ವಿಶ್ವದರ್ಜೆಯ ವೈಮಾನಿಕ ಸಂಸ್ಥೆಯಾಗುವತ್ತ ಏರ್ ಇಂಡಿಯಾ ಚಿತ್ತ: 470 ವಿಮಾನ ಖರೀದಿ ಒಪ್ಪಂದದಿಂದ ಭಾರತಕ್ಕೂ ಲಾಭ..!

ಏರ್ ಇಂಡಿಯಾ ಸಂಸ್ಥೆಯ ಮಾಲಕತ್ವ ಹೊಂದಿರುವ ಟಾಟಾ ಗ್ರೂಪ್ಸ್ ತಮ್ಮ ವಿಮಾನಯಾನ ಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಹಾಗೂ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು, ಏರ್‌ಬಸ್ ಹಾಗೂ ಬೋಯಿಂಗ್ ಸಂಸ್ಥೆಗಳಿಂದ 470 ನೂತನ ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ.

air india aims to become world class airline ash

(ವರದಿ: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತದ ಏರ್ ಇಂಡಿಯಾ ಸಂಸ್ಥೆ ಏರ್‌ಬಸ್‌ನಿಂದ 250 ವಿಮಾನಗಳು ಮತ್ತು ಬೋಯಿಂಗ್‌ನಿಂದ 220 ವಿಮಾನಗಳನ್ನು ಖರೀದಿಸಲಿದೆ. ಏರ್ ಇಂಡಿಯಾ ಸಂಸ್ಥೆಯ ಮಾಲಕತ್ವ ಹೊಂದಿರುವ ಟಾಟಾ ಗ್ರೂಪ್‌ ತಮ್ಮ ವಿಮಾನಯಾನ ಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಹಾಗೂ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು, ಏರ್‌ಬಸ್ ಹಾಗೂ ಬೋಯಿಂಗ್ ಸಂಸ್ಥೆಗಳಿಂದ 470 ನೂತನ ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ. ಇದು ವಾಣಿಜ್ಯ ನಾಗರಿಕ ವಿಮಾನಯಾನ ಕ್ಷೇತ್ರದ ಇತಿಹಾಸದಲ್ಲೇ ಬೋಯಿಂಗ್ ಸಂಸ್ಥೆಯ ಅತ್ಯಂತ ಬೃಹತ್ ವ್ಯವಹಾರವಾಗಿದ್ದು, ಅದು 34 ಬಿಲಿಯನ್ ಡಾಲರ್ ಮೌಲ್ಯದ ವಿಮಾನಗಳನ್ನು ಪೂರೈಸಲಿದೆ. ಇನ್ನೊಂದೆಡೆ ಏರ್‌ಬಸ್ ಸಂಸ್ಥೆ 35 ಬಿಲಿಯನ್ ಡಾಲರ್ ಪಡೆಯಲಿದೆ. ಬೋಯಿಂಗ್ ಜೊತೆ ಸಹಿ ಹಾಕಲಾಗಿರುವ ಒಪ್ಪಂದದಲ್ಲಿ ಇನ್ನೂ 50 ನೂತನ 737 ಮ್ಯಾಕ್ಸ್ ಜೆಟ್ ಹಾಗೂ 20 ನೂತನ 787 ವಿಮಾನಗಳನ್ನು ಖರೀದಿಸುವ ಆಯ್ಕೆಯೂ ಸೇರಿದೆ. ಆದರೆ ಇದಕ್ಕಾಗಿ ಇನ್ನೂ 12 ಬಿಲಿಯನ್ ಡಾಲರ್ ಪಾವತಿಸಲಾಗುತ್ತದೆ.

