ಆಟೋ ದರ ಹೆಚ್ಚಳ : ಸಂಘಟನೆಗಳಲ್ಲೇ ಒಡಕು
- ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ ಮಾಡಿರುವುದಕ್ಕೆ ಆಟೋ ಚಾಲಕರ ಸಂಘಗಳಲ್ಲಿ ಮಿಶ್ರ ಪ್ರತಿಕ್ರಿಯೆ
- ಪರಿಷ್ಕೃತ ದರಕ್ಕೆ ಕೆಲ ಸಂಘಟನೆಗಳು ಹರ್ಷ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವು ಸಂಘಟನೆಗಳು ದರ ಏರಿಕೆ ಕಡಿಮೆಯಾಗಿದೆ ಎಂದು ಅಸಮಾಧಾನ
ಬೆಂಗಳೂರು (ನ.09): ಆಟೋ ರಿಕ್ಷಾ (Auto Riksha) ಪ್ರಯಾಣ ದರ ಪರಿಷ್ಕರಣೆ ಮಾಡಿರುವುದಕ್ಕೆ ಆಟೋ ಚಾಲಕರ ಸಂಘಗಳಲ್ಲಿ (Auto Drivers association) ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪರಿಷ್ಕೃತ ದರಕ್ಕೆ ಕೆಲ ಸಂಘಟನೆಗಳು ಹರ್ಷ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವು ಸಂಘಟನೆಗಳು ದರ ಏರಿಕೆ ಕಡಿಮೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆಗೆ (Protest) ಮುಂದಾಗಿವೆ.
ಕಳೆದ 9 ವರ್ಷಗಳಿಂದ ದರ ಪರಿಷ್ಕರಣೆ ಮಾಡಿರಲಿಲ್ಲ. ಆಟೋ ರಿಕ್ಷಾ ಸೇರಿದಂತೆ ವಿವಿಧ ತೆರಿಗೆ ಹೆಚ್ಚಳವಾಗಿದೆ. ನಿತ್ಯ ಬಳಕೆಯ ವಸ್ತುಗಳ ಬೆಲೆ ಜಾಸ್ತಿಯಾಗಿದೆ (Price Rise). ಹೀಗಿದ್ದರೂ ಪರಿಷ್ಕರಣೆ ಮಾಡಿರುವ ದರ ಕಡಿಮೆಯಾಗಿದೆ. ಇನ್ನಷ್ಟುಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಬೆಂಗಳೂರು (Bengaluru) ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ರಾಜ್ಯ ಆಟೋ ರೀಕ್ಷಾ ಡ್ರೈವರ್ ಯೂನಿಯನ್(ಸಿಐಟಿಯು) ನಿರ್ಧರಿಸಿದೆ.
ಕನಿಷ್ಠ ಪ್ರಯಾಣದ ನಂತರ ಪ್ರತಿ ಕಿ.ಮೀ.ಗೆ ಸದ್ಯ .15 ಇದ್ದು, ಇದನ್ನು .16ಕ್ಕೆ ಏರಿಕೆ ಮಾಡಬೇಕು. ಆಟೋ ಗ್ಯಾಸ್ (gas), ನಿರ್ವಹಣೆ ವೆಚ್ಚ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಇನ್ನೂ ದರ ಹೆಚ್ಚಳ ಮಾಡಬೇಕು ಎಂದು ಪ್ರಾದೇಶಿಕ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಆಟೋ ರೀಕ್ಷಾ ಡ್ರೈವರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ತಿಳಿಸಿದ್ದಾರೆ.
ದರ ಹೆಚ್ಚಳ ಕುರಿತು ಮಾತನಾಡಿದ ಆಟೋ ಚಾಲಕ ಮಂಜುನಾಥ್, ಮೆಟ್ರೋ ರೈಲು ಸೇವೆ, ಮ್ಯಾಕ್ಸಿ ಕ್ಯಾಬ್ (Maxi Cab), ಪ್ರೀಪೇಡ್ ಬೈಕ್‌ಗಳಿಂದ (Bike) ನಗರದಲ್ಲಿ ಆಟೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಆಟೋ ಚಾಲಕರು ಜೀವನ ನಡೆಸುವುದು ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ದರ ಪರಿಷ್ಕರಣೆ ಮಾಡಿದೆ. ದರ ಹೆಚ್ಚಳ ಮಾಡಿರುವುದು ಖುಷಿ ತಂದಿದೆ ಎಂದರು.
ಅಗತ್ಯ ಬೆಲೆ ಏರಿಕೆಯಾಗಿರುವುದರಿಂದ ರಿಕ್ಷಾ ಪ್ರಯಾಣ ದರ ಏರಿಕೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಆದರೆ, ಇನ್ನೂ ದರ ಹೆಚ್ಚಿಸಿ ಪರಿಷ್ಕರಿಸಬೇಕೆಂಬ ಬೇಡಿಕೆಗೆ ಸರ್ಕಾರ ಮನ್ನಣೆ ನೀಡಿಲ್ಲ. ಹೀಗಾಗಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ.
-ಸಿ.ಎನ್.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ, ರಾಜ್ಯ ಆಟೋ ರಿಕ್ಷಾ ಡ್ರೈವರ್ ಯೂನಿಯನ್(ಸಿಐಟಿಯು)
ಕಳೆದ ಮೂರು ವರ್ಷಗಳಿಂದ ಹೋರಾಡಿದ್ದರಿಂದ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ ಮಾಡಿಲಾಗಿದೆ. ಆಟೋ ಗ್ಯಾಸ್ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿರುವ ಸರ್ಕಾರ ಪ್ರಯಾಣ ದರ ಹೆಚ್ಚಳ ಮಾಡಿರುವುದಕ್ಕೆ ಧನ್ಯವಾದ.
-ಎಂ.ಮಂಜುನಾಥ್, ಆದರ್ಶ ಆಟೋ ಚಾಲಕರ ಸಂಘ.
ಆಟೋ ಕನಿಷ್ಠ ಪ್ರಯಾಣ ದರ ಇನ್ನು 30 ರುಪಾಯಿ
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ರಾಜಧಾನಿ ಬೆಂಗಳೂರಿನ ನಾಗರಿಕರು ಇನ್ನು ಮುಂದೆ ಆಟೋ ಪ್ರಯಾಣ ದರದ ಹೊರೆ ಹೊರಬೇಕಾಗಿದೆ.
ನಗರದಲ್ಲಿ ಒಂಬತ್ತು ವರ್ಷಗಳ ನಂತರ ಆಟೋ ಪ್ರಯಾಣ ದರ ಹೆಚ್ಚಳಗೊಂಡಿದ್ದು, 1.8 ಕಿ.ಮೀ. ದೂರದವರೆಗೂ ಕನಿಷ್ಠ ಪ್ರಯಾಣ ದರದ ಮೊತ್ತವನ್ನು 25 ರು.ಗಳಿಂದ 30 ರು.ಗಳಿಗೆ ಏರಿಕೆ ಮಾಡಲಾಗಿದೆ. ಡಿ.1ರಿಂದ ಅನ್ವಯವಾಗುವಂತೆ ಪರಿಷ್ಕೃತ ದರ ಜಾರಿಗೆ ಬರಲಿದೆ.
