ಸುಮಾರು ನಾಲ್ಕು ದಶಕಗಳ ಹಿಂದೆ ಆರಂಭವಾದ ಸ್ವದೇಶಿ 'ಕಾವೇರಿ' ಎಂಜಿನ್ ಯೋಜನೆ, ತೇಜಸ್ ವಿಮಾನಕ್ಕೆ ವಿಫಲವಾದ ನಂತರ ಇದೀಗ 'ಕಾವೇರಿ 2.0' ಆಗಿ ಮರುಜೀವ ಪಡೆದಿದೆ. ಈ ನೂತನ ಎಂಜಿನ್, ಭಾರತದ 5ನೇ ತಲೆಮಾರಿನ AMCA ಯುದ್ಧವಿಮಾನ ಮತ್ತು ಡ್ರೋನ್‌ಗಳಿಗೆ ಶಕ್ತಿ ತುಂಬುವ ಗುರಿ ಹೊಂದಿದೆ.
ನವದೆಹಲಿ (ಜು.21): ಸುಮಾರು ನಾಲ್ಕು ದಶಕಗಳ ಹಿಂದೆ ಆರಂಭವಾಗಿದ್ದ ಭಾರತದ ಸ್ವದೇಶಿ 'ಕಾವೇರಿ' ವಿಮಾನ ಎಂಜಿನ್ ಯೋಜನೆ ಮತ್ತೆ ದೇಶಾದ್ಯಂತ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಆರಂಭದಲ್ಲಿ ಸ್ವದೇಶಿ ನಿರ್ಮಿತ 'ತೇಜಸ್' ಯುದ್ಧವಿಮಾನದ ಅಗತ್ಯ ತಾಂತ್ರಿಕ ಮಾನದಂಡಗಳನ್ನು ಪೂರೈಸಲು ವಿಫಲವಾದ ಕಾರಣ ಈ ಯೋಜನೆಯು ಬಹುತೇಕ ಅಂತ್ಯಗೊಂಡಿತು ಎಂದೇ ಭಾವಿಸಲಾಗಿತ್ತು. ಆದರೆ, ಈಗ 'ಕಾವೇರಿ 2.0' ಎಂಜಿನ್ ನೂತನ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಮರುಜೀವ ಪಡೆಯುತ್ತಿದೆ. ಭವಿಷ್ಯದಲ್ಲಿ ಈ ಎಂಜಿನ್, ಭಾರತದ 5ನೇ ತಲೆಮಾರಿನ 'ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್' (AMCA) ಸ್ಟೆಲ್ತ್ ಯುದ್ಧವಿಮಾನ ಹಾಗೂ ಅತ್ಯಾಧುನಿಕ ಕಾಂಬ್ಯಾಟ್ ಡ್ರೋನ್‌ಗಳಿಗೆ ಬಲ ನೀಡಲಿದೆ ಎಂದು ರಕ್ಷಣಾ ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಯಶಸ್ವಿಯಾದರೆ, ಯುದ್ಧವಿಮಾನಗಳ ಎಂಜಿನ್‌ಗಾಗಿ ವಿದೇಶಿ ಸಂಸ್ಥೆಗಳ ಮೇಲಿನ ಭಾರತದ ಅವಲಂಬನೆ ಸಂಪೂರ್ಣವಾಗಿ ತಪ್ಪಲಿದೆ.
1986 ರಲ್ಲಿ ಆರಂಭವಾಗಿದ್ದ ಆತ್ಮನಿರ್ಭರ ಭಾರತದ ಬಿಗ್ ಮಿಷನ್
ಕಾವೇರಿ ಎಂಜಿನ್ ಯೋಜನೆಯನ್ನು 1986 ರಲ್ಲಿ ಡಿಆರ್‌ಡಿಒದ (DRDO) 'ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್‌ಮೆಂಟ್' (GTRE) ಸಂಸ್ಥೆಯು ಪ್ರಾರಂಭಿಸಿತು. ವಿದೇಶಿ ಕಂಪನಿಗಳ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಿ, ಭಾರತವೇ ಸ್ವಂತವಾಗಿ ಆಧುನಿಕ ಫೈಟರ್ ಜೆಟ್ ಎಂಜಿನ್ ಅಭಿವೃದ್ಧಿಪಡಿಸಬೇಕು ಎಂಬುದು ಇದರ ಮುಖ್ಯ ಉದ್ದೇಶವಾಗಿತ್ತು.
ಆದರೆ, ಫೈಟರ್ ಜೆಟ್ ಎಂಜಿನ್ ತಂತ್ರಜ್ಞಾನವು ಜಗತ್ತಿನ ಅತ್ಯಂತ ಸಂಕೀರ್ಣ ಎಂಜಿನಿಯರಿಂಗ್ ವಿಚಾರಗಳಲ್ಲಿ ಒಂದಾಗಿದೆ. ಕಡಿಮೆ ತೂಕ, ಗರಿಷ್ಠ ಶಕ್ತಿ, ಅತ್ಯಧಿಕ ತಾಪಮಾನವನ್ನು ತಡೆಯುವ ಸಾಮರ್ಥ್ಯ ಹಾಗೂ ಯುದ್ಧದಂತಹ ತುರ್ತು ಪರಿಸ್ಥಿತಿಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿರಬೇಕಾಗುತ್ತದೆ.
ತೇಜಸ್ ವಿಮಾನಕ್ಕೆ 'ಕಾವೇರಿ' ವಿಫಲವಾಗಿದ್ದು ಏಕೆ?
ಕಾವೇರಿ ಎಂಜಿನ್ ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾದ ಹೊರತಾಗಿಯೂ, ತೇಜಸ್ ವಿಮಾನಕ್ಕೆ ಅಗತ್ಯವಿದ್ದ 83-85 ಕಿಲೋನ್ಯೂಟನ್ (kN) 'ಥ್ರಸ್ಟ್' (ಉತ್ಪಾದಿಸುವ ಶಕ್ತಿ) ನೀಡಲು ವಿಫಲವಾಯಿತು. ಇದರ ತೂಕವೂ ನಿರೀಕ್ಷೆಗಿಂತ ಹೆಚ್ಚಾಗಿತ್ತು ಮತ್ತು 'ಆಫ್ಟರ್‌ಬರ್ನರ್' ಹೊಂದಿದ್ದರೂ ಭಾರತೀಯ ವಾಯುಪಡೆಯ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ.
ನಿರಂತರ ಪರೀಕ್ಷೆಗಳ ನಂತರ, 2008 ರಲ್ಲಿ ಕೇಂದ್ರ ಸರ್ಕಾರವು ತೇಜಸ್ ಯೋಜನೆಯಿಂದ ಕಾವೇರಿ ಎಂಜಿನ್ ಅನ್ನು ಕೈಬಿಡುವ ನಿರ್ಧಾರಕ್ಕೆ ಬಂದಿತು. ಪರಿಣಾಮವಾಗಿ, ತೇಜಸ್ ವಿಮಾನಕ್ಕೆ ಅಮೆರಿಕದ ಪ್ರಸಿದ್ಧ 'ಜನರಲ್ ಎಲೆಕ್ಟ್ರಿಕ್' (GE) ಕಂಪನಿಯ F404 ಎಂಜಿನ್ ಅಳವಡಿಸಲಾಯಿತು. ಮುಂದಿನ ಆವೃತ್ತಿಯ ವಿಮಾನಗಳಿಗಾಗಿ GE ನ F414 ಎಂಜಿನ್ ಅನ್ನು ಆಯ್ಕೆ ಮಾಡಲಾಯಿತು. ಆ ಸಮಯದಲ್ಲಿ ಕಾವೇರಿ ಯೋಜನೆ ಬಂದ್ ಆಯಿತು ಎಂದೇ ಭಾವಿಸಲಾಗಿತ್ತಾದರೂ, ವಿಜ್ಞಾನಿಗಳು ಇದನ್ನು ಕೈಬಿಡದೆ ಸುಧಾರಿತ ತಂತ್ರಜ್ಞಾನದೊಂದಿಗೆ ಮುಂದುವರಿಸಲು ನಿರ್ಧರಿಸಿದರು.
ಉಳಿದವುಗಳಿಗಿಂತ 'ಕಾವೇರಿ 2.0' ಹೇಗೆ ವಿಭಿನ್ನ?
ಕಾವೇರಿ 2.0 ಹಳೆಯ ಎಂಜಿನ್‌ನ ಪರಿಷ್ಕೃತ ರೂಪ ಮಾತ್ರವಲ್ಲ ಇದು ಸಂಪೂರ್ಣ ಆಧುನಿಕ ತಂತ್ರಜ್ಞಾನ ಆಧಾರಿತ ನೂತನ ಪ್ರಯತ್ನವಾಗಿದೆ. ಕಳೆದ ಕೆಲವು ದಶಕಗಳ ಪರೀಕ್ಷೆಗಳಿಂದ ಪಡೆದ ಅನುಭವ, ನೂತನ ಲೋಹ ತಂತ್ರಜ್ಞಾನ (ಮ್ಯಾಟಲರ್ಜಿ), ಹೆಚ್ಚು ಸಾಮರ್ಥ್ಯವಿರುವ ಟರ್ಬೈನ್, ಸುಧಾರಿತ ಹೈ-ಪ್ರೆಷರ್ ಕಂಪ್ರೆಸರ್, ಆಧುನಿಕ 'ಫುಲ್ ಅಥಾರಿಟಿ ಡಿಜಿಟಲ್ ಎಂಜಿನ್ ಕಂಟ್ರೋಲ್' (FADEC) ಸಿಸ್ಟಮ್ ಮತ್ತು ಅತ್ಯಾಧುನಿಕ ತಯಾರಿಕಾ ವಿಧಾನಗಳನ್ನು ಇದರಲ್ಲಿ ಬಳಸಲಾಗುತ್ತಿದೆ. ಕೆಲ ಪ್ರಮುಖ ತಂತ್ರಜ್ಞಾನಗಳಿಗೆ ವಿದೇಶಿ ಸಹಯೋಗವನ್ನು ಪಡೆಯಲಾಗುತ್ತಿದ್ದರೂ, ಸಂಪೂರ್ಣ ಸ್ವದೇಶಿ ಎಂಜಿನ್ ನಿರ್ಮಿಸುವುದೇ ಅಂತಿಮ ಗುರಿಯಾಗಿದೆ.
ಎಂಜಿನ್ ಸಾಮರ್ಥ್ಯ ಎಷ್ಟು ಹೆಚ್ಚಾಗಲಿದೆ?
ಹಳೆಯ ಕಾವೇರಿ ಎಂಜಿನ್ ಆಫ್ಟರ್‌ಬರ್ನರ್ ಜೊತೆಗೆ ಕೇವಲ 70-72 kN ನಷ್ಟು ಥ್ರಸ್ಟ್ ನೀಡುತ್ತಿತ್ತು. ಆದರೆ ನೂತನ 'ಕಾವೇರಿ 2.0' ಆರಂಭಿಕ ಹಂತದಲ್ಲೇ 81-83 kN ವರೆಗೆ ಥ್ರಸ್ಟ್ ನೀಡುವ ನಿರೀಕ್ಷೆಯಿದ್ದು, ಭವಿಷ್ಯದಲ್ಲಿ ಇದನ್ನು ಮತ್ತಷ್ಟು ಹೆಚ್ಚಿಸಬಹುದು. ನೂತನವಾಗಿ ವಿನ್ಯಾಸಗೊಳಿಸಲಾದ ಆಫ್ಟರ್‌ಬರ್ನರ್, ಹಗುರವಾದ ತೂಕ (ಸುಮಾರು 1180 ಕೆಜಿ), ಸುಧಾರಿತ 'ಥ್ರಸ್ಟ್ ಟು ವೇಟ್' ಅನುಪಾತವು ಇದನ್ನು ಹಿಂದಿಗಿಂತಲೂ ಹೆಚ್ಚು ಶಕ್ತಿಶಾಲಿಯನ್ನಾಗಿ ಮಾಡಲಿದೆ.
AMCA ಹಾಗೂ ಡ್ರೋನ್‌ಗಳಿಗೆ ವರದಾನ
ಕಾವೇರಿ 2.0 ಗುರಿ ಈಗ ಕೇವಲ ತೇಜಸ್ ವಿಮಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಭವಿಷ್ಯದ 5ನೇ ತಲೆಮಾರಿನ AMCA ಯುದ್ಧವಿಮಾನಗಳು, ಅಡ್ವಾನ್ಸ್ಡ್ ಅನ್‌ಮ್ಯಾನ್ಡ್ ಕಾಂಬ್ಯಾಟ್ ಏರಿಯಲ್ ವೆಹಿಕಲ್ (UCAV - ಡ್ರೋನ್‌ಗಳು) ಮತ್ತು ಇತರ ಸ್ವದೇಶಿ ಫೈಟರ್ ಜೆಟ್‌ಗಳಿಗಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಯಶಸ್ವಿಯಾದರೆ, ಅಂತಾರಾಷ್ಟ್ರೀಯ ನಿರ್ಬಂಧಗಳು, ಪೂರೈಕೆ ಬಿಕ್ಕಟ್ಟು ಅಥವಾ ಯಾವುದೇ ಭೂ-ರಾಜಕೀಯ ಒತ್ತಡಗಳಿದ್ದರೂ ಭಾರತದ ರಕ್ಷಣಾ ವಲಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.
ಆಧುನಿಕ ಫೈಟರ್ ಜೆಟ್ ಎಂಜಿನ್ ತಯಾರಿಸುವ ಸಾಮರ್ಥ್ಯ ಜಗತ್ತಿನ ಬೆರಳೆಣಿಕೆಯಷ್ಟು ದೇಶಗಳಿಗೆ ಮಾತ್ರ ಇದೆ. 'ಕಾವೇರಿ 2.0' ಯಶಸ್ವಿಯಾದರೆ, ಭಾರತವು ಈ ಸಾಲಿಗೆ ಹೆಮ್ಮೆಯಿಂದ ಸೇರಲಿದೆ. ಸುಮಾರು 40 ವರ್ಷಗಳ ಹಿಂದೆ ಆರಂಭವಾದ ಕನಸು ಸುದೀರ್ಘ ಸಮಯ ತೆಗೆದುಕೊಂಡಿದ್ದರೂ, ಕಾವೇರಿ 2.0 ರೂಪದಲ್ಲಿ ನನಸಾಗುವ ಭರವಸೆ ಈಗ ದಟ್ಟವಾಗಿದೆ.


