* ಗ್ರಾಹಕರ ಕೊರತೆ ಭೀತಿ * ತಿನಿಸುಗಳ ದರ ಏರಿಸಲು ಹೋಟೆಲ್‌ಗಳ ಹಿಂದೇಟು* ಸಂಘ ನಿರ್ಧರಿಸಿದ್ದರೂ ಅನೇಕ ಕಡೆ ದರ ಹೆಚ್ಚಳ ಇಲ್ಲ* ಗ್ಯಾಸ್‌ ದರ ಕಡಿತ ನಿರೀಕ್ಷೆ

ಬೆಂಗಳೂರು(ನ.09): ರಾಜ್ಯದ ಎಲ್ಲಾ ಮಾದರಿಯ ಹೋಟೆಲ್‌ಗಳ (Hotel) ಖಾದ್ಯದರವನ್ನು ಸೋಮವಾರದಿಂದ ಶೇ. 5ರಿಂದ ಶೇ.10ರವರೆಗೂ ಹೆಚ್ಚಿಸುವ ಕುರಿತು ರಾಜ್ಯ ಹೋಟೆಲ್‌ ಮಾಲೀಕರ ಸಂಘ ಪ್ರಕಟಣೆ ನೀಡಿದ್ದರೂ ರಾಜ್ಯದ ಬಹುತೇಕ ಹೋಟೆಲ್‌ಗಳ ಮಾಲೀಕರು (Hotel Owners) ದರ ಏರಿಕೆ ಮಾಡಿಲ್ಲ!

ವಾಣಿಜ್ಯ ಅಡುಗೆ ಅನಿಲ (Cooking Gas) ದರ ಹೆಚ್ಚಳ, ದಿನಸಿ, ತರಕಾರಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಂಘವು ದರ ಹೆಚ್ಚಳಕ್ಕೆ ನಿರ್ಧಾರ ಕೈಗೊಂಡಿತ್ತು. ಆದರೆ, ಕೆಲವೇ ಹೋಟೆಲ್‌ಗಳನ್ನು ಹೊರತುಪಡಿಸಿ ಉಳಿದ ಸಣ್ಣ ಹೋಟೆಲ್‌ನಿಂದ ಸ್ಟಾರ್‌ ಹೋಟೆಲ್‌ವರೆಗೂ (Star Hotel) ಆಯಾ ಮಾಲೀಕರು ಇನ್ನೂ ಕೆಲ ದಿನ ಕಾದು ನೋಡಲು ತೀರ್ಮಾನಿಸಿದ್ದಾರೆ.

ಹೋಟೆಲ್‌ ತಿನಿಸು ಶೇ.10 ದುಬಾರಿ: ಇಂದಿನಿಂದಲೇ ಹೊಸ ದರ ಜಾರಿ!

ಈಗಾಗಲೇ ಕೋವಿಡ್‌ ಸಂದರ್ಭದಲ್ಲಿ (Covid Crisis) ಗ್ರಾಹಕರ ಕೊರತೆಯ ನಷ್ಟಸರಿದೂಗಿಸಲು ಬಹುತೇಕ ಹೋಟೆಲ್‌ಗಳಲ್ಲಿ ದರ ಹೆಚ್ಚಿಸಲಾಗಿತ್ತು. ಈಗ ಮತ್ತೆ ದರ ಹೆಚ್ಚಿಸಿದರೆ ಗ್ರಾಹಕರ ಕೊರತೆ ಎದುರಿಸಬೇಕಾಗುತ್ತದೆ ಹಾಗೂ ಏರಿಕೆಯಾಗಿರುವ ಅಡುಗೆ ಅನಿಲ, ದಿನಸಿ ಪದಾರ್ಥ (Grocery), ತರಕಾರಿ ಬೆಲೆ ಇಳಿಕೆಯಾದರೆ ಮತ್ತೆ ಖಾದ್ಯಗಳ ದರ ಇಳಿಸುವುದು ಕಷ್ಟವಾಗುತ್ತದೆ. ಹಾಗಾಗಿ ಸದ್ಯದ ಮಟ್ಟಿಗೆ ದರ ಹೆಚ್ಚಿಸದೆ ಇರಲು ‘ಕನ್ನಡಪ್ರಭ’ ನಡೆಸಿದ ರಿಯಾಲಿಟಿ ಚೆಕ್‌ ವೇಳೆ ಬೆಂಗಳೂರಿನ ಹಲವು ಹೋಟೆಲ್‌ಗಳ ಮಾಲೀಕರು ತಿಳಿಸಿದ್ದಾರೆ.

