ನವದೆಹಲಿ(ಆ.13): ದೊಡ್ಡ ಗಾತ್ರದ ಆಧಾರ್‌ ಕಾರ್ಡ್‌ ನಿಮಗೆ ಕಿರಿಕಿರಿ ಅನ್ನಿಸುತ್ತಿದೆಯೇ? ಹಾಗಿದ್ದರೆ 50 ರು. ನೀಡಿದರೆ ಎಟಿಎಂ ಕಾರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್‌ ರೀತಿಯ ಪಾಲಿವಿನೈಲ್‌ ಕ್ಲೋರೈಡ್‌ (ಪಿವಿಸಿ) ಆಧಾರ್‌ ಕಾರ್ಡ್‌ ಪಡೆದುಕೊಳ್ಳಬಹುದು. ಭಾರತೀಯ ವಿಶಿಷ್ಟಗುರುತಿನ ಪ್ರಾಧಿಕಾರ (ಯುಐಡಿಎಐ) ಅಧಿಕೃತವಾಗಿ ಈ ರೀತಿಯ ಹೊಸ ಕಾರ್ಡ್‌ ವಿತರಿಸಲು ಆರಂಭಿಸಿದೆ. ಈ ಕಾರ್ಡನ್ನು ಇನ್ನಿತರ ಪ್ಲಾಸ್ಟಿಕ್‌ ಕಾರ್ಡ್‌ನಂತೆ ಪರ್ಸ್‌ನಲ್ಲಿಟ್ಟುಕೊಳ್ಳಬಹುದು. ‘ನಿಮ್ಮ ಆಧಾರ್‌ ಇದೀಗ ಪರ್ಸ್‌ನಲ್ಲಿಟ್ಟುಕೊಳ್ಳಲು ಅನುಕೂಲವಾಗುವ ಅಳತೆಯಲ್ಲಿ ಬರುತ್ತಿದೆ’ ಎಂದು ಯುಐಡಿಎಐ ಸೋಮವಾರ ಟ್ವೀಟ್‌ ಮಾಡಿದೆ. ಇದನ್ನು ‘ಪಿವಿಸಿ ಆಧಾರ್‌’ ಎಂದು ಕರೆಯಲಾಗುತ್ತದೆ.

ಹೀಗಿರುತ್ತದೆ ಕಾರ್ಡ್‌?

ನೋಡಲು ಆಕರ್ಷಕವಾಗಿದೆ. ಹೋಲೋಗ್ರಾಂ, ನಕಲುಗೊಳಿಸಲಾಗದ ಕುಸುರಿ ವಿನ್ಯಾಸ, ಘೋಸ್ಟ್‌ ಇಮೇಜ್‌ ಹಾಗೂ ಮೈಕ್ರೋ ಅಕ್ಷರಗಳನ್ನು ಹೊಂದಿರುತ್ತದೆ. ಇದು ಸಂಪೂರ್ಣ ವಾಟರ್‌ಪ್ರೂಫ್‌ ಕಾರ್ಡ್‌ ಆಗಿದ್ದು, ಆಫ್‌ಲೈನ್‌ನಲ್ಲೂ ಕಾರ್ಡನ್ನು ಪರಿಶೀಲಿಸಬಹುದು. ಇದು ಸಾಕಷ್ಟುಬಾಳಿಕೆ ಬರುತ್ತದೆ.

ಪಿವಿಸಿ ಆಧಾರ್‌ ಪಡೆಯುವುದು ಹೇಗೆ?

1. ಆಧಾರ್‌ ಸಂಖ್ಯೆ ಹೊಂದಿರುವ ಯಾರು ಬೇಕಾದರೂ ್ಟಛಿsಜಿdಛ್ಞಿಠಿpv್ಚ.್ಠಜಿdaಜಿ.ಜಟv.ಜ್ಞಿ/ಟ್ಟdಛ್ಟಿ​pv್ಚ್ಟಛಿp್ಟಜ್ಞಿಠಿ ಲಿಂಕ್‌ ಬಳಸಿ ಆನ್‌ಲೈನ್‌ನಲ್ಲೇ ಈ ಕಾರ್ಡನ್ನು ತರಿಸಿಕೊಳ್ಳಬಹುದು.

2. ಮೊದಲಿಗೆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ, 12 ಅಂಕಿಗಳ ಆಧಾರ್‌ ಸಂಖ್ಯೆ ಅಥವಾ 16 ಅಂಕಿಗಳ ವರ್ಚುವಲ್‌ ಐಡಿ ಅಥವಾ 28 ಅಂಕಿಗಳ ಇಐಡಿ ನಮೂದಿಸಬೇಕು.

3. ನಂತರ ಕ್ಯಾಪ್ಚಾ ಇಮೇಜ್‌ನಲ್ಲಿ ನೀಡಿದ ಸೆಕ್ಯುರಿಟಿ ಕೋಡ್‌ ನಮೂದಿಸಿ ಸೆಂಡ್‌ ಒಟಿಪಿ ಎಂಬ ಆಪ್ಷನ್‌ ಕ್ಲಿಕ್‌ ಮಾಡಬೇಕು. ಆಗ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಸಬ್ಮಿಟ್‌ ಮಾಡಬೇಕು.

4. ನಂತರ ನಿಮ್ಮ ಆಧಾರ್‌ ಪಿವಿಸಿ ಕಾರ್ಡ್‌ನ ಪ್ರತಿರೂಪ ಕಾಣಿಸುತ್ತದೆ. ಆಗ ಅಲ್ಲೇ ಕೆಳಗಿರುವ ಹಣ ಪಾವತಿ ಆಯ್ಕೆಯನ್ನು ಕ್ಲಿಕ್‌ ಮಾಡಿ 50 ರು. ಪಾವತಿಸಬೇಕು.

5. ಹಣ ಪಾವತಿಯಾದ ನಂತರ ಐದು ದಿನದೊಳಗೆ ಯುಐಡಿಎಐ ನಿಮ್ಮ ಆಧಾರ್‌ ಪಿವಿಸಿ ಕಾರ್ಡನ್ನು ಪ್ರಿಂಟ್‌ ಮಾಡಿ ಸ್ಪೀಡ್‌ ಪೋಸ್ಟ್‌ನಲ್ಲಿ ಮನೆಗೆ ಕಳುಹಿಸುತ್ತದೆ.