Asianet Suvarna News Asianet Suvarna News

ಜಿಎಸ್‌ಟಿ ಜಾರಿಯಾಗಿ 3 ವರ್ಷ; ದೇಶದ ಆರ್ಥಿಕ ಪ್ರಗತಿಯ ದರ ದುಪ್ಪಟ್ಟಾಯಿತೇ?

ಭಾರತ ದೇಶವಾಗಿರುವುದೇ ಹಲವು ರಾಜ್ಯಗಳಿಂದಾಗಿ. ಹೀಗಾಗಿ ಇದೊಂದು ಒಕ್ಕೂಟ. ಇಲ್ಲಿ ಎಲ್ಲ ರಾಜ್ಯಗಳಿಗೂ ತನ್ನದೇ ಆದ ಅಸ್ಮಿತೆಯಿದೆ. ಆದರೆ ಜಿಎಸ್‌ಟಿಯಿಂದಾಗಿ ನಮ್ಮ ಹಕ್ಕುಗಳನ್ನು ಇನ್ನೊಬ್ಬರಿಗೆ ಧಾರೆ ಎರೆದುಕೊಡುವಂತಾಗಿದೆ.

Karave Narayanagowda writes about GST and Indian Economy hls
Author
Bengaluru, First Published Oct 13, 2020, 6:19 PM IST

ಬೆಂಗಳೂರು (ಅ. 13): ‘ಒಂದು ದೇಶ, ಒಂದು ತೆರಿಗೆ’ ಹೆಸರಿನಲ್ಲಿ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ(ಜಿಎಸ್‌ಟಿ)ಯನ್ನು 2017ರಲ್ಲಿ ಅನುಷ್ಠಾನಕ್ಕೆ ತಂದಿತು. ಇದು ಆರ್ಥಿಕ ಕ್ಷೇತ್ರದ ಕ್ರಾಂತಿಕಾರಿ ಸುಧಾರಣೆ ಎಂಬಂತೆ ಬಿಂಬಿಸಿತು. ಜನರೂ ಖುಷಿಪಟ್ಟರು. ಆದರೆ, ಜಿಎಸ್‌ಟಿಯ ಬಣ್ಣ ಈಗ ಬಯಲಾಗಿದೆ. ಜಿಎಸ್‌ಟಿಯಿಂದಾಗಿ ದೇಶ ಸಂಕಟದಲ್ಲಿ ನರಳುತ್ತಿದೆ. ಜಿಎಸ್‌ಟಿ ಹೆಸರಿನಲ್ಲಿ ಕರ್ನಾಟಕದಂಥ ಪ್ರಗತಿಪರ ರಾಜ್ಯಗಳು ಸಾಲಕ್ಕಾಗಿ ಬೇಡುವ ಸ್ಥಿತಿ ಬಂದಿದೆ.

ಸಾಲ ಮಾಡಿ ಎನ್ನುವುದು ನ್ಯಾಯವೇ?

ಕಳೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಒಂದು ವಿಚಿತ್ರವಾದ ನಿರ್ಣಯ ಕೈಗೊಳ್ಳಲಾಗಿದೆ. ಕೋವಿಡ್‌-19ನಿಂದ ಕೇಂದ್ರ ಸರ್ಕಾರಕ್ಕೆ ಜಿಎಸ್‌ಟಿ ಸಂಗ್ರಹದಲ್ಲಿ ಮೂರು ಲಕ್ಷ ಕೋಟಿಯಷ್ಟುಕೊರತೆಯಾಗಲಿದೆ. ಹಾಲಿ ಜಿಎಸ್‌ಟಿ ವ್ಯವಸ್ಥೆಯಿಂದ ಆಗಿರುವ ಆದಾಯದ ಕೊರತೆ 97,000 ಕೋಟಿ ರುಪಾಯಿ. ಹೀಗಾಗಿ ರಾಜ್ಯಗಳಿಗೆ ನೀಡಬೇಕಾದ 2.35 ಲಕ್ಷ ಕೋಟಿ ರು. ಜಿಎಸ್‌ಟಿ ಪರಿಹಾರವನ್ನು ಈ ವರ್ಷ ಕೇಂದ್ರ ಸರ್ಕಾರ ನೀಡುವುದಿಲ್ಲ. ರಾಜ್ಯಗಳು ಬೇಕಿದ್ದರೆ ಆರ್‌ಬಿಐನಿಂದ ಸಾಲ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಲಾಯಿತು. ಹೀಗೆ ಈ ವರ್ಷ ಹಣ ಕೊಡಲಾಗುವುದಿಲ್ಲ ಎಂದು ಹೇಳುವುದೇ ಕಾನೂನುಬಾಹಿರ.

