ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಹೀಗಿರುವಾಗ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಚಿನ್ನ ಖರೀದಿ ಮೇಲೆ ಕೂಡ ಚುನಾವಣಾ ಆಯೋಗ ಕಣ್ಣಿಟ್ಟಿದೆ. ಇಂದು ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿಸೋರ ಮಾಹಿತಿಯನ್ನು ನೀಡುವಂತೆ ಆಯೋಗ ಜ್ಯುವೆಲ್ಲರಿ ಮಾಲೀಕರಿಗೆ ಸೂಚನೆ ನೀಡಿತ್ತು ಕೂಡ. ಹೀಗಾಗಿ 10ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದ ಚಿನ್ನ ಖರೀದಿ ಹಾಗೂ ಸಾಗಾಟ ಮಾಡೋರು ಬಿಲ್ ಅನ್ನು ಹೊಂದಿರೋದು ಅಗತ್ಯ. ಇಲ್ಲವಾದರೆ ತೊಂದರೆ ಖಚಿತ.

ಬೆಂಗಳೂರು (ಏ.22): ಇಂದು ಅಕ್ಷಯ ತೃತೀಯ. ಚಿನ್ನ ಖರೀದಿಗೆ ಅಕ್ಷಯ ತೃತೀಯ ಅತ್ಯಂತ ಪವಿತ್ರ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಚಿನ್ನ ಖರೀದಿಸಿದ್ರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ. ಇದೇ ಕಾರಣಕ್ಕೆ ಬಹುತೇಕರು ಈ ದಿನ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಚಿನ್ನ ಖರೀದಿಸುವ ಮನಸ್ಸು ಮಾಡುತ್ತಾರೆ. ಇದೇ ದಿನ ಚಿನ್ನ ಖರೀದಿಸಬೇಕು ಎಂಬ ಕಾರಣಕ್ಕೆ ಹಲವು ತಿಂಗಳುಗಳಿಂದ ಹಣ ಕೂಡಿಡುವವರು ಕೂಡ ಇದ್ದಾರೆ. ಆದರೆ, ರಾಜ್ಯದ ಜನರು ಮಾತ್ರ ಇಂದು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿಸಿದ್ರೆ ತೊಂದರೆಗೆ ಸಿಲುಕುವುದು ಗ್ಯಾರಂಟಿ. ಏಕೆಂದ್ರೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಿದೆ. ಹೀಗಾಗಿ ಅಕ್ಷಯ ತೃತೀಯ ಹಿನ್ನಲೆಯಲ್ಲಿ ಚಿನ್ನ ಖರೀದಿಸೋರ ಮೇಲೆ ಚುನಾವಣೆ ಆಯೋಗ ಹದ್ದಿನ ಕಣ್ಣಿಟ್ಟಿದೆ. ಇದು ಚುನಾವಣಾ ಅಭ್ಯರ್ಥಿಗಳು, ಅವರ ಸಂಬಂಧಿಕರ ಜೊತೆಗೆ ಸಾಮಾನ್ಯ ಜನರಿಗೂ ಬಿಸಿ ತುಪ್ಪವಾಗಿದೆ. ಇನ್ನು ಚಿನ್ನದ ವ್ಯಾಪಾರಿಗಳಿಗೂ ಈ ನೀತಿ ಸಂಹಿತೆ ಈ ಬಾರಿಯ ಅಕ್ಷಯ ತೃತೀಯ ದಿನದ ವ್ಯಾಪಾರಕ್ಕೆ ತುಸು ಹಿನ್ನಡೆಯನ್ನೇ ತಂದಿದೆ ಎಂದರೆ ತಪ್ಪಿಲ್ಲ. 

ಅಕ್ಷಯ ತೃತೀಯದಂದು ಚಿನ್ನ ಖರೀದಿಸುವವರ ಬಗ್ಗೆ ಜ್ಯುವೆಲ್ಲರಿ ಮಾಲೀಕರು ಆಯೋಗಕ್ಕೆ ಮಾಹಿತಿ ನೀಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಅದರಲ್ಲೂ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಅಕ್ಷಯ ತೃತೀಯದಂದು ಚುನಾವಣಾ ಅಭ್ಯರ್ಥಿಗಳು ಚಿನ್ನ, ಬೆಳ್ಳಿಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ, ಮತದಾರರಿಗೆ ಹಂಚಿಕೆ ಮಾಡುವ ಸಾಧ್ಯತೆಯಿರುವ ಕಾರಣ ಚುನಾವಣಾ ಆಯೋಗ ಕಟ್ಟೆಚ್ಚರ ವಹಿಸಿದೆ. ಮತದಾರರಿಗೆ ಹಂಚಲು ಕದ್ದು ಮುಚ್ಚಿ ಆಭರಣ ಖರೀದಿಸಿದ್ರೆ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಒಟ್ಟಾರೆ ಅಕ್ಷಯ ತೃತೀಯ ಹೆಸರಿನಲ್ಲಿ ಚುನಾವಣೆ ಅಕ್ರಮಕ್ಕೆ ಕಡಿವಾಣಕ್ಕೆ ಬಂಗಾರ ವಹಿವಾಟಿನ ಮೇಲೆ ಆಯೋಗ ಕಣ್ಣಿಟ್ಟಿದೆ.

ಗೂಗಲ್ ಉದ್ಯೋಗ ಕಡಿತ ಮಾಡಿದ್ರೂ ಸಿಇಒ ಗಳಿಕೆಗೇನೂ ಧಕ್ಕೆಯಾಗಿಲ್ಲ; 2022ರಲ್ಲಿ ಪಿಚೈ ಪಡೆದ ಹಣವೆಷ್ಟು ಗೊತ್ತಾ?

