ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಬಿಸ್ಕತ್ ತಿನ್ನುತ್ತಾರೆ. ಬಡವರಿಗೆ ಕಡಿಮೆ ಬೆಲೆಯ ಬಿಸ್ಕತ್ ಹೊಟ್ಟೆ ತುಂಬಿಸುವ ಆಹಾರ. ಕೇವಲ ಐದು ರೂಪಾಯಿಗೆ ಸಿಗುವ ಪಾರ್ಲೇಜಿ ಬಿಸ್ಕತ್  ಮೇಲೆ ವಿಶೇಷ ಮೋಹ ನಮಗೆಲ್ಲರಿಗೂ ಇದೆ. ಗ್ರಾಹಕರನ್ನು ಈವರೆಗೂ ಹಿಡಿದಿಟ್ಟುಕೊಂಡಿರುವ ಪಾರ್ಲೇಜಿ ಬಿಸ್ಕತ್  ಈಗ್ಲೂ ನಂಬರ್ ಒನ್ ಸ್ಥಾನದಲ್ಲಿದೆ.  

ಬಿಸ್ಕತ್ ಕಂಪನಿಗಳ ಹೆಸರು ಹೇಳಿ ಅಂದಾಗ ಮೊದಲು ನೆನೆಪಿಗೆ ಬರೋದು ಪಾರ್ಲೆ. ಪಾರ್ಲೇಜಿ ಬಿಸ್ಕತ್ ಎಲ್ಲರ ಅಚ್ಚುಮೆಚ್ಚು. ಟೀ ಕುಡಿಯುವಾಗ ಪಾರ್ಲೇಜಿ ಬಿಸ್ಕತ್ ಇದ್ರೆ ಅದರ ಮಜವೇ ಬೇರೆ ಎನ್ನುವವರಿದ್ದಾರೆ. ಮಾರುಕಟ್ಟೆಗೆ ಈಗ ನೂರಾರು ಬಿಸ್ಕತ್ ಕಂಪನಿಗಳು ಲಗ್ಗೆಯಿಟ್ಟಿವೆ. ಜನರನ್ನು ಆಕರ್ಷಿಸಲು ಹೊಸ ಹೊಸ ಡಿಸೈನ್, ಪ್ಲೇವರ್ ಗಳಲ್ಲಿ ಬಿಸ್ಕತ್ ಲಭ್ಯವಿದೆ. ಮಾರುಕಟ್ಟೆಯಲ್ಲಿ ಎಷ್ಟೇ ವಿಧದ, ಎಷ್ಟೆ ವಿನ್ಯಾಸದ ಬಿಸ್ಕತ್ ಇದ್ರೂ ಪಾರ್ಲೇಜಿಗೆ ಬೇಡಿಕೆ ಕಡಿಮೆಯಾಗಿಲ್ಲ. ಪಾರ್ಲೇಜಿ ಸಾಧನೆ ಸಾಮಾನ್ಯವಲ್ಲ. 10 ವರ್ಷಗಳಿಂದ, ಬಿಸ್ಕತ್ ಕ್ಷೇತದ್ರಲ್ಲಿ ಪಾರ್ಲೆ ನಂಬರ್ ಒನ್ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. 

ಕಾಂತರ್ ಇಂಡಿಯಾದ ವಾರ್ಷಿಕ ಬ್ರ್ಯಾಂಡ್ ವರದಿಯ ಪ್ರಕಾರ, ಬಿಸ್ಕತ್ ಬ್ರಾಂಡ್ ಪಾರ್ಲೆ 2021 ರಲ್ಲಿ ಭಾರತ (India) ದಲ್ಲಿ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ (ಗ್ರಾಹಕ ) ಉತ್ಪನ್ನಗಳಲ್ಲಿ (ಎಫ್‌ಎಂಸಿಜಿ) ಹೆಚ್ಚು ಆಯ್ಕೆಯಾದ ಬ್ರ್ಯಾಂಡ್ ಆಗಿದೆ. ಗ್ರಾಹಕ ರೀಚ್ ಪಾಯಿಂಟ್ (CRP) ಆಧಾರದ ಮೇಲೆ ಇದನ್ನು 2021 ರಲ್ಲಿ ಹೆಚ್ಚು ಆಯ್ಕೆ ಮಾಡಲಾದ FMCG ಬ್ರ್ಯಾಂಡ್ ಎಂದು ಸೇರಿಸಲಾಗಿದೆ. ಪಾರ್ಲೆ (Parle) 2020 ಕ್ಕೆ ಹೋಲಿಸಿದರೆ 2021 ರಲ್ಲಿ ಗ್ರಾಹಕರ ರೀಚ್ ಪಾಯಿಂಟ್‌ಗಳಲ್ಲಿ ಶೇಕಡಾ 14 ರಷ್ಟು ಹೆಚ್ಚಳವನ್ನು ಸಾಧಿಸಿದೆ.