ಏರ್ ಇಂಡಿಯಾ ಸಂಸ್ಥೆ ಶೀಘ್ರದಲ್ಲಿ 250 ಏರ್‌ಬಸ್ ವಿಮಾನಗಳನ್ನು ಪಡೆಯಲಿದ್ದು, ಅವುಗಳಲ್ಲಿ 210 ಕಿರಿದಾದ ಎ320 ವಿಮಾನಗಳು ಹಾಗೂ 40 ವಿಶಾಲವಾದ ಎ350 ವಿಮಾನಗಳೂ ಸೇರಿವೆ. ಏರ್ ಇಂಡಿಯಾ ಬಳಿ 220 ಬೋಯಿಂಗ್ ಜೆಟ್‌ಗಳಿರಲಿದ್ದು, 190 ವಿಮಾನಗಳು 737 ಮ್ಯಾಕ್ಸ್, 20 ವಿಮಾನಗಳು 787 ಹಾಗೂ 10 ವಿಮಾನಗಳು 777 ಎಕ್ಸ್ ಮಾದರಿಗಳಾಗಿರಲಿವೆ.

ಇದನ್ನು ಓದಿ: Air India ಮೆಗಾ ಡೀಲ್‌: ಏರ್‌ಬಸ್‌ನಿಂದ 250 ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡ ಟಾಟಾ ಗ್ರೂಪ್‌

ಈ ಕಿರಿದಾದ ಗಾತ್ರದ ವಿಮಾನಗಳಲ್ಲಿ ಒಂದೇ ಸಾಲಿನ ಆಸನಗಳಿದ್ದರೆ, ಹಿರಿದಾದ ವಿಮಾನಗಳಲ್ಲಿ ಎರಡು ಅಥವಾ ಹೆಚ್ಚು ವಿಭಾಗಗಳ ಆಸನಗಳಿರುತ್ತವೆ. ಕಿರಿದಾದ ವಿಮಾನಗಳು ಕಡಿಮೆ ವ್ಯಾಪ್ತಿಯ ಅಂತಾರಾಷ್ಟ್ರೀಯ ಪ್ರಯಾಣ ಮತ್ತು ದೇಶೀಯ ಪ್ರಮಾಣಗಳಲ್ಲಿ ಬಳಕೆಯಾಗುತ್ತವೆ. ದೊಡ್ಡ ಗಾತ್ರದ ವಿಮಾನಗಳು ದೂರ ಮತ್ತು ಮಧ್ಯಮ ವ್ಯಾಪ್ತಿಯ ಅಂತಾರಾಷ್ಟ್ರೀಯ ಪ್ರಮಾಣಗಳಲ್ಲಿ ಬಳಕೆಯಾಗುತ್ತವೆ.

2011ರಲ್ಲಿ ಅಮೆರಿಕನ್ ಏರ್‌ಲೈನ್ಸ್ 460 ವಿಮಾನಗಳ ಖರೀದಿಗೆ ಕೈಗೊಂಡ ಬೃಹತ್ ಒಪ್ಪಂದಕ್ಕಿಂತಲೂ ಏರ್ ಇಂಡಿಯಾ ಒಪ್ಪಂದ ದೊಡ್ಡದಾಗಿದ್ದು, ಏರ್ ಇಂಡಿಯಾದ ವಿಮಾನಗಳ ಸಂಖ್ಯೆಯನ್ನು ಅಪಾರವಾಗಿ ಹೆಚ್ಚಿಸಿ, ತನ್ನ ಜಾಲವನ್ನು ವಿಸ್ತರಿಸಲು ನೆರವಾಗಲಿದೆ. ಈ ಖರೀದಿ ಒಪ್ಪಂದ ಅತ್ಯಂತ ದೊಡ್ಡದಾಗಿದ್ದು, ಈ ಒಪ್ಪಂದದ ಮೂಲಕ ಏರ್ ಇಂಡಿಯಾ ಭಾರತದ ಅತ್ಯಂತ ನಿಬಿಡವಾದ ವೈಮಾನಿಕ ಮಾರುಕಟ್ಟೆಯಲ್ಲಿ ಕೇಂದ್ರ ಸ್ಥಾನ ಪಡೆಯಲು ಮತ್ತು ಜಾಗತಿಕ ಸೇವೆ ಸಲ್ಲಿಸುವಲ್ಲಿ ಮೇಲುಗೈ ಹೊಂದುವ ಉದ್ದೇಶ ಹೊಂದಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಇದನ್ನೂ ಓದಿ: ವಿಶ್ವದ ಅತಿದೊಡ್ಡ ವಿಮಾನ ಖರೀದಿ ಒಪ್ಪಂದ: 470 ವಿಮಾನಗಳಿಗೆ ಟಾಟಾ ಬಿಗ್‌ಡೀಲ್‌