10 ಲಕ್ಷ ರೂ. ಮೇಲ್ಪಟ್ಟ ಆಭರಣ ಸಾಗಣೆ ಮೇಲೆ ನಿಗಾ
ಚುನಾವಣಾ ಆಯೋಗವು 10 ಲಕ್ಷ ರೂ. ಹಾಗೂ ಮೇಲ್ಪಟ್ಟ ಮೌಲ್ಯದ ಆಭರಣಗಳನ್ನು ಸಾಗಿಸುವವರ ಮೇಲೆ ನಿಗಾ ಇಡುವ ಸಲುವಾಗಿ ಪ್ರತ್ಯೇಕ ಸಮಿತಿಗಳನ್ನು ಮಾಡಿದೆ. ಮಾರ್ಗಮಧ್ಯೆ ಆಭರಣಗಳನ್ನು ಕೊಂಡೊಯ್ಯುವಾಗ ಪೊಲೀಸರು ಹಿಡಿದು, ಕೇಸುಗಳನ್ನು ದಾಖಲಿಸಬಹುದಾಗಿದೆ. ಹೀಗಾಗಿ ಚುನಾವಣಾ ಪ್ರಕ್ರಿಯೆಗಳು ಮುಗಿಯುವ ತನಕ ಆಭರಣಗಳನ್ನು ಕೊಂಡೊಯ್ಯುವಾಗ ಬಿಲ್ ಮತ್ತು ದಾಖಲೆಯನ್ನು ಜೊತೆಗೆ ಕೊಂಡೊಯ್ಯುವುದು ಅಗತ್ಯ.

ಚಿನ್ನದ ವ್ಯಾಪಾರಿಗಳಿಗೂ ತೊಂದರೆ
ಚಿನ್ನದ ವ್ಯಾಪಾರಿಗಳು ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಸಾಗಿಸಬೇಕಾದ ಅಗತ್ಯವಿರುತ್ತದೆ. ಹೀಗಾಗಿ ಇಂಥ ಸಮಯದಲ್ಲಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇಂಥ ಆಭರಣಗಳನ್ನು ಸಾಗಿಸುವ ವಾಹನಗಳನ್ನು ಹಿಡಿದು ಪರಿಶೀಲಿಸುವ ಸಾಧ್ಯತೆಯಿದೆ. ಹೀಗಾಗಿ ಚಿನ್ನದ ವ್ಯಾಪಾರಿಗಳು ಕೂಡ ಬಿಲ್ ಹೊಂದಿರೋದು ಅಗತ್ಯ.

Personal Finance: ಗೃಹ ಸಾಲವಿದ್ರೂ ಮನೆ ಮಾರಾಟ ಮಾಡೋದು ಹೇಗೆ?

ಚಿನ್ನದ ನಾಣ್ಯಗಳಿಗೆ ಬೇಡಿಕೆ
ಪ್ರತಿ ಬಾರಿ​ಯಂತೆ ಈ ವರ್ಷವೂ ಹಲವು ಮಳಿ​ಗೆ​ಗ​ಳಲ್ಲಿ ಅಕ್ಷಯ ತೃತೀ​ಯ​ಕ್ಕೆಂದೇ ವಿಶೇ​ಷ​ವಾಗಿ ಒಂದು ಗ್ರಾಂನ ಚಿನ್ನದ ನಾಣ್ಯ​ಗ​ಳನ್ನು ಮಾರಾಟ ಮಾಡ​ಲಾ​ಗುತ್ತಿದೆ. ಈ ದಿನ ಏನಾ​ದರೂ ಖರೀ​ದಿ​ಸ​ಲೇ​ಬೇಕು ಎಂಬ ನಂಬಿ​ಕೆ​ಯು​ಳ್ಳ​ವರು ಈ ನಾಣ್ಯ​ಗ​ಳ​ನ್ನು ಖರೀ​ದಿಸಲು ಮುಂದಾಗುತ್ತಾರೆ. ಚುನಾವಣಾ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಚಿನ್ನದ ನಾಣ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವ ಸಾಧ್ಯತೆಯೂ ಇದೆ. ಹೀಗಾಗಿ ಚಿನ್ನದ ನಾಣ್ಯಗಳು ದೊಡ್ಡ ಪ್ರಮಾಣದಲ್ಲಿ ಸಾಗಣೆ ಮಾಡುವಾಗ ಕೂಡ ಬಿಲ್ ಹೊಂದಿರೋದು ಅಗತ್ಯ. ಇನ್ನು ಇದು ಮದುವೆ ಸೀಸನ್ ಆಗಿದ್ದು, ಇನ್ನೂ ಕೆಲವು ಶುಭ ಕಾರ್ಯಕ್ರಮಗಳು ಈ ಸಮಯದಲ್ಲಿ ನಡೆಯುತ್ತವೆ. ಹೀಗಾಗಿ ಸಹಜವಾಗಿ ಜನಸಾಮಾನ್ಯರು ಕೂಡ ಚಿನ್ನವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಾರೆ. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಜನಸಾಮಾನ್ಯರು ಕೂಡ ಚಿನ್ನದ ಜೊತೆಗೆ ತಪ್ಪದೆ ಬಿಲ್ ಅನ್ನು ಕೂಡ ಹೊಂದಿರೋದು ಅಗತ್ಯ. ಇಲ್ಲವಾದರೆ ಅನಗತ್ಯವಾಗಿ ಸಮಸ್ಯೆಗೆ ಸಿಲುಕಬೇಕಾಗುತ್ತದೆ.