Mukesh Ambani's Advice to Gen Z: Convert Savings into Investments ಭಾರತವನ್ನು ಭವಿಷ್ಯದ $25-30 ಟ್ರಿಲಿಯನ್ ಆರ್ಥಿಕತೆ ಎಂದು ಕರೆದ ಮುಖೇಶ್ ಅಂಬಾನಿ, ಜನರು ತಮ್ಮ ಉಳಿತಾಯವನ್ನು ಹೂಡಿಕೆಗಳಾಗಿ ಪರಿವರ್ತಿಸಿಕೊಳ್ಳುವಂತೆ ಸಲಹೆ ನೀಡಿದರು.
ಮುಂಬೈ (ಫೆ.5): ಸಾಮಾನ್ಯವಾಗಿ ಮುಖೇಶ್ ಅಂಬಾನಿ ತಮ್ಮ ಉದ್ಯಮದ ಬಗ್ಗೆ ಮಾತನಾಡುತ್ತಾರೆಯೇ ಹೊರತು ಎಲ್ಲಿಯೂ ಯಾವ ಸಲಹೆಯನ್ನೂ ನೀಡೋದಿಲ್ಲ. ಹೀಗೆ ಮಾಡಿ, ಹಾಗೆ ಮಾಡಿ ಅಂತಾ ಅವರು ಹೇಳೋದು ಎಲ್ಲಿಯೂ ಕೇಳಿ ಬರೋದಿಲ್ಲ. ಆದರೆ, ತೀರಾ ಅಪರೂಪ ಎನ್ನುವಂತೆ ಅವರು ಭಾರತದ ಜೆನ್ ಝೀಗೆ ಸಲಹೆ ನೀಡಿದ್ದು, ಯಾವುದೇ ಕಾರಣಕ್ಕೂ ಬರೀ ಸೇವಿಂಗ್ಸ್ ಮಾಡಿಕೊಂಡೇ ಇರಬೇಡಿ, ಹೂಡಿಕೆ ಮಾಡಿ ಎಂದು ಹೇಳಿದ್ದಾರೆ. ಬಂಡವಾಳ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದರಿಂದ ಕುಟುಂಬದ ಸಂಪತ್ತು ಹೆಚ್ಚಾಗುವುದಲ್ಲದೆ ದೇಶದ ಆರ್ಥಿಕ ಬೆಳವಣಿಗೆಯೂ ವೇಗಗೊಳ್ಳುತ್ತದೆ ಎಂದಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಬುಧವಾರ ಭಾರತಕ್ಕೆ ನಿರಂತರ ಎರಡಂಕಿಯ ಬೆಳವಣಿಗೆ ಸಾಧ್ಯ ಎಂದು ಹೇಳಿದರು. ಮತ್ತು ಸ್ಥಿರ ಆರ್ಥಿಕ ನಾಯಕತ್ವವು ಯಾವುದೇ ದೇಶವನ್ನು ನಿರ್ಧಾರ ಮಾಡುತ್ತದೆ ಎಂದಿದ್ದಾರೆ. ಜಿಯೋಬ್ಲಾಕ್‌ರಾಕ್ ಕಾರ್ಯಕ್ರಮದಲ್ಲಿ, ಮುಂದಿನ ದಶಕದಲ್ಲಿ ಭಾರತವು ತನ್ನ ಶೇಕಡಾ 80 ರಷ್ಟು ಶಕ್ತಿಯನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಅಂಬಾನಿ ಹೇಳಿದರು. ಭಾರತದ ಪ್ರತಿಯೊಂದು ಹಳ್ಳಿಯೂ 5G ನೆಟ್‌ವರ್ಕ್ ಅನ್ನು ಹೊಂದಿದ್ದು, ಅದು ಯಾವುದೇ ಇತರ ದೇಶಗಳಿಗಿಂತ ಉತ್ತಮ ಮತ್ತು ಅಗ್ಗವಾಗಿದೆ ಎಂದಿದ್ದಾರೆ.
ದೇಶದಲ್ಲಿ ರಿಲಯನ್ಸ್‌ನಂಥ 100 ಕಂಪನಿ ಸೃಷ್ಟಿಯಾಗಲಿದೆ
ಆರ್ಥಿಕ ಬೆಳವಣಿಗೆಗೆ 15-20 ವರ್ಷಗಳ ಕಾಲ ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಯ್ದುಕೊಳ್ಳುವುದು ಅಗತ್ಯ ಎಂದು ಅಂಬಾನಿ ಹೇಳಿದರು. "ದೇಶದಲ್ಲಿ ರಿಲಯನ್ಸ್ ನಂತಹ 100 ಹೊಸ ಕಂಪನಿಗಳು ಹೊರಹೊಮ್ಮುತ್ತಿವೆ ಎಂದು ನಾನು ಸ್ಪಷ್ಟವಾಗಿ ನೋಡುತ್ತಿದ್ದೇನೆ" ಎಂದು ಅವರು ಹೇಳಿದರು.
