ಇ ಕಾಮರ್ಸ್ ದೈತ್ಯರ ಸ್ವಾಮ್ಯಕ್ಕೆ ಲಗ್ಗೆ ಇಡಲಿದೆ ಭಾರತದ ಒಎನ್‌ಡಿಸಿ
ಮೇ 8, 2022ರಂದು, ಭಾರತ ಸರ್ಕಾರ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ಪೈಲಟ್ ಹಂತವನ್ನು ಲೋಕಾರ್ಪಣೆಗೊಳಿಸಿತು. ಇದು ಗ್ರಾಹಕರು ಮತ್ತು ಮಾರಾಟಗಾರರು ಇಬ್ಬರಿಗೂ ಲಭ್ಯವಿರುವ ಬಳಸಲು ಉಚಿತವಾದ ಅಂತರ್ಜಾಲ ಪರಿಹಾರವಾಗಿದೆ.
ನವದೆಹಲಿ: ಮೇ 8, 2022ರಂದು, ಭಾರತ ಸರ್ಕಾರ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ಪೈಲಟ್ ಹಂತವನ್ನು ಲೋಕಾರ್ಪಣೆಗೊಳಿಸಿತು. ಇದು ಗ್ರಾಹಕರು ಮತ್ತು ಮಾರಾಟಗಾರರು ಇಬ್ಬರಿಗೂ ಲಭ್ಯವಿರುವ ಬಳಸಲು ಉಚಿತವಾದ ಅಂತರ್ಜಾಲ ಪರಿಹಾರವಾಗಿದೆ. ಸರ್ಕಾರ ಬೃಹತ್ ಐಟಿ ಉದ್ಯಮಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಜೊಮ್ಯಾಟೊ, ಸ್ವಿಗ್ಗಿ ಮತ್ತಿತರ ಸಂಸ್ಥೆಗಳ ಸ್ವಾಮ್ಯವನ್ನು ನಿಯಂತ್ರಿಸಲು ಉದ್ದೇಶಿಸಿದ್ದು, ಆ ಮೂಲಕ ಸಣ್ಣ ಪ್ರಮಾಣದ ಸಂಸ್ಥೆಗಳ ಅಭಿವೃದ್ಧಿಗೆ ಬೆಂಬಲ ನೀಡಲು ಪ್ರಯತ್ನಿಸುತ್ತಿದೆ. ನಂದನ್ ನಿಲೇಕಣಿ ಅವರಂತಹ ಉದ್ಯಮಿಗಳೂ ಈ ಯೋಜನೆಯ ಭಾಗವಾಗಿದ್ದು, ಆನಂದ್ ಮಹಿಂದ್ರಾ ಅವರು ಒಎನ್‌ಡಿಸಿ ಯೋಜನೆಯನ್ನು ಶ್ಲಾಘಿಸಿದ್ದಾರೆ. ಇದು ಯುಪಿಐ ರೀತಿಯಲ್ಲೇ ಕ್ರಾಂತಿಕಾರಕವಾಗಿರುವ ಸಾಧ್ಯತೆಗಳಿವೆ.
ಓಪನ್ ಸಾಫ್ಟ್‌ವೇರ್ ನಿಂದ ಓಪನ್ ಮಾರ್ಕೆಟ್: ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್
ಭಾರತದಲ್ಲಿನ ಇ ಕಾಮರ್ಸ್ ಕ್ರಾಂತಿ ಹಲವು ಶ್ರೀಮಂತ ಸಂಸ್ಥೆಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಿತು. ಚಿಲ್ಲರೆ ವ್ಯಾಪಾರಿಗಳು ಈಗ ಅವರ ಅಪ್ಪಣೆಯಂತೆ ನಡೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಎಲ್ಲಾ ಕಂಪನಿಗಳಂತೆ, ಈ ಸಂಸ್ಥೆಗಳ ಅತಿದೊಡ್ಡ ಆಸ್ತಿಯೆಂದರ ಅವುಗಳ ಮಾಹಿತಿ. ಕೆಲವು ಇ ಕಾಮರ್ಸ್ ವೇದಿಕೆಗಳು ತಮ್ಮ ಮಾರುಕಟ್ಟೆ ಸ್ಥಳಗಳಲ್ಲಿ ಮಾರಾಟಗಾರರ ಉತ್ಪನ್ನಗಳನ್ನು ನಕಲು ಮಾಡುವ, ಸರ್ಚ್ ಫಲಿತಾಂಶಗಳನ್ನು ಬದಲಾಯಿಸುವ, ತಮ್ಮಲ್ಲಿರುವ ಮಾಹಿತಿಗಳನ್ನು ದುರುಪಯೋಗ ಪಡಿಸಿಕೊಂಡು, ತಮಗೆ ಬೇಕಾದ ಉತ್ಪನ್ನಗಳನ್ನು ಮುಂದಕ್ಕೆ ತಳ್ಳುವ ಆರೋಪಗಳನ್ನು ಎದುರಿಸುತ್ತಿವೆ.
