರಿಕೆಯಾಗಿದೆ.

10 ದಿನಗಳಲ್ಲಿ ₹5 ರಷ್ಟು ಬೆಲೆ ಏರಿಕೆ!

ಮೇ ತಿಂಗಳಿನಲ್ಲಿ ತೈಲ ಕಂಪನಿಗಳು ಸತತವಾಗಿ ದರ ಹೆಚ್ಚಿಸುತ್ತಲೇ ಬಂದಿವೆ.

ಮೇ 16: ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಒಮ್ಮೆಗೇ ಬರೋಬ್ಬರಿ ₹3 ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು.

ಮೇ 19: ಎಲ್ಲಾ ಪ್ರಮುಖ ಮೆಟ್ರೋ ನಗರಗಳಲ್ಲಿ ಇಂಧನ ದರವನ್ನು ಮತ್ತೆ 90 ಪೈಸೆ ಹೆಚ್ಚಳ ಮಾಡಲಾಯಿತು.

ಮೇ 23: ಪ್ರಸಕ್ತ ಸಾಲಿನ 3ನೇ ಗರಿಷ್ಠ ಏರಿಕೆಯಾಗಿ ಪೆಟ್ರೋಲ್ 87 ಪೈಸೆ ಹಾಗೂ ಡೀಸೆಲ್ 91 ಪೈಸೆ ದುಬಾರಿಯಾಗಿದೆ. ಈ ಮೂಲಕ ಕಳೆದ ಕೇವಲ ಹತ್ತು ದಿನಗಳ ಅವಧಿಯಲ್ಲೇ ಇಂಧನ ದರಗಳು ಒಟ್ಟಾರೆಯಾಗಿ ಬರೋಬ್ಬರಿ ₹5 ರಷ್ಟು ಜಿಗಿತ ಕಂಡಿವೆ.

ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ - ಡೀಸೆಲ್ ದರ ಪಟ್ಟಿ

ನಗರಪೆಟ್ರೋಲ್ ದರ (ಪ್ರತಿ ಲೀಟರ್‌ಗೆ)ಡೀಸೆಲ್ ದರ (ಪ್ರತಿ ಲೀಟರ್‌ಗೆ)
ಬೆಂಗಳೂರು₹108.10 (+0.95 ಪೈಸೆ)₹95.03 (+0.60 ಪೈಸೆ)
ದೆಹಲಿ₹99.51 (+0.87 ಪೈಸೆ)₹92.49 (+0.91 ಪೈಸೆ)
ಮುಂಬೈ₹107.56 (+0.87 ಪೈಸೆ)₹94.05 (+0.91 ಪೈಸೆ)
ಕೋಲ್ಕತಾ₹110.57 (+0.87 ಪೈಸೆ)₹96.04 (+0.91 ಪೈಸೆ)
ಚೆನ್ನೈ,₹104.54 (+0.87 ಪೈಸೆ)₹96.16 (+0.91 ಪೈಸೆ)
ಗುರುಗ್ರಾಮ₹100.38 (+0.87 ಪೈಸೆ),₹92.92 (+0.91 ಪೈಸೆ)
ನೋಯ್ಡಾ₹98.78 (+0.87 ಪೈಸೆ)₹93.12 (+0.91 ಪೈಸೆ)

ಇಂಧನ ಕೊರತೆ ವದಂತಿ: ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಸ್ಪಷ್ಟನೆ

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಎದುರಾಗಲಿದೆ ಎಂಬ ವದಂತಿಗಳು ಶುಕ್ರವಾರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಇದಕ್ಕೆ ತಕ್ಷಣವೇ ಕೌಂಟರ್ ನೀಡಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು, "ದೇಶಾದ್ಯಂತ ಇಂಧನ ಪೂರೈಕೆ ಸಂಪೂರ್ಣ ಸ್ಥಿರವಾಗಿದೆ ಮತ್ತು ಭಾರತದಲ್ಲಿ ಅಗತ್ಯವಿರುವಷ್ಟು ಪೆಟ್ರೋಲ್-ಡೀಸೆಲ್ ದಾಸ್ತಾನು ಇದೆ. ಸಾರ್ವಜನಿಕರು ಆತಂಕಗೊಂಡು ಅನಗತ್ಯವಾಗಿ ಇಂಧನ ಸಂಗ್ರಹಣೆ (Panic Buying) ಮಾಡಬಾರದು. ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಕಂಡುಬಂದಿರುವ ತಾತ್ಕಾಲಿಕ ಒತ್ತಡವನ್ನು ತೈಲ ಮಾರಾಟ ಕಂಪನಿಗಳು (OMCs) ನಿರಂತರ ಉಸ್ತುವಾರಿ ಮತ್ತು ಸಮನ್ವಯದ ವಿತರಣೆಯ ಮೂಲಕ ಬಗೆಹರಿಸುತ್ತಿವೆ" ಎಂದು ಟ್ವೀಟ್ ಮೂಲಕ ಭರವಸೆ ನೀಡಿದೆ.