20 ಬಾರಿ ಸೋತರೂ ಕುಗ್ಗದ ವಿಶ್ವಾಸ, 10,000 ಬಂಡವಾಳದಿಂದ ಉದ್ಯಮ ಪ್ರಾರಂಭಿಸಿದ ಯುವಕ ಇಂದು 500 ಕೋಟಿ ಒಡೆಯ!
ಸೋಲೇ ಗೆಲುವಿನ ಸೋಪಾನ ಎನ್ನುತ್ತಾರೆ. ಬೆಂಗಳೂರು ಮೂಲದ ಹ್ಯಾಪಿಲೋ ಸಂಸ್ಥೆ ಸಹ ಸಂಸ್ಥಾಪಕ ವಿಕಾಸ್ ನಹಾರ್ ವಿಷಯದಲ್ಲಿ ಕೂಡ ಅಕ್ಷರಶಃ ಸತ್ಯ. 20 ಬಾರಿ ಸೋತರೂ ನಿಲ್ಲದ ಪ್ರಯತ್ನದಿಂದ ಇಂದು ಅವರು 500 ಕೋಟಿ ರೂ. ಮೌಲ್ಯದ ಕಂಪನಿಯ ಮಾಲೀಕರಾಗಿದ್ದಾರೆ.
Business Desk: ಸೋಲು ಎಂದಿಗೂ ಅಂತ್ಯವಲ್ಲ. ಬದಲಿಗೆ ಅದೊಂದು ಹೊಸ ಆರಂಭ. ಪ್ರತಿ ಸೋಲಿನಲ್ಲೂ ಒಂದು ಪಾಠವಿರುತ್ತದೆ. ಅದನ್ನು ಅರಿತರೆ ಯಶಸ್ಸು ಸಾಧಿಸೋದು ಕಷ್ಟದ ಕೆಲಸವಲ್ಲ. ಸೋಲಿನಿಂದ ಹೊರಬರಲು ನಾವು ಅದರಿಂದಲೇ ಬೆಳೆಯೋದನ್ನು ಕಲಿಯಬೇಕು. ಇದು ಎಲ್ಲ ರಂಗಗಳಿಗೂ ಅನ್ವಯಿಸುತ್ತದೆ. ಇಂದು ಉದ್ಯಮ ರಂಗದಲ್ಲಿ ಯಶಸ್ಸು ಸಾಧಿಸಿರುವ ಉದ್ಯಮಿಗಳು ಕೂಡ ಹಿಂದೊಮ್ಮೆ ಎಲ್ಲೋ ಸೋಲಿನ ಕಹಿ ಅನುಭವ ಉಂಡವರೆ. ಆದರೆ, ಆ ಸೋಲಿನಿಂದ ಕಲಿತ ಪಾಠದಿಂದಲೇ ಅವರು ನಂತರ ಯಶಸ್ಸು ಕಂಡಿರುತ್ತಾರೆ. ಇಂಥವರಲ್ಲಿ ಹ್ಯಾಪಿಲೊ ಸಹಸಂಸ್ಥಾಪಕ ಹಾಗೂ ಸಿಇಒ ವಿಕಾಸ್ ಡಿ. ನಹಾರ್ ಕೂಡ ಒಬ್ಬರು. 20 ಬಾರಿ ಸೋಲುಂಡರೂ ಆತ್ಮವಿಶ್ವಾಸ ಅಥವಾ ನಂಬಿಕೆ ಕಳೆದುಕೊಳ್ಳದೆ ಪ್ರಯತ್ನ ಮುಂದುವರಿಸಿದ ವಿಕಾಸ್, ಬರೀ 10 ಸಾವಿರ ರೂ. ಹೂಡಿಕೆಯೊಂದಿಗೆ ಪ್ರಾರಂಭಿಸಿದ ಕಂಪನಿ ಇಂದು 500ಕೋಟಿ ರೂ. ಮೌಲ್ಯ ಹೊಂದಿದೆ. ವಿಕಾಸ್ ಅವರ ಹ್ಯಾಪಿಲೋ ಕಂಪನಿ ಒಣ ಹಣ್ಣುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತದೆ. ಹ್ಯಾಪಿಲೋ ಜನಪ್ರಿಯ ಡ್ರೈ ಫ್ರೂಟ್ಸ್ ಬ್ರ್ಯಾಂಡ್ ಆಗಿ ಬೆಳೆದಿದೆ ಕೂಡ. ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಶಾರ್ಕ್ ಟ್ಯಾಂಕ್ ಇಂಡಿಯಾದ ತೀರ್ಪುಗಾರರಾಗಿ ಕೂಡ ವಿಕಾಸ್ ಆಯ್ಕೆಯಾಗಿದ್ದಾರೆ.
ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ವಿಕಾಸ್ ಗೆ ಬಾಲ್ಯದಿಂದಲೇ ಸ್ವಂತ ಉದ್ಯಮದ ಕಡೆಗೆ ಹೆಚ್ಚಿನ ಒಲವಿತ್ತು. ಅವರ ಕುಟುಂಬ ಸದಸ್ಯರು ಕಾಫಿ ಹಾಗೂ ಕರಿ ಮೆಣಸು ಬೆಳೆದು ಮಾರಾಟ ಮಾಡುತ್ತಿದ್ದರು. 2005ರಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದ ವಿಕಾಸ್, ಆ ಬಳಿಕ ಜೈನ್ ಗ್ರೂಪ್ ನಲ್ಲಿ ಹಿರಿಯ ಇಂಪೋರ್ಟ್ ಮ್ಯಾನೇಜರ್ ಆಗಿ ವೃತ್ತಿಜೀವನ ಪ್ರಾರಂಭಿಸಿದರು. ಆ ಬಳಿಕ ಎಂಬಿಎ ಮಾಡಲು ಈ ಉದ್ಯೋಗ ತ್ಯಜಿಸಿದರು.
ಸಿಇಒ ಸುಂದರ್ ಪಿಚೈಗಿಂತಲೂ ಹೆಚ್ಚು ಶ್ರೀಮಂತ, ಬೆಂಗಳೂರಲ್ಲಿ ಕಲಿತ ಈ ಗೂಗಲ್ ಉದ್ಯೋಗಿ!
ಪುಣೆಯ ಸಿಂಬೋಸಿಸ್ ಇಂಟರ್ ನ್ಯಾಷನಲ್ ಯುನಿವರ್ಸಿಟಿಯಿಂದ ಎಂಬಿಎ ಪೂರ್ಣಗೊಳಿಸಿದರು. ಆ ಬಳಿಕ ಸಾತ್ವಿಕ್ ಸ್ಪೆಷಾಲಿಟಿ ಫುಡ್ಸ್ ನಲ್ಲಿ ಎಂಡಿ ಆಗಿ ಕಾರ್ಯನಿರ್ವಹಿಸಿದರು. ಇಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ವಿಕಾಸ್ ಅವರಿಗೆ ಸಾಕಷ್ಟು ವಿಷಯಗಳನ್ನು ಕಲಿಯಲು ಸಾಧ್ಯವಾಯಿತು. ಇಲ್ಲಿನ ಕಲಿಕೆ ಹಾಗೂ ಅನುಭವ ವಿಕಾಸ್ ಅವರಿಗೆ ಹ್ಯಾಪಿಲೋ ಪ್ರಾರಂಭಿಸಲು ನೆರವಾಯಿತು.
ಸಾತ್ವಿಕ್ ಸ್ಪೆಷಾಲಿಟಿ ಫುಡ್ಸ್ ನಲ್ಲಿ ಒಂದು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಬಳಿಕ ವಿಕಾಸ್ , 2016ರಲ್ಲಿ ಕೇವಲ 10 ಸಾವಿರ ರೂ. ಬಂಡವಾಳದೊಂದಿಗೆ ವಿಕಾಸ್ ಹ್ಯಾಪಿಲೋ ಪ್ರಾರಂಭಿಸಿದರು. ಆ ಸಮಯದಲ್ಲಿ ಉದ್ಯಮದಲ್ಲಿ ಕೇವಲ ಇಬ್ಬರು ಉದ್ಯೋಗಿಗಳು ಮಾತ್ರ ಇದ್ದರು. ಈ ಸಂಸ್ಥೆಯನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಲು ವಿಕಾಸ್ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹ್ಯಾಪಿಲೋ ಫಂಡ್ ರೈಸ್ ಮಾಡುವ ಪ್ರಸ್ತಾವನೆ 20 ಬಾರಿ ತಿರಸ್ಕೃತವಾಗಿತ್ತು. ಆದರೆ, ವಿಕಾಸ್ ದೃತಿಗೆಡಲಿಲ್ಲ. ಹಾಗೆಯೇ ತಮ್ಮ ಪ್ರಯತ್ನವನ್ನು ಕೈಬಿಡಲಿಲ್ಲ ಕೂಡ.
ಇಶಾ ಅಂಬಾನಿ ಕಂಪನಿ ಪ್ರತಿಸ್ಪರ್ಧಿ ಸಂಸ್ಥೆಗೆ ಫಾಲ್ಗುಣಿ ನಾಯರ್ ಮಗ ಸಿಇಒ;ಈತನ ಸಂಪತ್ತು 22,000 ಕೋಟಿ ರೂ.!
ಹ್ಯಾಪಿಲೋ ಆರೋಗ್ಯಕರ ತಿನಿಸುಗಳನ್ನು ಸಿದ್ಧಪಡಿಸುತ್ತದೆ. ಹ್ಯಾಪಿಲೋ ಇ-ಕಾಮರ್ಸ್ ತಾಣ ಕೂಡ ಹೊಂದಿದ್ದು, ಬಹುತೇಕ ಉತ್ಪನ್ನಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹ್ಯಾಪಿಲೋ ಪ್ರಸ್ತುತ 40 ವಿವಿಧ ವಿಧದ ಡ್ರೈ ಫ್ರೂಟ್ಸ್ ಉತ್ಪಾದಿಸುತ್ತಿದೆ. ಇದನ್ನು ಹೊರತುಪಡಿಸಿ ಈ ಕಂಪನಿ 60 ವಿಧದ ಮಸಾಲ ಪದಾರ್ಥಗಳು ಹಾಗೂ 100 ವಿಧದ ಚಾಕಲೇಟ್ಸ್ ಅನ್ನು ಕೂಡ ಉತ್ಪಾದಿಸುತ್ತಿದೆ.
ಇಂದು ಹ್ಯಾಪಿಲೋ ಉತ್ಪನ್ನಗಳು ಅನೇಕ ಜನಪ್ರಿಯ ಇ-ಕಾಮರ್ಸ್ ತಾಣಗಳು ಹಾಗೂ ದೇಶಾದ್ಯಂತ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿವೆ. ಎನ್ ಬಿಟಿ ಪ್ರಕಾರ ಇಂದು ವಿಕಾಸ್ ಅವರ ಕಂಪನಿ ಮೌಲ್ಯ 10 ಸಾವಿರ ರೂ.ನಿಂದ 500 ಕೋಟಿ ರೂ.ಗೆ ಹೆಚ್ಚಳವಾಗಿದೆ.