ಈ ಮೊದಲು ಭಾರತ ಸರ್ಕಾರ ಶಾಸನವೊಂದನ್ನು ಹೊರಡಿಸಿ, ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮೆಜಾನ್ ಮತ್ತು ಇತರ ಅಂತಾರಾಷ್ಟ್ರೀಯ ಇ ಕಾಮರ್ಸ್ ಉದ್ಯಮಗಳು ಇನ್ವೆಂಟರಿ ಮಾದರಿಯಲ್ಲಿ ಉದ್ಯಮ ನಡೆಸದೆ, ಮಾರ್ಕೆಟ್ ಪ್ಲೇಸ್ ಮಾದರಿಯನ್ನೇ ಅನುಸರಿಸಬೇಕು ಎಂದು ಸೂಚಿಸಿತ್ತು. ಅಂದರೆ, ಇದರ ಪ್ರಕಾರ ಇ ಕಾಮರ್ಸ್ ಸಂಸ್ಥೆಗಳು ಅಪಾರ ಪ್ರಮಾಣದಲ್ಲಿ ದಾಸ್ತಾನು ಇಟ್ಟುಕೊಂಡು ಇತರ ಮಾರಾಟಗಾರರ ಉತ್ಪನ್ನಗಳ ಮಾರಾಟ ಕಡಿಮೆಯಾಗುವಂತೆ ಮಾಡುವಂತಿಲ್ಲ. ಅಮೆಜಾನ್‌ನಂತಹ ಸಂಸ್ಥೆಗಳ ಬಳಿ ಗ್ರಾಹಕರ ಆಸೆ, ಅಗತ್ಯಗಳೇನು ಎಂದು ಸರಿಯಾಗಿ ಅರ್ಥ ಮಾಡಿಕೊಳ್ಳುವಷ್ಟು ಮಾಹಿತಿ ಸಂಗ್ರಹವಿದೆ. ಈ ಸಂಸ್ಥೆಗಳು ಇನ್ವೆಂಟರಿ ಮಾದರಿಯನ್ನು ಅನುಸರಿಸುವ ಮೂಲಕ, ಮಾರ್ಕೆಟ್ ಪ್ಲೇಸ್ ನಲ್ಲಿ ಅಂತಹದೇ ಉತ್ಪನ್ನಗಳ ಮಾರಾಟ ನಡೆಸುವ ಸಣ್ಣ ಹಾಗೂ ದೊಡ್ಡ ಸಂಸ್ಥೆಗಳ ಉತ್ಪನ್ನಗಳನ್ನು ಕಡಿಮೆ ದಾಸ್ತಾನು ಇರುವಂತೆ ನೋಡಿಕೊಂಡವು. ಮೂರನೇ ವ್ಯಕ್ತಿಗಳ ಉತ್ಪನ್ನಗಳ ಮಾರಾಟ ನಡೆಸುವ ಮೂಲಕ ಅಪಾರ ಪ್ರಮಾಣದಲ್ಲಿ ಮಾಹಿತಿ ಕಲೆಹಾಕಿದ ಈ ಸಂಸ್ಥೆಗಳಿಗೆ ಅತಿದೊಡ್ಡ ಸ್ಪರ್ಧಾತ್ಮಕ ಮೇಲುಗೈ ಲಭ್ಯವಾಗಿದೆ.
