ರಾಜ್ಯದಲ್ಲಿ ಹೊಸ ಪಬ್ಲಿಕ್ ಶಾಲೆಗಳ ಸ್ಥಾಪನೆಗೆ ಅನುದಾನ, ಅತಿಥಿ ಶಿಕ್ಷಕರು ಮತ್ತು ಬಿಸಿಯೂಟ ತಯಾರಕರಿಗೆ ಗೌರವಧನ ಹೆಚ್ಚಳವನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೆರವಿನೊಂದಿಗೆ 500 ಹೊಸ ಶಾಲೆಗಳು ಪ್ರಾರಂಭವಾಗಲಿವೆ.

ಬೆಂಗಳೂರು (ಮಾ.07): ರಾಜ್ಯದಲ್ಲಿ ಈಗಿರುವ ಪಬ್ಲಿಕ್ ಶಾಲೆಗಳನ್ನು ವಿಸ್ತರಣೆ ಮಾಡಲಾಗುವುದು. ಇದಕ್ಕೆ ಅನುಕೂಲ ಆಗುವಂತೆ ಎಡಿಬಿ ಬ್ಯಾಂಕ್‌ನಿಂದ 2,500 ಕೋಟಿ ರೂ. ಪಡೆದು 500 ಹೊಸ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಜೊತೆಗೆ, ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ಅತಿಥಿ ಶಿಕ್ಷಕರಿಂದ ಉಪನ್ಯಾಸಕರವರೆಗೆ ತಲಾ 2,000 ರೂ. ಹಾಗೂ ಬಿಸಿಯೂಟ ತಯಾರಕರಿಗೆ ತಲಾ 1,000 ರೂ. ಗೌರವಧನ ಹೆಚ್ಚಳ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಶುಕ್ರವಾರ ಬಜೆಟ್ ಮಂಡನೆ ವೇಳೆ ಶಿಕ್ಷಣ ಇಲಾಖೆಗೆ ಅನುದಾನ ಹಂಚಿಕೆ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ಪ್ರಸಾರಕ್ಕೆ ಅನುಕೂಲ ಆಗುವಂತೆ ಪಬ್ಲಿಕ್ ಶಾಲೆಗಳನ್ನು ವಿಸ್ತರಿಸಲು ಉದ್ದೇಶಿಸಿದೆ. ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೆರವಿನೊಂದಿಗೆ 2,500 ಕೋಟಿ ರೂ. ವೆಚ್ಚದಲ್ಲಿ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗುವುದು.

ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಪ್ರಸ್ತುತ 53 ಲಕ್ಷ ಮಕ್ಕಳಿಗೆ ವಾರದಲ್ಲಿ ಎರಡು ದಿನ ವಿತರಿಸಲಾಗುತ್ತಿರುವ ಮೊಟ್ಟೆ/ಬಾಳೆಹಣ್ಣನ್ನು ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಹಯೋಗದೊಂದಿಗೆ 1,500 ಕೋಟಿ ರೂ. ವೆಚ್ಚದಲ್ಲಿ ವಾರದಲ್ಲಿ ಆರು ದಿನಕ್ಕೆ ವಿಸ್ತರಿಸಲಾಗಿದೆ. ಈ ಯೋಜನೆಯನ್ನು 2025-26ನೇ ಸಾಲಿನಲ್ಲಿಯೂ ಮುಂದುವರೆಸಲಾಗುವುದು.

ಇದನ್ನೂ ಓದಿ: Karnataka Budget 2025 live: ಬಜೆಟ್ ಮಂಡನೆ ಶುರು ಮಾಡಿದ ಸಿಎಂ ಸಿದ್ದರಾಮಯ್ಯ

ಶಾಲಾ ಮಕ್ಕಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಪ್ರಸ್ತುತ ವಾರದಲ್ಲಿ ಮೂರು ದಿನ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿಯನ್ನು 2W% ಹಾಲಿನೊಂದಿಗೆ ಮಿಶ್ರಣ ಮಾಡಿ ವಿತರಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ವಾರದ ಐದು ದಿನಗಳಿಗೆ ವಿಸ್ತರಿಸಲಾಗುವುದು. ಒಟ್ಟಾರೆ 100 ಕೋಟಿ ರೂ. ವೆಚ್ಚದ ಈ ಯೋಜನೆಯ ಶೇ.25 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರದಿಂದ ಭರಿಸಲಾಗುವುದು.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಗೌರವಧನವನ್ನು ತಲಾ 2,000 ರೂ. ಹೆಚ್ಚಿಸಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ನೀಡುತ್ತಿರುವ ಮಾಸಿಕ ಗೌರವಧನವನ್ನು ತಲಾ 1,000 ರೂ. ಹೆಚ್ಚಿಸಲಾಗುವುದು. ರಾಜ್ಯದ ಅರ್ಹ 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಹಾಗೂ 50 ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುವುದು.

ಇದನ್ನೂ ಓದಿ: ಇಂದು ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್ ಮಂಡನೆ: ಸಿಹಿಯೋ, ಕಹಿಯೋ?

LKG ಯಿಂದ ದ್ವಿತೀಯ ಪಿ.ಯು.ಸಿ ವರೆಗಿನ ಎಲ್ಲಾ ತರಗತಿಗಳ ವಿದ್ಯಾರ್ಥಿಗಳು, ಆಯಾ ತರಗತಿಗೆ ತಕ್ಕಂತೆ ಕಲಿಕೆಯ ಮಟ್ಟವನ್ನು ಹೊಂದುವ ನಿಟ್ಟಿನಲ್ಲಿ ಮೂರು ವರ್ಷಗಳ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು. ಈ ಮೂಲಕ SSLC ಮತ್ತು PUC ಪರೀಕ್ಷೆಗಳ ಫಲಿತಾಂಶದಲ್ಲಿ ಸುಧಾರಣೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.