ಈ ಖರೀದಿ ನೇರವಾಗಿ ಏರ್ ಇಂಡಿಯಾದ ವಿಮಾನಗಳ ಸಂಖ್ಯೆಯನ್ನು ಜಗತ್ತಿನ ಅತಿದೊಡ್ಡ ಏರ್‌ಲೈನ್ ಒಕ್ಕೂಟವಾದ ಸ್ಟಾರ್ ಅಲಯನ್ಸ್ ಅಂಗವಾದ ಲುಫ್ಥಾನ್ಸ ಹಾಗೂ ಸಿಂಗಾಪುರ್ ಏರ್‌ಲೈನ್ಸ್‌ಗೆ ಸಮಾನವಾಗಿಸುತ್ತದೆ. ಈ ಅಭಿವೃದ್ಧಿ ನೋಡಿದರೆ, ಗಲ್ಫ್ ರಾಷ್ಟ್ರಗಳ ವಿಮಾನಯಾನ ಸಂಸ್ಥೆಗಳ ಪ್ರಾಬಲ್ಯ ಹೊಂದಿರುವ, ಸ್ಟಾರ್ ಅಲಯನ್ಸ್‌ಗೆ ತಕ್ಕ ಉತ್ತರ ಕೊಡುವ ಉದ್ದೇಶ ಹೊಂದಿರುವಂತೆ ಕಾಣುತ್ತದೆ.

ಭಾರತೀಯ ಪ್ರಯಾಣಿಕರು ಯುರೋಪ್, ಅಮೆರಿಕ ಸೇರಿದಂತೆ ವಿದೇಶಗಳ ಸಂಪರ್ಕ ಪ್ರಯಾಣಕ್ಕೆ ಬಹುತೇಕ ಎಮಿರೇಟ್ಸ್, ಕತಾರ್ ಏರ್‌ವೇಸ್, ಎತಿಹಾದ್ ಹಾಗೂ ಇತರ ಮಧ್ಯ ಪೂರ್ವದ ವಿಮಾನಯಾನ ಸಂಸ್ಥೆಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಏರ್ ಇಂಡಿಯಾದ ಹೊಸ ವಿಮಾನಗಳು ಸೇವೆಗೆ ಲಭ್ಯವಾದಾಗ ಈ ಚಿತ್ರಣ ಬಹುತೇಕ ಬದಲಾಗುವ ಸಾಧ್ಯತೆಗಳಿವೆ.

ಇದನ್ನು ಓದಿ: ಒಂದೇ ಸಲ 500 ವಿಮಾನ ಖರೀದಿಗೆ Air India ರೆಡಿ..! ಇದು ಜಗತ್ತಿನ ಅತಿದೊಡ್ಡ ವಿಮಾನ ಖರೀದಿ ಡೀಲ್

ಎ350ಯಂತಹ ವಿಶಾಲ ವಿಮಾನವನ್ನು ಹೊಂದುವ ಮೂಲಕ ಏರ್ ಇಂಡಿಯಾ ಅಮೆರಿಕಾ, ಆಸ್ಟ್ರೇಲಿಯಾದಂತಹ ದೂರ ದೇಶಗಳ ಪ್ರಯಾಣಗಳಿಗೆ ನೇರವಾಗಿ, ಯಾವುದೇ ಮಧ್ಯದ ನಿಲುಗಡೆಗಳ ಅಗತ್ಯವಿಲ್ಲದೆ ಹಾರಾಟ ನಡೆಸಬಹುದು. ಆ ಮೂಲಕ ಈ ವಿದೇಶಿ ಪ್ರಯಾಣದ ಮಾರುಕಟ್ಟೆಗೂ ಏರ್ ಇಂಡಿಯಾ ಲಗ್ಗೆ ಇಡಬಹುದು. ಅಪಾರ ಸಂಖ್ಯೆಯಲ್ಲಿ ಭಾರತೀಯರನ್ನು ಹೊಂದಿರುವ ಈ ದೇಶಗಳಿಗೆ ನಡೆಸುವ ಹಾರಾಟ ವಿಮಾನಯಾನ ಸಂಸ್ಥೆಗಳಿಗೆ ಅತ್ಯಂತ ಲಾಭದಾಯಕವಾಗಿವೆ.

