LIC IPO: ಇಂದು ಹೂಡಿಕೆಗೆ ಕೊನೆಯ ಅವಕಾಶ; ಎಲ್ಐಸಿ ಷೇರಿನ GMP ಎಷ್ಟಿದೆ? ಮಾರುಕಟ್ಟೆ ತಜ್ಞರ ಸಲಹೆ ಏನು? ಇಲ್ಲಿದೆ ಮಾಹಿತಿ
*ಎಲ್ಐಸಿ ಐಪಿಒ ಮೇ 4ಕ್ಕೆ ಆರಂಭವಾಗಿದ್ದು,ಇಂದು (ಮೇ 9) ಕೊನೆಯ ದಿನ.
*ಸವಾಲುಗಳ ನಡುವೆಯೂ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿ.
*ಎಲ್ಐಸಿ ಷೇರುಗಳ ಗ್ರೇ ಮಾರುಕಟ್ಟೆ ಪ್ರೀಮಿಯಂ ಕುಸಿತ, ಆತಂಕ ಬೇಡ ಎಂದ ಮಾರುಕಟ್ಟೆ ತಜ್ಞರು.
ಮುಂಬೈ (ಮೇ 9): ಭಾರತೀಯ ಜೀವ ವಿಮಾ ನಿಗಮದ (LIC) ಐಪಿಒಗೆ (IPO) ರಿಟೇಲ್ ಹೂಡಿಕೆದಾರರು (retail investors),ಪಾಲಿಸಿದಾರರು (Policyholders) ಹಾಗೂ ಉದ್ಯೋಗಿಗಳಿಂದ (Employees) ಈ ತನಕ ಭರ್ಜರಿ ಸ್ಪಂದನೆ ಸಿಕ್ಕಿದ್ದು, ಇಂದು (ಮೇ 9) ಬಿಡ್ಡಿಂಗ್ ನ (Bidding) ಕೊನೆಯ ದಿನವಾಗಿದೆ. ಗ್ರೇ ಮಾರುಕಟ್ಟೆಯಲ್ಲಿ (Grey market) ಪ್ರೀಮಿಯಂ (Premium) ಕುಸಿತ, ದರ ಹೆಚ್ಚಳದ ಭೀತಿ ಹಾಗೂ ಹಣದುಬ್ಬರ ಏರಿಕೆಯಂಥ ಸವಾಲುಗಳ ನಡುವೆಯೂ ಎಲ್ಐಸಿ ಐಪಿಒ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಆದ್ರೆ ಗ್ರೇ ಮಾರುಕಟ್ಟೆಯಲ್ಲಿ ಎಲ್ಐಸಿ ಪ್ರೀಮಿಯಂ ಕುಸಿಯುತ್ತಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಆದ್ರೆ, ಗ್ರೇ ಮಾರುಕಟ್ಟೆ ಪ್ರೀಮಿಯಂ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಎಲ್ಐಸಿಯ ಬ್ಯಾಲೆನ್ಸ್ ಶೀಟ್ ಗಮನಿಸಿ ಎಂಬ ಸಲಹೆಯನ್ನು ಮಾರುಕಟ್ಟೆ ತಜ್ಞರು ಹೂಡಿಕೆದಾರರಿಗೆ ನೀಡಿದ್ದಾರೆ.
ಎಲ್ಐಸಿ ಐಪಿಒ ಮೂಲಕ ಕೇಂದ್ರ ಸರ್ಕಾರ 21,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿತ್ತು. ಮೇ 4ರಂದು ಆರಂಭವಾದ ಎಲ್ಐಸಿ ಐಪಿಒ ಇಂದು (ಮೇ 9) ಮುಕ್ತಾಯವಾಗಲಿದೆ. ಬಿಡ್ಡಿಂಗ್ ನ ಐದನೇ ದಿನವಾದ ಮೇ 8ರಂದು 1.79 ಬಾರಿ ಎಲ್ಐಸಿ ಷೇರುಗಳ ಚಂದಾದಾರಿಕೆ ಆಗಿದೆ. 16.2 ಕೋಟಿ ಈಕ್ವಿಟಿ ಷೇರುಗಳ ಗಾತ್ರದ ಐಪಿಒಗೆ 29.07 ಕೋಟಿ ಬಿಡ್ಡಿಂಗ್ ಗಳು ಸಲ್ಲಿಕೆ ಆಗಿವೆ. ಇನ್ನು ಎಲ್ಐಸಿ ಪಾಲಿಸಿದಾರರಿಗೆ ಮೀಸಲಿಟ್ಟ ಷೇರುಗಳು 5.04 ಬಾರಿ ಚಂದಾದಾರಿಕೆ ಪಡೆಯುವ ಮೂಲಕ ಬೇಡಿಕೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರ ನಂತರದ ಸ್ಥಾನದಲ್ಲಿ ಉದ್ಯೋಗಿಗಳ ಕೋಟಾವಿದ್ದು, 3.79 ಬಾರಿ ಬಿಡ್ ಆಗಿವೆ. ಇನ್ನು ರಿಟೇಲ್ ಹೂಡಿಕೆದಾರರ ಕೋಟಾದಡಿ ಷೇರುಗಳು 1.59 ಬಾರಿ ಬಿಡ್ ಆಗಿವೆ. ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ ಮೀಸಲಿಟ್ಟ ಪಾಲಿಗೆ 1.24 ಬಾರಿ ಬಿಡ್ ಸಲ್ಲಿಕೆಯಾಗಿವೆ. ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಿಟ್ಟ ಷೇರುಗಳು 67 ಬಾರಿ ಚಂದಾದಾರಿಕೆಗೆ ಒಳಪಟ್ಟಿವೆ.
IPO:ಎಲ್ಐಸಿ ಐಪಿಒ ಬಳಿಕ ಇನ್ನೊಂದು ಇನ್ಯೂರೆನ್ಸ್ ಕಂಪನಿ ಖಾಸಗೀಕರಣಕ್ಕೆ ಸರ್ಕಾರದ ಚಿಂತನೆ?
ಇಂದಿನ ಎಲ್ಐಸಿ ಜಿಎಂಪಿ (GMP) ಎಷ್ಟು?
ಸದ್ಯದ ಮಾರುಕಟ್ಟೆ ಪರಿಸ್ಥಿತಿ ದುರ್ಬಲವಾಗಿದ್ದು, ಎಲ್ಐಸಿಯಂಥ ಬೃಹತ್ ಐಪಿಒಗಳಿಗೆ ಪ್ರೈಮರಿ ಹೂಡಿಕೆ ಹರಿವಿಗೆ ತಡೆಯೊಡ್ಡುತ್ತಿರುವುದಂತೂ ನಿಜ. ಗ್ರೇ ಮಾರುಕಟ್ಟೆಯಲ್ಲಿ ಇಂದು ಎಲ್ಐಸಿ ಷೇರುಗಳ ಪ್ರೀಮಿಯಂ 36ರೂ. ಇದೆ. ಎಲ್ಐಸಿ ಐಪಿಒ ಆರಂಭದ ದಿನ ಜಿಎಂಪಿ 85ರೂ. ಇದ್ದು, ಇಳಿಕೆಯಾಗುತ್ತ ಬಂದಿದೆ. ನಿನ್ನೆ( ಮೇ 8) ಗ್ರೇ ಮಾರುಕಟ್ಟೆಯಲ್ಲಿ ಎಲ್ಐಸಿ ಷೇರಿನ ಪ್ರೀಮಿಯಂ 60ರೂ. ಇದ್ದು, ಇಂದು 24ರೂ.ಗಳಷ್ಟು ಇಳಿಕೆಯಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ. ಗ್ರೇ ಮಾರುಕಟ್ಟೆಯಲ್ಲಿ 92ರೂ. ತನಕ ಏರಿಕೆ ಕಂಡ ಬಳಿಕ ಎಲ್ಐಸಿ ಷೇರುಗಳ ಪ್ರೀಮಿಯಂ ದರ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಟೆಕ್ ಷೇರು ಮಾರುಕಟ್ಟೆ ದುರ್ಬಲಗೊಳ್ಳುತ್ತಿದೆ ಎಂಬ ಭಾವನೆಯೇ ಈ ಕುಸಿತಕ್ಕೆ ಕಾರಣ ಎನ್ನುತ್ತಾರೆ ತಜ್ಞರು. ಜಗತ್ತಿನಾದ್ಯಂತ ಸೆಕೆಂಡರಿ ಮಾರುಕಟ್ಟೆಯಲ್ಲಿ ಸದ್ಯ ಮಾರಾಟದ ಟ್ರೆಂಡ್ ಹೆಚ್ಚಿದ್ದು, ಭಾರತದ ಷೇರು ಮಾರುಕಟ್ಟೆ ಕೂಡ ಇದಕ್ಕರ ಹೊರತಾಗಿಲ್ಲ. ಹೀಗಾಗಿ ಜಾಗತಿಕ ಮಾರುಕಟ್ಟೆಗೆ ಸಂಬಂಧಿಸಿದ ಭಾವನೆಗಳು ಗ್ರೇ ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿವೆ.
Investment Plans : ಕೋಟ್ಯಧಿಪತಿಯಾಗಲು ಇಲ್ಲಿದೆ ಫಾರ್ಮುಲಾ
ಗ್ರೇ ಮಾರುಕಟ್ಟೆ ಪ್ರೀಮಿಯಂ ನಿರ್ಲಕ್ಷ್ಯಿಸಿ
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಇಂದು ಎಲ್ಐಸಿ ಐಪಿಒ ಜಿಎಂಪಿ ( GMP) 36ರೂ. ಅಂದ್ರೆ ಗ್ರೇ ಮಾರುಕಟ್ಟೆಯು ಎಲ್ಐಸಿ ಷೇರುಗಳು ಸುಮಾರು 985ರೂ.ಗೆ ( 949 ರೂ.+ 36ರೂ.) ಲಿಸ್ಟಿಂಗ್ ಆಗಬೇಕೆಂದು ನಿರೀಕ್ಷೆ ಮಾಡುತ್ತಿದೆ. ಇದು ಎಲ್ ಐಸಿ ಐಪಿಒನಲ್ಲಿ ಪ್ರತಿ ಈಕ್ವಿಟಿ ಷೇರಿಗೆ ನಿಗದಿಪಡಿಸಿರುವ 902ರೂ.-949ರೂ. ದರಕ್ಕಿಂತ ಶೇ.3ರಷ್ಟು ಅಧಿಕ. ಷೇರು ಮಾರುಕಟ್ಟೆ ತಜ್ಞರ ಪ್ರಕಾರ ಗ್ರೇ ಮಾರುಕಟ್ಟೆ ಪ್ರೀಮಿಯಂ ಅಧಿಕೃತ ದತ್ತಾಂಶವೇನೂ ಅಲ್ಲ, ಹೀಗಾಗಿ ಎಲ್ಐಸಿಯ ಹಣಕಾಸು ಸ್ಥಿತಿಯೊಂದಿಗೆ ಇದಕ್ಕೇನೂ ಸಂಬಂಧವಿಲ್ಲ. ಹೀಗಾಗಿ ಹೂಡಿಕೆದಾರರು ಗ್ರೇ ಮಾರುಕಟ್ಟೆ ಪ್ರೀಮಿಯಂ ಬದಲು ಎಲ್ಐಸಿಯ ಬ್ಯಾಲೆನ್ಸ್ ಶೀಟ್ ಗಮನಿಸುವುದು ಉತ್ತಮ ಎಂಬ ಸಲಹೆಯನ್ನು ಮಾರುಕಟ್ಟೆ ತಜ್ಞರು ನೀಡಿದ್ದಾರೆ.