ಬಾಡಿಗೆ ಮನೆಗೆ ಎರಡು ತಿಂಗಳಷ್ಟೇ ಅಡ್ವಾನ್ಸ್, ಕೇಂದ್ರದ ಹೊಸ ಕಾಯ್ದೆ!
* ‘ಮಾದರಿ ಬಾಡಿಗೆ’ ಕಾಯ್ದೆಗೆ ಕೇಂದ್ರ ಅಸ್ತು
* ಮಾಲೀಕರು ಬಾಡಿಗೆಯ 2 ತಿಂಗಳಷ್ಟೇ ಭದ್ರತಾ ಠೇವಣಿ ಪಡೆಯಬೇಕು
* ಬಾಡಿಗೆದಾರ ಮನೆ ತೆರವು ಮಾಡಿದ್ದರೆ ಬಾಡಿಗೆ ಹೆಚ್ಚಳ ಅವಕಾಶ
* ಬಾಡಿಗೆ ಕುರಿತ ವ್ಯಾಜ್ಯಗಳಿದ್ದರೆ ‘ಬಾಡಿಗೆ ಟ್ರಿಬ್ಯುನಲ್’ಗೆ ದೂರಬಹುದು
* ಮಾಲೀಕ, ಬಾಡಿಗೆದಾರ ಇಬ್ಬರಿಗೂ ನ್ಯಾಯ ಒದಗಿಸುವ ಹೊಸ ಕಾಯ್ದೆ
ನವದೆಹಲಿ(ಜೂ.03): ಬಾಡಿಗೆದಾರರು ಹಾಗೂ ಬಾಡಿಗೆ ಮನೆ ಮಾಲೀಕರಿಗಿಬ್ಬರೂ ನೆರವಾಗುವ ಹೊಸ ಕಾಯ್ದೆಯೊಂದಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದಿಸಿದೆ. ಇದಲ್ಲದೆ, ಹೊಸ ಕಾಯ್ದೆಯಲ್ಲಿ ಬಾಡಿಗೆ ಪ್ರಾಧಿಕಾರ, ಬಾಡಿಗೆ ನ್ಯಾಯಾಧಿಕರಣಗಳು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸುವ ಅವಕಾಶ ಲಭಿಸಲಿದ್ದು, ವ್ಯಾಜ್ಯಗಳಿದ್ದರೆ ಜಿಲ್ಲಾ ಮಟ್ಟದಲ್ಲೇ ಇತ್ಯರ್ಥವಾಗಲಿವೆ.
ಇದಲ್ಲದೆ ಮನೆಯ 2 ತಿಂಗಳ ಬಾಡಿಗೆಯಷ್ಟು ಹಣ ಮಾತ್ರ ಅಡ್ವಾನ್ಸ್ ರೂಪದಲ್ಲಿ ಪಡೆಯಲು ನಿರ್ಬಂಧ ವಿಧಿಸಲಾಗಿದೆ. ಈಗ ಸಾಮಾನ್ಯವಾಗಿ 10 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಪಡೆಯಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಮಾದರಿ ಬಾಡಿಗೆ ಕಾಯ್ದೆ’ಗೆ ಅನುಮೋದನೆ ನೀಡಲಾಯಿತು.
ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!
ಆದರೆ ಈ ಕಾಯ್ದೆ ನೇರವಾಗಿ ಕೇಂದ್ರ ಸರ್ಕಾರದಿಂದ ಜಾರಿಯಾಗದು. ಕೇಂದ್ರವು ಶೀಘ್ರವೇ ಇದನ್ನು ರಾಜ್ಯಗಳಿಗೆ ಕಳುಹಿಸಿಕೊಡಲಿದೆ. ರಾಜ್ಯಗಳಲ್ಲಿ ಪ್ರತ್ಯೇಕ ಬಾಡಿಗೆ ಕಾಯ್ದೆಗಳಿವೆ. ಅವು ಹಾಲಿ ತಾವು ಹೊಂದಿರುವ ಬಾಡಿಗೆ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತರುವ ಮೂಲಕ ಹೊಸ ಅಂಶಗಳನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸಭೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಸರ್ಕಾರ, ಹೊಸ ಕಾಯ್ದೆ ಜಾರಿಯಿಂದಾಗಿ, ಬಾಡಿಗೆಗೆ ವಿಷಯಕ್ಕೆ ಇನ್ನು ಮುಂದೆ ದೇಶಾದ್ಯಂತ ಅಗತ್ಯ ಕಾನೂನು ಚೌಕಟ್ಟು ಸಿಗಲಿದೆ. ದೇಶದಲ್ಲಿ ಭಾರೀ ಪ್ರಮಾಣದಲ್ಲಿರುವ ಮನೆಗಳ ಕೊರತೆ ತುಂಬಲು ಇದು ಅವಕಾಶ ಮಾಡಿಕೊಡಲಿದೆ. ಬಾಡಿಗೆ ವಲಯ ಇನ್ನು ಉದ್ಯಮ ಸ್ವರೂಪ ಪಡೆದುಕೊಳ್ಳಲು ಅನುವು ಮಾಡಿಕೊಡಲಿದೆ. ಖಾಸಗಿಯವರ ಪಾಲುದಾರಿಕೆಗೆ ಹೆಚ್ಚಿನ ಅವಕಾಶ ಮಾಡಿಕೊಡಲಿದೆ ಎಂದು ತಿಳಿಸಿದೆ.