ಕೇಂದ್ರ ಸರ್ಕಾರ ಮೊದಲೇ ಆದ ಒಪ್ಪಂದದಂತೆ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರದ ಹಣ ನೀಡಲೇಬೇಕು. ಅದು ಅದರ ಕರ್ತವ್ಯ. ತಾನು ಕೊಡಬೇಕಾದ ಹಣವನ್ನು ಕೊಡದೆ, ಮತ್ತೆಲ್ಲೋ ಸಾಲ ಮಾಡಿಕೊಳ್ಳಿ ಎಂದು ಹೇಳುವುದು ಯಾವ ನ್ಯಾಯ? ಇದೊಂದು ರೀತಿಯ ಆರ್ಥಿಕ ದೌರ್ಜನ್ಯ. ಒಕ್ಕೂಟ ವ್ಯವಸ್ಥೆ ಹೀಗೆ ನಡೆಯಲು ಸಾಧ್ಯವೇ?

50 ರೂಗೆ ಎಟಿಎಂ ಕಾರ್ಡ್ ರೀತಿಯ ಆಧಾರ್ ಕಾರ್ಡ್, ಹೀಗೆ ಪಡೆದುಕೊಳ್ಳಿ!

ಜಿಎಸ್‌ಟಿಯಿಂದ ದೇಶ ಬದಲಾಯ್ತೆ?

‘ಒಂದು ದೇಶ ಒಂದು ತೆರಿಗೆ’ ಹೆಸರಿನ ಸರಕು ಸೇವಾ ಕಾಯ್ದೆಯ ರೂಪರೇಷೆ ಸಿದ್ಧವಾಗಿ 2 ದಶಕವೇ ಆಗಿದೆ. ಯುಪಿಎ ಸರ್ಕಾರ ಇದನ್ನು ಜಾರಿಗೊಳಿಸಲು ಹೊರಟಾಗ ಬಿಜೆಪಿ ವಿರೋಧಿಸಿತ್ತು. ಆದರೆ, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಪಟ್ಟು ಹಿಡಿದು 2017ರಲ್ಲಿ ಅದನ್ನು ಜಾರಿಗೊಳಿಸಿತು. ಈಗಾಗಲೇ ಮೂರು ವರ್ಷಗಳು ಆಗಿಹೋಗಿವೆ. ದೇಶದ ಆರ್ಥಿಕ ಪ್ರಗತಿಯ ದರ ದುಪ್ಪಟ್ಟಾಯಿತೇ? 2014ರಲ್ಲಿ ಭಾರತದ ಜಿಡಿಪಿ ಶೇ.7ನ್ನು ತಲುಪಿತ್ತು. ಕೊರೋನಾ ಪೂರ್ವದಲ್ಲಿ 2020ರ ಫೆಬ್ರವರಿ ಹೊತ್ತಿಗೆ ಇದು ಶೇ.3ಕ್ಕಿಂತ ಕಡಿಮೆಗೆ ಕುಸಿದುಹೋಗಿತ್ತು. ಈಗಂತೂ ಕೊರೋನಾದಿಂದಾಗಿ ಅದು -23ಕ್ಕೆ ಕುಸಿದಿದೆ. ಈಗಲೂ ಜಿಎಸ್‌ಟಿ ಎಂಬುದು ಕ್ರಾಂತಿಕಾರಿ ಸುಧಾರಣೆ ಎಂದು ಎದೆ ತಟ್ಟಿಕೊಂಡು ಹೇಳುವವರು ಇದ್ದಾರೆಯೇ?