ಸತತ 10 ವರ್ಷಗಳ ಕಾಲ ನಂಬರ್ ಒನ್ : ಪಾರ್ಲೆ ಬಿಸ್ಕತ್ ನಂತರ ಈ ಪಟ್ಟಿಯಲ್ಲಿ ಕ್ರಮವಾಗಿ ಅಮೂಲ್, ಬ್ರಿಟಾನಿಯಾ ಪ್ಲಸ್, ಕ್ಲಿನಿಕ್ ಪ್ಲಸ್ ಮತ್ತು ಟಾಟಾ ಗ್ರಾಹಕ ಉತ್ಪನ್ನಗಳ ಬ್ರಾಂಡ್‌ಗಳು ಸೇರಿವೆ. 6531 ಮಿಲಿಯನ್ ಗ್ರಾಹಕ ರೀಚ್ ಪಾಯಿಂಟ್ ಸ್ಕೋರ್‌ನೊಂದಿಗೆ ಪಾರ್ಲೆ 10 ನೇ ವರ್ಷವೂ ಅಗ್ರಸ್ಥಾನದಲ್ಲಿದೆ. ಕಳೆದ 10 ವರ್ಷಗಳಿಂದ ಕಾಂತರ್ ಬ್ರ್ಯಾಂಡ್‌ ಫುಟ್ಫ್ರಿಂಟ್ ರ್ಯಾಂಕ್ ಬಿಡುಗಡೆ ಮಾಡುತ್ತಿದೆ. ಈ ಅವಧಿಯಲ್ಲಿ ಅಮೂಲ್ ನ ಸಿಆರ್ ಪಿ ಶೇಕಡಾ 9ರಷ್ಟು ಹೆಚ್ಚಿದ್ದರೆ, ಬ್ರಿಟಾನಿಯಾದ ಸಿಆರ್ ಪಿ ಶೇಕಡಾ 14ರಷ್ಟು ಹೆಚ್ಚಿದೆ. ಪ್ಯಾಕ್ಡ್ ಫುಡ್ ಬ್ರ್ಯಾಂಡ್ ಹಲ್ದಿರಾಮ್ ಸಿಆರ್ಪಿ ಕ್ಲಬ್‌ನ ಟಾಪ್ 25 ಅನ್ನು ಪ್ರವೇಶಿಸಿದೆ. ಹಲ್ದಿರಾಮ್ ಈ ಪಟ್ಟಿಯಲ್ಲಿ 24 ನೇ ಸ್ಥಾನದಲ್ಲಿದೆ.

ಜಾಹೀರಾತು ನೀಡದ ಪಾರ್ಲೆ ಜಿ, ಕಾರಣ ತಿಳಿದ ನೆಟ್ಟಿಗರಿಂದ ಮೆಚ್ಚುಗೆ

ಪಾರ್ಲೆ ಕಂಪನಿಯ ಇತಿಹಾಸ : ಕಂಪನಿಯ ಹೆಸರು ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಪಾರ್ಲೆ -ಜಿ ಕಂಪನಿ ತಯಾರಿಸಿದ ಉತ್ಪನ್ನವಾಗಿದೆ. ಇದು ಭಾರತೀಯ ಕಂಪನಿಯಾಗಿದೆ. 12 ಜನರೊಂದಿಗೆ ಕಾರ್ಖಾನೆ ಶುರು ಮಾಡಿ, ಕೆಲಸ ಪ್ರಾರಂಭಿಸಲಾಯಿತು. ಇವರೆಲ್ಲರೂ ಮೋಹನ್‌ಲಾಲ್ ಅವರ ಕುಟುಂಬದ ಸದಸ್ಯರು. ಅವರು ಎಂಜಿನಿಯರ್‌ಗಳು, ವ್ಯವಸ್ಥಾಪಕರು ಮತ್ತು ಸ್ವೀಟ್ ತಯಾರಕರಾಗಿದ್ದರು. ಈ ಬಿಸ್ಕತ್ ಕಾರ್ಖಾನೆಯನ್ನು ಮುಂಬೈನಿಂದ ದೂರದಲ್ಲಿರುವ ವಿಲೆ ಪಾರ್ಲೆಯಲ್ಲಿ ಸ್ಥಾಪಿಸಲಾಯಿತು. ವಿಲೇ ಪಾರ್ಲೆಯಿಂದಲೇ ಕಂಪನಿಗೆ ಪಾರ್ಲೆ ಎಂಬ ಹೆಸರು ಬಂದಿದೆ.

