- Home
- Karnataka Districts
- ಒಂದು ದಶಕದಿಂದ ಗಲ್ಫ್ ದೇಶಗಳಲ್ಲಿ ಉತ್ತಮ ಬೇಡಿಕೆ ಸೃಷ್ಟಿಸಿದ್ದ ಧಾರವಾಡ ಆಪೂಸ್ ಮಾವು ರಫ್ತಿಗೆ ಯುದ್ಧದ ಕರಿನೆರಳು!
ಒಂದು ದಶಕದಿಂದ ಗಲ್ಫ್ ದೇಶಗಳಲ್ಲಿ ಉತ್ತಮ ಬೇಡಿಕೆ ಸೃಷ್ಟಿಸಿದ್ದ ಧಾರವಾಡ ಆಪೂಸ್ ಮಾವು ರಫ್ತಿಗೆ ಯುದ್ಧದ ಕರಿನೆರಳು!
ವರದಿ: ಬಸವರಾಜ ಹಿರೇಮಠಮಧ್ಯಪ್ರಾಚ್ಯದಲ್ಲಿನ ಯುದ್ಧವು ಧಾರವಾಡ ಆಪೂಸ್ ಎಂದೇ ಖ್ಯಾತವಾದ ಅಲ್ಫಾನ್ಸೋ ಮಾವಿನ ರಫ್ತಿಗೆ ಅಡ್ಡಿಯಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಬೆಳೆಗಾರರ ಸಂಘವು ಅಮೆರಿಕ, ಯುಕೆ ಮತ್ತು ಸಿಂಗಾಪುರದಂತಹ ಪರ್ಯಾಯ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಹುಡುಕುತ್ತಿದೆ.

ಧಾರವಾಡ ಆಪೂಸ್
ಧಾರವಾಡ: ಒಂದು ದಶಕದಿಂದ ಗಲ್ಫ್ ದೇಶಗಳಲ್ಲಿ ಉತ್ತಮ ಬೇಡಿಕೆ ಸೃಷ್ಟಿಸಿದ್ದ ಧಾರವಾಡ ಆಪೂಸ್ ಎಂದೇ ಹೆಸರಾಗಿರುವ ಅಲ್ಫಾನ್ಸೋ ಮಾವಿನ ರಫ್ತಿಗೆ ಪ್ರಸ್ತುತ ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ಕರಿ ನೆರಳು ಚೆಲ್ಲಿದೆ.
ಮುಂದಿನ 15 ದಿನಗಳಲ್ಲಿ ಮಾವಿನ ಋತು ಪ್ರಾರಂಭವಾಗಲಿದ್ದು, ಉತ್ತಮ ಗುಣಮಟ್ಟದ ಅಲ್ಫಾನ್ಸೋ ಮಾವನ್ನು ಏಪ್ರಿಲ್ ಮೊದಲ ವಾರದಿಂದ ಅಬುಧಾಬಿ, ಇರಾನ್, ಯುಎಇ, ಕುವೈತ್, ಕತಾರ್ ಮತ್ತು ಇರಾಕ್‌ಗೆ ರಪ್ತು ಮಾಡಲು ರೈತರು ಸಿದ್ಧತೆ ನಡೆಸಿದ್ದರು. ಆದರೆ ಈ ದೇಶದಲ್ಲಿ ಯುದ್ಧ ನಡೆಯುತ್ತಿರುವುದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಧಾರವಾಡ, ಬೆಳಗಾವಿ ಮತ್ತು ಹಾವೇರಿಯ ಕೆಲವು ಭಾಗಗಳಲ್ಲಿ ಗುಣಮಟ್ಟದ ಅಲ್ಫಾನ್ಸೋ ತಳಿ ಬೆಳೆಯುತ್ತಿದ್ದು, ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೆ ದೇಶ ಹಾಗೂ ವಿದೇಶಕ್ಕೂ ರಫ್ತಾಗುತ್ತದೆ. ಈ ಪೈಕಿ 10 ವರ್ಷಗಳಿಂದ ಧಾರವಾಡದ ಹಲವು ಮಾವಿನ ತೋಟಗಳಿಂದ ಗಲ್ಫ್ ದೇಶ ಮತ್ತು ಯುರೋಪಿಯನ್ ದೇಶಗಳಿಗೂ ಮಾವಿನ ಹಣ್ಣು ರಫ್ತಾಗುತ್ತಿದೆ.