ರಾಜ್ಯಗಳ ಅಧಿಕಾರಕ್ಕೆ ಕತ್ತರಿ

ಜಿಎಸ್‌ಟಿಯ ಕುರಿತಾಗಿ ಭಾರತ ಒಕ್ಕೂಟದ ರಾಜ್ಯಗಳಾಗಿರುವ ನಾವು ಆತಂಕ ಪಡಬೇಕಾದ ವಿಷಯಗಳು ಬೇರೆಯೇ ಇದ್ದವು. ಜಿಎಸ್‌ಟಿ ರಾಜ್ಯಗಳ ಅಧಿಕಾರಗಳನ್ನು ಮೊಟಕುಗೊಳಿಸುತ್ತದೆ. ರಾಜ್ಯಗಳು ತೆರಿಗೆ ವಿಧಿಸುವ ಹಕ್ಕುಗಳನ್ನು ಕಳೆದುಕೊಂಡ ನಂತರ ಹೆಸರಿಗಷ್ಟೇ ಅಧಿಕಾರ, ಎಲ್ಲವೂ ಕೇಂದ್ರ ಸರ್ಕಾರದ ಪರಮಾಧಿಕಾರ ಎಂಬಂತಾಗುತ್ತದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೆವು. ಈಗ ಅದೇ ಆಗಿದೆ. ಈ ಬಗೆಯ ಏಕೀಕೃತ ವ್ಯವಸ್ಥೆ ಬೇರೆ ಬೇರೆ ದೇಶಗಳಲ್ಲಿ ಹೇಗೆ ದಯನೀಯವಾಗಿ ವಿಫಲವಾಗಿದೆ ಎಂಬುದನ್ನೂ ನಾವು ನೋಡಿದ್ದೇವೆ. ಸೋವಿಯತ್‌ ಯೂನಿಯನ್‌ನಂತಹ ಸೂಪರ್‌ ಪವರ್‌ ದೇಶ ಹೇಗೆ ಒಡೆದು ಛಿದ್ರವಾಯಿತು ಎಂದು ನಾವು ಗಮನಿಸಿಲ್ಲವೇ?

ಜಿಎಸ್‌ಟಿ ಪೂರ್ವದಲ್ಲಿ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತೆರಿಗೆಗಳನ್ನು ವಿಧಿಸುವ ಅಧಿಕಾರವನ್ನು ಹೊಂದಿದ್ದವು. ಜಿಎಸ್‌ಟಿಯ ನಂತರ ಬಹುತೇಕ ವಸ್ತು, ಸೇವೆಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ದಕ್ಕಿದೆ. ಕೆಲವು ಪರೋಕ್ಷ ತೆರಿಗೆಗಳನ್ನು ವಿಧಿಸುವ ಅವಕಾಶ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಸಿಕ್ಕಿದೆ. ಒಟ್ಟಾರೆಯಾಗಿ ಬಹುತೇಕ ತೆರಿಗೆಗಳನ್ನು ಕೇಂದ್ರ ಸರ್ಕಾರವೇ ಬಾಚಿಕೊಳ್ಳುವಾಗ ರಾಜ್ಯ ಸರ್ಕಾರಗಳು ಏನು ಮಾಡಬೇಕು? ಸರ್ಕಾರ ನಡೆಸುವುದಾದರೂ ಹೇಗೆ? ಜಿಎಸ್‌ಟಿ ವ್ಯವಸ್ಥೆಯಲ್ಲಿ ಇದಕ್ಕೊಂದು ಉತ್ತರವಿದೆ.

ಕೇಂದ್ರ ಸರ್ಕಾರ ತಾನು ಸಂಗ್ರಹಿಸುವ ತೆರಿಗೆಯಲ್ಲಿ ಒಂದಿಷ್ಟುಪಾಲನ್ನು ರಾಜ್ಯಗಳ ಜೊತೆ ಹಣಕಾಸು ಆಯೋಗ ಅನ್ನುವ ಅರೆ ನ್ಯಾಯಾಂಗ ವ್ಯವಸ್ಥೆಯ ಶಿಫಾರಸ್ಸಿನ ಅನ್ವಯ ಹಂಚಿಕೊಳ್ಳಬೇಕು. ಮಿಕ್ಕಂತೆ ಯೋಜನಾ ಆಯೋಗದ ಮೂಲಕ ಕೇಂದ್ರ ಸರ್ಕಾರ ತನಗೆ ತೋರಿದ ಹಾಗೆ, ತನಗೆ ಬೇಕಾದ ರಾಜ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬಹುದು. ಇದರ ಪರಿಣಾಮ ಸಣ್ಣದೇನಲ್ಲ. ಅಭಿವೃದ್ಧಿಶೀಲ ರಾಜ್ಯಗಳಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ತನಗೆ ರಾಜಕೀಯವಾಗಿ ಅನುಕೂಲಕರವಾಗಿರುವ ದೊಡ್ಡ ಜನಸಂಖ್ಯೆಯ ರಾಜ್ಯಗಳಲ್ಲಿ ಖರ್ಚು ಮಾಡಬಹುದು. ಇದನ್ನು ಇನ್ನಷ್ಟುಬಿಡಿಸಿ ಹೇಳುವುದಾದರೆ ಹೆಚ್ಚು ತೆರಿಗೆ ಸಂಗ್ರಹಿಸುವ ದಕ್ಷಿಣದ ರಾಜ್ಯಗಳ ಹಣ ಆರ್ಥಿಕ ದುಸ್ಥಿತಿಯಲ್ಲಿರುವ, ಜನಸಂಖ್ಯೆ ಹೆಚ್ಚಿರುವ ಉತ್ತರದ ರಾಜ್ಯಗಳಿಗೆ ಹೋಗುತ್ತದೆ.

