ಎಲ್ಐಸಿ ನಿವೃತ್ತಿ ನಂತರದ ಬದುಕಿಗೆ ಅನೇಕ ಪಾಲಿಸಿಗಳನ್ನು ಹೊಂದಿದೆ. ವರ್ಷಾಶನ ನೀಡುವ ಇಂಥ ಪಾಲಿಸಿಗಳಲ್ಲಿ ಎಲ್ಐಸಿ ನ್ಯೂ ಜೀವನ್ ಶಾಂತಿ ಕೂಡ ಒಂದು. 30ರಿಂದ 79 ವರ್ಷ ನಡುವಿನ ವಯಸ್ಸಿನವರು ಎಲ್ಐಸಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 

Business Desk:ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಎಲ್ಲ ವಯೋಮಾನದವರಿಗೂ ಹೊಂದುವಂತಹ ವಿವಿಧ ಪಾಲಿಸಿಗಳನ್ನು ಆಗಾಗ ಪರಿಚಯಿಸುತ್ತಲೇ ಇರುತ್ತದೆ. ಇನ್ನು ಎಲ್ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವ ಕಾರಣ ಇಂದಿಗೂ ಅನೇಕರು ಎಲ್ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಎಲ್ಐಸಿ ನಿವೃತ್ತಿ ನಂತರದ ಜೀವನಕ್ಕಾಗಿ ಕೂಡ ಕೆಲವು ಪಾಲಿಸಿಗಳನ್ನು ಪರಿಚಯಿಸಿದೆ. ಎಲ್ಐಸಿ ನ್ಯೂ ಜೀವನ್ ಶಾಂತಿ ಪಾಲಿಸಿ ಕೂಡ ವರ್ಷಾಶನ ನೀಡುವ ಯೋಜನೆಯಾಗಿದೆ. ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದ್ರೆ ನಿವೃತ್ತಿ ಬಳಿಕ ವರ್ಷಾಶನ ಪಡೆಯಬಹುದು. ಈ ವರ್ಷಾಶನ ಯೋಜನೆಯಲ್ಲಿ ಒಂದೇ ಬಾರಿಗೆ ದೊಡ್ಡ ಮೊತ್ತದ ಪ್ರೀಮಿಯಂ ಪಾವತಿಸಬಹುದು. 30ರಿಂದ 79 ವರ್ಷ ನಡುವಿನ ವಯಸ್ಸಿನವರು ಎಲ್ಐಸಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇನ್ನು ಈ ಪಾಲಿಸಿಯನ್ನು ಆನ್ ಲೈನ್ ನಲ್ಲಿ ಖರೀದಿಸಿದ್ರೆ ಶೇ.2ರಷ್ಟು ರಿಯಾಯಿತಿ ಕೂಡ ಸಿಗುತ್ತದೆ. ಈ ಪಾಲಿಸಿಯ ಇನ್ನೊಂದು ವಿಶೇಷತೆ ಅಂದರೆ ವಿಭಿನ್ನ ವರ್ಷಾಶನ ಆಯ್ಕೆಗಳಿವೆ. ಇದನ್ನು ಕನಿಷ್ಠ ಒಂದು ವರ್ಷದ ಬಳಿಕ ಅಥವಾ ಗರಿಷ್ಠ 12 ವರ್ಷದ ಬಳಿಕ ವರ್ಷಾಶನ ಪಡೆಯಲು ಅನುಕೂಲವಾಗುವಂತೆ ಖರೀದಿಸಬಹುದು.

ಎಲ್ಐಸಿ ನ್ಯೂ ಜೀವನ್ ಶಾಂತಿ ಪಾಲಿಸಿದಾರರು ನಿರ್ದಿಷ್ಟ ಅವಧಿ ಬಳಿಕ ವರ್ಷಾಶನ ಪಾವತಿ ಪಡೆಯಬಹುದು. ಈ ಪಾಲಿಸಿಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ವರ್ಷಾಶನ ಪಡೆಯಬಹುದು. ಈ ವರ್ಷಾಶನ ಯೋಜನೆ ಖರೀದಿ ಕನಿಷ್ಠ ಬೆಲೆ 1,50,000ರೂ. ಇಷ್ಟು ಬೆಲೆಗೆ ಈ ಯೋಜನೆ ಖರೀದಿಸಿದ್ರೆ ಎಲ್ಐಸಿ ನಿಗದಿಪಡಿಸಿರುವ ಕನಿಷ್ಠ ವರ್ಷಾಶನ ದೊರೆಯುತ್ತದೆ. ಇನ್ನು ಎಲ್ಐಸಿ ನ್ಯೂ ಜೀವನ್ ಶಾಂತಿ ಯೋಜನೆ ಖರೀದಿಗೆ ಯಾವುದೇ ಗರಿಷ್ಠ ಮಿತಿಯಿಲ್ಲ. ಆದರೆ, ನೀವು ಈ ಪಾಲಿಸಿಯನ್ನು 5,00,000ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಖರೀದಿಸಿದರೆ ನೀವು ಅಧಿಕ ಮೊತ್ತದ ವರ್ಷಾಶನ ಪಡೆಯಬಹುದು. 

PPF ಬಡ್ಡಿದರ ಏಕೆ ಏರಿಕೆಯಾಗಿಲ್ಲ? ಮುಂದಿನ ದಿನಗಳಲ್ಲಿ ಹೆಚ್ಚಳವಾಗುತ್ತಾ?

ಎರಡು ವಿಧದ ವರ್ಷಾಶನ ಆಯ್ಕೆ
ಎಲ್ಐಸಿ ನ್ಯೂ ಜೀವನ್ ಶಾಂತಿ ಪಾಲಿಸಿಯಲ್ಲಿ ಪಾಲಿಸಿದಾರರಿಗೆ ಎರಡು ವಿಧದ ವರ್ಷಾಶನಗಳನ್ನು ಆಯ್ಕೆ ಮಾಡುವ ಅವಕಾಶವಿದೆ. ಏಕ ಜೀವನಕ್ಕೆ ಮುಂದೂಡಲ್ಪಟ್ಟ ವರ್ಷಾಶನ ಹಾಗೂ ಜಂಟಿ ಜೀವನಕ್ಕೆ ಮುಂದೂಡಲ್ಪಟ್ಟ ವರ್ಷಾಶನ. ಆದರೆ, ಒಂದು ಆಯ್ಕೆ ಮಾಡಿದ ಬಳಿಕ ಅದನ್ನು ಬದಲಾಯಿಸಲು ಅವಕಾಶವಿಲ್ಲ.

35 ವರ್ಷದ ಒಬ್ಬ ವ್ಯಕ್ತಿ ಎಲ್ಐಸಿ ನ್ಯೂ ಜೀವನ್ ಶಾಂತಿ ವರ್ಷಾಶನ ಪ್ಲ್ಯಾನ್ ಅನ್ನು 10ಲಕ್ಷ ರೂ. ಖರೀದಿಸಿರುತ್ತಾನೆ. ಆತ ಏಕ ಜೀವನಕ್ಕೆ ಮುಂದೂಡಲ್ಪಟ್ಟ ವರ್ಷಾಶನವನ್ನು 10 ವರ್ಷಗಳ ಅವಧಿಗೆ ಆಯ್ಕೆ ಮಾಡಿರುತ್ತಾನೆ. ಈ ಪ್ಲ್ಯಾನ್ ವರ್ಷಾಶನ ದರ ಚಾರ್ಟ್ ಆಧಾರದಲ್ಲಿ ಆ ವ್ಯಕ್ತಿ ವಾರ್ಷಿಕ 1,20,496ರೂ. ವರ್ಷಾಶನ ಪಡೆಯುತ್ತಾನೆ. ಒಂದು ವೇಳೆ ಆ ವ್ಯಕ್ತಿ 25 ಲಕ್ಷ ರೂ.ಗೆ ಖರೀದಿಸಿದ್ರೆ ಅವರು ಅಧಿಕ ಮೊತ್ತದ ವರ್ಷಾಶನ ಪಡೆಯುತ್ತಾರೆ. ಈ ಯೋಜನೆಯಲ್ಲಿ ಖರೀದಿ ಮೊತ್ತ ಅಧಿಕವಾಗಿದ್ರೆ, ವರ್ಷಾಶನ ಮೊತ್ತ ಕೂಡ ಹೆಚ್ಚಿರುತ್ತದೆ. ಹೀಗಾಗಿ ವಾರ್ಷಿಕ 3,01,234 ರೂ. ವರ್ಷಾಶನ ಪಡೆಯುತ್ತಾರೆ.

15*15*15 ಹಣಕಾಸು ಸೂತ್ರ :15 ವರ್ಷ ತಿಂಗಳಿಗೆ 15 ಸಾವಿರ ರೂ. ಹೂಡಿಕೆ ಮಾಡಿದ್ರೆ 1ಕೋಟಿ ಗಳಿಸ್ಬಹುದು!

ಎಲ್ಐಸಿ ನ್ಯೂ ಜೀವನ್ ಶಾಂತಿ ಪಾಲಿಸಿ ಮಾಡಿಸಿದ ವ್ಯಕ್ತಿ ಮರಣ ಹೊಂದಿದ್ರೆ ಆತನ ನಾಮಿನಿಗೆ ಮರಣ ಪ್ರಯೋಜನ ಪಾವತಿ ಮಾಡಲಾಗುತ್ತದೆ. ನಾಮಿನಿಯು ಈ ಮೊತ್ತವನ್ನು ಒಂದೇ ಬಾರಿಗೆ ದೊಡ್ಡ ಮೊತ್ತದಲ್ಲಿ ಅಥವಾ ಕಂತುಗಳಲ್ಲಿ 5, 10, ಅಥವಾ 15 ವರ್ಷಗಳ ಅವಧಿಯಲ್ಲಿ ಪಡೆಯಬಹುದು. ಇನ್ನು ಈ ಪಾಲಿಸಿ ಖರೀದಿಸಲು ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ. ಹೀಗಾಗಿ ಇತರ ವಿಮಾ ಪಾಲಿಸಿಗಳಿಗೆ ವೈದ್ಯಕೀಯ ತೇರ್ಗಡೆ ಹೊಂದದ ಅಭ್ಯರ್ಥಿಗಳು ಈ ಪಾಲಿಸಿ ಖರೀದಿಸಬಹುದು.