ಒಎನ್‌ಡಿಸಿ ಎಂಬುದು ಸರ್ಕಾರದ ಇತ್ತೀಚಿನ ಯೋಜನೆಯಾಗಿದ್ದು, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುತ್ತದೆ. ಒಎನ್‌ಡಿಸಿ ಭಾರತ ಸರ್ಕಾರದ ಕೈಗಾರಿಕೆ ಮತ್ತು ವ್ಯಾಪಾರ ಪ್ರಚಾರ ಇಲಾಖೆಯ (ಡಿಪಿಐಟಿ) ಸೆಕ್ಷನ್ 8 ಕಾರ್ಪೋರೇಷನ್ ಆಗಿದ್ದು, ಓಪನ್ ಇ ಕಾಮರ್ಸ್ ಅನ್ನು ಪ್ರಚಾರ ಪಡಿಸುತ್ತದೆ. ಓಪನ್ ಸೋರ್ಸ್ ಸಾಫ್ಟ್‌ವೇರ್ ಅನ್ನುವುದು ಸಾರ್ವಜನಿಕರಿಗೆ ಲಭ್ಯವಾಗುವಂತಿದ್ದು, ಯಾರು ಬೇಕಾದರೂ ಅದನ್ನು ವೀಕ್ಷಿಸಿ, ಮಾರ್ಪಾಡುಗೊಳಿಸಿ, ಅವರ ಅಗತ್ಯಗಳಿಗೆ ತಕ್ಕಂತೆ ಬಳಸಿಕೊಳ್ಳಬಹುದು.
ಒಎನ್‌ಡಿಸಿ ಬೇಡಿಕೆಗಳನ್ನು ಪಟ್ಟಿಮಾಡುವುದು, ಆದೇಶಗಳನ್ನು ನಿರ್ವಹಿಸುವುದು, ದಾಸ್ತಾನು ನಿರ್ವಹಿಸುವುದು, ಹಾಗೂ ಬೇಡಿಕೆಯನ್ನು ಪೂರೈಸುವ ಕಾರ್ಯಗಳನ್ನು ನಿರ್ವಹಿಸುತ್ತದೆ. ಆ ಮೂಲಕ ಸಣ್ಣ ಪುಟ್ಟ ಸಂಸ್ಥೆಗಳು ಯಾವುದೇ ರೀತಿಯ ಒಎನ್‌ಡಿಸಿಗೆ ಪೂರಕವಾದ ಪ್ರೋಗ್ರಾಮ್ ಬಳಸಿಕೊಳ್ಳಬಹುದು. ಇದರಿಂದಾಗಿ ಸಣ್ಣಪುಟ್ಟ ಮಾರಾಟಗಾರರು ನೆಟ್‌ವರ್ಕ್ ನಲ್ಲಿ ಕಾಣಿಸಿಕೊಳ್ಳಬಹುದಾಗಿದ್ದು, ವಾಣಿಜ್ಯ ವ್ಯವಹಾರ (commercial Business) ನಡೆಸಬಹುದು. ಡಿಜಿಟಲ್ ಕಾಮರ್ಸ್ ನೆಟ್‌ವರ್ಕ್ ಗಳಲ್ಲಿ ಇನ್ನೂ ಸಂಪರ್ಕ ಸಾಧಿಸಬೇಕಾದ ಸಂಸ್ಥೆಗಳಿಗೆ ಡಿಜಿಟಲ್ ವಿಧಾನಗಳನ್ನು ಅಳವಡಿಸಿಕೊಳ್ಳಲು ಇದು ನೆರವಾಗಲಿದೆ. ಒಎನ್‌ಡಿಸಿಯನ್ನು ಈಗಾಗಲೇ ಡೆಲ್ಲಿ - ನ್ಯಾಷನಲ್ ಕ್ಯಾಪಿಟಲ್ ರೀಜನ್ (NCR), ಬೆಂಗಳೂರು (Bangaluru), ಭೋಪಾಲ್ (Bhopal), ಶಿಲ್ಲಾಂಗ್ (Shillong) ಹಾಗೂ ಕೊಯಂಬತ್ತೂರು (coimbatore) ಐದು ನಗರಗಳಲ್ಲಿ ಜಾರಿಗೆ ತರಲಾಗಿದೆ.
ಒಎನ್‌ಡಿಸಿ ಇ ಕಾಮರ್ಸ್ ವೇದಿಕೆಯನ್ನು ಗ್ರಾಹಕರಿಗೆ ಇನ್ನಷ್ಟು ಹತ್ತಿರಗೊಳಿಸುವ ನಿರೀಕ್ಷೆಗಳಿವೆ. ಸೂಕ್ತವಾದ ಅಪ್ಲಿಕೇಶನ್ ಅಥವಾ ವೇದಿಕೆಗಳನ್ನು ಬಳಸುವ ಮೂಲಕ ಗ್ರಾಹಕರಿಗೆ ಯಾವುದೇ ಮಾರಾಟಗಾರ, ಉತ್ಪನ್ನ ಅಥವಾ ಸೇವೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅವರಿಗೆ ಹೆಚ್ಚಿನ ಆಯ್ಕೆಗಳೂ ಲಭ್ಯವಾಗುತ್ತವೆ. ಈ ರೀತಿ ಗ್ರಾಹಕರು ಅವರಿಗೆ ಇಷ್ಟವಾದ ಸ್ಥಳೀಯ ಸಂಸ್ಥೆಗಳ ಉತ್ಪನ್ನಗಳನ್ನು ಆರಿಸಿಕೊಳ್ಳಬಹುದು. ಒಎನ್‌ಡಿಸಿ ವ್ಯಾಪಾರ ಪ್ರಕ್ರಿಯೆಯನ್ನು ಸುಗಮಗೊಳಿಸಿ, ಸ್ಥಳೀಯ ಪೂರೈಕೆದಾರರನ್ನು ಒಳಗೊಂಡು, ಸಾಗಾಣಿಕಾ ವ್ಯವಸ್ಥೆಯನ್ನು ಉತ್ತಮಪಡಿಸಿ, ಗ್ರಾಹಕ ಸೇವೆಯನ್ನೂ ಸುಂದರವಾಗಿಸಲಿದೆ.
ಮೈಕ್ರೋಸಾಫ್ಟ್ ಒಎನ್‌ಡಿಸಿ (ONDC)ಜೊತೆ ಕೈ ಜೋಡಿಸಿದ ಮೊದಲ ಟೆಕ್ ದೈತ್ಯ ಸಂಸ್ಥೆಯಾಗಿದೆ. ಇದು ಸಾಮಾಜಿಕ ಇ ಕಾಮರ್ಸ್ ಅನ್ನು ಒಂದು ಆ್ಯಪ್ ಬಿಡುಗಡೆಗೊಳಿಸುವ ಮೂಲಕ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿ, ಭಾರತೀಯರಿಗೆ ತಮ್ಮ ಸಾಮಾಜಿಕ ವೃತ್ತಗಳಿಂದ ಖರೀದಿ ನಡೆಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಮೈಕ್ರೋಸಾಫ್ಟ್ (Microsoft) ಅತ್ಯುತ್ತಮ ಬೆಲೆ, ಮಾರಾಟಗಾರರು ಮತ್ತು ದರಕಡಿತವನ್ನು ಬಳಸಿಕೊಳ್ಳಲಿದೆ.
ಒಎನ್‌ಡಿಸಿ ಯಲ್ಲಿ ಮೂರು ಅಂಶಗಳಿದ್ದು, ಅವೆಂದರೆ, ನೆಟ್‌ವರ್ಕ್ ನಲ್ಲಿ ಕಾಣಿಸಿಕೊಳ್ಳುವಿಕೆ, ಇ ಕಾಮರ್ಸ್ ವೇದಿಕೆಗಳಿಗೆ ತೆರೆದ ಅವಕಾಶ ಮತ್ತು ಬೆಲೆಗಳ ಹೋಲಿಕೆಯಾಗಿವೆ.
ಗ್ರಾಹಕರು ಈ ವೇದಿಕೆಯಲ್ಲಿ ಕೇವಲ ಒಂದೆರಡು ಬೃಹತ್ ಇ ಕಾಮರ್ಸ್ ಜಾಲತಾಣಗಳ ಬದಲಿಗೆ, ಸಾವಿರಾರು ವೆಬ್ ಸೈಟ್‌ಗಳನ್ನು ನೋಡಬಹುದು. ಹೊಸ ಸಂಸ್ಥೆಗಳು ಅಥವಾ ಮೈಕ್ರೋಸಾಫ್ಟ್ ಸ್ಥಳೀಯ ಅಂಗಡಿಗಳನ್ನೂ ಡಿಜಟಲೀಕರಣಗೊಳಿಸಲು ನೆರವಾಗಬಹುದು. ಈ ಕ್ರಮಗಳಿಂದ ಗ್ರಾಹಕರು ಸ್ಥಳೀಯವಾಗಿ ಉತ್ಪಾದಿತ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಕೆಲವೇ ಗಂಟೆಗಳಲ್ಲಿ ಅವುಗಳನ್ನು ಪಡೆಯಬಹುದು. ಗ್ರಾಹಕರು ಉತ್ಪನ್ನಗಳನ್ನು ತಮಗೆ ಬೇಕಾದ ರೀತಿಯಲ್ಲಿ ಪಡೆದುಕೊಂಡು, ಇ ಕಾಮರ್ಸ್ ಸಂಸ್ಥೆಗಳು ಹೇಳಿದ ರೀತಿಯಲ್ಲೇ ಪಡೆಯುವ ಅನಿವಾರ್ಯತೆಯಿಂದ ಹೊರಬರಬಹುದು. ಒಎನ್‌ಡಿಸಿ ಮೂಲಕ ಗ್ರಾಹಕರು ಎಲ್ಲಾ ಇ ಕಾಮರ್ಸ್ ವೆಬ್ ಸೈಟ್‌ಗಳಿಂದ ಉತ್ಪನ್ನಗಳನ್ನು ಬೇರೆ ಅಪ್ಲಿಕೇಶನ್ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳದೆಯೇ ಪಡೆಯಬಹುದು.
ವ್ಯವಸ್ಥಿತವಾದ ಬದಲಾವಣೆ: ಯಶಸ್ಸಿನೆಡೆಗೆ ಪಯಣ
1.35 ಬಿಲಿಯನ್ ಜನಸಂಖ್ಯೆ ಹೊಂದಿರುವ ಭಾರತದಂತಹ ರಾಷ್ಟ್ರದಲ್ಲಿ, ಒಎನ್‌ಡಿಸಿ ಮುಂದಿನ 2 ವರ್ಷಗಳಲ್ಲಿ ತನ್ನ ಮೂಲಕ ನಡೆಯುವ ಇ ಕಾಮರ್ಸ್ ಗ್ರಾಹಕ ಖರೀದಿಯನ್ನು ಪ್ರಸ್ತುತ ಇರುವ 8%ದಿಂದ 25%ವೆ ಹೆಚ್ಚಿಸುವ ಗುರಿ ಹೊಂದಿದೆ. ಮುಂದಿನ ಐದು ವರ್ಷಗಳ ಒಳಗೆ, ಒಎನ್‌ಡಿಸಿ 900 ಮಿಲಿಯನ್ ಗ್ರಾಹಕರು ಮತ್ತು 1.2 ಮಿಲಿಯನ್ ವರ್ತಕರನ್ನು ಹೊಂದುವ ಮತ್ತು 48 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಹೊಂದುವ ಉದ್ದೇಶ ಹಾಕಿಕೊಂಡಿದೆ.
Social Media Influencers :ಭಾರತದ ಕಂಪನಿಗಳಿಗೆ ಮೂನ್ ಲೈಟ್ ಬಳಿಕ ಹೊಸ ಸವಾಲು?
ಒಎನ್‌ಡಿಸಿ ಮುಂದಿನ ದಿನಗಳಲ್ಲಿ ತಾಂತ್ರಿಕ ಕೌಶಲ್ಯದ ಕೊರತೆ ಹೊಂದಿರುವ ಮಿಲಿಯಾಂತರ ಸಣ್ಣ ಸಂಸ್ಥೆಗಳನ್ನೂ ತನ್ನೆಡೆಗೆ ಸೆಳೆಯುವ ಗುರಿ ಹೊಂದಿದ್ದು, ಅದಕ್ಕಾಗಿ ಸರ್ಕಾರ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಭಾರತದ ಸಣ್ಣ ಪುಟ್ಟ ವರ್ತಕರು ಮತ್ತು ಸಂಸ್ಥೆಗಳಿಗೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ದೈತ್ಯ ಸಂಸ್ಥೆಗಳ ರೀತಿ ದರಕಡಿತದ ಮಾರಾಟ ನಡೆಸಲು ಸಾಧ್ಯವಿಲ್ಲ. ಅವುಗಳ ಬಳಿ ಇರುವ ದಾಸ್ತಾನೂ ಸಹ ಸಣ್ಣ ಪ್ರಮಾಣದ್ದಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕಾಂಪಿಟೀಷನ್ ಕಮಿಷನ್ ಆಫ್ ಇಂಡಿಯಾ (ಸಿಸಿಐ) ಒಎನ್‌ಡಿಸಿ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಒಂದು ವೇಳೆ ಬೃಹತ್ ಸಂಸ್ಥೆಗಳು ಸ್ಪರ್ಧಾ ವಿರೋಧಿ ವರ್ತನೆಯನ್ನು ತೋರದಂತೆ ತಡೆಯಲು ಸಾಧ್ಯವಾದರೆ ಮಾತ್ರ ಸಣ್ಣ ಸಂಸ್ಥೆಗಳು ಉಳಿದುಕೊಳ್ಳಲು ಸಾಧ್ಯ. ಅದರೊಡನೆ, ಒಎನ್‌ಡಿಸಿ ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು ಇತರ ಸರ್ಕಾರಿ ನಿಯಂತ್ರಣಗಳಿಗೆ ಒಳಪಡುತ್ತದೆ ಎಂದು ಸ್ಪಷ್ಟಪಡಿಸಿಕೊಳ್ಳಬೇಕಿದೆ.
