ವಜ್ರೋದ್ಯಮಿ ಜೈಮಿನ್ ಶಾ ಪುತ್ರಿ ದಿವಾ ಜೊತೆ ಗೌತಮ್ ಅದಾನಿ ಕಿರಿಯ ಪುತ್ರನ ನಿಶ್ಚಿತಾರ್ಥ!
ಜೀತ್ ಅದಾನಿಯ ಅಣ್ಣ ಕರಣ್ ಅದಾನಿ, ಪರಿಧಿ ಅದಾನಿಯನ್ನು ವಿವಾಹವಾಗಿದ್ದಾರೆ. ಪರಿಧಿ ಅದಾನಿ ಹಿರಿಯ ವಕೀಲ ಸಿರಿಲ್ ಶ್ರಾಫ್ ಅವರ ಪುತ್ರಿಯಾಗಿದ್ದಾರೆ.
ಮುಂಬೈ (ಮಾ.14): ಹಿಂಡೆನ್‌ಬರ್ಗ್ ರಿಪೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ, ಸಂಸತ್ತಿನಲ್ಲಿ ಅದಾನಿ ಗಲಾಟೆ ವಿಚಾರವಾಗಿಯೇ ಈವರೆಗೂ ಸುದ್ದಿಯಲ್ಲಿದ್ದ ದೇಶದ ಪ್ರಖ್ಯಾತ ಉದ್ಯಮಿ ಗೌತಮ್ ಅದಾನಿ ಅವರ ಕುಟುಂಬದಲ್ಲೀಗ ಸಂಭ್ರಮದ ವಾತಾವರಣ. ಅದಾನಿ ಗ್ರೂಪ್‌ನ ಚೇರ್ಮನ್ ಗೌತಮ್ ಅದಾನಿಯ ಕಿರಿಯ ಪುತ್ರ ಜೀತ್ ಅದಾನಿಯ ನಿಶ್ಚಿತಾರ್ಥ ಇತ್ತೀಚೆಗೆ ನೆರವೇರಿದೆ. ಮಾರ್ಚ್ 12 ರಂದು ನಡೆದ ಬಹಳ ಸರಳ ಸಮಾರಂಭದಲ್ಲಿ ಜೀತ್ ಅದಾನಿ ಹಾಗೂ ವಜ್ರೋದ್ಯೋಮಿ ಜೈಮಿನ್ ಶಾ ಅವರ ಪುತ್ರಿ ದಿವಾ ಜೈಮಿನ್ ಶಾ ಉಂಗುರ ಬದಲಾಯಿಸಿಕೊಂಡರು. ಈ ವೇಳೆ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರು ಮಾತ್ರವೇ ಹಾಜರಿದ್ದರು ರಂದು ವರದಿಯಾಗಿದೆ. ಸೂರತ್‌ನ ಪ್ರಸಿದ್ಧ ವ್ರಜೋದ್ಯಮಿಗಳಲ್ಲಿ ಒಬ್ಬರಾಗಿರುವ ಜೈಮಿನ್ ಶಾ ಅವರ ಪುತ್ರಿ ದಿವಾ. ಜೈಮಿನ್ ಶಾ ಅವರು ಸಿ ದಿನೇಶ್ ಆಂಡ್ ಕೋ ಪ್ರೈವೇಟ್ ಲಿಮಿಟೆಡ್ ವಜ್ರ ಕಂಪನಿಯ ಮಾಲೀಕರಾಗಿದ್ದಾರೆ. ಸೂರತ್ ಅಲ್ಲದೆ, ಮುಂಬೈನಲ್ಲೂ ಇದರ ಕಚೇರಿ ಇದೆ. ಚಿನ್ನು ದೋಶಿ ಹಾಗೂ ದಿನೇಶ್ ಶಾ ಜಂಟಿಯಾಗಿ ಈ ಕಂಪನಿಯನ್ನು ಆರಂಭ ಮಾಡಿದ್ದರು. ಜೀತ್ ಹಾಗೂ ದಿವಾ ಅವರ ನಿಶ್ಚಿತಾರ್ಥ ಸಮಾರಂಭದಿಂದ ಲಭ್ಯವಾದ ಚಿತ್ರಗಳಲ್ಲಿ, ದಂಪತಿಗಳು ಬಹಳ ತಿಳಿ ನೀಲಿ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಜೀತ್ ಅದಾನಿ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಅಪ್ಲೈಡ್ ಸೈನ್ಸಸ್‌ನಿಂದ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದು, 2019 ರಲ್ಲಿ ಅದಾನಿ ಗ್ರೂಪ್‌ನ ವ್ಯವಹಾರಗಳಲ್ಲಿ ಸೇರಿದ್ದಾರೆ. ಪ್ರಸ್ತುತ ಅದಾನಿ ಗ್ರೂಪ್ ಫೈನಾನ್ಸ್‌ನ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಅದಾನಿ ಗ್ರೂಪ್‌ನ ಸಿಎಫ್‌ಓ ಕಚೇರಿಯ ಮೂಲಕ ಅವರು ತಮ್ಮ ವೃತ್ತಿಜೀವನವನ್ನು ಆರಂಭ ಮಾಡಿದ್ದರು. ಸ್ಟ್ರಾಟೆಜಿಕ್ ಫೈನಾನ್ಸ್, ಕ್ಯಾಪಿಟಲ್ ಮಾರ್ಕೆಟ್ಸ್ ಮತ್ತು ರಿಸ್ಕ್ & ಗವರ್ನೆನ್ಸ್ ಪಾಲಿಸಿಗಳನ್ನು ಅವರು ನಿಭಾಯಿಸಿದ್ದರು.