‘ವರ್ಷಾನುಕಾಲ ಬಂದ್‌ ಆಗಿ ತೀವ್ರ ನಷ್ಟಕ್ಕೆ ಒಳಗಾಗಿದ್ದ ಹೋಟೆಲ್‌ ಉದ್ಯಮ ಕೋವಿಡ್‌ ತಹಬದಿಗೆ ಬಂದ ಹಿನ್ನೆಲೆಯಲ್ಲಿ ಕೆಲ ತಿಂಗಳಿಂದಷ್ಟೇ ಚೇತರಿಕೆ ಕಾಣುತ್ತಿದೆ. ಇನ್ನೂ ಕೋವಿಡ್‌ ಪೂರ್ವದ ಮಾದರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಗ್ರಾಹಕರು ಹೋಟೆಲ್‌ಗಳಿಗೆ ಬರುತ್ತಿಲ್ಲ. ಇದಕ್ಕೆ ಕೋವಿಡ್‌ ಆತಂಕ ಇನ್ನೂ ದೂರವಾಗದೆ ಇರುವುದು ಮತ್ತು ಗ್ರಾಹಕರು ಕೂಡ ಆರ್ಥಿಕ ಸಂಕಷ್ಟದಲ್ಲಿರುವುದು ಕಾರಣ. ಇಂತಹ ಸಂದರ್ಭದಲ್ಲಿ ದರ ಹೆಚ್ಚಳ ಮಾಡುವುದು ಸಮಂಜಸವಲ್ಲ’ ಎಂಬುದು ಹೊಟೇಲ್‌ ಮಾಲೀಕರ ವಾದ.

ಇನ್ನು, ಬೆಂಗಳೂರಿನ ಪ್ರಮುಖ ಸ್ಟಾರ್‌ ಹೋಟೆಲ್‌ಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ವಿಚಾರಿಸಿದಾಗಲೂ ಅಲ್ಲಿನ ಸಿಬ್ಬಂದಿ ಯಾವುದೇ ಊಟ, ಉಪಹಾರದ ದರ ಏರಿಕೆ ಮಾಡಲಾಗಿಲ್ಲ ಎಂದು ಹೇಳಿದರು.

ಆಟೋ ದರ ಹೆಚ್ಚಳ : ಸಂಘಟನೆಗಳಲ್ಲೇ ಒಡಕು

ಕೆಲವೆಡೆ ಮಾತ್ರ ದರ ಹೆಚ್ಚಳ:

ಈ ಮಧ್ಯೆ, ಬೆಂಗಳೂರಿನ ಉಡುಪಿ ಉಪಹಾರ್‌ ಸೇರಿದಂತೆ ಕೆಲ ಹೋಟೆಲ್‌ಗಳು ಮಾತ್ರ ತಿಂಡಿ, ಊಟ, ಕಾಫಿ, ಟೀ ದರಗಳನ್ನು ಶೇ.5ರಿಂದ 10 ರಷ್ಟುಏರಿಕೆ ಮಾಡಿರುವುದು ಕಂಡುಬಂತು. ‘ನಾವು ಕೋವಿಡ್‌ ಸಂದರ್ಭದಲ್ಲಿ ದರ ಏರಿಕೆ ಮಾಡಿರಲಿಲ್ಲ. ಇಂದಿಗೂ ನಷ್ಟದಲ್ಲೇ ಇದ್ದೇವೆ. ಇದನ್ನು ಸರಿದೂಗಿಸಿಕೊಳ್ಳಲು ಅನಿವಾರ್ಯವಾಗಿ ಸಂಘದ ತೀರ್ಮಾನದಂತೆ ದರ ಹೆಚ್ಚಿಸಿದ್ದೇವೆ’ ಎಂದು ಮಾಲೀಕರು ಸಮರ್ಥಿಸಿದರು.

