ಸುಭಾಷ್‌ ಚಂದ್ರ: ಎಸ್ಸೆಲ್‌ ಗ್ರೂಪ್‌ನ ಅಧ್ಯಕ್ಷ ಸುಭಾಷ್‌ ಚಂದ್ರ ಭಾರತೀಯ ಟೀವಿ ಲೋಕದ ಮೊದಲ ದೊರೆ. ಝೀ ವಾಹಿನಿಯ ಅಧ್ಯಕ್ಷರು ಸಹ ಆಗಿದ್ದ ಸುಭಾಷ್‌ ಚಂದ್ರ ಒಡೆತನದ ಕಂಪನಿಗಳು ಇದೀಗ ಸಾವಿರಾರು ಕೋಟಿ ರು. ಸಾಲದಲ್ಲಿವೆ. ಪರಿಣಾಮ ತಮ್ಮ ಒಡೆತನದ ಹಲವು ಟೀವಿ ಚಾನೆಲ್‌ಗಳನ್ನು ಮಾರಾಟ ಮಾಡಿ ನಷ್ಟಭರಿಸಲು ಇನ್ನಿಲ್ಲದ ಯತ್ನ ನಡೆಸುತ್ತಿದ್ದಾರೆ.

ಅನಿಲ್‌ ಅಂಬಾನಿ: ಅನಿಲ್‌ ಅಂಬಾನಿ ದೇಶದ ನಂ.1 ಶ್ರೀಮಂತ ಮುಕೇಶ್‌ ಅಂಬಾನಿ ಅವರ ಕಿರಿಯ ಸೋದರ. ಮುಕೇಶ್‌ ಕಂಪನಿಗಳೆಲ್ಲಾ ಭರ್ಜರಿ ಲಾಭದಲ್ಲಿದ್ದರೆ, ಅನಿಲ್‌ರ ಎಲ್ಲಾ ಕಂಪನಿಗಳು ನಷ್ಟದ ಹಾದಿ ಹಿಡಿದಿವೆ. ಇತ್ತೀಚೆಗೆ 400 ಕೋಟಿ ರು. ಪಾವತಿಸದ ಕಾರಣ ಜೈಲು ಪಾಲಾಗುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಸೋದರನ ಕೃಪೆಯಿಂದ ಪಾರಾಗಿದ್ದಾರೆ. ಇದರ ಹೊರತಾಗಿಯೂ ಅವರು 50000 ಕೋಟಿ ರು.ಗೂ ಹೆಚ್ಚಿನ ಸಾಲ ಹೊಂದಿದ್ದಾರೆ.

ವಿಜಯ್‌ ಮಲ್ಯ: ವಿಜಯ್‌ ಮಲ್ಯ ಮದ್ಯದ ದೊರೆ ಎಂದೇ ಪ್ರಖ್ಯಾತರಾದವರು. ಆದರೆ 2003ರಲ್ಲಿ ಮಲ್ಯ ಆರಂಭಿಸಿ ಕಿಂಗ್‌ಫಿಶರ್‌ ವಿಮಾನಯಾನ ಸಂಸ್ಥೆ ಅವರನ್ನು ವಿನಾಶದ ಅಂಚಿಗೆ ದೂಕಿತು. ಅವರು 9000 ಕೋಟಿ ರು.ಗೂ ಹೆಚ್ಚಿನ ಸಾಲ ಮಾಡಿ ಲಂಡನ್‌ಗೆ ಪರಾರಿಯಾಗಿದ್ದಾರೆ. ಅವರ ಬಳಿಯಿದ್ದ ಕಿಂಗ್‌ಫಿಶರ್‌ ಮದ್ಯದ ಕಂಪನಿಯೂ ಅವರ ಕೈಬಿಟ್ಟಿತು. ಅವರೀಗ ಬ್ರಿಟನ್‌ನಿಂದ ಭಾರತಕ್ಕೆ ಗಡಿಪಾರಾಗಿ, ಜೈಲು ಶಿಕ್ಷೆ ಎದುರಿಸುವ ಭೀತಿಯಲ್ಲಿದ್ದಾರೆ.

ನೀರವ್‌ ಮೋದಿ: ಗುಜರಾತ್‌ ಮೂಲದ ನೀರವ್‌ ಮೋದಿ ಪ್ರಮುಖ ವಜ್ರೋದ್ಯಮಿ. ಉದ್ಯಮ ವಿಸ್ತರಣೆಗಾಗಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ 13000 ಕೋಟಿ ರು.ಗೂ ಹೆಚ್ಚು ಸಾಲ ಪಡೆದು, ಇದೀಗ ವಂಚನೆ ಪ್ರಕರಣ ಎದುರಿಸುತ್ತಿದ್ದಾರೆ. ಸಾಲ ಮರುಪಾವತಿ ಮಾಡದೇ ವಿದೇಶಕ್ಕೆ ಪರಾರಿಯಾಗಿದ್ದಾರೆ. ಇವರು ಕೂಡಾ ಮಲ್ಯ ರೀತಿಯಲ್ಲಿ ಬ್ರಿಟನ್‌ನಿಂದ ಭಾರತಕ್ಕೆ ಗಡಿಪಾರಾಗಿ ಜೈಲು ಶಿಕ್ಷೆ ಎದುರಿಸುವ ಭೀತಿಯಲ್ಲಿದ್ದಾರೆ.

ಸುಬ್ರತೋ ರಾಯ್‌: ಸುಬ್ರತೋ ರಾಯ್‌ ಸಹರಾ ಇಂಡಿಯಾ ಪರಿವಾರದ ಅಧ್ಯಕ್ಷರಾಗಿದ್ದವರು. ರಿಯಲ್‌ ಎಸ್ಟೇಟ್‌, ಬ್ಯಾಂಕೇತರ ಹಣಕಾಸು ಸಂಸ್ಥೆ ಸೇರಿದಂತೆ ಹತ್ತಾರು ಉದ್ಯಮದಲ್ಲಿ ಏಕಕಾಲಕ್ಕೆ ಕಾಲಿಟ್ಟರು. ಇದೇ ವೇಳೆ ಸಹರಾ ವಿಮಾನಯಾನ ಸಂಸ್ಥೆ ಖರೀದಿಸಿದರು. ಈ ಪೈಕಿ ಹಲವು ಉದ್ಯಮಗಳು ಕೈಕೊಟ್ಟು, ಹಾಲಿ ಸಾವಿರಾರು ಕೋಟಿ ಸಾಲದಲ್ಲಿ ಮುಳುಗಿದ್ದಾರೆ. ಇದೇ ಪ್ರಕರಣಗಳ ಸಂಬಂಧ ಜೈಲು ಪಾಲಾಗಿದ್ದಾರೆ. ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ನರೇಶ್‌ ಗೋಯೆಲ್‌: ನರೇಶ್‌ ಗೋಯೆಲ್‌ ಜೆಟ್‌ ಏರ್‌ವೇಸ್‌ನ ಸಂಸ್ಥಾಪಕ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಸಂಸ್ಥೆ, ಇತ್ತೀಚಿನ ವರ್ಷಗಳಲ್ಲಿ ವಿಮಾನಯಾನ ವಲಯದಲ್ಲಿ ಪೈಪೋಟಿ, ತೈಲ ಬೆಲೆ ಏರಿಕೆ ಮೊದಲಾದ ಕಾರಣಗಳಿಂದಾಗಿ 8000 ಕೋಟಿ ರು. ನಷ್ಟದಲ್ಲಿದೆ. ಸಾಲ ತೀರಿಸಲಾಗದೇ, ಅವರು ಕಂಪನಿಯ ಅಧ್ಯಕ್ಷ ಹುದ್ದೆಯನ್ನೂ ತೊರೆದಿದ್ದಾರೆ. ಅದರೂ ಕಂಪನಿ ಖರೀದಿಗೆ ಯಾರೂ ಬಂದಿಲ್ಲ. ಹೀಗಾಗಿ ಇದೀಗ ಕಂಪನಿ ವಿರುದ್ಧ ದಿವಾಳಿ ತಡೆ ಕಾಯ್ದೆಯಡಿ ಮಾರಾಟ ಪ್ರಕ್ರಿಯೆ ಆರಂಭಿಸಲಾಗಿದೆ.