IPO:ಎಲ್ಐಸಿ ಐಪಿಒ ಬಳಿಕ ಇನ್ನೊಂದು ಇನ್ಯೂರೆನ್ಸ್ ಕಂಪನಿ ಖಾಸಗೀಕರಣಕ್ಕೆ ಸರ್ಕಾರದ ಚಿಂತನೆ?
ಎಲ್ಐಸಿ ಐಪಿಒ ಬಳಿಕ ಸರ್ಕಾರಿ ಸ್ವಾಮ್ಯದ ಮೂರು ಜನರಲ್ ಇನ್ಯೂರೆನ್ಸ್ ಕಂಪನಿಗಳಲ್ಲಿ ಒಂದನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ, ಈ ವರ್ಷ ಯೋಜನೆ ರೂಪಿಸುತ್ತಿದೆ ಎಂದು ವರದಿಯಾಗಿದೆ. ನ್ಯಾಷನಲ್ ಇನ್ಯೂರೆನ್ಸ್ ಕೋ, ಯುನೈಟೆಡ್ ಇಂಡಿಯಾ ಇನ್ಯೂರೆನ್ಸ್ ಕೋ ಹಾಗೂ ಒರಿಯಂಟಲ್ ಇಂಡಿಯಾ ಇನ್ಯೂರೆನ್ಸ್ ನಲ್ಲಿ ಯಾವುದನ್ನು ಖಾಸಗೀಕರಣಗೊಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Business Desk:ಭಾರತೀಯ ಜೀವ ವಿಮಾ ನಿಗಮದ (LIC) ಐಪಿಒ (IPO) ಯಶಸ್ವಿನಿಂದ ಉತ್ತೇಜನ ಪಡೆದಿರುವ ಕೇಂದ್ರ ಸರ್ಕಾರ, ಈ ವರ್ಷ ಜನರಲ್ ವಿಮಾ ಕಂಪನಿಯೊಂದನ್ನು ಖಾಸಗೀಕರಣಗೊಳಿಸಲು (Privatization) ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಕೇಂದ್ರ ಸರ್ಕಾರ ಈಗ ತನ್ನ ಸ್ವಾಧೀನದಲ್ಲಿರುವ ಮೂರು ಜನರಲ್ ಇನ್ಯೂರೆನ್ಸ್ ಸಂಸ್ಥೆಗಳಾದ ನ್ಯಾಷನಲ್ ಇನ್ಯೂರೆನ್ಸ್ ಕೋ (National Insurance), ಯುನೈಟೆಡ್ ಇಂಡಿಯಾ ಇನ್ಯೂರೆನ್ಸ್ ಕೋ (United India Insurance) ಹಾಗೂ ಒರಿಯಂಟಲ್ ಇಂಡಿಯಾ ಇನ್ಯೂರೆನ್ಸ್ ನಲ್ಲಿ (Oriental India Insurance) ಒಂದನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ. ಅಲ್ಲದೆ, ಈ ಸಂಸ್ಥೆಗಳ ಮೊದಲ ತ್ರೈಮಾಸಿಕ ಆದಾಯ ವರದಿ ಪ್ರಕಟವಾದ ಬಳಿಕ ಮಾರಾಟಕ್ಕೆ ಸಿದ್ಧತೆ ನಡೆಸಲು ಯೋಚಿಸಿದೆ ಎಂದು ವರದಿ ಹೇಳಿದೆ.
Home Loan Rate Hike: ಗೃಹಸಾಲದ ತಿಂಗಳ ಇಎಂಐ ಹೊರೆ ತಗ್ಗಿಸಲು ಇರುವ ಮಾರ್ಗಗಳೇನು?ಇಲ್ಲಿದೆ ಮಾಹಿತಿ
2019-20ನೇ ಆರ್ಥಿಕ ಸಾಲಿನಲ್ಲಿ ಯುನೈಟೆಡ್ ಇಂಡಿಯಾ ಇನ್ಯೂರೆನ್ಸ್ 1,485 ಕೋಟಿ ರೂ. ನಷ್ಟ ಅನುಭವಿಸಿರುವುದು ವರದಿಯಾಗಿದೆ. ಆದರೆ, ಖಾಸಗೀಕರಣಕ್ಕೆ (Privatization) ಯುನೈಟೆಡ್ ಇಂಡಿಯಾ ಇನ್ಯೂರೆನ್ಸ್ ಸಂಸ್ಥೆಯೇ ಉತ್ತಮ ಆಯ್ಕೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಆ ಸಂಸ್ಥೆಯು ರಾಷ್ಟ್ರ ವ್ಯಾಪಿ ಶಾಖೆಗಳನ್ನು ಹೊಂದಿದೆ ಹಾಗೂ ವಿವಿಧ ಇನ್ಯೂರೆನ್ಸ್ ವಿಭಾಗಗಳಲ್ಲಿ ಮಾರ್ಕೆಟ್ ಷೇರುಗಳನ್ನು ಹೊಂದಿದೆ. 2021ನೇ ಹಣಕಾಸು ಸಾಲಿನಲ್ಲಿ ಈ ಸಂಸ್ಥೆಯ ನಷ್ಟವನ್ನು 985 ಕೋಟಿ ರೂ.ಗೆ ತಗ್ಗಿಸಲಾಗಿತ್ತು. 2022ನೇ ಹಣಕಾಸು ಸಾಲಿನಲ್ಲಿ ಮತ್ತಷ್ಟು ತಗ್ಗುವ ನಿರೀಕ್ಷೆಯಿದೆ.