ಪಾರ್ಲೆಜಿಯ ಇತಿಹಾಸ 82 ವರ್ಷಗಳಷ್ಟು ಹಳೆಯದು. 1929 ರಲ್ಲಿ ಉದ್ಯಮಿ ಮೋಹನ್ ಲಾಲ್ ದಯಾಳ್ ಮುಚ್ಚಿದ್ದ ಕಾರ್ಖಾನೆಯನ್ನು ಖರೀದಿಸಿದರು. ಪಾರ್ಲೆ 1938 ರಲ್ಲಿ ಪಾರ್ಲೆ-ಗ್ಲುಕೋ ಹೆಸರಿನಲ್ಲಿ ಬಿಸ್ಕತ್ತುಗಳನ್ನು ತಯಾರಿಸಲು ಪ್ರಾರಂಭಿಸಿತು. ಮಾರುಕಟ್ಟೆಯೊಂದಿಗೆ ಸ್ಪರ್ಧಿಸಲು, ಪಾರ್ಲೆ ತನ್ನ ಮುಖ್ಯ ಉತ್ಪನ್ನವನ್ನು ಹೊರತುಪಡಿಸಿ, ಕ್ರ್ಯಾಕ್ ಜ್ಯಾಕ್, 20-20 ನಂತಹ ಇತರ ಬಿಸ್ಕತ್ತುಗಳನ್ನು ಸಹ ತಯಾರಿಸಿತು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಗೋಧಿಯ ಕೊರತೆ ಇತ್ತು. ಗೋಧಿಯ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಬಾರ್ಲಿಯಿಂದ ತಯಾರಿಸಿದ ಬಿಸ್ಕತ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಕಂಪನಿಯ ಯಶೋಗಾಥೆಯನ್ನು ನೋಡಿ ಅನೇಕ ಕಂಪನಿಗಳು ಮಾರುಕಟ್ಟೆಗೆ ಬಂದವು.

1939 ರ ಸಮಯದಲ್ಲಿ ಭಾರತದಲ್ಲಿ ಬಿಸ್ಕತ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದರಿಂದ ಶ್ರೀಮಂತರು ಮಾತ್ರ ಬಿಸ್ಕತ್ತುಗಳನ್ನು ತಿನ್ನುತ್ತಿದ್ದರು. ನಂತ್ರ ಭಾರತದಲ್ಲಿ ತಯಾರಿಸಿದ ಬಿಸ್ಕತ್ತಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಯಿತು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್-ಭಾರತೀಯ ಸೇನೆಯಲ್ಲೂ ಪಾರ್ಲೆ ಬಿಸ್ಕೆತ್ ಗೆ ಭಾರಿ ಬೇಡಿಕೆ ಇತ್ತು.

ಲಾಕ್‌ಡೌನ್‌ನಲ್ಲಿಯೂ ಹೆಚ್ಚು ಮಾರಾಟವಾದ ಬಿಸ್ಕತ್ ಪಾರ್ಲೆ ಜಿ

ಕೊರೊನಾದಲ್ಲಿ ಹೆಚ್ಚಿದ ಬೇಡಿಕೆ : ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಜನರು ಪಾರ್ಲೆಜಿಯನ್ನು ತುಂಬಾ ಇಷ್ಟಪಟ್ಟಿದ್ದಾರೆ. ದಾಖಲೆ ಮಟ್ಟದಲ್ಲಿ ಬಿಸ್ಕತ್ ಮಾರಾಟವಾಗಿದೆ. ತುರ್ತು ಪರಿಸ್ಥಿತಿಗೆ ಅಗತ್ಯವೆನ್ನುವ ಕಾರಣಕ್ಕೆ ಅನೇಕರು ಈ ಬಿಸ್ಕತ್ತನ್ನು ಮನೆಯಲ್ಲಿ ಸಂಗ್ರಹಿಸಿದ್ದರು.