ಅದಾನಿ ಗ್ರೂಪ್‌ನ ವೆಬ್‌ಸೈಟ್ ಹೇಳುವಂತೆ ಜೀತ್ "ಅದಾನಿ ಏರ್‌ಪೋರ್ಟ್ಸ್ ವ್ಯವಹಾರ ಮತ್ತು ಅದಾನಿ ಡಿಜಿಟಲ್ ಲ್ಯಾಬ್‌ಗಳನ್ನು ಮುನ್ನಡೆಸುತ್ತಿದ್ದಾರೆ - ಇದು ಅದಾನಿ ಗ್ರೂಪ್ ವ್ಯವಹಾರಗಳ ಎಲ್ಲಾ ಗ್ರಾಹಕರನ್ನು ಪೂರೈಸಲು ಸೂಪರ್ ಅಪ್ಲಿಕೇಶನ್ ಅನ್ನು ನಿರ್ಮಿಸಲು ಸಿದ್ಧವಾಗಿದೆ".
ಹತ್ತೇ ದಿನದಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 13 ಸ್ಥಾನ ಜಿಗಿದ ಗೌತಮ್ ಅದಾನಿ
ಗೌತಮ್ ಅದಾನಿ ಅವರ ಹಿರಿಯ ಮಗ ಕರಣ್ ಅವರು ಸಿರಿಲ್ ಶ್ರಾಫ್ ಅವರ ಪುತ್ರಿ ಪರಿಧಿ ಶ್ರಾಫ್ ಅವರನ್ನು ವಿವಾಹವಾಗಿದ್ದಾರೆ. ಅವರು ಸಿರಿಲ್ ಅಮರಚಂದ್ ಮಂಗಲದಾಸ್ ಕಾನೂನು ಸಂಸ್ಥೆಯ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ. ಕರಣ್ ಅದಾನಿ ಅವರು ಅದಾನಿ ಪೋರ್ಟ್ಸ್ ಮತ್ತು ಎಸ್‌ಇಝಡ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತ್ತು ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ.
'1 ಬಿಲಿಯನ್ ಡಾಲರ್ ಸಾಲವೆಲ್ಲಾ ನಮಗೆ ಕಡ್ಲೇಬೀಜ ಇದ್ದಂತೆ..' ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್ ಹೇಳಿಕೆ!
ಹಿಂಡೆನ್‌ಬರ್ಗ್ ವರದಿಯಿಂದ ಅದಾನಿ ಗ್ರೂಪ್‌ನ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಇದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಕಂಪನಿಯ ಎಲ್ಲಾ ಷೇರುಗಳು ದಯನೀಯ ಕುಸಿತ ಕಂಡಿವೆ. ಇಂಥ ಸಂಕಷ್ಟದ ಸಮಯದಲ್ಲಿ ಜೀತ್ ಅದಾನಿ ಅವರ ವಿವಾಹ ನಿಶ್ಚಿತಾರ್ಥದ ಮೂಲಕ ಅದಾನಿ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಕೃತಕವಾಗಿ ಷೇರು ಬೆಲೆಗಳ ಏರಿಕೆ, ಕಂಪನಿಯಲ್ಲಿ ಅವ್ಯವಹಾರ ಆರೋಪಗಳನ್ನು ಹಿಂಡೆನ್ ಬರ್ಗ್ ಮಾಡಿದ್ದರಿಂದ ಅದಾನಿ ಕಂಪನಿಯ ಏಳು ಲಿಸ್ಟೆಡ್ ಕಂಪನಿಗಳು ಒಟ್ಟಾರೆ 100 ಬಿಲಿಯನ್ ಯುಎಸ್ ಡಾಲರ್ ನಷ್ಟ ಕಂಡಿವೆ.