ಕೊಳ್ಳುವ ಶಕ್ತಿ ಹೆಚ್ಚಳಕ್ಕೆ ನಿರ್ಮಲಾ 73000 ಕೋಟಿ ಪ್ಯಾಕೇಜ್, ಕೇಂದ್ರ ನೌಕರರಿಗೆ ಬಂಪರ್!

ಕರ್ನಾಟಕಕ್ಕೆ ಅನ್ಯಾಯ

ಜಿಎಸ್‌ಟಿ ಆರಂಭಿಸಿದಾಗ ಇದೊಂದು ಸರಳೀಕೃತ ತೆರಿಗೆ ವ್ಯವಸ್ಥೆ ಎಂದೇ ಹೇಳಲಾಗಿತ್ತು. ಹಿಂದಿನ ತೆರಿಗೆ ಪದ್ಧತಿಯಲ್ಲಿ ಹಲವು ಹಂತಗಳಲ್ಲಿ ತೆರಿಗೆಗಳನ್ನು ನೀಡಬೇಕಾದ ಅನಿವಾರ್ಯತೆ ಇದ್ದಿದ್ದರಿಂದ ಎಲ್ಲವನ್ನೂ ಒಂದೇ ಕಡೆಗೆ ತಂದು, ಗ್ರಾಹಕರಿಗೆ, ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಲಾಗಿತ್ತು. ಹಿಂದೆ ವ್ಯಾಟ್‌ ವ್ಯವಸ್ಥೆ ಜಾರಿಗೊಳಿಸಿದ್ದೂ ಇದೇ ಉದ್ದೇಶದಿಂದ. ಜಿಎಸ್‌ಟಿಯು ವ್ಯಾಟ್‌ನ ಸುಧಾರಿತ ತೆರಿಗೆ ಪದ್ಧತಿ. ಇದೆಲ್ಲವೂ ಕೇಳುವುದಕ್ಕೆ ಸೊಗಸಾಗಿದೆ. ಆದರೆ ವಾಸ್ತವದಲ್ಲಿ ಈ ಯೋಜನೆಯಡಿಯಲ್ಲಿ ಕರ್ನಾಟಕದಂಥ ರಾಜ್ಯಗಳು ಯಾಕೆ ನರಳುತ್ತಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

ಭಾರತವೆಂಬ ದೇಶವಾಗಿರುವುದೇ ಹಲವು ರಾಜ್ಯಗಳಿಂದಾಗಿ. ಹೀಗಾಗಿ ಇದೊಂದು ಒಕ್ಕೂಟ. ಇಲ್ಲಿ ಎಲ್ಲ ರಾಜ್ಯಗಳಿಗೂ ತನ್ನದೇ ಆದ ಅಸ್ಮಿತೆಯಿದೆ. ಎಲ್ಲ ರಾಜ್ಯಗಳೂ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಭಿನ್ನವಾದ ಚಹರೆಗಳನ್ನು ಹೊಂದಿವೆ. ಆದರೆ, ಜಿಎಸ್‌ಟಿಯಿಂದಾಗಿ ನಮ್ಮ ಹಕ್ಕುಗಳನ್ನು ಇನ್ನೊಬ್ಬರಿಗೆ ಧಾರೆ ಎರೆದುಕೊಡುವಂತಾಗಿದೆ. ಕರ್ನಾಟಕದ ತೆರಿಗೆ ಹಣ ಬಿಹಾರದಲ್ಲೋ, ಉತ್ತರ ಪ್ರದೇಶದಲ್ಲೋ ಖರ್ಚಾಗುತ್ತದೆ. ನಾವು ರಿಜವ್‌ರ್‍ ಬ್ಯಾಂಕ್‌ನಿಂದಲೋ, ವಿದೇಶಿ ಬ್ಯಾಂಕುಗಳಿಂದಲೋ ಸಾಲ ಮಾಡಿ ಆದ ನಷ್ಟತೀರಿಸಿಕೊಳ್ಳಬೇಕು. ಆ ಸಾಲವನ್ನು ತೀರಿಸಲು ಮತ್ತೆ ಹೆಣಗಾಡಬೇಕು. ಜಿಎಸ್‌ಟಿ ಕೌನ್ಸಿಲ… ಏನು ತೀರ್ಮಾನ ಕೈಗೊಳ್ಳುತ್ತದೋ ಅದಕ್ಕೆ ರಾಜ್ಯ ಸರ್ಕಾರಗಳು ಬದ್ಧವಾಗಿರಬೇಕು. ಜಿಎಸ್‌ಟಿ ಕೌನ್ಸಿಲ…ನಲ್ಲಿ ಕೇಂದ್ರ ಸರ್ಕಾರದ ಕೈ ಮೇಲಾಗಿರುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