ಮೊದಲನೆಯದಾಗಿ, ಸರ್ಕಾರ ಡಿಜಿಟಲ್ ಸಾಕ್ಷರತೆಯನ್ನು ಪ್ರಚಾರಪಡಿಸುವುದರಿಂದ ಡಿಜಿಟಲ್ ಶಿಕ್ಷಣದ ಕೊರತೆಯನ್ನು ನೀಗಿಸಲು ಪ್ರಯತ್ನ ನಡೆಸಬೇಕು. ಎರಡನೆಯದಾಗಿ, ಬಹುಭಾಷೆಗಳ ನಾಡಾಗಿರುವ ಭಾರತದಲ್ಲಿ ಗ್ರಾಹಕರಿಗೆ ಮತ್ತು ಮಾರಾಟಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಭಾಷೆಗಳಿಗೆ ಬೆಂಬಲ ನೀಡಬೇಕು. ಇನ್ನೂ ಹೆಚ್ಚು ಸಣ್ಣ ಪ್ರಮಾಣದ ವರ್ತಕರನ್ನು ಸೆಳೆಯುವ ಸಲುವಾಗಿ ಯೋಜನೆಗೆ ಇನ್ನೂ ಹೆಚ್ಚಿನ ಪ್ರಚಾರ ಒದಗಿಸಬೇಕು. ಬೇಡಿಕೆ ಮತ್ತು ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಒಂದು ಪ್ರತ್ಯೇಕ ವ್ಯವಸ್ಥೆಯನ್ನೂ ಒಎನ್‌ಡಿಸಿ ಹೊಂದಿರಬೇಕು.
ಆಧಾರ್, ಪಾನ್ ಜೋಡಣೆಗೆ ಕೇವಲ 6 ದಿನ ಬಾಕಿ; ತಪ್ಪಿದರೆ ಪಾನ್ ಅಮಾನ್ಯ: ಬ್ಯಾಂಕ್ ವ್ಯವಹಾರವೂ ಇಲ್ಲ..!
ಭಾರತದಲ್ಲಿ ಇ ಕಾಮರ್ಸ್ ಅಭಿವೃದ್ಧಿಗೆ ಪೂರಕವಾದ ಅಂಶಗಳು: ಸುಲಭವಾಗಿ ಬಳಸುವಿಕೆ, ಸ್ಪರ್ಧಾತ್ಮಕ ದರ ಮತ್ತು ಉತ್ಪನ್ನಗಳ ಮರಳಿಸುವಿಕೆ ಮತ್ತು ಮರುಪಾವತಿಯಲ್ಲಿ ಗ್ರಾಹಕ ಕೇಂದ್ರಿತ ನೀತಿಗಳು. ಈ ಮೂರು ಅಂಶಗಳು ಭಾರತದಲ್ಲಿ ಮೊದಲು ಜಾರಿಗೆ ಬಂದ ಇ ಕಾಮರ್ಸ್ ಸಂಸ್ಥೆಗಳಿಗೆ ಅಪಾರ ಯಶಸ್ಸು ಒದಗಿಸಿದವು. ಆದ್ದರಿಂದ ಒಎನ್‌ಡಿಸಿ ಸಹ ಈ ಅಂಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನ ನಡೆಸಬೇಕು.