ಏವಿಯೇಷನ್ ಇತಿಹಾಸದ ಅತಿದೊಡ್ಡ ಆರ್ಡರ್, ಏರ್‌ಬಸ್‌ನಿಂದ 500 ವಿಮಾನ ಖರೀದಿಗೆ ಇಂಡಿಗೋ ಗ್ರೀನ್‌ಸಿಗ್ನಲ್!
ಬರೋಬ್ಬರಿ 55 ಶತಕೋಟಿ ಡಾಲರ್‌ನ ಒಪ್ಪಂದ ಇದಾಗಿದ್ದು, ನಾಗರೀಕ ವಿಮಾನಯಾನ ಆರ್ಡರ್‌ನಲ್ಲಿಯೇ ಅತ್ಯಂತ ಬೃಹತ್ ಆರ್ಡರ್ ಆಗಿದೆ ಎಂದು ಇಂಡಿಗೋ ಮುಖ್ಯಸ್ಥ ಪೀಟರ್ ಎಲ್ಬರ್ಸ್ ಹೇಳಿದ್ದಾರೆ.
ನವದೆಹಲಿ (ಜೂ.19): ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ ಅಂದರೆ ಇಂಡಿಗೋ ಸೋಮವಾರ 500 ಏರ್‌ಬಸ್ A320 ಕುಟುಂಬ ವಿಮಾನಗಳನ್ನು ಖರೀದಿಸಲು ಘೋಷಿಸಿದೆ. ಇಂಡಿಗೋ ಒಂದೇ ಬಾರಿಗೆ ಇಷ್ಟು ದೊಡ್ಡ ಆರ್ಡರ್ ಮಾಡಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆಯಾಗಿದೆ. ಈ ವಿಮಾನಗಳ ವಿತರಣೆಯನ್ನು 2030 ಮತ್ತು 2035 ರ ನಡುವೆ ನಿರೀಕ್ಷಿಸಲಾಗಿದೆ. ವಾಣಿಜ್ಯ ಬಳಕೆಯ ವಿಮಾನಯಾನ ಕ್ಷೇತ್ರದಲ್ಲಿ ಇದುವರೆಗಿನ ಅತೀದೊಡ್ಡ ಆರ್ಡರ್ ಇದಾಗಿದೆ. ಈ ಮೊದಲು ಈ ದಾಖಲೆ ಏರ್‌ಇಂಡಿಯಾದ ಹೆಸರಲ್ಲಿತತು. ಏರ್‌ಇಂಡಿಯಾವನ್ನು ಟಾಟಾ ಖರೀದಿ ಮಾಡಿದ ಬಳಿಕ 470 ವಿಮಾನಗಳ ಖರೀದಿಗೆ ಆರ್ಡರ್ ನೀಡಿತ್ತು. ಇಂಡಿಗೋ 500 ಏರ್‌ಬಸ್ A320 ಫ್ಯಾಮಿಲಿ ವಿಮಾನಗಳನ್ನು ಖರೀದಿಸಲು 55 ಬಿಲಿಯನ್ ಡಾಲರ್ ಅಂದರೆ 4.39 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಆರ್ಡರ್‌ನ ನಿಜವಾದ ಬೆಲೆ ಇನ್ನೂ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ, ಲಕ್ಷಾಂತರ ಕೋಟಿಯ ವ್ಯವಹಾರಗಳ ವೇಳೆ ರಿಯಾಯಿತಿಗಳು ಕೂಡ ದೊಡ್ಡ ಪ್ರಮಾಣದಲ್ಲಿ ಇರುತ್ತದೆ.
ಏರ್‌ಇಂಡಿಯಾದಿಂದ 470 ವಿಮಾನ ಆರ್ಡರ್: ನಾಲ್ಕು ತಿಂಗಳ ಹಿಂದೆ, ಟಾಟಾ ಗ್ರೂಪ್‌ನ ಏರ್‌ಲೈನ್ಸ್ ಏರ್ ಇಂಡಿಯಾ 470 ವಿಮಾನಗಳಿಗಾಗಿ ವಿಶ್ವದ ಅತಿದೊಡ್ಡ ವಿಮಾನಯಾನ ಒಪ್ಪಂದಕ್ಕೆ ಸಹಿ ಹಾಕಿತ್ತು, ಈಗ ಈ ದಾಖಲೆಯನ್ನು ಇಂಡಿಗೋ ತೆಗೆದುಕೊಂಡಿದೆ. ಏರ್ ಇಂಡಿಯಾ ಫ್ರೆಂಚ್ ಕಂಪನಿ ಏರ್‌ಬಸ್‌ನಿಂದ 250 ವಿಮಾನಗಳನ್ನು ಮತ್ತು ಅಮೆರಿಕದ ಬೋಯಿಂಗ್ ಕಂಪನಿಯಿಂದ 220 ವಿಮಾನಗಳನ್ನು ಒಪ್ಪಂದದಲ್ಲಿ ಪಡೆಯಲಿದೆ. ಈ ಹಿಂದೆ, ವಿಶ್ವದ ಅತಿದೊಡ್ಡ ವಿಮಾನಯಾನ ಒಪ್ಪಂದದ ದಾಖಲೆಯು ಅಮೆರಿಕನ್ ಏರ್‌ಲೈನ್ಸ್ ಹೆಸರಿನಲ್ಲಿತ್ತು, ಇದು 2011 ರಲ್ಲಿ ಏರ್‌ಬಸ್ ಮತ್ತು ಬೋಯಿಂಗ್‌ಗೆ 460 ವಿಮಾನಗಳನ್ನು ಆರ್ಡರ್ ಮಾಡಿತ್ತು.