ಜಪಾನ್ನಲ್ಲಿ 12-15 ವರ್ಷದ ಮಕ್ಕಳಿಗೆ ಫೈಝರ್ ಲಸಿಕೆ!
ಕಾಯ್ದೆಯಲ್ಲೇನಿದೆ?
- ಮಾಲೀಕ, ಬಾಡಿಗೆದಾರನಿಗೆ ನ್ಯಾಯ ಒದಗಿಸಲು ಬಾಡಿಗೆ ಪ್ರಾಧಿಕಾರ ರಚನೆ
- ಮನೆ/ವಾಣಿಜ್ಯ ಕಟ್ಟಡದ ಬಾಡಿಗೆ ಒಪ್ಪಂದಗಳನ್ನು ಪ್ರಾಧಿಕಾರಕ್ಕೆ ನೀಡಬೇಕು.
- ಈ ಪ್ರಾಧಿಕಾರ ಎಲ್ಲಾ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಿಕೊಡಲಿದೆ
- ಬಾಡಿಗೆ ಸಂಬಂಧಿ ಸಮಸ್ಯೆಗಳಿದ್ದರೆ ಜಿಲ್ಲಾ ಬಾಡಿಗೆ ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಕೆ
- ಮಾಲೀಕ, ಬಾಡಿಗೆದಾರರ ನಡುವೆ ಸದಾ ವ್ಯಾಜ್ಯಕ್ಕೆ ಕಾರಣವಾಗುವ ಭದ್ರತಾ ಠೇವಣಿ ಮೇಲೆ ಮಿತಿ
- ಮಾಸಿಕ ಬಾಡಿಗೆ ಮೊತ್ತದ 2 ತಿಂಗಳ ಹಣವನ್ನು ಮಾತ್ರ ಮನೆಗಳಿಗೆ ಭದ್ರತಾ ಶುಲ್ಕವಾಗಿ ಪಡೆಯಬಹುದು
- ವಾಣಿಜ್ಯ ಕಟ್ಟಡಗಳಿಗೆ ಮಾಸಿಕ ಬಾಡಿಗೆಯ 6 ಪಟ್ಟು ಹಣವನ್ನು ಮಾತ್ರವೇ ಭದ್ರತಾ ಶುಲ್ಕವಾಗಿ ಪಡೆಯಬಹುದು
- ಬಾಡಿಗೆ ಒಪ್ಪಂದ ಮುಗಿದ ಬಳಿಕ ಮನೆ ಖಾಲಿ ಮಾಡದೇ ಇದ್ದರೆ ಮಾಲೀಕನಿಗೆ ಕಾಯ್ದೆಯಡಿ ನೆರವು
- ಒಪ್ಪಂದದ ಬಳಿಕಕ ಮನೆ ಖಾಲಿ ಮಾಡದಿದ್ದರೆ ಮಾಲೀಕ ಮುಂದಿನ 2 ತಿಂಗಳ ಅವಧಿಗೆ ಬಾಡಿಗೆ ದ್ವಿಗುಣ ಮಾಡಬಹುದು.
- 2 ತಿಂಗಳ ಬಳಿಕ ಮನೆ ಖಾಲಿ ಮಾಡದೇ ಇದ್ದರೆ, ಬಾಡಿಗೆಯನ್ನು 4 ಪಟ್ಟು ಹೆಚ್ಚಿಸಬಹುದು.
- ಯಾವುದೇ ಭೂಮಾಲೀಕ ಬಾಡಿಗೆದಾರನಿಗೆ 24 ತಾಸುಗಳ ಮೊದಲೇ ನೋಟಿಸ್ ನೀಡಿ ಜಾಗ ಪ್ರವೇಶಿಸುವ ಹಕ್ಕು ಹೊಂದಿರುತ್ತಾನೆ.
- ಮನೆಯಲ್ಲಿ ಬಾಡಿಗೆದಾರನು ಕಟ್ಟಡಕ್ಕೆ ಹಾನಿ ಮಾಡಿದರೆ ರಿಪೇರಿಗೆ ಆತನೇ ಹಣ ನೀಡಬೇಕು
- ಕಟ್ಟಡದಲ್ಲಿ ಅನ್ಯ ಮಾರ್ಪಾಡು ಮಾಡಬೇಕಿದ್ದರೆ ಮಾಲೀಕ ಅದರ ವೆಚ್ಚ ಭರಿಸಬೇಕು
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona