Asianet Suvarna News Asianet Suvarna News

ಅಣಬೆ ಕೃಷಿಯಿಂದಲೂ ಇಷ್ಟು ಸಂಪಾದಿಸ್ಬಹುದಾ? ಕೇರಳದ ಈ ತಾಯಿ-ಮಗನ ದಿನದ ಗಳಿಕೆ 40 ಸಾವಿರ ರೂ.!

ಗಳಿಕೆಗೆ ನೂರಾರು ಮಾರ್ಗಗಳಿವೆ. ಆದರೆ, ಯಾವ ಮಾರ್ಗ ಆಯ್ಕೆ ಮಾಡಿದರೂ ದೃಢ ಸಂಕಲ್ಪ ಹಾಗೂ ಪರಿಶ್ರಮವಿದ್ದರೆ ಮಾತ್ರ ಯಶಸ್ಸು ಸಾಧ್ಯ. ಇದಕ್ಕೆ ಅಣಬೆ ಕೃಷಿ ಮೂಲಕ ಉತ್ತಮ ಆದಾಯ ಗಳಿಸುತ್ತಿರುವ ಕೇರಳದ ತಾಯಿ-ಮಗನೇ ಉತ್ತಮ ನಿದರ್ಶನ. ಕೇರಳದ ಜೀತು ಥೋಮಸ್  ಹಾಗೂ ಆತನ ತಾಯಿ ಲೀನಾ ಥೋಮಸ್ ಅಣಬೆ ಕೃಷಿಯಿಂದಲೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಅವರ ಯಶಸ್ಸಿನ ಕಥೆ ಇಲ್ಲಿದೆ. 
 

Meet The Mushroom Farming Mother Son Duo Making Rs 40000 A Day anu
Author
First Published Feb 27, 2023, 5:57 PM IST

Business Desk:ನಿಮ್ಮಲ್ಲಿ ಸಾಧಿಸುವ ಛಲ, ದೃಢಸಂಕಲ್ಪವಿದ್ದರೆ ಬದುಕಿನಲ್ಲಿ ಯಾವುದು ಕೂಡ ಅಸಾಧ್ಯವಲ್ಲ ಎನ್ನುವುದಕ್ಕೆ ಕೇರಳದ ಈ ತಾಯಿ ಹಾಗೂ ಮಗನೇ ಅತ್ಯುತ್ತಮ ನಿದರ್ಶನ. ಹೌದು, ಕೇರಳದ ಜೀತು ಥೋಮಸ್  ಹಾಗೂ ಆತನ ತಾಯಿ ಲೀನಾ ಥೋಮಸ್ ಅಣಬೆ ಕೃಷಿಯಿಂದಲೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಪ್ರಾರಂಭದಲ್ಲಿ ದಿನಕ್ಕೆ ಒಂದೇ ಒಂದು ಅಣಬೆ ಪ್ಯಾಕೇಟ್ ಅಷ್ಟೇ ಮಾರಾಟ ಮಾಡಲು ಸಾಧ್ಯವಾಗುತ್ತಿದ್ದ ಈ ತಾಯಿ-ಮಗ ನಾಲ್ಕು ವರ್ಷಗಳೊಳಗೆ ದಿನಕ್ಕೆ 40,000ರೂ. ಸಂಪಾದನೆ ಮಾಡುವ ಮಟ್ಟಕ್ಕೆ ತಮ್ಮ ಉದ್ಯಮ ವಿಸ್ತರಿಸಿದ್ದಾರೆ. ಇಂದಿನ ಯುವಕರು ಪದವಿ ಅಥವಾ ಸ್ನಾತಕೋತ್ತರ ಪದವಿ ಬಳಿಕ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಬಯಸುತ್ತಾರೆ. ಆದರೆ, ಜೀತು ಥೋಮಸ್ ಭೌತಶಾಸ್ತ್ರ ಹಾಗೂ ಸೋಷಿಯಲ್ ವರ್ಕ್ ಎರಡೂ ವಿಷಯಗಳಲ್ಲಿ ಡಿಪ್ಲೊಮಾ ಪದವಿ ಹೊಂದಿದ್ದರೂ ಸ್ವಂತ ಉದ್ಯಮ ಪ್ರಾರಂಭಿಸುವ ಸಾಹಸಕ್ಕೆ ಕೈಹಾಕಿ ಅದರಲ್ಲಿ ಯಶಸ್ಸು ಗಳಿಸಿದ್ದಾರೆ. ಪದವಿ ಪೂರ್ಣಗೊಂಡ ತಕ್ಷಣ ಜೀತು ಥೋಮಸ್ ಎನ್ ಜಿಒ ಒಂದರಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ್ದರು ಕೂಡ. ಈ ಸಮಯದಲ್ಲಿ ಕೂಡ ಅವರು ಇನ್ನೊಂದು ಕಡೆಯಿಂದ ತಮ್ಮ ಅಣಬೆ ಕೃಷಿ ಮುಂದುವರಿಸಿದ್ದರು. ಸ್ಥಳೀಯ ಮಾರುಕಟ್ಟೆಯಲ್ಲಿ ಅಣಬೆಗೆ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಪೂರ್ಣಪ್ರಮಾಣದಲ್ಲಿ ಅಣಬೆ ಕೃಷಿಯಲ್ಲಿ ತೊಡಗಿದರು. 

ಜೀತು ಥೋಮಸ್ ತಮ್ಮ ತಾಯಿ ಜೊತೆಗೆ ಸೇರಿ ಅಣಬೆ ಕೃಷಿ ಪ್ರಾರಂಭಿಸಿದ ಸಮಯದಲ್ಲಿ ಅವರಿಗೆ ಕೇವಲ 19 ವರ್ಷ ವಯಸ್ಸು. ಅಣಬೆ ಕೃಷಿ ಪ್ರಾರಂಭಿಸಿದ ಬಳಿಕ ಜೀತು ಈ ಸಂಬಂಧ ಆನ್ ಲೈನ್ ನಲ್ಲಿ ಸಾಕಷ್ಟು ಹುಡುಕಾಟ ನಡೆಸಿದರು. ಅಲ್ಲದೆ, ಅಣಬೆ ಕೃಷಿಯ ವಿವಿಧ ಸರಳ ವಿಧಾನಗಳನ್ನು ಕಲಿಯಲು ಒಂದು ದಿನದ ವರ್ಕ್ ಶಾಪ್ ಗೆ ಕೂಡ ಹಾಜರಾಗಿದ್ದರು. ಕಡಿಮೆ ಅವಧಿಯಲ್ಲಿ ಅಣಬೆ ಕೃಷಿಯಿಂದ ಹೆಚ್ಚಿನ ಲಾಭ ಪಡೆಯಲು ಜೀತು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದರು. ಜೀತು ಹಾಗೂ ಅವರ ತಾಯಿ ಅಣಬೆ ಕೃಷಿಗೆ ಸಂಬಂಧಿಸಿ ರೂಪಿಸಿದ ಯೋಜನೆಗಳು ಯಶಸ್ವಿಯಾದವು ಕೂಡ. ಇದರಿಂದ ಉತ್ತಮ ಆದಾಯ ಕೂಡ ಬರಲು ಪ್ರಾರಂಭವಾಯಿತು. ಹೀಗಾಗಿ ದೊಡ್ಡ ಮಟ್ಟದ ನಷ್ಟವಿಲ್ಲದೆ ಕೋವಿಡ್ -19 ಸಮಯದಲ್ಲಿ ಸಂಕಷ್ಟದ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಯಿತು.

Business Ideas : ಈ ವ್ಯಾಪಾರ ಶುರು ಮಾಡಿ ಲಕ್ಷಾಂತರ ರೂ. ಗಳಿಸಿ

ಇನ್ನು ಅಣಬೆ ಕೃಷಿಯಲ್ಲಿ ತಾಪಮಾನ ಅಥವಾ ಉಷ್ಣಾಂಶ ಬಹುದೊಡ್ಡ ಪಾತ್ರ ವಹಿಸುತ್ತದೆ.  ಹೀಗಾಗಿ ಜೀತು ಅಣಬೆ ಕೃಷಿಗೆ ಅಗತ್ಯವಾದ ಉಷ್ಣಾಂಶ ನಿರ್ವಹಣೆಗೆ ವಿವಿಧ ವಿಧಾನಗಳನ್ನು ಅನುಸರಿಸಿದರು. ಅಣಬೆ ಕೃಷಿಯ ಕೋಣೆಯಲ್ಲಿ ಅಣಬೆಗಳನ್ನು ಇಡಲು ಗರಿಷ್ಠ ಸಂಖ್ಯೆಯ ಬೆಡ್ ಗಳನ್ನು ವ್ಯವಸ್ಥಿತ ರೀತಿಯಲ್ಲಿ ಜೋಡಿಸಿದರು. 

ಜೀತು ಥೋಮಸ್ ತಮ್ಮ ಅಣಬೆ ಫಾರ್ಮ್ ಗೆ ತಾಯಿ ಲೀನಾ ಅವರ ಹೆಸರನ್ನೇ ಇಟ್ಟಿದ್ದಾರೆ. ಲೀನಾ ಮಶ್ರೂಮ್ ಫಾರ್ಮ್ ಪ್ರಾರಂಭವಾದ ಕೇವಲ ನಾಲ್ಕು ವರ್ಷಗಳಲ್ಲೇ ಭಾರೀ ಯಶಸ್ಸು ಗಳಿಸಿದೆ. ಈ ಸಂಸ್ಥೆಯ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಅನ್ವಯ ಒಂದು ಪುಟ್ಟ ಕೋಣೆಯಲ್ಲಿ 2012ನೇ ಸಾಲಿನಲ್ಲಿ ಈ ಅಣಬೆ ಉದ್ಯಮ ಹುಟ್ಟಿಕೊಂಡಿತು. ಗುಣಮಟ್ಟದ ಅಣಬೆಗಳನ್ನು ಉತ್ಪಾದಿಸುವ ಮೂಲಕ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡಿತು. ಕೆಲವು ವರ್ಷಗಳ ಬಳಿಕ ಅವರು 2400 ಚದರ ಅಡಿ ವಿಸ್ತೀರ್ಣದಲ್ಲಿ ಹೈ ಟೆಕ ಉತ್ಪಾದನಾ ಘಟಕವನ್ನು ಸ್ಥಾಪಿಸಿದರು. ಇಂದು ಲೀನಾ ಮಶ್ರೂಮ್ ಫಾರ್ಮ್ ದಿನಕ್ಕೆ 200ಕೆಜಿ ಅಣಬೆ ಉತ್ಪಾದಿಸುತ್ತದೆ. ಅಲ್ಲದೆ, ಎರ್ನಾಕುಲಂ ಜಿಲ್ಲೆ ಹಾಗೂ ಅದರ ಸುತ್ತಮುತ್ತ 100ಕ್ಕೂ ಅಧಿಕ ರಿಟೇಲ್ ಅಂಗಡಿಗಳಿಗೆ ಅಣಬೆ ಪೂರೈಕೆ ಮಾಡುತ್ತಿದೆ. 

90ಲಕ್ಷ ರೂ. ಮೌಲ್ಯದ ಮರ್ಸಿಡಿಸ್ ಬೆಂಜ್ ಖರೀದಿಸಿದ ಚಾಯ್ ವಾಲಾ; ಈತನ ಕಥೆ ಕೆಳಿದ್ರೆ ಅಚ್ಚರಿಯಾಗೋದು ಗ್ಯಾರಂಟಿ!

ಲೀನಾ ಮಶ್ರೂಮ್ ಫಾರ್ಮ್ ನಲ್ಲಿ ಸ್ಥಳೀಯ 11 ಮಹಿಳೆಯರಿಗೆ ಉದ್ಯೋಗ ನೀಡಲಾಗಿದೆ. ಇವರು 200ಗ್ರಾಂ ಅಣಬೆ ಪ್ಯಾಕೆಟ್ ಗಳನ್ನು ಸಿದ್ಧಪಡಿಸಿ ಸ್ಥಳೀಯ ಸೂಪರ್ ಮಾರ್ಕೆಟ್ ಗಳು, ಬೇಕರಿಗಳು ಹಾಗೂ ಇತರ ಶಾಪ್ ಗಳಿಗೆ ಪೂರೈಕೆ ಮಾಡುತ್ತಾರೆ. ಪ್ರತಿ ಪ್ಯಾಕೆಟ್ ಬೆಲೆ  80ರೂ. ಈ ಪ್ಯಾಕೆಟ್ ನಲ್ಲಿರುವ ಅಣಬೆಗಳನ್ನು ಫ್ರಿಜ್ ನಲ್ಲಿಟ್ಟರೆ ಐದು ದಿನಗಳ ಕಾಲ ಹಾಗೂ ಹೊರಗಡೆಯಾದ್ರೆ ಎರಡು ದಿನಗಳೊಳಗೆ ಬಳಸಬೇಕು. 
 

Follow Us:
Download App:
  • android
  • ios