ಆದರೆ ಗಲ್ಫ್ ರಾಷ್ಟ್ರಗಳ ವಿಮಾನಯಾನ ಸಂಸ್ಥೆಗಳ ಏಕಸ್ವಾಮ್ಯವನ್ನು ಎದುರಿಸುವುದೂ ಸುಲಭ ಸಾಧ್ಯವೇನಲ್ಲ. ಅದರಲ್ಲೂ ಆ ಸಂಸ್ಥೆಗಳಿಗಿರುವ ನಿಷ್ಠ ಪ್ರಯಾಣಿಕ ಬಳಗ ಮತ್ತು ಅವುಗಳಿಗೆ ದರ ಸಮರ ನಡೆಸುವ ಸಾಮರ್ಥ್ಯವಿರುವುದು ಗಮನಿಸಬೇಕಾದ ಅಂಶಗಳಾಗಿವೆ.

ಹಲವು ವರ್ಷಗಳ ಕಾಲ ಏರ್ ಇಂಡಿಯಾ ಪ್ರಯಾಣಿಕರು ಕ್ಯಾಬಿನ್ ನಿರ್ವಹಣೆಯ ಕೊರತೆ, ಕಾರ್ಯ ನಿರ್ವಹಿಸದ ಮನೋರಂಜನಾ ವ್ಯವಸ್ಥೆಗಳು, ಮುರಿದು ಹೋದ ಮೊಬೈಲ್ ಚಾರ್ಜಿಂಗ್ ಘಟಕಗಳು ಸೇರಿದಂತೆ ವಿವಿಧ ದೂರುಗಳನ್ನು ನೀಡುತ್ತಾ ಬಂದಿದ್ದರು. ಆದರೆ ಈಗ ಹೊಸ ವಿಮಾನಗಳು ಚಾಲ್ತಿಗೆ ಬರುವುದರಿಂದ ಪ್ರಯಾಣಿಕರಿಗೆ ಒಂದು ಹೊಸ ಅನುಭವ ಲಭಿಸಲಿದೆ.

ಟಾಟಾ ಸಂಸ್ಥೆಯೇ ಏರ್ ಇಂಡಿಯಾವನ್ನು ಸ್ಥಾಪಿಸಿ ನಿರ್ವಹಣೆ ನಡೆಸುತ್ತಿತ್ತು. ಆದರೆ 1950ರ ದಶಕದಲ್ಲಿ ಅದನ್ನು ಸರ್ಕಾರ ರಾಷ್ಟ್ರೀಕರಣಗೊಳಿಸಿತು. ಅದಕ್ಕೂ ಮೊದಲು ಏರ್ ಇಂಡಿಯಾ ಪ್ರಯಾಣಿಕರಿಗೆ ಸೇವೆ ನೀಡುವುದರಲ್ಲಿ ಜಾಗತಿಕ ಗುಣಮಟ್ಟದ ಸಂಸ್ಥೆ ಎಂದು ಹೆಸರು ಸಂಪಾದಿಸಿತ್ತು.