ಕನಿಷ್ಠ ಪ್ರಯಾಣ ದರದ ನಂತರದ ಪ್ರತಿ ಕಿ.ಮೀ.ದರವನ್ನು 13ರಿಂದ 15 ರು.ಗಳಿಗೆ ಹೆಚ್ಚಿಸಲಾಗಿದೆ. ಕಾಯುವಿಕೆಯ ದರ ಮೊದಲ 5 ನಿಮಿಷ ಉಚಿತವಾಗಿರಲಿದೆ. ಆನಂತರ ಪ್ರತಿ 15 ನಿಮಿಷಕ್ಕೆ 5 ರು. ನಿಗದಿಗೊಳಿಸಲಾಗಿದೆ. ಪ್ರಯಾಣಿಕರ ಲಗೇಜು ದರ ಮೊದಲ 20 ಕೆ.ಜಿ.ಗೆ ಉಚಿತವಾಗಿರಲಿದೆ. 20 ಕೆ.ಜಿ.ಯಿಂದ 50 ಕೆ.ಜಿ.ವರೆಗೆ 5 ರು. ಇರಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಆಟೋ ಪ್ರಯಾಣ ದರ ಸಾಮಾನ್ಯ ದರ ಜತೆಗೆ ಅರ್ಧ ಪಟ್ಟು ಹೆಚ್ಚಳವಾಗಲಿದೆ ಎಂದು ಬೆಂಗಳೂರು ನಗರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.
ಈ ಕುರಿತು ಹೊರಡಿಸಿರುವ ಆದೇಶದಲ್ಲಿ ಅವರು, ದರಗಳ ವಿವರವನ್ನು ಪ್ರತಿಯೊಂದು ಆಟೋ ರಿಕ್ಷಾದಲ್ಲಿ ಪ್ರಯಾಣಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ನಿರ್ದೇಶಿಸಿದ್ದಾರೆ.
90 ದಿನದಲ್ಲಿ ಮೀಟರ್ ಪರಿಷ್ಕರಣೆ:
ಆಟೋ ಪ್ರಯಾಣ ದರದಲ್ಲಿ ಪರಿಷ್ಕರಣೆಯಾಗಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರು ತಮ್ಮ ಆಟೋಗಳ ಮೀಟರ್‌ಗಳಿಗೆ 2022 ಫೆಬ್ರವರಿ 28 ರೊಳಗೆ ಪುನಃ ಸಾರಿಗೆ ಅಧಿಕಾರಿಗಳಿಂದ ಪ್ರಮಾಣೀಕರಿಸಿಕೊಂಡು ಮುದ್ರೆ ಹಾಕಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.
ಬೆಲೆ ಏರಿಕೆ ಕಾರಣ ದರ ಪರಿಷ್ಕರಣೆ:
ಆಟೋ ರಿಕ್ಷಾಗಳ ಬೆಲೆಯಲ್ಲಿ 2013ಕ್ಕೆ ಹೋಲಿಕೆ ಮಾಡಿದಲ್ಲಿ ಸುಮಾರು .85 ಸಾವಿರ ಹೆಚ್ಚಳವಾಗಿದೆ. ನೋಂದಣಿ ಶುಲ್ಕ, ಅರ್ಹತಾ ಪತ್ರ ನವೀಕರಣ, ವಾಹನದ ವಿಮೆ, ಆಟೋ ಗ್ಯಾಸ್, ಬಿಡಿ ಭಾಗಗಳು, ದಿನ ಬಳಕೆ ವಸ್ತುಗಳಲ್ಲಿ ಶೇ.100ರಿಂದ 200ರವರೆಗೂ ಹೆಚ್ಚಳವಾಗಿದೆ. ಈ ಅಂಶಗಳನ್ನು ಪರಿಗಣಿಸಿ ಆಟೋ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಅಲ್ಲದೆ, ರಾಜ್ಯದ ಇತರೆ ಮಹಾನಗರಗಳಲ್ಲಿನ ಆಟೋ ಪ್ರಯಾಣ ದರವನ್ನು ಪರಿಶೀಲನೆ ಮಾಡಲಾಗಿದೆ. ಮಂಗಳೂರು ಸೇರಿದಂತೆ ಕೆಲ ನಗರಗಳಲ್ಲಿ ಬೆಂಗಳೂರು ನಗರಕ್ಕಿಂತಲೂ ಹೆಚ್ಚಿನ ದರ ನಿಗದಿ ಮಾಡಲಾಗಿದೆ. ಈ ಅಂಶಗಳನ್ನು ಪರಿಗಣಿಸಿ ಬೆಲೆ ಹೆಚ್ಚಳ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.