ಮುಂದಿನ 20-30 ವರ್ಷಗಳಲ್ಲಿ ಭಾರತವು 25 ರಿಂದ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಹೇಳಿದ್ದಾರೆ. ಈ ಅವಧಿಯು ದೇಶದ ಯುವ ಪೀಳಿಗೆಗೆ ದೊಡ್ಡ ಹೂಡಿಕೆ ಅವಕಾಶವನ್ನು ಒದಗಿಸುತ್ತದೆ.
ಉಳಿತಾಯದ ದೇಶವಾಗಿಯೇ ಇರೋದು ಬೇಡ
ಜಿಯೋಬ್ಲಾಕ್‌ರಾಕ್ ಕಾರ್ಯಕ್ರಮದಲ್ಲಿ ಮುಖೇಶ್ ಅಂಬಾನಿ, ಭಾರತ ಸಾಂಪ್ರದಾಯಿಕವಾಗಿ ಉಳಿತಾಯದ ದೇಶವಾಗಿದೆ ಎಂದು ಹೇಳಿದರು. ಆದರೆ ಈಗ ಹೂಡಿಕೆ ಮಾಡುವ ಮೂಲಕ ದೇಶದ ಪ್ರಗತಿಯ ಲಾಭವನ್ನು ಪಡೆದುಕೊಳ್ಳುವ ಸಮಯ. ಉಳಿತಾಯವನ್ನು ಹೂಡಿಕೆಗಳಾಗಿ ಪರಿವರ್ತಿಸಬೇಕು. ಬಂಡವಾಳ ಮಾರುಕಟ್ಟೆಗಳಲ್ಲಿ ಉಳಿತಾಯವನ್ನು ಹೂಡಿಕೆ ಮಾಡುವುದರಿಂದ ಮನೆಯ ಸಂಪತ್ತು ಹೆಚ್ಚಾಗುವುದಲ್ಲದೆ ದೇಶದ ಆರ್ಥಿಕ ಬೆಳವಣಿಗೆಯೂ ವೇಗಗೊಳ್ಳುತ್ತದೆ. ಬ್ಲಾಕ್‌ರಾಕ್‌ನ ಲ್ಯಾರಿ ಫಿಂಕ್ ಕೂಡ ಈ ಕಲ್ಪನೆಯನ್ನು ಬೆಂಬಲಿಸಿದರು, ಭಾರತದಂತಹ ವೇಗವಾಗಿ ಬೆಳೆಯುತ್ತಿರುವ ದೇಶದಲ್ಲಿ ದೀರ್ಘಾವಧಿಯ ಇಕ್ವಿಟಿ ಹೂಡಿಕೆಗಳು ಸಂಪತ್ತು ಸೃಷ್ಟಿಗೆ ಅತ್ಯಂತ ಪರಿಣಾಮಕಾರಿ ಸಾಧನವಾಗಬಹುದು ಎಂದು ಹೇಳಿದರು.
ಭಾರತದ ಬೆಳವಣಿಗೆಯು ಬಲವಾದ ನೀತಿಗಳು, ರಾಜಕೀಯ ಸ್ಥಿರತೆ, ಬೃಹತ್ ಮೂಲಸೌಕರ್ಯ ನಿರ್ಮಾಣ ಮತ್ತು ಡಿಜಿಟಲ್ ಕ್ರಾಂತಿಯಲ್ಲಿ ಬೇರೂರಿದೆ ಎಂದು ಅಂಬಾನಿ ಹೇಳಿದರು. 5G, ಡಿಜಿಟಲ್ ಇಂಡಿಯಾ ಮತ್ತು ಬಂಡವಾಳ ಮಾರುಕಟ್ಟೆಗಳ ವಿಸ್ತರಣೆಯು ಭಾರತವನ್ನು ದೀರ್ಘಾವಧಿಯ ಹೂಡಿಕೆಗೆ ಆಕರ್ಷಕ ತಾಣವನ್ನಾಗಿ ಮಾಡಿದೆ.
ಕೃತಕ ಬುದ್ಧಿಮತ್ತೆಯ ಮಹತ್ವದ ಬಗ್ಗೆ ಹೇಳಿದ ಅಂಬಾನಿ, ಎಐ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಆಳವಾದ ಬದಲಾವಣೆಗಳನ್ನು ತರಬಹುದು ಎಂದು ಹೇಳಿದರು. ಎಐ ಮೂಲಕ 1.4 ಶತಕೋಟಿ ಜನರಿಗೆ ಉತ್ತಮ ಗುಣಮಟ್ಟದ ಶಿಕ್ಷಣ, ಸುಧಾರಿತ ಆರೋಗ್ಯ ರಕ್ಷಣೆ ಮತ್ತು ಪರಿಣಾಮಕಾರಿ ಸಾರ್ವಜನಿಕ ಸೇವೆಗಳನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಬಹುದು ಎಂದಿದ್ದಾರೆ.