ಏರ್ ಇಂಡಿಯಾದ ಒಟ್ಟು ಆರ್ಡರ್‌ನಲ್ಲಿ, 31 ವಿಮಾನಗಳು ವರ್ಷದ ಅಂತ್ಯದ ವೇಳೆಗೆ ಸೇವೆಗೆ ಬರಲಿದ್ದು, ಉಳಿದವು 2025 ರ ಮಧ್ಯದ ವೇಳೆಗೆ ಸೇವೆಗೆ ಪ್ರವೇಶಿಸಲಿವೆ. ಏರ್ ಇಂಡಿಯಾ ಆರ್ಡರ್ ಬೆಲೆಯನ್ನು ಪ್ರಕಟಿಸಿಲ್ಲ. ಆದಾಗ್ಯೂ, ಕೆಲವು ಸುದ್ದಿ ವರದಿಗಳಲ್ಲಿ, ಒಪ್ಪಂದದ ಒಟ್ಟು ಮೌಲ್ಯವನ್ನು $ 70 ಬಿಲಿಯನ್ (ಸುಮಾರು ರೂ 5.79 ಲಕ್ಷ ಕೋಟಿ) ಎಂದು ಹೇಳಲಾಗಿದೆ. ಇದರಲ್ಲಿ ಬೋಯಿಂಗ್ ಜೊತೆಗಿನ ಒಪ್ಪಂದದ ಮೌಲ್ಯವನ್ನು 34 ಬಿಲಿಯನ್ ಡಾಲರ್ (ಸುಮಾರು 2.81 ಲಕ್ಷ ಕೋಟಿ ರೂ.) ಎಂದು ಹೇಳಲಾಗಿದೆ.
ವಿಶ್ವದರ್ಜೆಯ ವೈಮಾನಿಕ ಸಂಸ್ಥೆಯಾಗುವತ್ತ ಏರ್ ಇಂಡಿಯಾ ಚಿತ್ತ: 470 ವಿಮಾನ ಖರೀದಿ ಒಪ್ಪಂದದಿಂದ ಭಾರತಕ್ಕೂ ಲಾಭ..!
2022 ರಲ್ಲಿ ಟಾಟಾ ಗ್ರೂಪ್ ಏರ್ ಇಂಡಿಯಾವನ್ನು ಖರೀದಿಸಿದ ನಂತರ ಇದು ಅದರ ಮೊದಲ ವಿಮಾನ ಆರ್ಡರ್ ಆಗಿತ್ತು. 2005ರ ನಂತರ ಏರ್ ಇಂಡಿಯಾ ಮೊದಲ ಬಾರಿಗೆ ವಿಮಾನ ಖರೀದಿ ಮಾಡುವ ನಿರ್ಧಾರ ಮಾಡಿತ್ತು. ಅಂದು ಏರ್ ಇಂಡಿಯಾ 111 ವಿಮಾನಗಳ ಖರೀದಿಗೆ ನಿರ್ಧಾರ ಮಾಡಿತ್ತು. ಅದರಲ್ಲಿ 68 ಬೋಯಿಂಗ್‌ನಿಂದ ಮತ್ತು 43 ಏರ್‌ಬಸ್‌ನಿಂದ ಖರೀದಿಸಲಾಗಿದೆ. ಒಪ್ಪಂದವು $ 10.8 ಬಿಲಿಯನ್ ಆಗಿತ್ತು.
ವಿಶ್ವದ ಅತಿದೊಡ್ಡ ವಿಮಾನ ಖರೀದಿ ಒಪ್ಪಂದ: 470 ವಿಮಾನಗಳಿಗೆ ಟಾಟಾ ಬಿಗ್‌ಡೀಲ್