2050 ಕ್ಕೆ ಭಾರತ ಜಗತ್ತಿನ 3 ನೇ ದೊಡ್ಡ ಆರ್ಥಿಕತೆ, ಜಪಾನ್ ಹಿಂದಕ್ಕೆ!

ಸದ್ಯದ ವ್ಯವಸ್ಥೆ ಏನಾಗಿದೆ?

ಜಿಎಸ್‌ಟಿಯಿಂದಾಗಿ ರಾಜ್ಯ ಸರ್ಕಾರಗಳು ರೆಕ್ಕೆ ಪುಕ್ಕ ಕತ್ತರಿಸಿದ ಪಕ್ಷಿಗಳಂತಾಗಿ ಹೋಗಿವೆ. ಸ್ವತಂತ್ರವಾಗಿ ಹಾರುವ ಶಕ್ತಿ ಈ ಪಕ್ಷಿಗಳಿಗಿಲ್ಲ. ಕರ್ನಾಟಕ ಸರ್ಕಾರ ಯಾವುದಾದರೊಂದು ಜನಪರ ಯೋಜನೆ ಜಾರಿಗೊಳಿಸಲು ಹಿಂದುಮುಂದೆ ನೋಡುವಂತಾಗಿದೆ. ಯಾಕೆಂದರೆ ದೊಡ್ಡ ಪ್ರಮಾಣದ ಹಣವನ್ನು ಜನಪರ ಯೋಜನೆಗಳಿಗೆ ಹೂಡುವ ಶಕ್ತಿಯನ್ನು ಅದು ಕಳೆದುಕೊಂಡಿದೆ. ರಾಜ್ಯದ ಪಾಲಿಗೆ ದಕ್ಕುವ ತೆರಿಗೆ ಹಣ ಎಷ್ಟುಸೀಮಿತವೆಂದರೆ ಸರ್ಕಾರಿ ನೌಕರರಿಗೆ ಸಂಬಳ ಕೊಟ್ಟು ಸರ್ಕಾರ ನಡೆಸುವುದೇ ಕಷ್ಟ. ಹೀಗಿರುವಾಗ ಹೊಸ ಯೋಜನೆಗಳು ಗಗನಕುಸುಮ. ನೆರೆ, ಬರದಂಥ ಪ್ರಕೃತಿ ವಿಕೋಪಗಳ ಸಂದರ್ಭದಲ್ಲೂ ರಾಜ್ಯ ಸರ್ಕಾರಗಳು ತನ್ನ ಇಚ್ಛೆಯಂತೆ ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಬಳಿಯೇ ಕೈಚಾಚಬೇಕು.