‘ಕಾಫಿ ಟೀ ಬೆಲೆ 1-2 ರು. ಏರಿಕೆಯಾಗಿದೆ. ಇಡ್ಲಿ, ದೋಸೆ ಮತ್ತಿತರ ಉಪಹಾರದ ಬೆಲೆ 5ರಿಂದ 10 ರು., ಊಟದ ಬೆಲೆ 10 ರಿಂದ 15 ರು. ಏರಿಕೆ ಮಾಡಿದ್ದೇವೆ. ಪಾರ್ಸೆಲ್‌ ದರವನ್ನೂ ಶೇ.5ರಷ್ಟುಹೆಚ್ಚಿಸಿದ್ದೇವೆ. ಈ ಮೊದಲು ಸುಮಾರು 30ರಿಂದ 35 ರು. ಇದ್ದ ಇಡ್ಲಿ ವಡಾ ಈಗ 40ರಿಂದ 45 ರು. ಆಗಿದೆ. ರೈಸ್‌ಬಾತ್‌ಗೆ 45 ರು. ಇದ್ದುದು 50 ರು.ಗೆ, 70-80 ರು. ಇದ್ದ ನಾತ್‌ರ್‍ ಇಂಡಿಯನ್‌ ಊಟ, ನಾತ್‌ರ್‍ ಇಂಡಿಯನ್‌ ಊಟದ ಬೆಲೆಯನ್ನು 80ರಿಂದ 100 ರು.ವರೆಗೆ ಹೆಚ್ಚಿಸಲಾಗಿದೆ’ ಎಂದು ಹೋಟೆಲ್‌ ಮ್ಯಾನೇಜರ್‌ ಹೇಳಿದರು.

ಮಳೆಯಿಂದಾಗಿ ತರಕಾರಿ ಬೆಲೆ ಏರಿದೆ. ಆದರೆ ಮುಂದಿನ ದಿನಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಂತೆ ಎಲ್‌ಪಿಜಿ ಬೆಲೆಯೂ ಕಡಿಮೆ ಆಗಬಹುದು. ಆದ್ದರಿಂದ ಸದ್ಯಕ್ಕೆ ದರ ಹೆಚ್ಚಳ ಮಾಡದೆ ಕಾದು ನೋಡುತ್ತೇವೆ.

- ಅಶ್ವತ್ಥ ನಾರಾಯಣ, ಕನ್ನಡ ತಿಂಡಿ ಕೇಂದ್ರದ ಮಾಲೀಕ, ಚಾಮರಾಜಪೇಟೆ, ಬೆಂಗಳೂರು

ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾರಣ ತಿಂಡಿ, ಊಟ, ಟೀ, ಕಾಫಿ ಬೆಲೆಯನ್ನು ಶೇ.5ರಿಂದ 10ರಷ್ಟುಹೆಚ್ಚಳ ಮಾಡಲು ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ, ದರ ಹೆಚ್ಚಿಸುವುದು ಬಿಡುವುದು ಆಯಾ ಹೋಟೆಲ್‌ ಮಾಲೀಕರಿಗೆ ಬಿಟ್ಟಿದ್ದು. ಸಂಘ ಸೂಚಿಸಿದಾಗಲೇ ದರ ಹೆಚ್ಚಿಸಬೇಕೆಂದಿಲ್ಲ.

- ಚಂದ್ರಶೇಖರ ಹೆಬ್ಬಾರ, ಅಧ್ಯಕ್ಷರು, ಕರ್ನಾಟಕ ರಾಜ್ಯ ಹೋಟೆಲ್‌ ಮಾಲೀಕರ ಸಂಘ

ಸದ್ಯಕ್ಕೆ ಬೆಲೆ ಹೆಚ್ಚಳ ಮಾಡುವುದಿಲ್ಲ. ಸ್ವಲ್ಪ ದಿವಸ ಕಾದು ನೋಡುತ್ತೇವೆ. ಆದರೆ ಅಡುಗೆಗೆ ಅಗತ್ಯವಿರುವ ವಸ್ತುಗಳ ಬೆಲೆ ಇದೇ ರೀತಿ ಹೆಚ್ಚಳವಾಗುತ್ತಿದ್ದರೆ ಬೆಲೆ ಹೆಚ್ಚಳ ಅನಿವಾರ್ಯ.

- ಚಂದ್ರು, ತಟ್ಟೆಇಡ್ಲಿ ಕಾರ್ನರ್‌, ನಾಗರಬಾವಿ, ಬೆಂಗಳೂರು