ಕಠಿಣ ಪರಿಶ್ರಮ, ಶ್ರದ್ಧೆ ವ್ಯಕ್ತಿಯನ್ನು ಎತ್ತರಕ್ಕೇರಿಸಬಲ್ಲದು ಎಂಬುದಕ್ಕೆ ಪ್ರಫುಲ್ ಬಿಲ್ಲೋರ್ ಉತ್ತಮ ನಿದರ್ಶನ. ಪುಟ್ಟ ಚಹಾ ಅಂಗಡಿ ತೆರೆದು ಉದ್ಯಮ ಪ್ರಾರಂಭಿಸಿದ ಈ ಯುವಕ, ಇಂದು ದೇಶಾದ್ಯಂತ 100ಕ್ಕೂ ಅಧಿಕ ಟೀ ಶಾಪ್ ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, 3 ಕೋಟಿ ರೂ. ಉದ್ಯಮದ ಒಡೆಯನಾಗಿ ಬೆಳೆದು ನಿಂತಿದ್ದಾರೆ. ಈಗ 90ಲಕ್ಷ ರೂ. ಮೌಲ್ಯದ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರು ಖರೀದಿಸುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 

Business Desk: ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ಭಾರತದಲ್ಲಿ ಅತ್ಯಂತ ಜನಪ್ರಿಯ ಚಾಯ್ ವಾಲಾ ಅಂದ್ರೆ ಅದು ಪ್ರಫುಲ್ ಬಿಲ್ಲೋರ್. ಇವರ ಸ್ಫೂರ್ತಿದಾಯಕ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಎಂಬಿಎ ಚಾಯ್ ವಾಲಾ ಎಂದೇ ಜನಪ್ರಿಯತೆ ಗಳಿಸಿದ್ದಾರೆ. ಕೇವಲ 22 ವರ್ಷದ ಇಂದೋರ್ ಮೂಲದ ಉದ್ಯಮಿ ಬಿಲ್ಲೋರ್, ಎಂಬಿಎ ಡ್ರಾಪ್ ಔಟ್. ಆದರೆ,ಇಂದು ಎಂಬಿಎ ಪದವೀಧರರಿಗೆ ಉದ್ಯೋಗ ನೀಡುವಷ್ಟು ಮಟ್ಟಿಗೆ ಬೆಳೆದು ನಿಂತಿದ್ದಾರೆ. ಎಂಬಿಎ ಪದವಿ ಪಡೆಯಲು ಸಾಧ್ಯವಾಗದಿದ್ರೂ ಭಾರತದಲ್ಲಿ ಅತ್ಯುನ್ನತ ಎಂಬಿಎ ಪದವೀಧರರನ್ನು ಸೃಷ್ಟಿಸುವ ಐಐಎಂ ಅಹಮದಾಬಾದ್ ಮುಂಭಾಗದಲ್ಲೇ 2017ರಲ್ಲಿ ಚಹಾ ಅಂಗಡಿ ತೆರೆದರು. ಇಲ್ಲಿಂದ ಮುಂದೆ ಬಿಲ್ಲೋರ್ ಹಿಂತಿರುಗಿ ನೋಡಿಯೇ ಇಲ್ಲ. ಇಂದು ಅವರು ದೇಶಾದ್ಯಂತ 'ಎಂಬಿಎ ಚಾಯ್ ವಾಲಾ' ಎಂಬ ಹೆಸರಿನ ಅನೇಕ ಫುಡ್ ಜಾಯಿಂಟ್ಸ್ ಹೊಂದಿದ್ದಾರೆ. ಎಳೆಯ ಪ್ರಾಯದಲ್ಲೇ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿರುವ ಬಿಲ್ಲೋರ್, ಇಂದು ದೇಶದ ಅನೇಕ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಯಶಸ್ವಿ ಬ್ರ್ಯಾಂಡ್ ಒಂದನ್ನು ಕಟ್ಟಿರುವ ಬಿಲ್ಲೋರ್ ತಮ್ಮ ಸ್ಫೂರ್ತಿದಾಯಕ ಕಥೆಯ ಮೂಲಕ ಯುವಜನರಿಗೆ ಮಾರ್ಗದರ್ಶನ ಕೂಡ ನೀಡುತ್ತಿದ್ದಾರೆ. ಬಿಲ್ಲೋರ್ ಅವರ ಕಥೆಗೆ ಈಗ ಇನ್ನೊಂದು ಪುಟ ಸೇರ್ಪಡೆಗೊಂಡಿದೆ. 90ಲಕ್ಷ ರೂ. ಮೌಲ್ಯದ ಐಷಾರಾಮಿ ಮರ್ಸಿಡಿಸ್ ಬೆಂಜ್ ಎಸ್ ಯುವಿ ಕಾರು ಖರೀದಿಸುವ ಮೂಲಕ ಬಿಲ್ಲೋರ್ ಇನ್ನೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.

View post on Instagram

ಮರ್ಸಿಡಿಸ್ ಬೆಂಜ್ ಕಾರಿನ ಡೆಲಿವರಿ ಪಡೆಯುತ್ತಿರುವ ವಿಡಿಯೋ ಅನ್ನು ಬಿಲ್ಲೋರ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಬಿಲ್ಲೋರ್ 1.5 ದಶಲಕ್ಷ ಫಾಲೋವರ್ಸ್ ಹೊಂದಿದ್ದು, ಅವರ ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

ಟೀ ಗ್ಲಾಸ್ ವಾಷಿಂಗ್ ಮಷಿನ್ ಆವಿಷ್ಕಾರಕ್ಕೆ ಮನಸೋತ ಶಾರ್ಕ್ ಟ್ಯಾಂಕ್ ತೀರ್ಪುಗಾರರು; ಉದ್ಯಮಿಗೆ ನೀಡಿದ ಆಫರ್ ಎಷ್ಟು?

ಐಷಾರಾಮಿ ಎಸ್ ಯುವಿ ಖರೀದಿಸಿರುವ ಬಿಲ್ಲೋರ್, ಈ ಕುರಿತ ಇನ್ ಸ್ಟಾಗ್ರಾಮ್ ರೀಲ್ ಜೊತೆಗೆ ಒಂದು ಫೋಟೋ ಕೂಡ ಶೇರ್ ಮಾಡಿದ್ದಾರೆ. ಈ ಫೋಟೋಗೆ ಅವರು ನೀಡಿರುವ ಶೀರ್ಷಿಕೆ ಹೀಗಿದೆ:' ನಮ್ಮೊಳಗಿನ ಸಾಹಸಮಯ ಮನೋಭಾವವನ್ನು ಸದ್ಯಕ್ಕೆ ಹೊರಗಟ್ಟಿದ್ದೇವೆ. ನಮ್ಮ ಬ್ರ್ಯಾಂಡ್ ನ್ಯೂ ಮರ್ಸಿಡಿಸ್ ಜಿಎಲ್ ಇ 300d ಯಲ್ಲಿ ಹೊಸ ಶೈಲಿ ಹಾಗೂ ಆಶೀರ್ವಾದದ ಜೊತೆಗೆ ರಸ್ತೆಗಳನ್ನು ಜಯಿಸಲು ಹೊರಟ್ಟಿದ್ದೇವೆ. ಕಠಿಣ ಪರಿಶ್ರಮ ಹಾಗೂ ಪ್ರೇರಣೆಯ ಶಕ್ತಿಗೆ ಇದು ಸಾಕ್ಷಿಯಾಗಿದೆ. ಜೀವನಪರ್ಯಂತ ಜೊತೆಗಿರುವ ನೆನಪುಗಳನ್ನು ಕಟ್ಟಿಕೊಳ್ಳಲು ಸಿದ್ಧವಾಗಿದ್ದೇನೆ.' ಐಷಾರಾಮಿ ಕಾರಿನಲ್ಲಿರುವ ಎಲ್ಲ ಸೌಲಭ್ಯಗಳನ್ನು ಮರ್ಸಿಡಿಸ್ ಬೆಂಜ್ ಜಿಎಲ್ ಇ ಎಸ್ ಯುವಿ ಹೊಂದಿದೆ.

ರಿಲ್ಯಾಕ್ಸ್ ಆಗಲು ಸ್ಟಾರ್ ಬಕ್ಸ್ ಕಾಫಿ ಕುಡಿದ ದಂಪತಿ,ಬಿಲ್ ನೋಡಿ ಶಾಕ್!

ಎಂಬಿಎ ಪದವಿಯ ಪ್ರವೇಶ ಪರೀಕ್ಷೆ ಕ್ಯಾಟ್ (CAT) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಪ್ರಫುಲ್ ಬಿಲ್ಲೋರ್ ಒಂದು ಹಂತದಲ್ಲಿ ಓದಿನಿಂದ ಬೇಸರಗೊಂಡು ಮನೆ ಬಿಟ್ಟು ತೆರಳುತ್ತಾರೆ. ಬೆಂಗಳೂರು ಸೇರಿದಂತೆ ದೇಶದ ಅನೇಕ ನಗರಗಳನ್ನು ಸುತ್ತಿದ ಬಿಲ್ಲೋರ್ ಕೊನೆಗೆ ಅಹಮದಾಬಾದ್ ಗೆ ಬರುತ್ತಾರೆ. ಇಲ್ಲಿ ಮೆಕ್ ಡೊನಾಲ್ಡ್ ನಲ್ಲಿ ಕೆಲಸ ಮಾಡುತ್ತಾರೆ. ಸ್ವಲ್ಪ ಸಮಯದ ಬಳಿಕ ಸ್ವಂತ ಉದ್ಯಮ ಪ್ರಾರಂಭಿಸುವ ಕನಸು ಮೊಳಕೆಯೊಡೆಯುತ್ತದೆ. ಆ ಸಂದರ್ಭದಲ್ಲಿ ಅವರಿಗೆ ಟೀ ಶಾಪ್ ತೆರೆಯುವ ಯೋಚನೆ ಮೂಡುತ್ತದೆ.ಅಪ್ಪನಿಂದ 15 ಸಾವಿರ ರೂ. ಪಡೆದು ಅಂಗಡಿ ತೆರೆಯುತ್ತಾರೆ. ಬೆಳಗಿನ ಅವಧಿಯಲ್ಲಿ ಮೆಕ್ ಡೊನಾಲ್ಡ್ ನಲ್ಲಿ ಕಾರ್ಯನಿರ್ವಹಿಸಿ ಸಂಜೆ 7ರಿಂದ 10 ಗಂಟೆ ತನಕ ಟೀ ಶಾಪ್ ತೆರೆದರು. ಪ್ರಾರಂಭದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾದರು ಅವುಗಳನ್ನು ಎದುರಿಸಿ ಮುನ್ನಡೆಯುವ ಮೂಲಕ ಬಿಲ್ಲೋರೆ ಯಶಸ್ಸು ಗಳಿಸುತ್ತಾರೆ. ಇಂದು ಪ್ರಫುಲ್ 3 ಕೋಟಿ ರೂ. ಉದ್ಯಮದ ಒಡೆಯ. ದೇಶಾದ್ಯಂತ 100ಕ್ಕೂ ಅಧಿಕ ಟೀ ಶಾಪ್ ಗಳನ್ನು ಹೊಂದಿದ್ದಾರೆ.