ಕಳೆದ ಜಿಎಸ್‌ಟಿ ಕೌನ್ಸಿಲ…ನಲ್ಲಿ ರಾಜ್ಯಗಳಿಗೆ ಕೊಡಬೇಕಾದ ಜಿಎಸ್‌ಟಿ ಬಾಕಿ ಹಣ ಕೊಡುವುದಿಲ್ಲ ಎಂದಾಗ ಅದನ್ನು ಕರ್ನಾಟಕ ಸರ್ಕಾರದ ಪ್ರತಿನಿಧಿ ವಿರೋಧಿಸಲು ಸಾಧ್ಯವೇ ಇರಲಿಲ್ಲ. ಯಾಕೆಂದರೆ ಕೇಂದ್ರದಲ್ಲೂ ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ. ಕರ್ನಾಟಕ ಮಾತ್ರವಲ್ಲ, ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯವೂ ವಿರೋಧಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಅಷ್ಟುದೊಡ್ಡ ಮೊತ್ತದ ಹಣವನ್ನು ಎಲ್ಲ ರಾಜ್ಯಗಳೂ ಬಿಟ್ಟು ಕುಳಿತವು. ಕೇಂದ್ರ ಸರ್ಕಾರ ಶೇ.33ರಷ್ಟುಪ್ರಾತಿನಿಧಿಕ ಮತವನ್ನು ಹೊಂದಿರುವುದರಿಂದ ಯಾವಾಗಲೂ ಅದರ ಕೈಮೇಲಾಗುವುದು ಸಹಜ. ಜಿಎಸ್‌ಟಿ ನಿಯಮಾವಳಿ ರೂಪಿಸುವಾಗಲೇ ಕೇಂದ್ರ ಸರ್ಕಾರ ಜಿಎಸ್‌ಟಿ ಬಾಕಿ ಹಣವನ್ನು ಕೊಡಲೇಬೇಕಾದ ಬದ್ಧತೆಯನ್ನು ಹೊಂದಿತ್ತು. ಆದರೆ ಜಿಎಸ್‌ಟಿ ಕೌನ್ಸಿಲ… ಸಭೆ ಕೇಂದ್ರ ಸರ್ಕಾರಕ್ಕೆ ವಿನಾಯಿತಿಯನ್ನು ನೀಡಿತು. ಇದು ಸದ್ಯದ ವ್ಯವಸ್ಥೆ.

ಬಹುತ್ವವೇ ಭಾರತದ ಸೌಂದರ್ಯ

ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ಎಲ್ಲ ವಿಷಯಗಳಲ್ಲೂ ಏಕತ್ವವನ್ನು ತರಲು ಹೊರಟಿದೆ. ಅದು ಆರ್ಥಿಕ ನೀತಿಗಳೇ ಆಗಿರಲಿ, ಭಾಷೆಯಂಥ ಸಂಕೀರ್ಣ ವಿಷಯಗಳೇ ಆಗಿರಲಿ. ಹಿಂದಿಯನ್ನು ಕೇಂದ್ರ ಸರ್ಕಾರ ಮೆರೆಸುತ್ತಿದೆ. ಇತ್ತೀಚಿನ ಕೃಷಿ ಮಸೂದೆಗಳೂ ಸಹ ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳುವಂಥವೇ. ಭಾರತದ ಪ್ರಜಾಪ್ರಭುತ್ವದ ಸೌಂದರ್ಯವೇ ಬಹುತ್ವ. ವಿವಿಧತೆಯಲ್ಲಿ ಏಕತೆ ಎಂಬುದು ಭಾರತ ಒಕ್ಕೂಟದ ಮೂಲಮಂತ್ರ. ಆದರೆ ರಾಜಕೀಯ ಕಾರಣಗಳಿಗಾಗಿ ಆಳುವ ಸರ್ಕಾರಗಳಿಗೆ ಈ ಬಹುತ್ವ ಬೇಕಿಲ್ಲ. ಜಿಎಸ್‌ಟಿ ಕೂಡ ಭಾರತದ ಬಹುತ್ವದ ಮೇಲೆ ಮಾಡಲಾದ ದಾಳಿ. ಇದು ಆರ್ಥಿಕ ಸ್ವರೂಪದ್ದಾಗಿರುವುದರಿಂದ ಇದರ ಪರಿಣಾಮಗಳು ನಿಧಾನವಾಗಿ ಗೋಚರವಾಗುತ್ತವೆ. 2017ರಲ್ಲಿ ಸಂಭ್ರಮದಿಂದ ಬರಮಾಡಿಕೊಂಡ ಜಿಎಸ್‌ಟಿ ಹೇಗೆ ಕರ್ನಾಟಕವನ್ನು ಕಾಡಿಸುತ್ತಿದೆ ಎಂಬುದನ್ನು ನಾವು ಈಗ ಗಮನಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಇದು ಇನ್ನಷ್ಟುಅರಿವಿಗೆ ಬರುತ್ತಾ ಹೋಗುತ್ತದೆ.

- ಟಿ.ಎ.ನಾರಾಯಣ ಗೌಡ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ

Follow Us:
Download App:
  • android
  • ios