300 ಟನ್ ರಫ್ತು:
ದೇಶೀಯ ಮಾರುಕಟ್ಟೆಗೆ ಹೋಲಿಸಿದರೆ ಆಲ್ಫೋನ್ಸೊ ಮಾವಿನ ಹಣ್ಣು ಮಧ್ಯಪ್ರಾಚ್ಯ ಮತ್ತು ಯುರೋಪ್‌ನಲ್ಲಿ ಹೆಚ್ಚಿನ ಬೆಲೆ ಪಡೆಯುತ್ತವೆ. ಯುರೋಪ್‌ನಲ್ಲಿ ಹೆಚ್ಚಿನ ಗುಣಮಟ್ಟದ ತಪಾಸಣೆ ನಡೆಯುತ್ತಿದ್ದು, ಗಲ್ಫ್ ದೇಶಗಳಲ್ಲಿ ಈ ಪ್ರಕ್ರಿಯೆ ಅಷ್ಟೊಂದಿಲ್ಲ. ಈ ಹಿನ್ನೆಲೆಯಲ್ಲಿ ಗಲ್ಫ್ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣು ರಫ್ತು ಮಾಡಲು ಬೆಳೆಗಾರರು ಸಹ ಆಸಕ್ತರಾಗಿದ್ದಾರೆ. ಕಳೆದ ಋತುವಿನಲ್ಲಿ ಧಾರವಾಡ, ಹಾವೇರಿ, ಬೆಳಗಾವಿ ಭಾಗದಿಂದ 300 ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ಮಾವು ರಫ್ತು ಮಾಡಲಾಗಿದೆ ಎಂಬ ಮಾಹಿತಿ ಇದೆ. ಆದರೆ, ಸದ್ಯ ಮಾವು ರಫ್ತು ಮಾಡಲು ಆಸಕ್ತ ವ್ಯಾಪಾರಿಗಳು ಮಾವು ಬೆಳೆಗಾರರನ್ನು ಸಂಪರ್ಕಿಸದೇ ಇರುವುದು ಸಹ ಬೆಳೆಗಾರರಿಗೆ ಆತಂಕ ತಂದಿದೆ.
ಪರ್ಯಾಯ ಮಾರುಕಟ್ಟೆ:
ಗಲ್ಫ್ ಮಾರುಕಟ್ಟೆಗೆ ಮಾವು ತಲುಪದಿರುವ ಬಗ್ಗೆ ಬೆಳೆಗಾರರು ಚಿಂತಿತರಾಗಿರುವ ಮಧ್ಯೆಯೇ, ಮಾವು ಬೆಳೆಗಾರರ ಸಂಘವು ಪರ್ಯಾಯ ಚಿಂತನೆ ಸಹ ಮಾಡುತ್ತಿದೆ. ಸದ್ಯದ ಗಲ್ಫ್‌ನಲ್ಲಿರುವ ಯುದ್ಧದ ಪರಿಸ್ಥಿತಿಯನ್ನು ಋಣಾತ್ಮಕವಾಗಿ ನೋಡುವ ಬದಲು ಧನಾತ್ಮಕವಾಗಿ ನೋಡಬೇಕಿದೆ. ಸಂಘವು ಪರ್ಯಾಯ ಅಂತಾರಾಷ್ಟ್ರೀಯ ಮಾರುಕಟ್ಟೆ ಹುಡುಕುತ್ತಿದೆ. ಈ ವರ್ಷ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಸಿಂಗಾಪುರಕ್ಕೆ ಅಲ್ಫೋನ್ಸೊ ಮಾವಿನ ಹಣ್ಣನ್ನು ರಫ್ತು ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಸಿಂಗಾಪುರ ಈಗಾಗಲೇ ಮಾವಿನ ಹಣ್ಣಿಗೆ ಆರ್ಡರ್ ನೀಡುತ್ತಿದೆ ಎಂದು ಸಂಘದ ಗೌರವಾಧ್ಯಕ್ಷ ರಾಜೇಂದ್ರ ಪೋದ್ದಾರ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಯುಕೆಗೆ ರಫ್ತು ಮಾಡಲು ಮಾತುಕತೆ
ಹಣ್ಣನ್ನು ಖರೀದಿಸಿ ಯುಎಸ್ ಮತ್ತು ಯುಕೆಗೆ ರಫ್ತು ಮಾಡಲು ಸಿದ್ಧರಿರುವ ದೆಹಲಿ ಮತ್ತು ಮುಂಬೈನ ವಸೈ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಆದಾಗ್ಯೂ ಯುಎಸ್ ಸರ್ಕಾರ ವಿಧಿಸಿರುವ ಸುಂಕಗಳ ಬಗ್ಗೆ ಅನಿಶ್ಚಿತತೆಯು ಕಳವಳಕಾರಿ ಎನ್ನುವ ಡಾ. ಪೋದ್ದಾರ, ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೊದಲು ನಾವು ಸುಂಕ ರಚನೆ ಅಧ್ಯಯನ ಮಾಡುತ್ತಿದ್ದೇವೆ ಎಂಬ ಮಾಹಿತಿ ನೀಡಿದರು.