ಇನ್ನು ಸರ್ಕಾರದ ಥಿಂಕ್ ಟ್ಯಾಂಕ್ ನೀತಿ ಆಯೋಗ ( NITI Aayog) ಕೂಡ ಖಾಸಗೀಕರಣಕ್ಕೆ (Privatization) ಯುನೈಟೆಡ್ ಇಂಡಿಯಾ ಇನ್ಯೂರೆನ್ಸ್ ಕಂಪನಿಯ ಹೆಸರನ್ನೇ ಶಿಫಾರಸ್ಸು ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ತನಕ ಮಾತ್ರ ಈ ಸಂಬಂಧ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಯಾವ ಸಂಸ್ಥೆಯನ್ನು ಖಾಸಗೀಕರಣಗೊಳಿಸಬೇಕು ಎಂಬ ಬಗ್ಗೆ ಅದಕ್ಕಾಗಿಯೇ ರಚಿಸಲ್ಪಟ್ಟಿರುವ ಸಚಿವರ ಸಮೂಹ (GoM) ಅಂತಿಮ ನಿರ್ಧಾರ ಕೈಗೊಳ್ಳಲಿದೆ. ನ್ಯಾಷನಲ್ ಇನ್ಯೂರೆನ್ಸ್ , ಯುನೈಟೆಡ್ ಇಂಡಿಯಾ ಇನ್ಯೂರೆನ್ಸ್ ಹಾಗೂ ಒರಿಯಂಟಲ್ ಇಂಡಿಯಾ ಇನ್ಯೂರೆನ್ಸ್ ಅನ್ನು ವಿಲೀನಗೊಳಿಸಿ (Merge) ಒಂದೇ ಸಂಸ್ಥೆಯನ್ನಾಗಿ ರೂಪಿಸಿ ಆ ಬಳಿಕ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ (Listing) ಮಾಡುವ ಬಗ್ಗೆ ಈ ಹಿಂದೆಯೇ ಸರ್ಕಾರ ಯೋಚಿಸಿತ್ತು.
ನಾಳೆ ಎಲ್ ಐಸಿ ಐಪಿಒ ಕೊನೆಯ ದಿನ
ಭಾರತೀಯ ಜೀವ ವಿಮಾ ನಿಗಮದ (LIC) ಶೇ.3.5 ಷೇರುಗಳನ್ನು ಕೇಂದ್ರ ಸರ್ಕಾರ ಐಪಿಒ (IPO) ಮೂಲಕ ಮಾರಾಟ ಮಾಡುತ್ತಿದೆ. ಮೇ 4ರಂದು ಪ್ರಾರಂಭಗೊಂಡಿರುವ ಎಲ್ಐಸಿ ಐಪಿಒ ನಾಳೆ (ಮೇ 9) ಕೊನೆಗೊಳ್ಳಲಿದೆ. ಈ ಐಪಿಒ (IPO) ಮೂಲಕ ಸರ್ಕಾರ 21,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಪ್ರತಿ ಈಕ್ವಿಟಿ ಷೇರಿಗೆ 902ರೂ. ನಿಂದ 949ರೂ. ದರ ನಿಗದಿಪಡಿಸಲಾಗಿದ್ದು,ಎಲ್ ಐಸಿ ಪಾಲಿಸಿದಾರರಿಗೆ (Policyholders) ಪ್ರತಿ ಷೇರಿನ ಮೇಲೆ 60ರೂ. ಡಿಸ್ಕೌಂಟ್ (Discount) ನೀಡಲಾಗಿದೆ. ಇನ್ನು ಎಲ್ಐಸಿ ಸಿಬ್ಬಂದಿ (employees) ಹಾಗೂ ರಿಟೇಲ್ ಹೂಡಿಕೆದಾರರಿಗೆ (Retail Investors) ಪ್ರತಿ ಷೇರಿನ ಮೇಲೆ 45ರೂ. ಡಿಸ್ಕೌಂಟ್ ನೀಡಲಾಗಿದೆ.
ಐದನೇ ದಿನ ಎಲ್ಐಸಿ ಐಪಿಒ 1.77 ಬಾರಿ ಚಂದಾದಾರಿಕೆ ಪಡೆದಿದ್ದರೆ, ಪಾಲಿಸಿದಾರರು (Policyholers) 4.96 ಬಾರಿ, ರಿಟೇಲ್ ಹೂಡಿಕೆದಾರರು (Retail Investors) 1.56 ಬಾರಿ ಹಾಗೂ ಉದ್ಯೋಗಿಗಳು (employees) 3.75 ಬಾರಿ ಚಂದಾದಾರಿಕೆ (Subscription) ಪಡೆದಿದ್ದಾರೆ.