ರಾಷ್ಟ್ರೀಕರಣಗೊಂಡ ಬಳಿಕ ಹಲವು ಸರ್ಕಾರಗಳ ಅವಧಿಯಲ್ಲಿ ನಿರ್ವಹಣೆಯ ಕೊರತೆ ಅನುಭವಿಸಿದ ಬಳಿಕ, ಏರ್ ಇಂಡಿಯಾದ ಮೇಲೆ ಭಾರಿ ಸಾಲದ ಹೊರೆ ಬಿದ್ದಿತು. ಅದರೊಡನೆ ಸಂಸ್ಥೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳೂ ವಿಫಲಗೊಂಡವು. ಅದರ ಪರಿಣಾಮವಾಗಿ, ಏರ್ ಇಂಡಿಯಾ 2021ರಲ್ಲಿ 2.4 ಬಿಲಿಯನ್ ಮೊತ್ತಕ್ಕೆ ಮರಳಿ ಟಾಟಾ ಸಂಸ್ಥೆಗೆ ಸೇರಿತು. ಅಂದಾಜು 68 ವರ್ಷಗಳ ಬಳಿಕ ಏರ್ ಇಂಡಿಯಾ ತನ್ನ ಮಾತೃ ಸಂಸ್ಥೆಗೆ ಸೇರಿಕೊಂಡಿತು.

470 ನೂತನ ವಿಮಾನಗಳ ಖರೀದಿಯ ವಿಚಾರಕ್ಕೆ ಸಂಬಂಧಿಸಿದಂತೆ, ಟಾಟಾ ಸಮೂಹದ ಅಧ್ಯಕ್ಷರು ಈ ವಿಮಾನಗಳ ಹಲವು ಬಿಡಿಭಾಗಗಳು ಭಾರತದಲ್ಲೇ ಉತ್ಪಾದನೆಗೊಳ್ಳಲಿವೆ ಎಂದಿದ್ದು, ಆ ಮೂಲಕ ದೇಶೀಯ ಉತ್ಪಾದನ ಉದ್ಯಮಕ್ಕೆ ಉತ್ತೇಜನ ನೀಡಿ, ಉದ್ಯೋಗ ಸೃಷ್ಟಿಗೆ ಅನುಕೂಲ ಮಾಡುತ್ತವೆ.
ಭಾರತದ ನಾಗರಿಕ ವಿಮಾನಯಾನ ಮಾರುಕಟ್ಟೆ ಕೋವಿಡ್ ಸಾಂಕ್ರಾಮಿಕದ ಬಳಿಕ ಅಪಾರವಾಗಿ ಚೇತರಿಕೆ ಕಂಡಿದ್ದು, ದೇಶೀಯ ಪ್ರಯಾಣ ಕಳೆದ ವರ್ಷದಿಂದ 48.9% ಹೆಚ್ಚಳ ಕಂಡಿದೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. 122 ಮಿಲಿಯನ್‌ಗೂ ಹೆಚ್ಚು ಭಾರತೀಯರು ಡಿಸೆಂಬರ್ 2022ರ ತನಕ ಭಾರತದಾದ್ಯಂತ ವಿಮಾನ ಸಂಚಾರ ನಡೆಸಿದ್ದಾರೆ.

ಮುಂದಿನ 2 ವರ್ಷಗಳ ಅವಧಿಯಲ್ಲಿ ಭಾರತದ ದೇಶೀಯ ವಿಮಾನಯಾನಕ್ಕೆ 1,500-1,700 ವಿಮಾನಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಆ ಮೂಲಕ ಜಾಗತಿಕ ವಿಮಾನಯಾನ ಉದ್ಯಮಕ್ಕೂ ಭಾರತ ಉತ್ತೇಜನ ನೀಡಲಿದೆ ಎಂದು ಸೆಂಟರ್ ಫಾರ್ ಏಷ್ಯಾ ಪೆಸಿಫಿಕ್ ಏವಿಯೇಷನ್‌ ಇಂಡಿಯಾ (ಸಿಎಪಿಎ ಇಂಡಿಯಾ) ಅಭಿಪ್ರಾಯ ವ್ಯಕ್ತಪಡಿಸಿದೆ.

Latest Videos
Follow Us:
Download App:
  • android
  • ios