ಈ ಋತುವಿನಲ್ಲಿ ಇಳುವರಿ ಕಡಿಮೆಯಾದ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಉತ್ಪಾದನೆಯಲ್ಲಿನ ಕುಸಿತವು ಧಾರವಾಡ ಮತ್ತು ಬೆಳಗಾವಿಗೆ ಸೀಮಿತವಾಗಿಲ್ಲ, ಕೇರಳ ಮತ್ತು ಮಹಾರಾಷ್ಟ್ರದಲ್ಲೂ ಇದೇ ರೀತಿ ಹವಾಮಾನ ವೈಪರೀತ್ಯದಿಂದ ಉತ್ಪಾದನೆ ಕುಂಠಿತವಾಗಿರುವ ವರದಿ ಇದ್ದು, ಈ ಬಾರಿ ಮಾವಿಗೆ ಹೆಚ್ಚಿನ ಬೆಲೆ ಬರುವ ಸಾಧ್ಯತೆಗಳಿವೆ. ಮುಂಬೈ ವ್ಯಾಪಾರಿಗಳು ಮಾವು ಖರೀದಿಗಾಗಿ ಧಾರವಾಡಕ್ಕೆ ಆಗಮಿಸಲು ಪ್ರಾರಂಭಿಸಿದ್ದಾರೆ ಮತ್ತು ಆರ್ಡರ್ ನೀಡುತ್ತಿದ್ದಾರೆ. ಆದ್ದರಿಂದ ಬೆಳೆಗಾರರು ಬೆಲೆ ಕುಸಿತದ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಡಾ. ಪೋದ್ದಾರ ಹೇಳಿದರು.
100 ಬೆಳೆಗಾರರಿಂದ ನೋಂದಣಿ
ಹಿಂದಿನ ವ್ಯಾಪಾರಿಗಳು ಮಾವಿನ ಹಣ್ಣು ಖರೀದಿಸಿ ಮಧ್ಯಪ್ರಾಚ್ಯ ಸೇರಿದಂತೆ ಇತರ ದೇಶಗಳಿಗೆ ರಫ್ತು ನಿರ್ವಹಿಸುತ್ತಿದ್ದರು. ಈ ವರ್ಷ, ರಫ್ತು ಮಾರುಕಟ್ಟೆಗಳಿಗೆ ಉತ್ತಮ ಗುಣಮಟ್ಟದ ಹಣ್ಣು ಉತ್ಪಾದಿಸುವ ಕುರಿತು ತೋಟಗಾರಿಕೆ ಇಲಾಖೆ ಹಲವಾರು ತರಬೇತಿ ಕಾರ್ಯಕ್ರಮ ಮತ್ತು ಕಾರ್ಯಾಗಾರ ನಡೆಸಿತು. ಹೀಗಾಗಿ 100ಕ್ಕೂ ಹೆಚ್ಚು ಬೆಳೆಗಾರರು ನೇರ ರಫ್ತುಗಾಗಿ ಇಲಾಖೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.
100ಕ್ಕೂ ಹೆಚ್ಚು ಬೆಳೆಗಾರರು ಇಲಾಖೆಯಲ್ಲಿ ನೋಂದಣಿ
ಮಾವು ರಫ್ತಿಗಾಗಿ 100ಕ್ಕೂ ಹೆಚ್ಚು ಬೆಳೆಗಾರರು ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ಬೇಕಾದ ತರಬೇತಿ ಸಹ ನೀಡಲಾಗಿದೆ. ಇರಾನ್‌ನಲ್ಲಿನ ಸಂಘರ್ಷ ಮತ್ತು ಅದು ಮಧ್ಯ ಪ್ರಾಚ್ಯಕ್ಕೆ ಹರಡಿರುವುದರಿಂದ ಈ ಋತುವಿನಲ್ಲಿ ಬೆಳೆಗಾರರಿಗೆ ಆ ದೇಶ ಹೊರತುಪಡಿಸಿ ಅಮೆರಿಕ ಮತ್ತು ಸಿಂಗಾಪುರಕ್ಕೆ ಮಾವಿನ ಹಣ್ಣು ರಫ್ತು ಮಾಡುವುದು ಸುರಕ್ಷಿತ ಆಯ್ಕೆ. ಅದು ಸಹ ಕಷ್ಟವಾದರೂ ಸ್ಥಳೀಯವಾಗಿಯೂ ಈ ಬಾರಿ ಮಾವಿಗೆ ಉತ್ತಮ ಬೆಲೆ ನಿರೀಕ್ಷೆ ಇದೆ.
ಕಾಶಿನಾಥ ಭದ್ರನ್ನವರ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ

